Monday, April 11, 2011

ಪ್ರೇಕ್ಷಕ ಮೂಕ ವಿ‘ಸ್ಮಿತಾ’



ಬಾಲಿವುಡ್ ನಿರ್ದೇಶಕಿ ಕಿರಣ್‌ರಾವ್ ನಿರ್ದೇಶನದ ‘ಧೋಬಿ ಘಾಟ್’ ಚಿತ್ರ ನೋಡಿದ ನಂತರ ಅನ್ನಿಸಿದ್ದು ಆ ಹೊಸ ಹುಡುಗ ಅವರ ಮಗ ಅಲ್ವಾ...? ಅದೇ ಮುಖ, ಕಣ್ಣು, ಮೂಗು, ನಟನೆ ಸೇಮ್ ಟೂ ಸೇಮ್ ಖ್ಯಾತ ನಟಿ ಸ್ಮಿತಾ ಪಾಟೀಲ್ ಹೊಳಪು ಒಂದ್ ಸಾರಿ ಬಂದು ಮರೆಯಾಯಿತು.

ಬಾಲಿವುಡ್ ನಟ ಅಮೀರ್ ಖಾನ್ ಬ್ಯಾನರ್‌ನಡಿಯಲ್ಲಿ ಮೂಡಿ ಬಂದ ‘ಧೋಬಿ ಘಾಟ್’ ಚಿತ್ರ ಯಾಕೋ ಕಮರ್ಷಿಯಲ್ ಪಾಯಿಂಟ್ ಆಫ್ ರೇಟಿಂಗ್‌ನಲ್ಲಿ ವೀಕ್ ಅನ್ನಿಸಿದರೂ ಅಲ್ಲಿ ಕಾಣಿಸಿಕೊಂಡ ಹೊಸ ಪ್ರತಿಭೆ ಪ್ರತಿಕ್ ರಾಜ್ ಬಬ್ಬರ್ ಮಾತ್ರ ಬಹಳಷ್ಟು ಸಿನಿ ವಿಮರ್ಶಕರಿಂದ ಶಹಬ್ಬಾಸ್‌ಗಿರಿ ಪಡೆದಿದ್ದರು. ಹೊಸ ಹುಡುಗ ಬಾಲಿವುಡ್‌ನಲ್ಲಿ ಬೆಳೆದು ನಿಲ್ಲುತ್ತಾನೆ ಎಂದು ಭವಿಷ್ಯ ಹೇಳಿದ್ದರು. ಎಲ್ಲ ರೀತಿಯಿಂದಲೂ ಬಾಲಿವುಡ್‌ನ ರಂಗೀನ್ ದುನಿಯಾದಲ್ಲಿ ಹೊಸ ಹುಡುಗ ಬಂದ ಅಂತಾ ಖುಶಿ ಪಟ್ಟುಕೊಂಡಿದ್ದರು. ಆದರೆ ಈ ಹುಡುಗ ಮಾತ್ರ ಬಾಲಿವುಡ್‌ನ ಖ್ಯಾತ ನಟಿ ಸ್ಮಿತಾ ಪಾಟೀಲ್‌ರ ಸುಪುತ್ರ ಅಂತಾ ಬಹಳಷ್ಟು ಮಂದಿಗೆ ಗೊತ್ತೇ ಇರಲಿಕ್ಕಿಲ್ಲ. ಆದರೆ ಇದು ಮಾತ್ರ ದಿಟ ಕಣ್ರಿ.
ಸ್ಮಿತಾ ಪಾಟೀಲ್ ಹಾಗೂ ರಾಜ್ ಬಬ್ಬರ್‌ರ ಪುತ್ರ ಪ್ರತಿಕ್ ಬಬ್ಬರ್ ಧೋಬಿ ಘಾಟ್ ನಂತರ ಈಗ ‘ಧಮ್ ಮಾರೋ ಧಮ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಏಪ್ರಿಲ್ ೨೨ರಂದು ತೆರೆಯ ಮೇಲೆ ಬರುವ ಸೂಚನೆ ಈಗಾಗಲೇ ನೀಡಿದೆ. ಈ ಚಿತ್ರದ ನಂತರ ‘ಅಕ್ರೋಶ್’ ಮತ್ತು ‘ ಮೈ ಫ್ರೆಂಡ್ ಪಿಂಟೋ ’ ಚಿತ್ರೀಕರಣದ ಹಾದಿಯಲ್ಲಿದೆ. ಟೋಟಲಿ ಪ್ರತಿಕ್ ಬಬ್ಬರ್, ತಾಯಿಯ ಹಾದಿಯಲ್ಲಿ ನಡೆಯುತ್ತಿದ್ದಾನೋ ಎನ್ನುವ ಸಂದೇಹದ ಮೇಲೆ ಸ್ಮಿತಾ ಪಾಟೀಲ್‌ರ ಬಣ್ಣದ ಲೋಕದ ಪುಟಗಳನ್ನು ಒಂದ್ ಸಲ ಬಿಚ್ಚಿಟ್ಟುಕೊಂಡು ನೋಡಿದಾಗ ಅನ್ನಿಸಿದ್ದು ಇಷ್ಟೇ : ಅವನು ಸ್ಮಿತಾ ಪಾಟೀಲ್‌ರ ಹೆಮ್ಮೆಯ ಸುಪುತ್ರನೇ ಖರೇ ಕಣ್ರಿ.
ಮರಾಠಿ ಭಾಷೆಯ ಚಾನೆಲ್‌ವೊಂದರಲ್ಲಿ ಟಿವಿ ನಿರೂಪಕಿಯಾಗಿದ್ದ ಚೆಲುವೆಯನ್ನು ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಪ್ರೇಕ್ಷಕರ ಮುಂದೆ ತಂದು ಬಿಟ್ಟಿದ್ದರು. ಹೌದು. ಇದು ಸ್ಮಿತಾ ಪಾಟೀಲ್ ಎನ್ನುವ ಬಾಲಿವುಡ್ ನಟಿಯ ಕತೆ. ಚೂಪಾದ ಮೂಗು, ಮನಸೆಳೆದು ಬಿಡುವ ದೇಹ ಸೌಂದರ್ಯ ಜತೆಗಿಷ್ಟು ಮುದ್ದಾದ ಮಾತುಗಳು. ಅಂದಕಾಲತ್ತಿಲ್‌ನ ಚೆಲುವೆ ಸ್ಮಿತಾ ಪಾಟೀಲ್ ನೆನಪಿಗೆ ಬಂದು ಬಿಡುತ್ತದೆ. ೧೯೭೦ರ ಅಸುಪಾಸಿನಲ್ಲಿ ಖ್ಯಾತ ನಿರ್ದೇಶಕ ಬೆನೆಗಲ್, ಗೋವಿಂದ ನಿಹಲಾನಿ ಹಾಗೂ ಮೃಣಾಲ್ ಸೇನ್‌ನಂತಹ ಗರಡಿಯಲ್ಲಿ ಪಳಗಿದ ಹುಡುಗಿ. ಇಡೀ ಬಾಲಿವುಡ್ ಸಿನಿಮಾ ರಂಗದಲ್ಲಿ ತನ್ನ ವಿಶೇಷ ನಟನೆಯ ಮೂಲಕ ಛಾಪು ಮೂಡಿಸಿಕೊಂಡಿದ್ದರು ಸ್ಮಿತಾ ಪಾಟೀಲ್.
ಶ್ಯಾಮ್ ಬೆನೆಗಲ್ ನಿರ್ದೇಶನದ ‘ಚರಣ್‌ದಾಸ್ ಚೋರ್’ಚಿತ್ರ ಸ್ಮಿತಾರ ಪಾಲಿಗೆ ಸಿನಿಮಾರಂಗಕ್ಕೆ ಗೇಟ್‌ಪಾಸ್ ಆಯಿತು. ಅವರ ನಿರ್ದೇಶನದ ‘ಮಂಥನ್’, ‘ಭೂಮಿಕಾ’ ‘ಅಕ್ರೋಶ್" ‘ಚಕ್ರ’ ಹಾಗೂ ‘ಮಿರ್ಚ್ ಮಸಾಲ’ ಎಲ್ಲವೂ ಕಲಾತ್ಮಕ ಹಾಗೂ ಕಮರ್ಷಿಯಲ್ ದೃಷ್ಟಿಯಿಂದಲೂ ಹೆಸರು ಮಾಡಿದ ಚಿತ್ರಗಳಲ್ಲಿ ಸ್ಮಿತಾ ಪಾಟೀಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಅಂದಹಾಗೆ ಸಿನಿಮಾ ರಂಗಕ್ಕೂ ಬರುವ ಮುಂಚೆ ಸ್ಮಿತಾ ಪಾಟೀಲ್ ಒಬ್ಬ ಮರಾಠಿ ರಂಗಭೂಮಿ ಕಲಾವಿದೆ. ಅಗೊಮ್ಮೆ ಈಗೊಮ್ಮೆ ಮರಾಠಿ ವಾಹಿನಿಯೊಂದರಲ್ಲಿ ವಾರ್ತಾವಾಚಕಿ ಕೆಲಸ ಮಾಡುತ್ತಿದ್ದರು. ಮಧ್ಯಮ ವರ್ಗದ ಮಹಿಳೆಯರ ಬದುಕು, ಬವಣೆಗಳ ಬಗ್ಗೆ ಅತೀವ ಕಾಳಜಿ ಇದ್ದ ಹೋರಾಟಗಾರ್ತಿಯಾಗಿ ಮೆರೆದು ನಿಂತವರು. ಮಹಾರಾಷ್ಟ್ರದ ಖ್ಯಾತ ರಾಜಕಾರಣಿ ಶಿವರಾಜಿ ರಾವ್ ಪಾಟೀಲ್‌ರ ಮುದ್ದು ಮಗಳು ಸ್ಮಿತಾ ಪಾಟೀಲ್ ಸರಿಸುಮಾರು ೭೫ಕ್ಕಿಂತ ಹೆಚ್ಚಿನ ಹಿಂದಿ ಹಾಗೂ ಮರಾಠಿ ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರರಂಗದ ಸಾಧ ಗಾಗಿ ಎರಡು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ, ೧೯೮೫ರಲ್ಲಿ ಪದ್ಮಶ್ರೀ ಅವಾರ್ಡ್ ಕೂಡ ಸ್ಮಿತಾರ ಮಡಿಲು ತುಂಬಿತು.
ಆ ಕಾಲದಲ್ಲಿ ಸಿನಿಮಾ ರಂಗದಲ್ಲಿ ತನ್ನ ವಿಶಿಷ್ಟ ಅಭಿನಯದ ಮೂಲಕ ಗಮನಸೆಳೆಯುತ್ತಿದ್ದ ಬಾಲಿವುಡ್ ನಟ ರಾಜ್ ಬಬ್ಬರ್‌ರ ಜತೆ ಪ್ರೇಮಾಂಕುರವಾಗಿ ಸ್ಮಿತಾ ಕೊನೆಗೆ ಬಬ್ಬರ್‌ರ ಎರಡನೇ ಪತ್ನಿಯಾಗಿ ಉಳಿದು ಹೋದರು. ಆದರೂ ಸಿನಿಮಾ ರಂಗದ ಜತೆಗಿನ ನಂಟು ಮಾತ್ರ ಕಳಚಿಕೊಂಡಿರಲಿಲ್ಲ. ೧೯೮೬ರಲ್ಲಿ ಸ್ಮಿತಾ ಗರ್ಭಿಣಿಯಾಗಿ ಆಸ್ಪತ್ರೆ ಸೇರಿಕೊಂಡರು. ಆದರೆ ಡೆಲಿವರಿಯ ಸಮಯದಲ್ಲಿ ನಡೆದ ತೊಂದರೆಯಿಂದ ಸ್ಮಿತಾ ಪಾಟೀಲ್ ಎಲ್ಲರನ್ನು ಬಿಟ್ಟು ಹೋದರು. ಸ್ಮಿತಾ ಹೋದಾಗ ಅವರ ೧೦ ಚಿತ್ರಗಳು ತೆರೆಗೆ ಬರಲು ಕಾಯುತ್ತಿತ್ತು.
೩೧ರ ಹರೆಯದಲ್ಲಿ ದೂರವಾದ ಸ್ಮಿತಾ ಪಾಟೀಲ್ ಒಬ್ಬ ಪ್ರತಿಭಾವಂತ ನಟ ಪ್ರತಿಕ್ ಬಬ್ಬರ್‌ರನ್ನು ಬಿಟ್ಟು ಹೋಗಿದ್ದಾರೆ. ಪ್ರತಿಕ್ ನೋಡಿದಾಗ ಅದೇ ಸ್ಮಿತಾರ ಚೂಪಾದ ಮೂಗು, ಸೆಳೆಯುವ ಕಣ್ಣುಗಳು, ನಟನೆ ಎಲ್ಲವೂ ಸೇಮ್ ಟೂ ಸೇಮ್ ಅನ್ನಿಸಿಬಿಡುತ್ತದೆ ಗ್ಯಾರಂಟಿ. ಅಂದಹಾಗೆ ಪ್ರತಿಕ್ ಬಬ್ಬರ್‌ನನ್ನು ನೀವು ಸರಿಯಾಗಿ ನೋಡಿಲ್ಲವಾದರೆ ಒಂದ್ ಸಾರಿ ಧಮ್ ಮಾರೋ ಧಮ್ ಸಿನಿಮಾ ನೋಡಿ ಬಂದು ಬಿಡಿ. ಸ್ಮಿತಾ ಪಾಟೀಲ್‌ರ ಹೊಳಪು ನಿಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ.

No comments:

Post a Comment