Friday, April 8, 2011

ಮಕ್ಕಳ ಸಾಹಿತ್ಯ ಲೋಕದ ಹಿರಿ ಜೀವ ಪಳಕಳ




ಈ ವರ್ಷನೂ ನ.೧೪ರಂದು ಮಕ್ಕಳ ದಿನಾಚರಣೆ ಬಂದಿದೆ. ಆದರೆ ಲವಲವಿಕೆ ಈ ಬಾರಿ ಮಕ್ಕಳ ಸಾಹಿತ್ಯಕ್ಕಾಗಿ ಅವಿರತವಾಗಿ
ದುಡಿಯುತ್ತಿರುವ ಕರಾವಳಿ ಪುಟ್ಟ ಊರಿನ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಪ್ರತಿಭೆಯನ್ನು ತೆರೆದು ಇಟ್ಟಿದೆ. ಮಕ್ಕಳ ಸಾಹಿತಿಯೊಬ್ಬರ ಜತೆ ಸಿಂಪಲ್ ಮಾತುಕತೆ ನಿಮ್ಮ ಮುಂದೆ ಹಾಜರು...

ಮೂಡುಬಿದರೆಯಿಂದ ಬರೋಬರಿ ಐದು ಕಿ.ಮೀ ದೂರದಲ್ಲಿದೆ ಪಳಕಳ ಎನ್ನುವ ಪುಟ್ಟ ಹಸಿರಿನ ಮಡಿಲು. ಅಡಕೆ, ತೆಂಗು, ಭತ್ತದ ನಡುವೆ ದೊಡ್ಡದಾದ ಒಂದು ಹಂಚಿನ ಮನೆ. ಇದೇ ಮನೆಯಲ್ಲಿರುವ ಒಂದು ಹಿರಿಯ ಜೀವ ಮಕ್ಕಳ ಸಾಹಿತ್ಯಕ್ಕಾಗಿ ಹಗಲಿರುಳು ದುಡಿಯುತ್ತಿದೆ. ತನ್ನೆಲ್ಲ ಬದುಕನ್ನು ಅದಕ್ಕಾಗಿ ಮೀಸಲಿಟ್ಟಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಬರೀ ಒಂದೇ ಒಂದು ಕೃತಿಯ ಮುದ್ರಣ, ಮಾರಾಟ ಎಂದರೆ ಅದೊಂದು ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿಯನ್ನು ವಿದ್‌ಔಟ್ ಆಕ್ಸಿಜನ್ ಇಲ್ಲದೇ ಏರಿ ಬಂದ ಸಾಹಸ. ಅದರಲ್ಲೂ ಕನ್ನಡ ಸಾಹಿತ್ಯ ಲೋಕ ಎಂದಿಗೂ ಸರಿಯಾದ ಗೌರವ ಕೊಡದಿರುವ ಮಕ್ಕಳ ಸಾಹಿತ್ಯ ರಚನೆ ಎಂದರೆ ಯಾರಿಗೆ ತಾನೇ ಇಷ್ಟವಿದೆ.
ಮಕ್ಕಳ ಸಾಹಿತ್ಯನಾ..? ಎಂದು ಉಡಾಫೆಯ ಮಾತನ್ನು ಆಡಿ ಮೂಗು ಮುರಿಯುವ ಮಂದಿನೇ ರಾಜ್ಯದಲ್ಲಿ ಜಾಸ್ತಿ ಇದ್ದಾರೆ. ಆಂಗ್ಲ ಭಾಷೆಯ ಪ್ರಭಾವ, ಎಲೆಕ್ಟ್ರಾನಿಕ್ ಮಾಧ್ಯಮಗಳ ಕರಾಮತ್ತು, ಓದು- ಬರಹ, ಕಲ್ಚರಲ್ ಪ್ರೋಗ್ರಾಂಗಳ ನಡುವೆ ಇಂದಿನ ಮಕ್ಕಳು ನಲುಗಿ ಹೋಗುವಾಗ ಮಕ್ಕಳ ಸಾಹಿತ್ಯ ಓದಲು ಟೈಮ್ ಎಲ್ಲಿದೆ ..?ಎನ್ನುವ ಕಾಲಘಟ್ಟದಲ್ಲಿ ಪಳಕಳ ಸೀತಾರಾಮ ಭಟ್ಟರು ಟೋಟಲಿ ಡಿಫರೆಂಟ್ ಆಗಿ ನಮ್ಮ ಮುಂದೆ ಬರುತ್ತಾರೆ.
ನಾನಾ ವಯೋಮಾನದ ಮಕ್ಕಳಿಗಾಗಿ ಕಳೆದ ೬೦ ವರ್ಷಗಳಿಂದ ನಿರಂತರವಾಗಿ ಮಕ್ಕಳ ಕತೆ, ಕವನ, ಚುಟುಕು ಅಂತಾ ಬರೋಬರಿ ನೂರಕ್ಕಿಂತ ಅಕ ಕೃತಿಗಳನ್ನು (೧೨೫ ಕೃತಿಗಳು) ಹೊರ ತಂದಿದ್ದಾರೆ. ಸಂಪರ್ಕಗಳು ಸರಿಯಾಗಿ ಟಚ್ ಆಗದ ಪಳಕಳ ಎಂಬ ಪುಟ್ಟ ಊರಿನಲ್ಲಿ ನಿಂತು ಸೀತಾರಾಮ ಭಟ್ಟರು ಮಾಡುವ ಸಾಹಿತ್ಯ ಕ್ರಾಂತಿ ಇದೆಯಲ್ಲ ಅದು ಕನ್ನಡ ಸಾಹಿತ್ಯ ಲೋಕಕ್ಕೆ ಗೊತ್ತುಂಟೋ ಗೊತ್ತಿಲ್ಲ. ಆದರೆ ಇಡೀ ಸಾಹಿತ್ಯ ಲೋಕ ಅವರನ್ನುಂತು ಸಿರೀಯಸ್ ಆಗಿ ಗುರುತಿಸಿಲ್ಲ. ಆದರೆ ಸೀತಾರಾಮ ಭಟ್ಟರಿಗಂತೂ ಈ ವಿಚಾರದ ಮೇಲೆ ಯಾವುದೇ ಬೇಸರವಿಲ್ಲ. ಮಕ್ಕಳ ಸಾಹಿತ್ಯ ಎಂದರೆ ತನ್ನ ಪ್ರಾಣವೇ ಅಂತಾ ಪುಟ್ಟ ಊರಿನ ಮಡಿಲಿನಲ್ಲಿ ಬೆಚ್ಚಗೆ ಕೂತಿದ್ದಾರೆ.
ಮಕ್ಕಳ ಸಾಹಿತ್ಯ ಎಂದಾಗ ೮೦ರ ಹರೆಯದ ಸೀತಾರಾಮ ಭಟ್ರು ಅರ್ಧ ಬರ್ದ ನಡುಗುವ ಕೈಗಳಿಂದ ಪೆನ್ನು ಹಿಡಿದು ಟೇಬಲ್ ಮೇಲೆ ಕೂತು ಬರವಣಿಗೆ ಆರಂಭ ಮಾಡಿದ್ದಾರೆ ಎಂದಾದರೆ ಅಲ್ಲೊಂದು ಪುಟ್ಟದಾದ ಕೃತಿ ರೆಡಿಯಾಯಿತು ಅಂತ ಅರ್ಥ ಬರುತ್ತದೆ. ಇಂತಹ ಸಾಮಾನ್ಯ ವ್ಯಕ್ತಿಯ ಅಸಾಮಾನ್ಯ ಸಾಧನೆಯ ಹುಡುಕಾಟದಲ್ಲಿ ಲವಲವಿಕೆಯ ತಂಡ ಪಳಕಳರ ದೊಡ್ಡ ಮನೆಗೆ ಪುಟ್ಟದಾಗಿ ಭೇಟಿ ಕೊಟ್ಟಿತ್ತು. ಪಳಕಳರ ಮಕ್ಕಳ ಸಾಹಿತ್ಯ ಲೋಕದ ಓಟದಲ್ಲಿ ನಿಂತು ಅವರನ್ನು ಮಾತನಾಡಿಸಿತು. ಆಗ ಕಂಡದ್ದು ಬರೀ ಮಗು ಮನಸಿನ ಸಾಹಿತ್ಯ ಲೋಕ ಮಾತ್ರ. ಪಳಕಳರ ಉಳಿದೆಲ್ಲ ವಿಚಾರಗಳು ಬದಿಗೆ ಸರಿದು ನಿಂತಿತ್ತು.
ದುಡಿದದ್ದು ಎಲ್ಲವೂ ಸಾಹಿತ್ಯಕ್ಕೆ ಸುರಿದೆ...
ಮಕ್ಕಳ ಸಾಹಿತ್ಯ ಎಂದರೆ ನನ್ನ ಪ್ರಾಣ. ಅದಕ್ಕಾಗಿ ನಾನು ಏನೂ ಮಾಡಲು ಸಿದ್ದ. ಅದರ ಮೇಲಿನ ಪ್ರೀತಿಯಿಂದ ಇಂದಿಗೂ ಬರೆಯುತ್ತಿದ್ದೇನೆ. ಕೈಯಲ್ಲಿ ಪೆನ್ನು ಹಿಡಿಯಲು ತಾಕತ್ತು ಇರುವ ವರೆಗೂ ಬರೆಯುತ್ತೇನೆ. ಸರಿಸುಮಾರು ೩೬ ವರ್ಷಗಳ ಕಾಲ ಶಿಕ್ಷಕನಾಗಿ ಮೂಡುಬಿದರೆ, ಅಸುಪಾಸಿನ ಶಾಲೆಗಳಲ್ಲಿ ದುಡಿದಿದ್ದೇನೆ. ೫೦ ವರ್ಷಗಳ ಹಿಂದೆ ನನ್ನ ತಿಂಗಳ ಸಂಬಳ ೪೦ ರೂ. ಪ್ಲಸ್ ೨೧ ಭತ್ಯೆಯಾಗಿತ್ತು. ನಿವೃತ್ತನಾಗುವ ಮೊದಲು ನಾಲ್ಕು ಸಾವಿರಕ್ಕೆ ಬಂತು. ಈ ಸಂಬಳದ ಹಣದಿಂದಲೇ ನಾನು ಇಷ್ಟೊಂದು ಕೃತಿಗಳನ್ನು ಬರೆಯಲು ಸಾಧ್ಯವಾಯಿತು. ಕುಟುಂಬಕ್ಕಾಗಿ ದೊಡ್ಡ ತೋಟವಿತ್ತು. ಅದರಿಂದ ಬಂದ ಹಣವೆಲ್ಲವೂ ಕುಟುಂಬ ನಿರ್ವಹಣೆ, ಐವರು ಮಕ್ಕಳ ಪೋಷಣೆಗೆ ಅಂತ ಸಂದಾಯವಾಗುತ್ತಿತ್ತು. ನನ್ನ ಸಂಬಳ ಎಲ್ಲವೂ ಸಾಹಿತ್ಯ ಲೋಕಕ್ಕೆ ವಿನಿಯೋಗವಾಗುತ್ತಿತ್ತು. ಆದರೆ ಕುಟುಂಬದವರು ಈ ವಿಚಾರದಿಂದ ಒಂದು ಚೂರು ಬೇಜಾರು ಮಾಡಿಕೊಳ್ಳುತ್ತಿರಲಿಲ್ಲ ತಮ್ಮಾ.. ಅಂತಾ ಜಗುಲಿಯಲ್ಲಿ ಕೂತ ಪಳಕಳರು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿ ಬಿಟ್ಟಿದ್ದರು.
ಪಳಕಳ ಭಟ್ಟರು ಎಂದರೆ ಹಾಂಗೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಮನೆಗೆ ಹೋಗಿ ನಿಮ್ಮ ಮುಂದಿನ ಬದುಕಿಗಾಗಿ ಗ್ರಾಜ್ಯುವೇಟಿ ಹಾಗೂ ಪಿಎಫ್ ಹಣ ಅಂತಾ ೨ ಲಕ್ಷ ರೂ. ಕೊಟ್ಟು ಬಿಡುತ್ತೇವೆ ಎಂದಾಗ ಪಳಕಳರ ಮನಸ್ಸಿನಲ್ಲಿ ಬಂದ ಐಡಿಯಾ ಏನೂ ಗೊತ್ತಾ..? ನಮ್ಮ ಊರಿನ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಈ ಹಣ ವಿನಿಯೋಗವಾಗಬೇಕು. ಬಡವರ ವೈದ್ಯಕೀಯ ಖರ್ಚು ಹಾಗೂ ಮಕ್ಕಳ ಸಾಹಿತ್ಯಕ್ಕಾಗಿ ಇನ್ನಷ್ಟೂ ಕೆಲಸ ಮಾಡಬೇಕು ಎಂದುಕೊಂಡು ೨ ಲಕ್ಷಕ್ಕೆ ಮತ್ತೊಂದು ಲಕ್ಷ ಸೇರಿಸಿಕೊಂಡು ಪಳಕಳ ಪ್ರತಿಷ್ಠಾನ(ರಿ) ಸಂಸ್ಥೆಯೊಂದನ್ನು ಸ್ಥಾಪಿಸಿಕೊಂಡು ಈಗಲೂ ಈ ಟ್ರಸ್ಟ್ ಮೂಲಕ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ಅವಿಭಜಿತ ಕರಾವಳಿ ಜಿಲ್ಲೆಯ ಎಲ್ಲ ಮಕ್ಕಳ ಸಾಹಿತಿಗಳನ್ನು ಒಟ್ಟು ಸೇರಿಸುವ ಪ್ರಯತ್ನ ಮಾಡಲು ಹೋಗಿ ಪಳಕಳ ಹಾಗೂ ಅವರ ಸ್ನೇಹಿತರ ವರ್ಗ ಸೇರಿಕೊಂಡು ದಕ್ಷಿಣ ಕನ್ನಡ ಮಕ್ಕಳ ಸಾಹಿತ್ಯ ಸಂಗಮ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿದರು.
ಮಕ್ಕಳ ಸಾಹಿತ್ಯಕ್ಕೆ ಯಾಕೆ ಬಂದ್ರು..
ಪಳಕಳರು ಮೂಡುಬಿದರೆಯ ಜೈನ್ ಹೈಸ್ಕೂಲ್‌ನಲ್ಲಿ ಇಂಗ್ಲಿಷ್ ಹಾಗೂ ಸಮಾಜಶಾಸ್ತ್ರ ವಿಚಾರಗಳನ್ನು ಭೋದಿಸುತ್ತಿದ್ದಾಗ ಅವರಿಗೊಂದು ಕತೆ ಹೇಳುವ ಪಾಠವಿತ್ತು. ಮನೆಯಲ್ಲಿ ಅವರ ಸೋದರತ್ತೆ ಚೆನ್ನಮ್ಮ ಹೇಳುತ್ತಿದ್ದ ಕತೆಗಳಿಂದ ಸೀತಾರಾಮರು ಈ ಹಿಂದೆಯೇ ಪ್ರೇರಿತಗೊಂಡಿದ್ದರು. ಪಳಕಳದ ಊರಿನಿಂದ ಶಾಲೆಗೆ ನಡೆದುಕೊಂಡು ಬರುವ ಹಾದಿಯಲ್ಲಿ ಪುಟ್ಟ ಪುಟ್ಟ ಕವನ, ಕತೆಗಳು ರಸ್ತೆಯಲ್ಲಿ ಹುಟ್ಟಿಕೊಳ್ಳುತ್ತಿದ್ದವು. ಅವುಗಳನ್ನು ಪುಟ್ಟದಾದ ಪುಸ್ತಕದಲ್ಲಿ ಬರೆದು ಇಟ್ಟುಕೊಳ್ಳುತ್ತಿದ್ದರು.
ತಮ್ಮದೇ ಪ್ರಕಾಶನ ಸಂಸ್ಥೆ ಶಿಶು ಸಾಹಿತ್ಯ ಮಾಲೆ ಹಾಗೂ ಕಿನ್ನಿಗೋಳಿಯ ಯುಗಪುರುಷ ಪ್ರಕಾಶನದ ಮೂಲಕ ಈ ಎಲ್ಲ ಕತೆ, ಕವನಗಳು ಪುಸ್ತಕ ರೂಪದಲ್ಲಿ ಬಂದು ಹೋದವು.. ಎಲ್ಲರೂ ಮಕ್ಕಳ ಸಾಹಿತ್ಯವನ್ನು ಉಪೇಕ್ಷೆ ದೃಷ್ಟಿಯಿಂದ ನೋಡುತ್ತಿದ್ದಾಗ ಪಳಕಳ ಮಾತ್ರ ಮಕ್ಕಳ ಸಾಹಿತ್ಯವನ್ನು ತನ್ನ ಬದುಕಿನಷ್ಟೇ ಪ್ರೀತಿಸ ತೊಡಗಿದರು. ಇಡೀ ಸಾಹಿತ್ಯದಲ್ಲಿಯೇ ಬದುಕು ಕಟ್ಟ ತೊಡಗಿದರು. ಸಾಹಿತ್ಯ ಜತೆಗೆ ತಮ್ಮ ಊರಿನ ಅತೀ ಬಡವ ಕುಟುಂಬಗಳನ್ನು ಹುಡುಕಿ ತನ್ನ ಜಮೀನಿನಿಂದ ೫ ಸೆಂಟ್ಸ್ ಜಾಗವನ್ನು ಕೊಟ್ಟು ಅವರಿಗೆ ಬದುಕಲು ಹೇಳಿ ಕೊಟ್ಟಿದ್ದಾರೆ.
ಅಂದಹಾಗೆ ಪಳಕಳರ ಕತೆ -ಕವನಗಳನ್ನು ಸಿರೀಯಸ್ ಆಗಿ ಓದುವ ಅಭಿಮಾನಿಗಳ ಬಳಗ ಕೂಡ ಬಹಳ ದೊಡ್ಡದಿದೆ. ಪಳಕಳರ ಸಾಹಿತ್ಯವನ್ನು ನೋಡಿದ ಮಣಿಪಾಲದ ವಿದ್ಯಾರ್ಥಿಯೊಬ್ಬರು ಈಗ ‘ಪಳಕಳ ಸೀತಾರಾಮ ಭಟ್ಟರ ಬದುಕು- ಬರಹ ’ಎಂಬ ವಿಚಾರದಲ್ಲಿ ಪಿಎಚ್‌ಡಿ ಪ್ರಬಂಧ ಮಾಡುತ್ತಿದ್ದಾರೆ. ಹತ್ತಾರು ಪ್ರಶಸ್ತಿಗಳನ್ನು ನೀಡಿ ಹಲವಾರು ಸಂಘ ಸಂಸ್ಥೆಗಳು ಅವರನ್ನು ಗೌರವದಿಂದ ನೋಡಿಕೊಂಡಿದೆ. ಪತ್ನಿ ವಸಂತಿಯ ಜತೆಗೆ ಐವರು ಮಕ್ಕಳೊಂದಿಗೆ ಸೀತಾರಾಮರು ಕಾಂಕ್ರೀಟಿಕರಣನದ ನಗರದಿಂದ ದೂರ ಉಳಿದು ನೆಮ್ಮದಿ ಕಾಣುತ್ತಿದ್ದಾರೆ. ಪಳಕಳರು ಕೊನೆದಾಗಿ ಹೇಳುವುದು ಇಷ್ಟೇ..‘ ಮಕ್ಕಳಿಗೆ ಒಳ್ಳೆಯ ಸಾಹಿತ್ಯದ ರುಚಿ ಹತ್ತಿಸಿಬಿಡಿ. ಮಕ್ಕಳು ಆಟದ ಸಾಮಗ್ರಿಗಳಿಗೆ ಹಟ ಹಿಡಿಯುವಂತೆ.. ಸಾಹಿತ್ಯ ಓದುವ ಚಟ ಹಿಡಿಸಿ..ಇದು ಮಕ್ಕಳ ಸಾಹಿತ್ಯ ಲೋಕಕ್ಕೆ ಹೆತ್ತವರು ಮಾಡುವ ಪುಟ್ಟ ಕೆಲಸ.. ಮಕ್ಕಳ ದಿನಾಚರಣೆ ಸಮಯದಲ್ಲಾದರೂ ಮನೆಗೊಂದು ಒಳ್ಳೆಯ ಮಕ್ಕಳ ಸಾಹಿತ್ಯದ ಕೃತಿಯನ್ನು ಮಕ್ಕಳಿಗೆ ಕೊಟ್ಟು ಬಿಡಿ. ಇದರಿಂದ ಸಾಹಿತ್ಯ ಉಳಿಯುತ್ತದೆ ಜತೆಗೆ ಹೊಸ ತಲೆಮಾರಿನ ಬರಹಗಾರರು ಹುಟ್ಟಿಕೊಳ್ಳುತ್ತಾರೆ’ ಇಡೀ ಮಾತುಕತೆಯಲ್ಲಿ ಪಳಕಳ ಮಾತನಾಡಿದ್ದು ಬರೀ ಮಕ್ಕಳ ಸಾಹಿತ್ಯ ಮಾತ್ರ.. ಇಂತಹ ವ್ಯಕ್ತಿಯನ್ನು ಮಕ್ಕಳ ದಿನಾಚರಣೆಯ ಟೈಮ್‌ನಲ್ಲಿ ನೆನೆಯುವುದರಲ್ಲಿ ಏನಿದೆ ತಪ್ಪು..?

No comments:

Post a Comment