

ಈ ವರ್ಷದ ಬಾಲಿವುಡ್‌ನ ಸೂಪರ್ ಡೂಪರ್ ಹಿಟ್ ಸಾಂಗ್ ‘ಶೀಲಾ ಕೀ ಜವಾನಿ..’ ಯಾರಿಗೆ ತಾನೇ ಗೊತ್ತಿಲ್ಲ. ಮದುವೆ, ಮುಂಜಿ ಏನೇ ನಡೆಯಲಿ ಅಲ್ಲಿ ಶೀಲಾ ಬಂದು ಕುಣಿವಷ್ಟು ಜೋರಾಗಿತ್ತು ಆ ಹಾಡು. ಅದರ ಹಿಂದೆ ಇದ್ದ ಗಾಯಕಿ ಸುನೀದಿ ಚೌವಾನ್. ಹಾಡುಗಳು ಹೈ ನೋಟ್‌ನಲ್ಲಿ ಇದ್ದರೂ ಒಂಚೂರು ಟೋನ್‌ನಲ್ಲಿ ವ್ಯತ್ಯಾಸ ಮಾಡದೇ ಅದೇ ಗುಣಮಟ್ಟವನ್ನು ಕಾಯ್ದುಕೊಂಡು ಹೋಗುವ ಛಾತಿ ಇರೋದು ಭವಿಷ್ಯ ಸುನೀದಿಗೆ ಮಾತ್ರ ಎನ್ನೋದು ಬಾಲಿವುಡ್‌ನ ಬಹುತೇಕ ಸಂಗೀತ ನಿರ್ದೇಶಕರ ಗಟ್ಟಿ ಮಾತು. ಅದಕ್ಕಾಗಿಯೇ ಸುನೀದಿಯನ್ನು ಹೈಪಿಚ್ ಹಾಗೂ ಪಾಪ್ ಸಂಗೀತಗಳಿಗೆ ಹೇಳಿ ಮಾಡಿಸಿದ ಕಂಠ ಎಂದು ವಿಮರ್ಶಕರು ಹೇಳುವುದಿದೆ. ೨೦೦೭ರಲ್ಲಿ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರ ‘ಓಂಕಾರ’ದ ‘ಬೀಡಿ ಜಲಾಯೀ ದೇ...’ ಹಾಡಿನಿಂದ ತಾನು ಅಷ್ಟು ಚೆನ್ನಾಗಿ ಕುಣಿಯಲು ಸಾಧ್ಯವಾಯಿತು ಎಂದು ಈ ಹಾಡಿಗೆ ಕುಣಿದಿದ್ದ ನಟಿ ಬಿಪಾಷ ಬಸು ಮಾಧ್ಯಮವೊಂದರಲ್ಲಿ ಹೇಳಿಕೆ ನೀಡಿದ್ದರು. ಇದು ಸುನೀದಿಯ ಹಾಡಿನ ಪವರ್ ಆಗಿತ್ತು. ಸುನೀದಿಯನ್ನು ಬಹಳಷ್ಟು ಜನರು ಲತಾರ ಮುಂದುವರಿದ ಭಾಗ ಎಂದೇ ಪರಿಗಣಿಸುತ್ತಾರೆ.
ನಾಲ್ಕರ ಹರೆಯದಲ್ಲಿ ದಿಲ್ಲಿಯ ದೇವಸ್ಥಾನದ ಮುಂದೆ ಸುನೀದಿ ಹಾಡಿದ್ದು ಈಗಲೂ ಭರ್ಜರಿಯಾಗಿ ಸಂಗೀತದಲ್ಲಿ ಮುಂದುವರಿಯುತ್ತಿದ್ದಾರೆ. ಇದರ ನಂತರ ೧೯೯೬ರಲ್ಲಿ ದೂರದರ್ಶನ್‌ದಲ್ಲಿ ಬಂದ ಸಂಗೀತ ರಿಯಾಲಿಟಿ ಶೋ ‘ಮೇರಿ ಅವಾಜ್ ಸುನೋ’ದಲ್ಲಿ ಆಯ್ಕೆಯಾಗಿದ್ದರು. ೧೯೯೬ನಲ್ಲಿ ‘ಶಾಸ್ತ್ರಾ ’ ಚಿತ್ರಕ್ಕೆ ಹಿನ್ನೆಲೆಗಾಯಕಿಯಾಗಿ ಸುನೀದಿಗೆ ಸಂಗೀತ ನಿರ್ದೇಶಕ ಅದೇಶ್ ಶ್ರೀವಾಸ್ತವ್ ಚಾನ್ಸ್ ಕೊಟ್ಟಿದ್ದರು. ಆದರೆ ಈ ಚಿತ್ರದ ಹಾಡು ಬಾಲಿವುಡ್ ಚಿತ್ರ ರಸಿಕರಿಗೆ ಇಷ್ಟವಾಗಲಿಲ್ಲ. ನಂತರ ಬಾಲಿವುಡ್ ಸಂಗೀತ ನಿರ್ದೇಶಕ ಸಂದೀಪ್ ಚೌಟ ನಿರ್ದೇಶನದ ‘ಮಸ್ತ್’ನ ಹಾಡು ಸುನೀದಿಯ ಲೈಫ್‌ನ್ನು ಲಿಫ್ಟ್ ಮಾಡಿತು. ಈ ಮೊದಲು ಸಂದೀಪ್‌ಗೆ ಗಾಯಕ ಸೋನು ನಿಗಮ್ ಸುನೀದಿಯನ್ನು ಪರಿಚಯ ಮಾಡಿಕೊಟ್ಟಿದ್ದರು. ಅದಕ್ಕಾಗಿ ಇಂದಿಗೂ ಸುನೀದಿ ಸೋನು ನಿಗಮ್‌ರನ್ನು ನೆನಪು ಮಾಡುತ್ತಾರೆ.
೨೦೦೮ರ ವರ್ಷ ಸುನೀದಿ ಪಾಲಿಗೆ ಸೂಪರ್ ಹಿಟ್ ವರ್ಷ. ಹಾಡಿದ ಬಹುತೇಕ ಹಾಡುಗಳು ಸಿನಿ ಪ್ರೇಮಿಗಳ ಬಾಯಿಯಲ್ಲಿ ಮಂತ್ರಗಳಂತೆ ಉದುರಿತು. ‘ತಾಷನ್’, ‘ದೋಸ್ತಾನಾ’, ‘ರೇಸ್’, ‘ರಬ್ ದೇ ಬನಾದೇ ಜೋಡಿ’ಯ ಹಿಟ್ ಹಾಡುಗಳು ಈಗಲೂ ಸಂಗೀತ ಆರಾಧಕರ ರೇಟಿಂಗ್‌ನಲ್ಲಿ ಟಾಪ್‌ನಲ್ಲಿ ಉಳಿದುಕೊಂಡಿವೆ. ಸುನೀದಿ ಈ ವರೆಗೆ ೩ ಸಾವಿರದಷ್ಟು ಹಾಡುಗಳನ್ನು ಹಾಡಿದ್ದಾರೆ. ಹದಿನಾಲ್ಕು ಬಾರಿ ಫಿಲ್ಮ್‌ಪೇರ್ ಅವಾರ್ಡ್‌ಗೆ ನಾಮಕಿಂತಗೊಂಡಿದ್ದಾರೆ. ಅದರಲ್ಲಿ ಮೂರು ಬಾರಿ ಅವಾರ್ಡ್ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದ ಸುನೀದಿ ಚೌವಾನ್ ಲವಲವಿಕೆಯ ಜತೆ ಕೂತು ಚಿಟ್‌ಚಾಟ್ ಮಾಡಿದ್ದಾರೆ. ಬನ್ನಿ ಓವರ್ ಟು ಸುನೀದಿ ಚೌವಾನ್.
ಬದುಕು ಕಟ್ಟಿದ ಹುಡುಗಿ
ಸುನೀದಿ ಮೂಲತಃ ದಿಲ್ಲಿಯ ಬೆಡಗಿ. ರಂಗಭೂಮಿ ಹಿನ್ನೆಲೆಯಿಂದ ಬಂದ ಸುನೀದಿ ನಂತರ ದಿನಗಳಲ್ಲಿ ದಿಲ್ಲಿ ಬಿಟ್ಟು ಮುಂಬಯಿ ಸೇರಿಕೊಂಡರು. ೧೮ರ ಹರೆಯದಲ್ಲಿ ಬಾಲಿವುಡ್‌ನ ಖ್ಯಾತ ಮ್ಯೂಸಿಕ್ ವಿಡಿಯೋ ನಿರ್ದೇಶಕ ಕಮ್ ಕೋರಿಯೋಗ್ರಾಫರ್ ಬಾಬಿ ಖಾನ್ ಜತೆಯಲ್ಲಿ ವಿವಾಹವಾಗಿದ್ದರು. ‘ಪಹೇಲಾ ನಾಷಾ’ ಮ್ಯೂಸಿಕ್ ವಿಡಿಯೋನಿಂದ ಇಬ್ಬರ ಜತೆ ಸ್ನೇಹವಾಗಿ ನಂತರ ಅದು ಪ್ರೇಮಕ್ಕೆ ನಾಂದಿ ಹಾಡಿತು ಎನ್ನುವ ಮಾತಿದೆ. ಆದರೆ ಯಾಕೋ ಗೊತ್ತಿಲ್ಲ ವಿವಾಹ ಮಾತ್ರ ಬಹಳ ಗುಪ್ತವಾಗಿ ನಡೆದಿತ್ತು. ತಮ್ಮ ಹತ್ತಿರದ ಬಂಧುಗಳಿಗೆ ಮಾತ್ರ ಆಹ್ವಾನವಿತ್ತು. ವಿವಾಹವಾದ ಒಂದು ವರ್ಷದಲ್ಲಿಯೇ ಇಬ್ಬರ ನಡುವೆ ಮನಸ್ತಾಪ ಜೋರಾಯಿತು. ಇಬ್ಬರು ನಾನೊಂದು ತೀರಾ ನೀನೊಂದು ತೀರ ಎಂದು ಬಿಟ್ಟರು. ಸುನೀದಿ ಬಾಬಿಯನ್ನು ಬಿಟ್ಟು ಹೆತ್ತವರ ಜತೆಯಲ್ಲಿ ಮತ್ತೆ ಸೇರಿಕೊಂಡರು. ಎರಡು ಮೂರು ವರ್ಷಗಳ ಕಾಲ ಕಾನೂನಿನ ಮೂಲಕ ವಿಚ್ಛೇದನ ಪಡೆದು ಕೊಂಡದ್ದು ಆಯಿತು. ಈಗ ಪುರುಷ ಮೃಗಗಳನ್ನು ಕಂಡಾಗ ಸುನೀದಿ ಬೆಂಕಿ ಉಂಡೆಯಾಗುತ್ತಾರೆ.
* ನಿಮ್ಮ ಹೊಸ ಪ್ರಾಜೆಕ್ಟ್‌ಗಳ ಕತೆ ಏನು?
- ಶೀಲಾ ಕೀ ಜವಾನಿ...ಹಿಟ್ ನಂತರ ಈಗ ಹತ್ತಾರು ಪ್ರಾಜೆಕ್ಟ್‌ಗಳು ಕೈಯಲ್ಲಿದೆ. ಈ ವರ್ಷನೂ ಮತ್ತೊಂದು ಸೂಪರ್ ಹಾಡು ಕೊಡಬೇಕು ಎನ್ನೋದು ನನ್ನ ಬಯಕೆ.
* ನೀವು ಗುರು ಇಲ್ಲದ ಶಿಷ್ಯೆಯಂತೆ ?
- ಹೌದು. ನಾನು ಲತಾಜೀ ಹಾಗೂ ಆಶಾಜೀಗಳ ಹಾಡುಗಳನ್ನು ಕೇಳಿ ಯೇ ಸಂಗೀತ ಜ್ಞಾನ ಕಲಿತಿದ್ದೇನೆ. ಅವರ ಹಾಡುಗಳೇ ನನ್ನ ಇಂದಿನ ದಾರಿಗೆ ಪ್ರೇರಕ ಶಕ್ತಿಗಳು. ಉಳಿದಂತೆ ಸಂಗೀತವನ್ನು ಯಾವ ಗುರುಗಳಿಂದಲೂ ಕಲಿತಿಲ್ಲ.
* ನಿಮ್ಮ ಹತ್ತಿರದ ಪ್ರತಿರ್ಸ್ಪ ಯಾರು?
-ನಾನು ನನ್ನ ಪ್ರತಿರ್ಸ್ಪಗಳ ಬಗ್ಗೆ ತಲೆ ಕೆಡೆಸಿಕೊಳ್ಳುವುದಿಲ್ಲ. ಇತ್ತೀಚೆಗೆ ಸಂಗೀತ ಲೋಕಕ್ಕೆ ಹೊಸ ಗಾಯಕಿಯರು ಬರುತ್ತಿದ್ದಾರೆ. ಅದು ಹೆಮ್ಮೆ ಪಡುವ ವಿಷ್ಯಾ. ಸಂಗೀತದಲ್ಲಿ ಪೈಪೋಟಿ ಇದ್ರೆ ತಾನೇ ಗುಣಮಟ್ಟ ಹೆಚ್ಚಾಗೋದು....
*ತುಂಬಾ ಟ್ಯಾಲೆಂಟ್ ಇರುವ ನೀವು ನಟನೆಗೆ ಯಾಕೆ ಹೋಗ್ತಿಲ್ಲ?
- ಕಳೆದ ಎರಡು ಮೂರು ವರ್ಷಗಳಿಂದ ಹತ್ತಾರು ಸಿನಿಮಾ ನಿರ್ದೇಶಕರು ನನ್ನನ್ನು ತಮ್ಮ ಸಿನಿಮಾಗಳಲ್ಲಿ ನಟಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ನನಗೆ ನನ್ನದೇ ಕನಸ್ಸಿನ ಪಾತ್ರಗಳಿವೆ ಅಂತಹ ಪಾತ್ರಗಳು ಬಂದರೆ ಸಿನಿಮಾದಲ್ಲಿ ನಟಿಸುವುದು ಗ್ಯಾರಂಟಿ.
*ಹೊಸ ಅಲ್ಬಂ ತರುವ ಕೆಲಸ ಎಲ್ಲಿಗೆ ಬಂತು?
- ಆಲ್ಬಂ ತರುವ ಪ್ಲ್ಯಾನ್‌ವೊಂದು ಇತ್ತು. ಆದರೆ ಈಗ ಸಿನಿಮಾಗಳು ಜಾಸ್ತಿ ಬರುತ್ತಿದೆ. ಆಲ್ಬಂಗೆ ಟೈಮ್ ಸಿಗ್ತಿಲ್ಲ. ಈ ವರ್ಷ ಖಂಡಿತ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಆಲ್ಬಂ ತರುವ ಪ್ರಯತ್ನ ಮಾಡುತ್ತೇನೆ.
* ನಿಮ್ಮ ಪ್ರಕಾರ ಒಳ್ಳೆಯ ಹಾಗೂ ಬಹಳ ಕೆಟ್ಟ ಸಂಗೀತ ನಿರ್ದೇಶಕ ಯಾರು?
-ತುಂಬಾನೇ ಕಠಿಣ ಸವಾಲಿದು. ಒಂದ್ ಸಲ ಒಂದು ಸ್ಟುಡಿಯೋದಲ್ಲಿ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಮೂರು ಗಂಟೆಗಳ ಕಾಲ ರೆಕಾರ್ಡಿಂಗ್ ಮಾಡಿಸದೇ ಕೂರಿಸಿದರು. ನನ್ನ ವೃತ್ತಿ ಬದುಕಿನಲ್ಲಿ ಅವರೊಬ್ಬರೇ ಬಹಳ ಕೆಟ್ಟ ನಿರ್ದೇಶಕರು ಎಂದು ನಿರ್ಧಾರ ಮಾಡಿದೆ. ಆದರೆ ಹೆಸರು ಹೇಳಲು ಇಷ್ಟಪಡುವುದಿಲ್ಲ. ಉಳಿದಂತೆ ಎಲ್ಲರೂ ವೃತ್ತಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ.
* ದಿಲ್ಲಿ ಹುಡುಗನ ಜತೆ ಮದುವೆ ಇದೆ ಎನ್ನುವ ಮಾತಿದೆಯಲ್ಲ?
- ಇದೆಲ್ಲ ಮಾಧ್ಯಮಗಳು ಕಟ್ಟಿ ನಿಲ್ಲಿಸಿದ ಕತೆ. ಮದುವೆ ಎನ್ನೋದು ನನ್ನ ಬದುಕಿನಲ್ಲಿ ಮುಗಿದ ಅಧ್ಯಾಯ. ಸಿನಿಮಾ ಬದುಕಿನಲ್ಲಿ ಇಂತಹ ಲಿಂಕ್ ಆಪ್ ಗಾಸಿಪ್‌ಗಳು ಪದೇ ಪದೇ ಬರುತ್ತದೆ. ನಾನು ಈ ವಿಚಾರದಲ್ಲಿ ಗಾಂಜಿಯ ಮೂರು ಮಂಗನಂತೆ ಇರುತ್ತೇನೆ.
* ಬಾಬಿ ಮತ್ತೆ ನಿಮ್ಮ ಬದುಕಿನಲ್ಲಿ ಎಂಟ್ರಿಯಾಗುತ್ತಾರಾ..?
- ಇಲ್ಲವೇ ಇಲ್ಲ. ಮದುವೆ ಎನ್ನುವ ಪದ ಈಗ ಬೋರ್ ಹೊಡಿಸುತ್ತಿದೆ. ಅವರು ತಮ್ಮ ಬದುಕಿನಲ್ಲಿ ಖುಷಿಯಾಗಿದ್ದಾರೆ. ನಾನು ನನ್ನ ಬದುಕಿನಲ್ಲಿ ಹ್ಯಾಪಿಯಾಗಿದ್ದೇನೆ. ಕಾನೂನು ಮೂಲಕ ನಾವು ಹೋಗಿದ್ದರ ಪರಿಣಾಮ ಎಂದಿಗೂ ನಾವು ಜತೆ ಸೇರಲಾರೆವು. ಒಂದ್ ಮಾತು ಹೇಳಬಲ್ಲೆ.. ಅವರಿಗೆ ಆಲ್ ದೀ ಬೆಸ್ಟ್.
idu yava site ninda utkalana maadiddu?????
ReplyDelete