Saturday, April 2, 2011

ಬಾಲಿವುಡ್‌ಗೆ ಹಾರುವ ಸಿಖ್ !


ಕ್ರೀಡಾಂಗಣದಲ್ಲಿ ಓಡಿಕೊಂಡು ಸುಸ್ತಾಗಿದ್ದ ಮಿಲ್ಕಾ ಸಿಂಗ್ ಈ ಬಾರಿ ಬಾಲಿವುಡ್‌ನಲ್ಲಿ ತನ್ನ ಓಡುವ ಸರದಿಯನ್ನು ಮುಂದುವರಿಸಿದ್ದಾರೆ. ‘ಭಾಗ್ ಮಿಲ್ಕಾ ಭಾಗ್’ ಚಿತ್ರವೊಂದು ಬರಲಿದೆ ಎಂಬ ಸೂಚನೆ ಬಂದಿದೆ.

ಇದು ತುಂಬಾನೇ ದೊಡ್ಡ ಬ್ರೇಕಿಂಗ್ ನ್ಯೂಸ್..ಲೆಜೆಂಡ್ ಅಥ್ಲೀಟ್ ಮಿಲ್ಕಾ ಸಿಂಗ್ ದೊಡ್ಡ ಸುದ್ದಿಯಾಗುತ್ತಿದ್ದಾರೆ. ಅವರು ಮತ್ತೇ ಕಾಲಿಗೆ ಸ್ಪೈಕ್ ಶೂ ಹಾಕಿಕೊಂಡು ಕ್ರೀಡಾಂಗಣಕ್ಕೆ ಇಳಿಯುತ್ತಿಲ್ಲ ಬಿಡಿ. ಅವರ ಬದುಕನ್ನು ಇಡೀಯಾಗಿ ಅಥವಾ ಬಿಡಿ ಬಿಡಿಯಾಗಿ ಚಿತ್ರದ ಮೂಲಕ ಬಾಲಿವುಡ್ ಬಿಗ್ ತೆರೆಗೆ ತರುವ ದೊಡ್ಡ ಸ್ಕೀಮ್‌ವೊಂದು ಮುಂಬಯಿಯ ಮಸಾಲ ಅರೆಯುವ ಪಡಸಾಲೆಯಲ್ಲಿ ನಿರ್ದೇಶಕರೊಬ್ಬರು ಕೈಗೆತ್ತಿಕೊಂಡಿದ್ದಾರೆ.
‘ಹಾರುವ ಸಿಖ್’ ಎಂದೇ ಭಾರತೀಯ ಕ್ರೀಡಾರಂಗದಲ್ಲಿ ಕರೆಯಲಾಗುವ ಮಿಲ್ಕಾ ಸಿಂಗ್‌ರ ಆತ್ಮಕತೆಯನ್ನು ಇಟ್ಟುಕೊಂಡು ಈ ಚಿತ್ರ ಮೂಡಿಬರಲಿದೆ. ಮಿಲ್ಕಾ ಸಿಂಗ್‌ರ ಕ್ರೀಡಾ ಬದುಕಿನ ಜತೆಯಲ್ಲಿ ಕ್ರೀಡೆಯ ಕುರಿತು ಭಾರತೀಯ ಸಮಾಜದ ನಿಲುವುಗಳು ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಬಾಲಿವುಡ್‌ನಲ್ಲಿ ಯುವಜನತೆಗೆ ಹೊಸ ವೇದಿಕೆಯನ್ನು ಸೃಷ್ಟಿಸಿಕೊಟ್ಟ‘ ರಂಗ್ ದೇ ಬಸಂತಿ’ ಫೇಮ್ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಈ ಚಿತ್ರದ ನಿರ್ದೇಶಕ. ‘ಭಾಗ್ ಮಿಲ್ಕಾ ಭಾಗ್’ ಎಂದು ಚಿತ್ರದ ಟೈಟಲ್ ಕಾರ್ಡ್ ಈಗಾಗಲೇ ನಿರ್ದೇಶಕರು ಚ್ಯೂಸ್ ಮಾಡಿದ್ದಾರೆ.
ಈ ಚಿತ್ರ ಬರೀ ಒಂದು ಕ್ರೀಡಾ ಪಟುವಿನ ಬದುಕು ಹಾಗೂ ಪದಕಗಳ ಕುರಿತು ಚರ್ಚೆ ಹುಟ್ಟು ಹಾಕುವ ಸಿನಿಮಾ ಅಲ್ಲ ಎಂದು ಸಿನಿಮಾ ನಿರ್ದೇಶಕರು ಚಿತ್ರ ತೆಗೆಯುವ ಮೊದಲೇ ಬುಡುಬುಡುಕೆಯ ಭವಿಷ್ಯ ನುಡಿದಿದ್ದರು. ಇದಕ್ಕಾಗಿ ಚಂಡಿಗಡದಲ್ಲಿರುವ ಮಿಲ್ಕಾ ಸಿಂಗ್ ಮನೆಯಲ್ಲಿರುವ ಪಡಸಾಲೆಯಲ್ಲಿ ಕೂತು ಮೆಹ್ರಾ ಸ್ಟೋರಿ ಕುರಿತು ಆಳವಾಗಿ ಚರ್ಚೆಗೆ ಇಳಿದಿದ್ದರು. ಗೀತೆ ರಚನೆಗಾರ ಪ್ರಸೂನ್ ಜೋಶಿ ಕೂಡ ಮಿಲ್ಕಾ ಸಿಂಗ್‌ರ ಮನೆಯಲ್ಲಿ ಟೆಂಟ್ ಹಾಕಿ ಚಿತ್ರದ ಗೀತೆಗಳ ಹಾಗೂ ಚಿತ್ರಕತೆಯ ಕುರಿತು ಸ್ಕೆಚ್ ಹಾಕಿ ಹೊರಬಂದಿದ್ದಾರೆ.
ಮಿಲ್ಕಾ ಸಿಂಗ್ ಈ ಹಿಂದೆ ತನ್ನ ಆತ್ಮಕತೆಯನ್ನು ಇಟ್ಟುಕೊಂಡು ಚಿತ್ರ ನಿರ್ಮಾಣ ಮಾಡುವ ಕುರಿತು ಯಾವೊಬ್ಬ ಚಿತ್ರ ನಿರ್ದೇಶಕರಿಗೂ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ. ಆದರೆ ಈ ಬಾರಿ ಮಿಲ್ಕಾ ಸಿಂಗ್‌ರ ಪುತ್ರ ಗಾಲ್ ಆಟಗಾರ ಜೀವಾ ಮಿಲ್ಕಾ ಸಿಂಗ್‌ರನ್ನು ಓಲೈಕೆ ಮಾಡಿಕೊಂಡಿದ್ದ ಮೆಹ್ರಾ ಸಾಹೇಬ್ರು ಮಿಲ್ಕಾ ಸಿಂಗ್‌ರನ್ನು ಬಹಳ ಸುಲಭವಾಗಿ ಒಪ್ಪಿಸಿಕೊಂಡು ಚಿತ್ರ ನಿರ್ದೇಶನಕ್ಕೆ ಇಳಿದಿದ್ದಾರೆ.
ಒಂದು ರೂಪಾಯಿ ಸಾಕು:
‘ಭಾಗ್ ಮಿಲ್ಕಾ ಭಾಗ್’ ಚಿತ್ರಕ್ಕಾಗಿ ಮಿಲ್ಕಾ ಸಿಂಗ್ ಅವರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.. ? ಈ ವಿಚಾರ ಕೇಳಿದರೆ ಒಂದು ಸಾರಿ ದಂಗಾಗಿ ಹೋಗಬಹುದು. ಬರೀ ಒಂದು ರೂಪಾಯಿ ಮಾತ್ರ ಮೆಹ್ರಾ ಅವರಿಂದ ಮಿಲ್ಕಾ ಸಿಂಗ್ ಪಡೆದುಕೊಂಡಿದ್ದಾರೆ. ಈ ಕುರಿತು ಮಿಲ್ಕಾ ಸಿಂಗ್‌ರನ್ನು ಕೇಳಿದರೆ ಈ ಚಿತ್ರದಿಂದ ನಾನು ಪಡೆಯುವ ಸಂಭಾವನೆ ಮುಖ್ಯವಲ್ಲ. ಚಿತ್ರ ಬಿಡುಗಡೆ ಕಂಡ ನಂತರ ಪ್ರೇಕ್ಷಕರು ಅದರಿಂದ ಸ್ವಲ್ಪ ತಿಳಿದುಕೊಂಡರೆ ಸಾಕು. ಹಳ್ಳಿ ಹುಡುಗನೊಬ್ಬ ಏನೂ ಇಲ್ಲದೇ ಸಾಸಿದ ವಿಕ್ರಮ ಮಾಡಿದರೆ ಉಳಿದವರು ಯಾಕೆ ಮಾಡಲು ಸಾಧ್ಯವಿಲ್ಲ ಎಂಬುವುದೇ ನನ್ನ ಪ್ರಶ್ನೆಯಾಗಿದೆ ಎಂದರು.
ಇದು ಪರ್‌ಫೆಕ್ಟ್ ತಂಡ :
ಈ ಚಿತ್ರ ಭಾರತದ ಕೆಲವೊಂದು ಪ್ರವಾಸಿ ತಾಣಗಳ ಜತೆಯಲ್ಲಿ, ಜಪಾನ್, ಪಾಕಿಸ್ತಾನ ಹಾಗೂ ಯುರೋಪಿಯನ್ ದೇಶಗಳಲ್ಲಿ ಚಿತ್ರ ಶೂಟಿಂಗ್ ಕಾರ್‍ಯ ಮುಂಬರುವ ದಿನಗಳಲ್ಲಿ ನಡೆಯಲಿದೆ. ಮೆಹ್ರಾ ಅವರು ತುಂಬಾಪರ್‌ಫೆಕ್ಟ್ ರೀತಿಯಲ್ಲಿ ತನ್ನ ತಂಡವನ್ನು ಕಟ್ಟುತ್ತಾರೆ. ಚಿತ್ರ ನಿರ್ದೇಶನದ ಜತೆಯಲ್ಲಿ ಎಲ್ಲ ವಿಭಾಗದಲ್ಲೂ ಅವರು ಕೈಯಾಡಿಸುತ್ತಾರೆ ಎನ್ನುತ್ತಾರೆ ಪ್ರಸೂನ್ ಜೋಶಿ.
ಕಳೆದ ನಾಲ್ಕು ತಿಂಗಳುಗಳಿಂದ ಮಿಲ್ಕಾ ಸಿಂಗ್‌ರನ್ನು ಈ ಚಿತ್ರ ಕ್ಕಾಗಿ ಬಹಳಷ್ಟು ಪರಿಶ್ರಮ ಪಟ್ಟಿದ್ದೇವೆ, ಬಹಳಷ್ಟು ಹೋಮ್ ವರ್ಕ್ ಮಾಡಿಕೊಂಡು ನಾವು(ಮೆಹ್ರಾ) ಸಿಂಗ್‌ರಲ್ಲಿ ಮಾತುಕತೆ ನಡೆಸಿಕೊಂಡು ಬಂದಿರುವ ಕಾರಣ ಕೊನೆಗೂ ಮಿಲ್ಕಾ ಸಿಂಗ್ ಗ್ರೀನ್ ಸಿಗ್ನಲ್ ದಯಾಪಾಲಿಸಿದ್ದಾರೆ. ಚಿತ್ರ ಖಂಡಿತವಾಗಿಯೂ ಉತ್ತಮ ರೀತಿಯಲ್ಲಿ ಮೂಡಿಬರಲಿದೆ ಎನ್ನೋದು ನನ್ನ ನಂಬಿಕೆ ಎನ್ನುತ್ತಾರೆ ಪ್ರಸೂನ್ ಜೋಶಿ.

No comments:

Post a Comment