Saturday, April 16, 2011

ನನ್ನ ಅಣ್ಣ ಮಮ್ಮಾ ಕುಂಞಿ !


ಕೇಂದ್ರ ಸರಕಾರ ಕಡೆಗೂ ಬಾಲ ಸಾಹಿತ್ಯದ ಮೇಲೆ ಕರುಣೆ ತೋರಿಸಿದೆ. ಖ್ಯಾತ ಕತೆಗಾರ ಬೊಳುವಾರು ಮಹಮ್ಮದ್ ಕುಂಞಿ ಅವರ ‘ಪಾಪು ಗಾಂ.. ಬಾಪು ಗಾಂ.. ಆದ ’ಕತೆಗೆ ಬಾಲ ಸಾಹಿತ್ಯ ಪುರಸ್ಕಾರ ನೀಡಿದೆ. ಬೊಳುವಾರು ಅವರ ಸಹೋದರ ಐಕೆ ಬೊಳುವಾರು ಅಣ್ಣನ ಇನ್‌ಸೈಡ್ ಸ್ಟೋರಿಯನ್ನು ಲವಲವಿಕೆಗೆ ನೀಡಿದ್ದಾರೆ.


ಹಮಾರಾ ಟ್ರಾನ್ಸ್‌ಲೇಟರ್ ಜನರಲ್ ಕಾ ಹಾ ಹೈ... ಹರಿಜನ ಉದ್ದಾರ ಪ್ರಚಾರಕ್ಕಾಗಿ ಮೈಸೂರು ರಾಜ್ಯದ(ಕರ್ನಾಟಕ ಎಂದು ನಾಮಕರಣ ಆಗುವ ಮೊದಲು) ಪುತ್ತೂರಿಗೆ ಬಂದಿದ್ದ ಗಾಂ...ಜಿ ಪೇಟೆ ಬೀದಿಯಲ್ಲಿ ಸಾರ್ವಜನಿಕ ಸಭೆ ಆರಂಭಿಸುವ ಮೊದಲು ತಮ್ಮ ಪಕ್ಕದಲ್ಲಿ ಕುಳಿತಿದ್ದ ವಕೀಲ ಸದಾಶಿವರಾಯರನ್ನು ಪ್ರಶ್ನೆ ಕೇಳಿದಾಗ ವಕೀಲರು ಕಕ್ಕಾಬಿಕ್ಕಿ. ಗಾಂ...ಜಿಯ ಹಿಂಬದಿಯಲ್ಲಿ ಮೀರಾಬೆನ್ ಜತೆಯಲ್ಲಿ ಮಾತನಾಡುತ್ತಿದ್ದ ಲೇಖಕ ಶಿವರಾಮ ಕಾರಂತರಿಗೆ ಗಾಂಜಿಯ ಪ್ರಶ್ನೆ ಕೇಳಿಸಿತು. ಸದಾಶಿವರಾಯರ ಗಡಿಬಿಡಿಯೂ ಕಾಣಿಸಿತು.
ವಕೀಲರ ಬೆನ್ನಿಗೆ ಬೆರಳಿನಿಂದ ತಿವಿದು ಎಚ್ಚರಿಸಿದ ಕಾರಂತರು ವೇದಿಕೆಯ ಕೆಳಗೆ ಕುಕ್ಕುರು ಕಾಲಿನಲ್ಲಿ ಕುಳಿತು ಗ್ಯಾಸ್ ಲೈಟ್‌ಗೆ ‘ಟುಸ್‌ಕ್.. ಟುಸ್‌ಕ್‘ ಗಾಳಿ ಹೊಡೆಯುತ್ತಿದ್ದ ನಾರಾಯಣ ಕಿಲ್ಲೆ ಅವರತ್ತ ಬೊಟ್ಟು ಮಾಡಿ ಟ್ರಾನ್ಸ್‌ಲೇಟರ್ ಜನರಲ್ ಅವರೇ ಎಂದು ಸಂಞೆ ಮಾಡಿದರು. ವಕೀಲರ ಮುಖ ಊರಾಗಲವಾಯಿತು. ಇದು ಕತೆಗಾರ ಬೊಳುವಾರು ಬರೆಯುವ ಸ್ಟೈಲ್. ‘ಪಾಪು ಗಾಂ ಬಾಪು ಗಾಂ ಆದ ಕತೆ’ಯಲ್ಲಿ ಇದನ್ನೇ ಬರೆದುಕೊಂಡಿದ್ದಾರೆ ಎಂದು ಪುತ್ತೂರಿನ ಬೊಳುವಾರಿನಿಂದ ಎರಡು ಸ್ಟಾಪ್ ಮುಂದೆ ಇರುವ ಮನೆಯಲ್ಲಿ ಕೂತು ಟಿವಿಯಲ್ಲಿ ಬರುತ್ತಿದ್ದ ಅಣ್ಣನ ಸುದ್ದಿ ನೋಡಿ ಖ್ಯಾತ ಮಕ್ಕಳ ರಂಗಭೂಮಿ ನಿರ್ದೇಶಕ ಐಕೆ ಬೊಳುವಾರು ದೂರವಾಣಿ ಮೂಲಕ ಲವಲವಿಕೆಗೆ ಹೇಳಿದ ಮೊದಲ ಮಾತು.
ಸುಮಾರು ಮುಕ್ಕಾಲು ಗಂಟೆಯ ಕಾಲ ಬೊಳುವಾರು ಮಹಮ್ಮದ್ ಕುಂಞಿ ಅವರು ಯಾರಿಗೂ ಹೇಳಿರದ ಅವರ ಸಹೋದರ ಐಕೆ ಅವರಲ್ಲಿ ಹಂಚಿಕೊಂಡಿದ್ದ ಇನ್‌ಸೈಡ್ ಸ್ಟೋರಿಯನ್ನು ಲವಲವಿಕೆಗೆ ಹೇಳುತ್ತಾ ಹೋಗುತ್ತಿದ್ದರು. ‘ಬಾಲ್ಯದಲ್ಲಿ ತುಂಬಾ ಬಡತನವಿತ್ತು. ತಂದೆ ಅಬ್ಬಾಸ್ ಹಾಗೂ ತಾಯಿ ಕುಲ್ಸುಬೀ ಐದು ಮಕ್ಕಳು ಶಿಕ್ಷಣ ಮುಗಿಸುವರೆಗೂ ಬೀಡಿ ಉದ್ಯಮವನ್ನು ಬಿಟ್ಟು ನಿಂತಿರಲಿಲ್ಲ. ಈ ಸಮಯದಲ್ಲಿ ಮುಸ್ಲಿಂ ಸಮುದಾಯವರು ಸಣ್ಣ ವಯಸ್ಸಿನಲ್ಲಿಯೇ ಮೀನು ವ್ಯಾಪಾರ ಇತರ ಕೆಲಸಗಳಿಗೆ ಹೋಗುವುದು ಜಾಸ್ತಿಯಾಗಿತ್ತು. ಆದರೆ ನಮ್ಮ ತಂದೆಯ ಒಲವು ಶಿಕ್ಷಣದ ಕಡೆಗೆ ಇತ್ತು. ಮಕ್ಕಳು ಓದಿ ಮುಂದೆ ಬರಬೇಕು ಎನ್ನುವ ದೃಷ್ಟಿಯಿಂದ ಹೊಟ್ಟೆಗೆ ಸರಿಯಾಗಿ ಹಿಟ್ಟು ಇಲ್ಲದಿದ್ದರೂ ಶಾಲೆಗೆ ಮಾತ್ರ ಕಳುಹಿಸದೇ ಬಿಡುತ್ತಿರಲಿಲ್ಲ. ತಂದೆಯ ಈ ಕೆಲಸ ಮೀನು ಮಾರುಕಟ್ಟೆಯಲ್ಲಿ ಇರಬೇಕಾದ ಹುಡುಗರು ಸಮಾಜದಲ್ಲಿ ಒಳ್ಳೆಯ ಹೆಸರು ಸಂಪಾದಿಸಿಕೊಂಡಿದ್ದಾರೆ ’ಎಂದು ಐಕೆ ತಂದೆಯ ನೆನಪುಗಳನ್ನು ಕೆದಕಿದರು.
ಮಹಮ್ಮದ್‌ರ ಕ್ರಿಕೆಟ್ ಪ್ರೀತಿ:
ಬೊಳುವಾರು ಮಹಮ್ಮದ್ ಕುಂಞಿ ಕನ್ನಡ ಸಾಹಿತ್ಯ ರಂಗದಲ್ಲಿ ಅದರಲ್ಲೂ ಸಣ್ಣ ಕತೆ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು ಎನ್ನುವುದು ಎಲ್ಲರಿಗೂ ಗೊತ್ತು ಬಿಡಿ. ಆದರೆ ಬೊಳುವಾರಿನಲ್ಲಿರುವ ಅವರ ಬಹುತೇಕ ಗೆಳೆಯರಿಗೆ ಅವರೊಬ್ಬ ಸಾಹಿತಿಗಿಂತ ಹೆಚ್ಚಾಗಿ ‘ಕ್ರಿಕೆಟ್ ಆಟಗಾರ ’ಎಂದೇ ಪರಿಚಿತ. ಮಹಮ್ಮದ್ ಓದುತ್ತಿದ್ದ ಬೊಳುವಾರು ಪ್ರಾಥಮಿಕ ಶಾಲೆ ಇರಲಿ ಖ್ಯಾತ ಬೋರ್ಡ್ ಹೈಸ್ಕೂಲ್‌ನ ಕ್ರಿಕೆಟ್ ತಂಡದಲ್ಲಿ ಅವರು ಇಲ್ಲದೇ ಹೋದರೆ ಟೀಮ್ ತುಂಬಾನೇ ವೀಕ್ ಆಗಿಬಿಡುತ್ತಿತ್ತು. ವಿನ್ ಆಗುವ ಚಾನ್ಸ್‌ಯೇ ಕಡಿಮೆ ಇರುತ್ತಿತ್ತು. ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಮಹಮ್ಮದ್ ‘ಎ’ ವನ್ ಪ್ಲೇಯರ್ ಎಂದು ಗೆಳೆಯರ ಸಮೂಹದಿಂದ ಕರೆಸಿಕೊಂಡಿದ್ದರು. ಟೈಮ್ ಸಿಕ್ಕಿದಾಗಲೆಲ್ಲಾ ಬೋರ್ಡ್ ಹೈಸ್ಕೂಲ್‌ನ ಮೈದಾನದಲ್ಲಿ ಮಹಮ್ಮದ್ ಠಿಕಾಣಿ ಹೂಡುತ್ತಿದ್ದರು. ಅವರ ಸಹೋದರರು ಕ್ರಿಕೆಟ್ ಬಗ್ಗೆ ಆಸಕ್ತಿ ತಮಗಿಲ್ಲ ಎಂದಾಗಲೆಲ್ಲ ಅವರ ಜತೆ ‘ಕುಟ್ಟಿ ದೊಣ್ಣೆ ’ ಆಡಲು ಬರುತ್ತಿದ್ದರು. ಅಲ್ಲೂ ಇಲ್ಲೂ ಮಹಮ್ಮದ್ ಗೆಲ್ಲುವ ಕುದುರೆ ಎಂದೇ ಎಲ್ಲರಿಗೂ ಗೊತ್ತಿತ್ತು.
ಏಕಾಂಗಿತನ ಕಳೆಯಲು ಕತೆ ಬರೆದರು:
ಬೊಳುವಾರು ಮಹಮ್ಮದ್ ಕುಂಞಿ ಬರೆದ ಸಣ್ಣ ಕತೆಗಳ ಲೆಕ್ಕಚಾರವನ್ನು ಸ್ವತಃ ಅವರೇ ಇಟ್ಟುಕೊಂಡಿಲ್ಲ. ಆದರೆ ಐಕೆ ಅದರ ಲೆಕ್ಕಚಾರವನ್ನು ಪಕ್ಕವಾಗಿ ಇಟ್ಟುಕೊಳ್ಳುತ್ತಾರೆ. ಮಹಮ್ಮದ್ ಶಿಕ್ಷಣ ಮುಗಿಸಿಕೊಂಡು ಸಿಂಡಿಕೇಟ್ ಬ್ಯಾಂಕ್‌ನ ಗುಲ್ಬರ್ಗ ಶಾಖೆಗೆ ಕ್ಲರ್ಕ್ ಆಗಿ ಸೇರಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿಯೇ ಹೊಸ ಜಾಗ ಹೊಸ ಜನರ ನಡುವೆ ಹೊಂದಾಣಿಕೆಯ ಸಮಸ್ಯೆ, ಏಕಾಂಗಿತನ ಕಾಡುತ್ತಿದ್ದಾಗ ಮಹಮ್ಮದ್ ಆಯ್ಕೆ ಮಾಡಿಕೊಂಡದ್ದು ಸಾಹಿತ್ಯ ಕ್ಷೇತ್ರ. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ನವ ಭಾರತ’ದಲ್ಲಿ ಮೊತ್ತ ಮೊದಲ ಬಾರಿಗೆ ‘ನಿರೀಕ್ಷೆ’ ಎಂಬ ಸಣ್ಣ ಕತೆ ಮುದ್ರಣವಾಗುತ್ತಿದ್ದಂತೆಯೇ ಮಹಮ್ಮದ್ ಎಂಬ ಹೊಸ ಪೀಳಿಗೆಯ ಕತೆಗಾರ ೧೯೮೦ರ ವರೆಗೂ ರಾಜ್ಯದ ಎಲ್ಲ ಪತ್ರಿಕೆಗಳಲ್ಲಿ ರಾರಾಜಿಸುತ್ತಾರೆ. ೧೯೮೦ರ ನಂತರ ಅವರ ಕತೆಗಳಲ್ಲಿ ಮಾನವೀಯ ಅಂಶಗಳು, ತಮಾಷೆ, ಕುತೂಹಲ ಮೊದಲಾದ ಅಂಶಗಳು ಜಾಗ ಪಡೆದುಕೊಂಡು ಮಹಮ್ಮದ್‌ರ ಕತೆಗಳು ಟೋಟಲಿ ಡಿಫರೆಂಟ್ ಎನ್ನುವ ಮಾತು ಆರಂಭವಾಗಿ ಬಿಡುತ್ತದೆ ಎನ್ನುತ್ತಾರೆ ಅವರ ಸಹೋದರ ಐಕೆ ಬೊಳುವಾರು.
ಮುತ್ತುಪಾಡಿ ಎಂಬ ಊರು:
ಖ್ಯಾತ ಕತೆಗಾರ ಆರ್.ಕೆ. ನಾರಾಯಣ್ ಅವರ ಕಲ್ಪನೆಯ ಊರು ‘ಮಾಲ್ಗುಡಿ’ ಇದ್ದ ರೀತಿಯಲ್ಲಿ ಮಹಮ್ಮದ್‌ರ ಊರು ‘ಮುತ್ತು ಪಾಡಿ’. ಅವರ ಎಲ್ಲ ಸಣ್ಣ ಕತೆಗಳಲ್ಲಿ ‘ಮುತ್ತುಪಾಡಿ’ ಎಂಬ ಊರಿಗೆ ಖಾಯಂ ಜಾಗ ಇದ್ದೇ ಇದೆ. ಅಂದಹಾಗೆ ‘ಮುತ್ತುಪಾಡಿ’ ಮಹಮ್ಮದ್‌ರ ಕಲ್ಪನೆಯ ಊರಲ್ಲ. ಇಂದಿಗೂ ಈ ಊರುಗಳು ಪುತ್ತೂರಿನ ಅಸುಪಾಸಿನಲ್ಲಿ ಇದೆ. ಕೋಡಿಂಬಾಡಿ, ನೆಕ್ಕಿಲಾಡಿ, ಬೆಳ್ಳಿಪಾಡಿ ಹೀಗೆ ಪಾಡಿ ಬರುವ ಊರುಗಳು ‘ಮುತ್ತುಪಾಡಿ’ ಎಂಬ ಆಧಾರದಲ್ಲಿ ಮಹಮ್ಮದ್ ಸಣ್ಣ ಕತೆಗಳಲ್ಲಿ ಹೇಳುತ್ತಾ ಸಾಗುತ್ತಾರೆ. ಈ ಎಲ್ಲ ಊರಿನಲ್ಲಿ ಮಹಮ್ಮದ್‌ರ ಖಾಸಾ ದೋಸ್ತ್‌ಗಳು ಇದ್ದಾರೆ. ಪುತ್ತೂರಿನ ಬೊಳುವಾರಿಗೆ ಬಂದಾಗ ಈ ಎಲ್ಲ ದೋಸ್ತ್‌ಗಳ ಮನೆಯಲ್ಲಿಯೇ ಜಾಸ್ತಿ ಹೊತ್ತು ಕಳೆಯುತ್ತಾರೆ. ಅವರ ಹೆಚ್ಚಿನ ಕತೆಗಳಲ್ಲಿ ಈ ದೋಸ್ತ್‌ಗಳೇ ಜೀವಾಳ. ಆದರೆ‘ ‘ಪಾಪು ಗಾಂ... ಬಾಪು ಗಾಂ... ಆದ ಕತೆ’ಯಲ್ಲಿ ಮಾತ್ರ ಈ ಊರಿನ ಉಲ್ಲೇಖ ಇಲ್ಲ. ಈ ಕೃತಿಯಲ್ಲಿ ಪುತ್ತೂರಿನ ನಿಜವಾದ ಊರುಗಳೇ ಜಾಗ ಪಡೆದುಕೊಂಡಿದೆ.
ಬಾಲಸಾಹಿತ್ಯದಲ್ಲಿ ಆಸಕ್ತಿ:
ಮಹಮ್ಮದ್ ಮಣಿಪಾಲದಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ಗೆ ವರ್ಗಾವಾದಾಗ ಅವರ ಮನೆಯ ಪಕ್ಕದಲ್ಲಿಯೇ ಶಿವರಾಮ ಕಾರಂತರ ಮನೆ ಇತ್ತು. ಸಾಹಿತ್ಯ ಗೀಳಿದ್ದ ಮಹಮ್ಮದ್ ಹೆಚ್ಚು ಒತ್ತು ಶಿವರಾಮ ಕಾರಂತರ ಮನೆಯಲ್ಲಿ ಕಳೆಯುತ್ತಿದ್ದರು. ಅಲ್ಲಿಯೇ ಅವರಿಗೆ ಬಾಲ ಸಾಹಿತ್ಯದ ಕುರಿತು ಒಲವು ಮೂಡಿ ಬಂತು. ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯತ್ನ ಎನ್ನುವ ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಎಂಬ ಕೃತಿಯನ್ನು ಸಂಪಾದನೆ ಮಾಡಿರುವುದು ಬೊಳುವಾರು ಅವರ ಹೆಗ್ಗಳಿಕೆ. ೧೦೦ ಕವಿಗಳ ಕವನಗಳು ಈ ಕೃತಿಯ ಹೈಲೇಟ್. ‘೧೨ ಮಕ್ಕಳ ನಾಟಕಗಳ ಸಂಪಾದನೆ,’ ‘ಸಂತಮ್ಮನ’ ಕವನ ಸಂಕಲನ ಸಂಪಾದನೆ ಜತೆಗೆ ಈಗ ‘ಪಾಪು ಗಾಂ... ಬಾಪು ಗಾಂ... ಆದ ಕತೆ’ ಕಾದಂಬರಿ ವರೆಗೆ ಅವರ ಮಕ್ಕಳ ಸಾಹಿತ್ಯ ಸೇವೆ ಮುಂದುವರಿದಿದೆ.
ಬೊಳುವಾರು ಮಹಮ್ಮದ್ ಒಬ್ಬ ವಿಶಿಷ್ಟ ಜೀವಿ. ಅವರ ವೈಯಕ್ತಿವಾಗಲಿ ಅಥವಾ ಸಾರ್ವಜನಿಕವಾಗಲಿ ಫೋಟೋ ತೆಗೆಸಿಕೊಳ್ಳುವ ಪರಿಪಾಟ ಇಟ್ಟುಕೊಂಡಿಲ್ಲ. ಅದರಲ್ಲೂ ಐಕೆ ಬೊಳುವಾರು ಕೂಡ ಅದೇ ದಾರಿಯನ್ನು ಹಿಡಿದವರು. ‘ಫೋಟೋ ತೆಗೆಯುತ್ತೇನೆ ಸ್ವಾಮಿ ಒಂದ್ ಸಾರಿ ಮುಖ ತೋರಿಸಿ’ ಎಂದಾಗ ಮಹಮ್ಮದ್ ಯಾರಿಗೂ ಹೇಳದೇ ಮರೆಯಾಗುವ ಐವತ್ತು ದಾಟಿದ ಪುಟ್ಟ ಮಗು ಎಂದೇ ಅವರ ಆಪ್ತರ ವಲಯ ಹೇಳುವ ಮಾತಿದೆ. ಟೋಟಲಿ ಕೇಂದ್ರ ಸರಕಾರ ಮಹಮ್ಮದ್‌ರ ಬಾಲ ಸಾಹಿತ್ಯಕ್ಕೆ ಪುರಸ್ಕಾರ ನೀಡುತ್ತಿರುವುದು ಮಾತ್ರ ಖುಷಿಯ ವಿಚಾರ.

No comments:

Post a Comment