ತೆರೆಯಲ್ಲಿ ಕಾಣದ ತೆರೆಮರೆಯ ಕಲಾವಿದರು ಸುದ್ದಿಗೆ ಬರೋದಿಲ್ಲ. ಬಣ್ಣದ ಲೋಕದಲ್ಲಿ ಇವರಿಗೊಂದು ಆಸ್ತಿತ್ವ ಹಾಗೂ ಅವರದೇ ಆದ ಕತೆಗಳಿವೆ. ಅದರಲ್ಲೂ ಬಾಲಿವುಡ್‌ನ ದಿಗ್ಗಜರೊಂದಿಗೆ ಫೈಟ್ ಮಾಡಿದ ಕಟೀಲಿನ ಜಯರಾಮ್ ಶೆಟ್ಟಿ ಅವರ ಕತೆನೇ ಕೊಂಚ ಭಿನ್ನ.. ಬನ್ನಿ ಅವರ ಕತೆ ಏನ್ ಕೇಳೋಣ...
ಓದು ಬರಹ ಎನ್ನುವುದು ನಿಜಕ್ಕೂ ತಲೆಗೆ ಹೋಗದ ವಿದ್ಯೆ. ಅಂತೂ ಇಂತೂ ಏಳನೇ ಕ್ಲಾಸ್‌ನಲ್ಲಿ ಮೂರು ವರ್ಷ ಕೂತು ಪಾಸ್ ಮಾಡಿದಾಗ ಸಿವಿಲ್ ಸರ್ವಿಸ್ ಎಕ್ಸಾಮ್‌ನಲ್ಲಿ ರ್‍ಯಾಂಕ್ ಬಂದ ಅನುಭವವಾಯಿತು. ಅಲ್ಲಿಂದ ಶಾಲೆ ಬಿಟ್ಟು ಮುಂಬಯಿಯಲ್ಲಿ ಚಿಕ್ಕ ಕ್ಯಾಂಟೀನ್ ಆರಂಭ ಮಾಡಿದೆ. ಬ್ಯುಸಿನೆಸ್ ಬಹಳ ಒಳ್ಳೆದಿತ್ತು. ಆದರೆ ಕ್ಯಾಂಟೀನ್‌ಗೆ ಬಂದ ಒಬ್ಬ ಗುಜರಾತಿ ನನ್ನನ್ನು ಬಣ್ಣದ ಬದುಕಿಗೆ ಪ್ರವೇಶ ಮಾಡಿಸಿ ಕೊಟ್ಟ . ನಂತರ ಬಣ್ಣದ ಲೋಕ ನನ್ನನ್ನು ಸಂಪೂರ್ಣ ಎಳೆದುಕೊಂಡು ಬಿಟ್ಟಿತು ಎಂದು ಕಟೀಲಿನ ಜಯರಾಮ್ ಶೆಟ್ಟಿ ಅನುಭವಗಳ ಗಣಿಯೊಳಗೆ ಇಳಿದು ಬಾಲಿವುಡ್‌ನಲ್ಲಿ ತಾನು ಕಂಡ ಬದುಕಿನ ಪುಟಗಳನ್ನು ತೆರೆದು ಕೂತರು.
ಅಂದಹಾಗೆ ಜಯರಾಮ್ ಶೆಟ್ಟಿ ಬಾಲಿವುಡ್‌ನ ಆಕ್ಷನ್ ಫೀಲ್ಡ್‌ನಲ್ಲಿ ಬಹಳ ಫೇಮಸ್ ಫೈಟರ್. ೧೯೭೦ರಿಂದ ಹಿಡಿದು ೧೯೯೦ ವರೆಗೂ ಬಾಲಿವುಡ್‌ನ ಸ್ಟಾರ್‌ಗಳ ಡ್ಯೂಪ್ ಫೈಟರ್ ಆಗಿ ಮಿಂಚಿ ಬಂದವರು. ನಟ ಮಿಥುನ್ ಚಕ್ರವರ್ತಿಯಿಂದ ಹಿಡಿದು ಬಿಗ್ ಬಿ ಅಮಿತಾಭ್ ಬಚ್ಚನ್, ಶತ್ರುಘ್ನಾ ಸಿನ್ಹಾರಿಂದ ಸಲ್ಮಾನ್ ಖಾನ್‌ವರೆಗೂ ಸ್ಟಾರ್ ನಟರಿಗೆ ಆಕ್ಷನ್ ಹೀರೋಗಳ ಇಮೇಜ್ ತಂದು ಕೊಟ್ಟವರಲ್ಲಿ ಕಟೀಲಿನ ಜಯರಾಮ್ ಶೆಟ್ಟಿ ಬಹಳ ಪ್ರದಾನ ಪಾತ್ರವಹಿಸಿತ್ತಾರೆ.
ಸಿನಿಮಾಗಳಲ್ಲಿ ಆಕ್ಷನ್ ಸಿಕ್ವೇನ್ಸ್ ಬಂದಾಗ ಥಿಯೇಟರ್‌ನಲ್ಲಿ ಕೂತ ಪ್ರೇಕ್ಷಕರು ಕುಣಿದು ಕುಪ್ಪಳಿಸುತ್ತಾರೆ. ಸ್ಟಾರ್‌ರೊಬ್ಬರು ಮೂರನೇ ಮಹಡಿಯಿಂದ ಜಿಗಿದಾಗ ಚಪ್ಪಾಳೆಗಳ ಸುರಿಮಳೆ ಸುರಿಯುತ್ತದೆ. ಆದರೆ ನಿಜಕ್ಕೂ ಪ್ರೇಕ್ಷಕರು ನೋಡಿರದ ಬಹಳಷ್ಟು ಸತ್ಯಗಳು ಅಲ್ಲಿ ನಡೆದಿರುತ್ತದೆ. ಇಂತಹ ಆಕ್ಷನ್ ಸೀನ್‌ನಿಂದ ಬದುಕಿಗೆ ರಿಸ್ಕ್ ಇದೆ ಎಂದು ಗೊತ್ತಾದ ಕೂಡಲೇ ಸ್ಟಾರ್‌ಗಳು ಹಿಂದೆ ಸರಿದು ಬಿಡುತ್ತಾರೆ. ನಂತರ ಡ್ಯೂಪ್ ಆರ್ಟಿಸ್ಟ್‌ಗಳಿಂದ ಈ ಸೀನ್‌ಗಳನ್ನು ಮಾಡಿಸಲಾಗುತ್ತದೆ. ನಿಜಕ್ಕೂ ಸ್ಟಾರ್‌ಗಳು ತೆರೆಯ ಮೇಲೆ ಮಿಂಚಿ ಬಂದರೆ ಡ್ಯೂಪ್ ಆರ್ಟಿಸ್ಟ್‌ಗಳು ತೆರೆ ಹಿಂದೆ ನಿಂತು ಮಿಂಚುತ್ತಾರೆ. ಆದರೆ ತೆರೆಯ ಹಿಂದಿರುವ ಕಲಾವಿದರು ಮಾತ್ರ ಯಾರಿಗೂ ಕಾಣಿಸುವುದಿಲ್ಲ ಎನ್ನುತ್ತಿದ್ದಾಗ ಜಯರಾಮ್ ಶೆಟ್ಟಿ ಅವರ ಮಾತಿನ ಹಿಂದಿರುವ ನೋವು ಕಾಣುತ್ತಿತ್ತು.
‘ಬಣ್ಣದ ಬದುಕಿನ ಕತೆ ತುಂಬಾನೇ ಡಿಫರೆಂಟ್. ಇಲ್ಲಿ ಸೋಲು ಖಚಿತ.. ಗೆಲುವು ಅನಿರೀಕ್ಷಿತ ! ಅದರಲ್ಲೂ ಸಿನಿಮಾದಲ್ಲಿ ಸ್ಟಂಟ್ ಮಾಸ್ಟರ್, ಫೈಟರ್ ಎಂದರೆ ಬದುಕಿನ ಆಶೆ ಬಿಟ್ಟು ಕೆಲಸ ಮಾಡುವಂತದ್ದು, ಬಹಳಷ್ಟು ರಿಸ್ಕ್ ಸಿಕ್ವೇನ್ಸ್‌ನಲ್ಲಿ ಜೀವ ಕಳೆದುಕೊಂಡು ಬಿಟ್ಟವರು ಬಹಳಷ್ಟು ಮಂದಿ ಇದ್ದಾರೆ. ಈ ಆಕ್ಷನ್ ಫೀಲ್ಡ್‌ನಲ್ಲಿ ಇದ್ದವರು ಯಾರು ಕೂಡ ನೆಟ್ಟಗೆ ಮನೆಗೆ ಹೋದವರಿಲ್ಲ. ದೇಹದ ಯಾವುದಾದರೂ ಒಂದು ಭಾಗದಲ್ಲಿ ಗಾಯ ಮಾಡಿಕೊಂಡು ಫೀಲ್ಡ್ ಬಿಟ್ಟುವರೇ ಜಾಸ್ತಿ ಎನ್ನುತ್ತಾರೆ ಜಯರಾಮ್ ಶೆಟ್ಟಿ.
ಬಣ್ಣ ಬಣ್ಣದ ಬದುಕು:
‘ಭಯಾನಕ್’ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ಅವರೊಂದಿಗೆ ಅರ್ಧ ಗಂಟೆ ಕೆಸರಿನಲ್ಲಿ ಹೊಡೆದಾಟದ ಸೀನ್ ನನಗೆ ಈಗಲೂ ತುಂಬಾ ಇಷ್ಟವಾದ ಫೈಟ್. ಹೊಡೆದಾಟ ಕೊನೆಯಾದಾಗ ನಿಜಕ್ಕೂ ಮಿಥುನ್ ಗಾಯಗೊಂಡಿದ್ದರು. ಆದರೆ ಸಿನಿಮಾ ರಿಲೀಸ್ ಆಗುವಾಗ ಅರ್ಧ ಗಂಟೆಯ ಈ ಹೊಡದಾಟ ಬರೀ ಐದು ನಿಮಿಷದಲ್ಲಿ ಮುಗಿದು ಹೋಗಿತ್ತು ಎನ್ನುವುದು ಬೇಸರ ಹುಟ್ಟಿಸಿತು. ಅಮಿತಾಭ್ ಬಚ್ಚನ್‌ರ ಚಿತ್ರವೊಂದರಲ್ಲಿ ತಲ್ವಾರ್ ಫೈಟ್ ಸೀನ್ ನಡೆಯುತ್ತಿದ್ದಾಗ ಅವರು ಬೀಸಿದ ತಲ್ವಾರ್ ನನ್ನ ಮೂಗನ್ನು ಒರೆಸಿ ಹೋಗಿತ್ತು. ಅದಕ್ಕಾಗಿ ಬಿಗ್ ಬಿ ತುಂಬಾ ಮರುಕ ಪಟ್ಟಿದ್ದರು. ಅವರು ಕೊಟ್ಟ ಮಾರ್ಕ್ ಈಗಲೂ ಇದೆ ಎನ್ನುತ್ತಾ ಮೂಗಿನ ಮಾರ್ಕ್ ತೋರಿಸಿ ಬಿಟ್ಟರು ಜಯರಾಮ್ ಶೆಟ್ಟಿ. ತುಳುವಿನ ‘ಬದ್ಕೇರೆ ಬುಡ್ಲೆ’, ‘ದಾರೆದ ಸೀರೆ’ ಹಾಗೂ ಕನ್ನಡದ ಬಹುತೇಕ ಚಿತ್ರಗಳಲ್ಲಿ ಫೈಟರ್ ಆಗಿ ಕೆಲಸ ಮಾಡಿದ ಅವರು ಪ್ರಾಸೆಸ್ಸಿಂಗ್, ಡಬ್ಬಿಂಗ್ ಕಲಾವಿದರಾಗಿಯೂ ಕೆಲಸ ಮಾಡಿರುವುದು ಬಹಳಷ್ಟು ಮಂದಿಗೆ ಗೊತ್ತಿಲ್ಲ.
ಹಿಂದಿಯ ಖ್ಯಾತ ಚಿತ್ರ ‘ಖತರ್‌ನಾಕ್’ನಲ್ಲಿ ಕಾರು ಬಾಂಬ್ ಸ್ಪೋಟದ ದೃಶ್ಯ ಸೆರೆ ಹಿಡಿಯುವ ವೇಳೆ ತನ್ನ ಬದಲಾಗಿ ಸ್ಟಂಟ್‌ಫೈಟರ್ ಆಗಿದ್ದ ಮನ್ಸೂರ್ ಧಗಧಗನೆ ಉರಿವ ಬೆಂಕಿಯಲ್ಲಿ ಉರಿದು ಜೀವಚ್ಛವವಾಗಿ ವಾರದ ಬಳಿಕ ಇಹಲೋಕ ತ್ಯಜಿಸಿದ್ದು ಈಗಲೂ ಮರೆಯಲಾಗುತ್ತಿಲ್ಲ. ಭೂತ-ಪ್ರೇತಗಳ ಚಿತ್ರಗಳಿಗೇ ಖ್ಯಾತರಾಗಿದ್ದ ರಾಮ್ ಸಿ. ಅವರ ಚಿತ್ರವೊಂದರ ಫೈಟಿಂಗ್ ದೃಶ್ಯದಲ್ಲಿ ಎಸೆಯಲ್ಪಟ್ಟು ಮರದ ಚೂಪಾದ ಮುರಿದ ಗೆಲ್ಲಿನಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿ ಅನುಭವಿಸಿದ್ದು, ಪಾಕಿಸ್ತಾನದ ಕಚ್‌ಬಾರ್ಡರ್‌ನಲ್ಲಿ ಶೂಟಿಂಗ್ ವೇಳೆ ದೋಣಿ ನೀರಿನಲ್ಲಿ ಮುಳುಗಿ ಈಜು ಬರುವವರು ಮಾತ್ರ ಬದುಕುಳಿದು ಉಳಿದವರು ಕಣ್ಮರೆಯಾದದ್ದು ನನ್ನ ವೃತ್ತಿ ಬದುಕಿನ ಮರೆಯಲಾಗದ ಕ್ಷಣಗಳು ಎನ್ನುತ್ತಾರೆ ಜಯರಾಮ್ ಶೆಟ್ಟಿ.
ಸ್ಟಂಟ್ ಫೈಟರ್ ಆಗಿ ಸಿನಿಮಾಗಳಲ್ಲಿ ನಟಿಸಿದರೂ ತೆರೆ ಮರೆಯ ಕಲಾವಿದರಾಗಿರುವ ಜಯರಾಮ್ ಶೆಟ್ಟಿ ಮದುವೆಯ ಬಳಿಕ ಮಾಯಾನಗರಿಯಿಂದ ದೂರದ ದೇಗುಲದ ಊರಿಗೆ ಬಂದು ಕೃಷಿ ತೋಟದ ಕೆಲಸದಲ್ಲಿ ನೆಮ್ಮದಿಯನ್ನು ಕಂಡವರು. ತನ್ನ ಇಬ್ಬರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟವರು. ಈಗಲೂ ಫೈಟಿಂಗ್ ಎಂದಾಗ ಖುಶಿಯಿಂದ ಮುಂದೆ ಬರುತ್ತಾರೆ. ಜಯರಾಮ್‌ರಂತಹ ತೆರೆಮರೆಯ ಕಲಾವಿದರರ ಸುದ್ದಿ ಇಲ್ಲದೇ ಹುದುಗಿ ಹೋದ ಕತೆಗಳು ಬಣ್ಣದ ಲೋಕದಲ್ಲಿ ಹುಡುಕಾಡಿದರೆ ಬಹಳಷ್ಟು ಸಂಖ್ಯೆಯಲ್ಲಿ ಸಿಗಬಹುದು.
No comments:
Post a Comment