
ಮೈಸೂರರಸನ ಅರಮನೆಯೊಳಗೆ,
ರಾಜನ ಸಂಗಡ ರಾಣಿಯು ಇದ್ದಳು
ಅಂತಪುರದೊಳಗೆ...
ಅಂಥಾ ಅಂತಪುರದೊಳಗೆ ಪ್ರವೇಶಿಸುವ ಮುದ್ದಿನ ಬೆಕ್ಕಿಗೆ ನಿಷೇಧಗಳೇ ಇಲ್ಲ ! ಕಿಲಾಡಿ ಮಾರ್ಜಾಲ ಕಾರ್ಯ ಸಾಧು. ಅಂದ ಹಾಗೆ ಬೆಕ್ಕನ್ನು ಎಷ್ಟೇ ಎತ್ತರದಿಂದ ಕೆಳಕ್ಕೆ ಹಾಕಿದರೂ ಅದು ನಾಲ್ಕು ಕಾಲೂರಿ ನಿಲ್ಲುತ್ತದೆ ಎನ್ನುವುದು ಅದರ ಕೆಪಾಸಿಟಿ. ಆದರೆ ಪಾಪ, ಸರಸರನೆ ಮರ ಏರುವ ಬೆಕ್ಕಿಗೆ ಇಳಿಯಲಿಕ್ಕೆ ಬರುವುದಿಲ್ಲ.
ಮನೆಯಲ್ಲಿ ನಿರ್ಭಿತಿಯಿಂದ ಓಡಾಡಿಕೊಂಡಿರುವ ಬೆಕ್ಕುಗಳು ಮುದ್ದು ಮುದ್ದು. ಸೂಕ್ಷ್ಮ ಕಣ್ಣುಗಳಿಂದ ತನ್ನ ಬೇಟೆಯತ್ತ ನೋಡುವ ಬೆಕ್ಕೆಂದರೆ ಪ್ರೀತಿ. ಪುಟಾಣಿ ಮಕ್ಕಳಿಗೆ ಬೆಕ್ಕು, ಅದರ ಮರಿಗಳ ಚಿನ್ನಾಟ ನಿತ್ಯ ಮನರಂಜನೆ. ಮನೆಯ ಸದಸ್ಯರಂತೆಯೇ ಅದಕ್ಕೊಂದು ಸ್ಥಾನ ಇರುತ್ತದೆ. ಅದಕ್ಕೊಂದು ಹಾಲಿನ ಬಟ್ಟಲು, ಮಲಗೋಕೆ ಸುಪ್ಪತ್ತಿಗೆ, ಮರಿ ಹಾಕಿದರೆ ಆರೈಕೆ. ಮನೆಯೊಡತಿಯೊಂದಿಗೆ ಸಂಭಾಷಣೆಯ ಭಾಗ್ಯವೂ ಬೆಕ್ಕಿಗೆ ಸಿಗುತ್ತದೆ. ನಂಬಿಕೆ ನಿಷ್ಠ ನಾಯಿಗಿಂತಲೂ ಮನೆಯಲ್ಲಿ ಮರೆಗುಳಿ ಬೆಕ್ಕೇ ಹೆಚ್ಚು ಪ್ರೀತಿ ಪಡೆಯುವುದುಂಟು. ಗಮನಿಸಿದ್ದೀರಾ, ಮನೆಯಲ್ಲಿರುವ ಎಲ್ಲ ಬೆಕ್ಕುಗಳೂ ಇಲಿ ಹಿಡಿಯುವುದಿಲ್ಲ. ಪುಷ್ಕಳವಾಗಿ ಹಾಲು ಮೀನು ತಿಂದುಕೊಂಡು, ತನ್ನ ತಾ ನೆಕ್ಕುತಾ ಇರುತ್ತವೆ ಫ್ಯಾಶನ್ ಪ್ರಿಯ ಸೋಂಬೇರಿ ಬೆಕ್ಕುಗಳು.
ಒಂದೆಡೆ ಬೆಕ್ಕು ರಸ್ತೆ ದಾಟುವಾಗ ಹಾದು ಹೋದ್ರೆ ಅದು ಅಪಶಕುನ ಎನ್ನುವ ನಂಬಿಕೆ ಒಂದು ಕಡೆ. ಜತೆಯಲ್ಲಿ ಬೆಕ್ಕುಗಳಿದ್ದರೆ ಅದು ಮನೆಗೆ ಸಂಪತ್ತು ಎನ್ನುವರು ಮತ್ತೊಂದೆಡೆ. ಬೆಕ್ಕುಗಳ ಕುರಿತು ಹರಡಿಕೊಂಡಿರುವ ಮೂಢನಂಬಿಕೆಗಳ ಜತೆಯಲ್ಲೇ ಬೆಕ್ಕಿನಿಂದ ಒಳ್ಳೆದಾಗುತ್ತದೆ ಎಂದು ನಂಬಿದವರ ದಂಡೇ ಇದೆ. ಭಾರತೀಯರಲ್ಲಿ ಬೆಕ್ಕೆಂದರೆ ಮೂಗು ಮುರಿಯುವವರು ಇದ್ದರೂ, ಬೆಕ್ಕು ಅಪಶಕುನ ಎನ್ನುವುದಕ್ಕೆ ಭಾರೀ ಪುರಾವೆ ಏನಿಲ್ಲ. ಪೂಜಾ ಕಾರ್ಯದಲ್ಲಿ ಅದನ್ನು ಕೊಂಚ ದೂರ ಇರಿಸುವುದುಂಟು. ಉಳಿದಂತೆ ಬೆಕ್ಕುಗಳು ಕ್ಯಾಂವ್ ಕ್ಯಾಂವ್ ಎಂದು ಜಗಳಾಡುವುದು ಬರಲಿರುವ ಕದನದ ಸಂಕೇತ. ವಾಮಾಚಾರ,ದೆವ್ವ ಪಿಶಾಚಿಗಳ ಲೋಕದಲ್ಲಿ ಮಾತ್ರ ಕಪ್ಪು ಬೆಕ್ಕಿನ ಪಾತ್ರ ಅಶುಭವೇ.
ಬೆಕ್ಕೆಂದರೆ ಬೇಸರವೇಕೆ..
ಕೆಲವರ ಮನೆಯಲ್ಲಿ ಕಪ್ಪು ಬೆಕ್ಕಿಗೆ ಮಾತ್ರ ಆಯುಸ್ಸು. ಮನೆಗೆ ಏಳಿಗೆ. ಮತ್ತೆ ಕೆಲವರಿಗೆ ಕಪ್ಪು ಬೆಕ್ಕು ಮನೆಯಲ್ಲಿದ್ದರೆ ಶುಭ.
ಎಲ್ಲ ಬೆಕ್ಕು ಅದರಲ್ಲೂ ಕಪ್ಪು ಬೆಕ್ಕಿನ ಕುರಿತು ಈಜಿಪ್ಟ್ ನಾಗರಿಕರಿಗೆ ಪೂಜನೀಯ ಭಾವನೆ ಇದೆ. ಬೆಕ್ಕಿನ ಮಾಲೀಕರು ಸತ್ತಾಗ ಅವರ ಜತೆಯಲ್ಲಿಯೇ ಈ ಬೆಕ್ಕುಗಳನ್ನು ಹೂಳಲಾಗುತ್ತದೆ. ಸತ್ತ ವ್ಯಕ್ತಿಗೆ ಮೋಕ್ಷ ಪ್ರಾಪ್ತಿಯಾಗುತ್ತೆ ಅಂತಾ ಈಜಿಪ್ಟ್ ನಾಗರಿಕರ ನಂಬಿಕೆ.
ಕಪ್ಪು ಬೆಕ್ಕುಗಳನ್ನು ಸಾಕುವುದೆಂದರೆ ಅದು ಸಂಪತ್ತು ತಂದುಕೊಡುತ್ತದೆ. ಅದರಲ್ಲೂ ಕಪ್ಪು ಬೆಕ್ಕಿನಲ್ಲಿರುವ ಒಂದೇ ಒಂದು ಕೂದಲಬನ್ನು ಬೆಕ್ಕಿಗೆ ಗಾಯವಾಗದಂತೆ ತೆಗೆದು ಬಿಟ್ರೆ ಅವರಿಗೆ ಸಂಪತ್ತು, ಪ್ರೇಮ, ಅದೃಷ್ಟ ಹರಿದು ಬರುತ್ತದೆ.
ಬ್ರಿಟನ್ ಮೀನುಗಾರರ ನಂಬಿಕೆಯಂತೆ ಅವರ ಮನೆಗೆ ಕಪ್ಪು ಬೆಕ್ಕು ಬಂದರೆ ಅಂದು ಅವರ ಮನೆಗೆ ಅತಿಥಿಗಳು ಬರುತ್ತಾರಂತೆ.
ಮನೆ ಮುಂದೆ ಬೆಕ್ಕು ತಲೆಬಾಚುತ್ತಾ ಕುಳಿತರೆ ನೆಂಟರು ಬರುತ್ತಾರೆ ಎನ್ನುವುದು ಭಾರತೀಯರ ನಂಬಿಕೆ.
ಇಂಗ್ಲೆಂಡ್‌ನ ವರ್ತಕರಲ್ಲಿ ಕಪ್ಪು ಬೆಕ್ಕಿಗೆ ವಿಶೇಷ ರಾಜ ಮರ್ಯಾದೆ. ಬೆಕ್ಕು ಜೊತೆಗಿದ್ದರೆ ಇದ್ದರೆ ಸಮುದ್ರ ವ್ಯಾಪಾರದಲ್ಲಿ ಅವರಿಗೆ ಯಾವುದೇ ಅಪಾಯಗಳು ಬರುವುದಿಲ್ಲ.
ಕಪ್ಪು ಬೆಕ್ಕು ಮನೆಯಲ್ಲಿದ್ದರೆ ಮನೆಯಲ್ಲಿರುವ ಹುಡುಗಿಗೆ ಬೇಗನೆ ಮದುವೆಯಾಗುತ್ತದೆ. ಅನಾಮಿಕ ಹೆಣ್ಣು ಬೆಕ್ಕೊಂದು ಮನೆ ಸೇರಿಕೊಂಡರೆ ಆ ಮನೆಯಲ್ಲಿ ಮದುವೆ ಖಚಿತ ಅಂತೆ.
ವಿದ್ಯಾರ್ಥಿಗಳು ಶಾಲೆಗೆ ಹೋಗುವ ದಾರಿಯಲ್ಲಿ ಬಿಳಿ ಬೆಕ್ಕು ಕಾಣಿಸಿಕೊಂಡರೆ, ಒಂದು ರೌಂಡ್ ತಿರುಗಿ ಬರಬೇಕು ಅಥವಾ ಉಗುಳಿ ಮುಂದಿನ ದಾರಿ ಹಿಡಿಯಬೇಕು ಎನ್ನುವುದು ಮತ್ತೊಂದು ಫಾರಿನ್ ನಂಬಿಕೆ.
ಬೆಕ್ಕು ತನ್ನ ಕಿವಿಯನ್ನು ನಾಲಗೆಯಿಂದ ಸ್ವಚ್ಛ ಮಾಡುತ್ತಿದ್ದಾರೆ ಅಂದು ಜೋರಾಗಿ ಮಳೆಯಾಗುತ್ತದೆ.
ಮದುಮಗಳ ಪಕ್ಕದಲ್ಲಿ ಬಂದು ಬೆಕ್ಕು ಕೂಗಿದರೆ ಅವಳ ವೈವಾಹಿಕ ಬದುಕು ಸಂತೋಷದಿಂದ ಕೂಡಿರುತ್ತದೆ.
ಟಾಮ್ ಟಾಮ್
ಕಾರ್ಟೂನ್ ವರ್ಲ್ಡ್ ಚಾನೆಲ್‌ನಲ್ಲಿ ‘ಟಾಮ್ ಆಂಡ್ ಜೆರ್ರಿ’ ಕಾರ್ಟೂನ್‌ನನ್ನು ವಿಶ್ವ ಪ್ರಸಿದ್ಧ, ದೊಡ್ಡವರು ಚಿಕ್ಕವರೆನ್ನುವ ಭೇದ ಇಲ್ಲದೆ ಈ ಕಾರ್ಟೂನ್ ನೋಡುವ ದೊಡ್ಡ ವರ್ಗ ಇದೆ. ವಿಲಿಯೆಮ್ ಹನ್ನಾ ಮತ್ತು ಜೋಸೆಫ್ ಬಾರ್‌ಬೆರಾ ಈ ಸರಣಿಯ ಹರಿಕಾರರು. ಟಾಮ್ ಪಾತ್ರ ಬ್ರಿಟನ್ ಮೂಲದ್ದು. ಉದ್ದಕೂದಲಿನ ನೀಲಿ ಕಂದು ಮಿಶ್ರಿತ ಟಾಮ್ ಸಖತ್ ಕಾಮಿಡಿ ಬೆಕ್ಕು. ಅದರಲ್ಲೂ ಜೆರ್ರಿ ಎಂಬ ಪುಟ್ಟ ಇಲಿಯನ್ನು ಕೊಂದು ತಿನ್ನಲು ಟಾಮ್ ಮಾಡುವ ಕಸರತ್ತುಗಳು, ಜೆರ್ರಿ ಬದುಕಲು ಮಾಡುವ ಸಾಹಸ ಕಾರ್ಟೂನ್ ಪ್ರೇಮಿಗಳನ್ನು ಏಕ್ ದಂ ನಗಿಸಿ ಬಿಡುತ್ತದೆ. ೧೯೪೦ರಿಂದಲೂ ಕಾರ್ಟೂನ್ ದುನಿಯಾದಲ್ಲಿ ರಾಜ್ಯಭಾರ ಮಾಡುತ್ತಿರುವ ‘ಟಾಮ್ ಆಂಡ್ ಜೆರ್ರಿ’ ಟೈಮ್ ಪತ್ರಿಕೆ ನಡೆಸಿದ ಸಮೀಕ್ಷೆಯೊಂದರಲ್ಲಿ ಮೊದಲ ಸ್ಥಾನದಲ್ಲಿದೆ. ‘ಪೂಸಿ ಗೆಟ್ ದೀ ಬೂಟ್’ಎಂದು ಮೊದಲ ‘ಟಾಮ್ ಆಂಡ್ ಜೆರ್ರಿ’ಯನ್ನು ಕರೆಯಲಾಗಿತ್ತು. ನಂತರ ಈ ಹೆಸರು ಬದಲಾಗಿ ‘ಟಾಮ್ ಆಂಡ್ ಜೆರ್ರಿ’ಯಾಗಿ ಬದಲಾವಣೆಗೊಂಡಿತು. ಅಂದಾಹಾಗೆ ಟಾಮ್‌ನ ಒರಿಜಿನಲ್ ಹೆಸರು ‘ಜಾಸ್‌ಫರ್’
No comments:
Post a Comment