ಗುಂಗುರು ಕೂದಲಿನ ವಿಚಿತ್ರ ಹೇರ್ ಸ್ಟೈಲ್. ಹಾಸ್ಯಕ್ಕಾಗಿಯೇ ಹುಟ್ಟಿ ಬಂದಿದ್ದಾರೆ ಎನ್ನುವುದಕ್ಕೆ ಮುಖದಲ್ಲಿ ತುಂಬಿ ತುಳುಕುವ ನಗು. ಇದು ಕರಾವಳಿಯ ಬ್ರಾಂಡ್ ಅಂಬಾಸೀಡರ್ ಎಂದೇ ಗುರುತಿಸಲಾಗುವ ಕಲಾವಿದ, ನಿರ್ದೇಶಕ ಹೀಗೆ ಹತ್ತಾರು ನೇಮ್ ಪ್ಲೇಟ್‌ಗಳನ್ನು ತೂಗು ಹಾಕಿದ ಕಾಪಿಕಾಡಿನ ದೇವದಾಸ್‌ರ ಶಾರ್ಟ್ ಇಂಟರ್‌ಡಕ್ಷನ್.
ಸಿನಿಮಾ ಇಂಡಸ್ಟ್ರಿಯಲ್ಲಿ ಯಾವುದೇ ಭಾಷೆಯ ದೊಡ್ಡ ಚಿತ್ರವೊಂದು ರಿಲೀಸ್ ಆಗುತ್ತೆ ಎನ್ನುವ ಸುದ್ದಿ ಬಂದ ಕೂಡಲೇ ಇತರ ಭಾಷೆಯ ಚಿತ್ರಗಳು ಬದಿಗೆ ಸರಿದು ನಿಂತು ನಿಲ್ಲುತ್ತದೆ. ದೊಡ್ಡ ಚಿತ್ರಗಳ ಮುಂದೆ ತಮ್ಮ ಚಿತ್ರ ಎಲ್ಲಿ ಕಳೆದು ಹೋಗುತ್ತೋ ಎನ್ನುವ ಸಣ್ಣ ಭಯ ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಕಾಡುತ್ತಿರುತ್ತದೆ. ಆದರೆ ತುಳುನಾಡು ಮಾತ್ರ ಟೋಟಲಿ ಡಿಫರೆಂಟ್. ಇಲ್ಲಿ ತುಳುನಾಟಕಗಳು ಬಂದರೆ ಸಾಕು ಸಿನಿಮಾ ಥಿಯೇಟರ್‌ಗಳು ಖಾಲಿ ಹೊಡೆಯುತ್ತಿರುತ್ತದೆ. ಸಿನಿಮಾಗಳು ಸೆಂಚುರಿ ಬಾರಿಸದೇ ಇರಬಹುದು ಆದರೆ ತುಳುನಾಟಕಗಳಂತೂ ಸೆಂಚುರಿ ಮೇಲೆ ಸೆಂಚುರಿ ಪ್ರದರ್ಶನ ಕಾಣಿಸಿಕೊಳ್ಳುತ್ತದೆ. ಸಿನಿಮಾದಲ್ಲಿ ಮಲ್ಟಿ ಸ್ಟಾರ್‌ನಿಂದ ಚಿತ್ರ ಗೆಲ್ಲಬಹುದು. ಆದರೆ ಇಲ್ಲಿ ಅದ್ಯಾವುದೋ ಇಲ್ಲ...ಜಸ್ಟ್ ಫಾರ್ ಕಾಮಿಡಿ ಪ್ಲಸ್ ಮೆಸೇಜ್ ಇದ್ರೆ ಸಾಕು. ನಾಟಕ ಸೂಪರ್ ಹಿಟ್ ! ಇದು ತುಳು ರಂಗಭೂಮಿಗೆ ಇರುವ ಕೆಪಾಸಿಟಿ .
ಇಂತಹ ಒಂದು ರಂಗಭೂಮಿಯಲ್ಲಿ ಆಳ್ವಿಕೆ ಮಾಡುತ್ತಿರುವವರು ತೆಲಿಕೆದ ಅರಸ ( ನಗುವಿನ ಅರಸ) ದೇವದಾಸ ಕಾಪಿಕಾಡು. ಗುಂಗುರು ಕೂದಲಿನ ವಿಚಿತ್ರ ಹೇರ್ ಸ್ಟೈಲ್. ಹಾಸ್ಯಕ್ಕಾಗಿಯೇ ಹುಟ್ಟಿ ಬಂದಿದ್ದಾರೆ ಎನ್ನುವುದಕ್ಕಾಗಿ ಮುಖದಲ್ಲಿ ತುಂಬಿ ತುಳುಕುವ ನಗು. ಇದು ದೇವದಾಸ ಕಾಪಿಕಾಡ್‌ನ ಇಂಟರ್‌ಡಕ್ಷನ್. ಅಂದಹಾಗೆ ಕರಾವಳಿಯ ಮಂದಿಗೆ ದೇವದಾಸರ ಪರಿಚಯ ನೀಡುವ ಅಗತ್ಯವೇ ಬೀಳುವುದಿಲ್ಲ. ಅದು ಕರಾವಳಿಯ ಬ್ರಾಂಡ್ ಅಂಬಾಸೀಡರ್ ! ಕಳೆದ ೨೫ ವರ್ಷಗಳಿಂದ ತುಳು ರಂಗಭೂಮಿಯಲ್ಲಿ ವಿಭಿನ್ನ ರೀತಿಯ ನಲವತ್ತಕ್ಕಿಂತ ಜಾಸ್ತಿ ನಾಟಕಗಳನ್ನು ಬರೆದು, ನಟಿಸಿ, ನಿರ್ದೇಶನ ಮಾಡಿ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ತುಳು ರಂಗಭೂಮಿಯ ಜತೆಜತೆಗೆ ಸ್ಯಾಂಡಲ್‌ವುಡ್‌ನಲ್ಲೂ ಹಾಸ್ಯ ಕಲಾವಿದರಾಗಿ ಡಿಮ್ಯಾಂಡ್ ಗಳಿಸಿಕೊಂಡಿದ್ದಾರೆ.
ರಮೇಶ್ ಅರವಿಂದರ ‘ವೆಂಕಟ ಇನ್ ಸಂಕಟ’ ಇನ್ನೂ ಬರುವ ‘ಕಾರ್ತಿಕ್’, ‘ತೂಫಾನ್’ನಲ್ಲಿ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ತಮಿಳಿನ ಸ್ಟಾರ್ ಸೂರ್ಯ ಅಭಿನಯದ ಕಾಲಿವುಡ್‌ನ ಒಂದೆರಡು ಚಿತ್ರಗಳಿಗೂ ಆಫರ್‌ಗಳು ಬಂದಿತ್ತು. ಕನ್ನಡದಲ್ಲಿ ಸಾಧಾರಣ ಓಟ ಆರಂಭಿಸಿದ ಯೋಗರಾಜ್ ಭಟ್ಟರ ‘ಪಂಚರಂಗಿ’ಗೂ ಆಫರ್ ಬಂದಿತ್ತು. ಆದರೆ ತುಳು ರಂಗಭೂಮಿ ಮೇಲಿರುವ ಅಭಿಮಾನದಿಂದ ಸಿನಿಮಾರಂಗದಿಂದ ದೂರಕ್ಕೆ ನಿಂತಿದ್ದರು. ದೇವದಾಸ್‌ರ ಸೂಪರ್ ಹಿಟ್ ನಾಟಕಗಳ ಪಟ್ಟಿ ಅವರ ಕೇರಿಯರ್ ಅಷ್ಟೇ ದೊಡ್ಡದಿದೆ. ಅದರಲ್ಲೂ ೬೦೦ ಪ್ರದರ್ಶನ ಕಂಡ ಅವರ ‘ಪುದರ್ ದೀ ತೀಜಿ’ ಒಂದು ಹಿಸ್ಟರಿ ಕ್ರಿಯೇಟ್ ಮಾಡಿದೆ. ‘ ಮಾಮು’ ‘ಬಲೇ ಚಾ ಪರ್‍ಕ’, ‘ಗಂಟೆ ಏತಾಂಡ್’, ‘ಈರ್ ದೂರ’ , ‘ವೈವಾಟ್ ವಸಂತೆ’, ‘ಮೊಬೈಲ್ ಮಾಧವೆ’, ‘ಕೆಬಿ ಪಿತ್ತಲೆ’ ‘ಈರ್ ಉಂಡರಾ?’ ಈಗ ‘ಗೋಪಾಲ ಈ ಪಾರ್‌ಬಲ....’ ಟೋಟಲಿ ಕತೆ, ಸಂಭಾಷಣೆ, ಗೀತೆರಚನೆ, ಹಿನ್ನೆಲೆ ಗಾಯನ, ನಿರ್ದೇಶನದ ಮೂಲಕ ಕರಾವಳಿ ಸೇರಿದಂತೆ ಮುಂಬಯಿ, ಕೊಲ್ಲಿ ರಾಷ್ಟ್ರಗಳಲ್ಲಿಯೂ ದೇವದಾಸ್ ಕಾಪಿಕಾಡು ಸಿಲೆಬ್ರಿಟಿ ಆಗಿ ಹೊರ ಬಂದಿದ್ದಾರೆ. ‘ಬಲೇ ಚಾ ಪರ್‍ಕ ’ನಾಟಕದ ಯಶಸ್ಸಿನಿಂದ ಅದೇ ತಂಡವನ್ನು ಕಟ್ಟಿಕೊಂಡು ತುಳು ರಂಗಭೂಮಿಯಲ್ಲಿ ಹೆಸರು ಮಾಡುತ್ತಿದ್ದಾರೆ.
ಕಾಡಿನಿಂದ ಬಂದ ದೇವದಾಸ :
ದೇವದಾಸರ ಊರು ನಿಜಕ್ಕೂ ಬಂಟ್ವಾಳದ ಸಜಿಪ ಪಡು. ಆದರೆ ತಂದೆ ನಾರಾಯಣ್ ಸಾಲ್ಯಾನ್ ಕಾಪಿಕಾಡಿನಲ್ಲಿ ಪುಟ್ಟ ಬೀಡಿಯ ಬ್ರ್ಯಾಂಚ್‌ನ್ನು ಇಟ್ಟುಕೊಂಡಿದ್ದರು. ನಂತರದ ದಿನಗಳಲ್ಲಿ ಇಡೀ ಕುಟುಂಬ ಕಾಪಿಕಾಡಿಗೆ ಶಿಫ್ಟ್ ಆಯಿತು. ಮಂಗಳೂರಿನ ಕೆನರಾ ಶಾಲೆಗೆ ದೇವದಾಸ್ ಸೇರಿಕೊಂಡರು. ಶಾಲಾ ದಿನಗಳಲ್ಲಿಯೇ ಮಂಗಳೂರು ಆಕಾಶವಾಣಿಯಲ್ಲಿ ದೇವದಾಸ ಕತೆ ಓದುತ್ತಿದ್ದರು. ಬರೀ ದೇವದಾಸ ಬದಲು ಊರಿನ ಹೆಸರು ಕೂಡ ಜತೆಗೆ ಬಂತು. ಅಲ್ಲಿಂದ ದೇವದಾಸ್ ಕಾಪಿಕಾಡು ಆಗಿ ಬದಲಾದರು. ಅಂದಹಾಗೆ ಒಂದು ಬಾರಿ ಶಾಲೆಯ ಶಿಕ್ಷಕರೊಬ್ಬರು ಎಲ್ಲ ವಿದ್ಯಾರ್ಥಿಗಳಲ್ಲಿ ಊರಿನ ಹೆಸರು ಕೇಳುತ್ತಿದ್ದಾಗ ನನ್ನ ಗುಂಗುರು ಕೂದಲನ್ನು ನೋಡಿ ನೀನು ಯಾವ ಕಾಡಿನಿಂದ ಬಂದಿದ್ದೀಯಾ..? ಎಂದು ಪ್ರಶ್ನಿಸಿದರು. ನಾನು ಕಾಪಿಕಾಡಿನಿಂದ ಎಂದಾಗ ನನ್ನ ಮರುತ್ತರಕ್ಕೆ ಸಿಟ್ಟಾಗಿ ಶಿಕ್ಷಕರು ತಂದೆಯನ್ನು ಕರೆದುಕೊಂಡು ಬರಲು ಹೇಳಿದರು. ನಾನು ಕರೆದುಕೊಂಡು ಬಂದೆ ತಂದೆ ವಿವರ ನೀಡಿದಾಗ ನಿಜಕ್ಕೂ ನನ್ನ ಊರು ‘ಕಾಪಿಕಾಡು’ ಎಂದು ತಿಳಿದ ನಂತರ ಶಿಕ್ಷಕ ನನ್ನ ಜತೆ ತುಂಬಾ ಸಲುಗೆಯಿಂದ ವರ್ತಿಸಿದರು ಎಂದು ದೇವದಾಸ್ ಜೋರಾಗಿ ನಕ್ಕು ಬಿಟ್ಟರು.
ಹಂಪನಕಟ್ಟೆಯ ಕಾಲೇಜು ದಿನಗಳಲ್ಲಿ ಫೈನ್ ಆರ್ಟ್ಸ್‌ನ ಯಾವುದೇ ಕಾರ್‍ಯಕ್ರಮಗಳಿರಲಿ ಅಲ್ಲಿ ನಮ್ಮ ತಂಡಕ್ಕೆ ಬಹುಮಾನ ಬಂದು ಬಿಡುತ್ತಿತ್ತು. ಅಲ್ಲಿ ಓದುತ್ತಿದ್ದ ಮಾಧವ್ ಶಕ್ತಿನಗರ್ ಜತೆಗೂಡಿ ಪದವು ಫ್ರೆಂಡ್ಸ್ ಕ್ಲಬ್‌ನ ಆಶ್ರಯದಲ್ಲಿ ನಾಟಕ ಮಾಡಿಕೊಂಡು ಬರುತ್ತಿದ್ದೇವು. ಅಲ್ಲಿಂದಲೇ ನಾಟಕ ರಂಗಕ್ಕೆ ಎಂಟ್ರಿ. ‘ಯಾನ್ ಮಲ್ಲಾಯೇ ಯಾನೇ ಮಲ್ಲಾಯೇ’ ನಾನು ಬರೆದ ಮೊದಲ ನಾಟಕ. ಕಾಶಿನಾಥ್ ಅವರ ‘ಅನುಭವ’ ಚಿತ್ರಕ್ಕಿಂತ ಮೊದಲು ನಾವು ಅರ್ಧ ಗಂಟೆಯ ಇದೇ ‘ಅನುಭವ’ವನ್ನು ನಾಟಕ ರಂಗಕ್ಕೆ ತಂದಿದ್ದೇವು... ನಾಟಕ ಸೂಪರ್ ಹಿಟ್ ಆಗಿತ್ತು. ಅಲ್ಲಿಂದ ಹಾಸ್ಯ ನಾಟಕಗಳ ಮೂಲಕ ಹೊಸ ಕ್ರಾಂತಿ ಹುಟ್ಟು ಹಾಕಬಹುದು ಎನ್ನುವ ಟ್ರೇಡ್ ಸಿಕ್ರೇಟ್ ಗೊತ್ತಾಯಿತು. ತದನಂತರ ನಾನು ರಂಗಭೂಮಿಯನ್ನು ಬಿಟ್ಟಿಲ್ಲ ಎನ್ನುತ್ತಾರೆ ಕಾಪಿಕಾಡು.
‘ಶಾಲೆಯ ದಿನಗಳಲ್ಲಿ ‘ನಾರದ ಗರ್ವಭಂಗ’ ಎನ್ನುವ ಪುಟ್ಟ ನಾಟಕ ರೆಡಿಯಾಗಿತ್ತು. ಅಲ್ಲಿ ‘ನಾರದ’ನ ಪಾತ್ರ ನನಗೆ ಸಿಕ್ಕಿತ್ತು. ಆದರೆ ಗ್ಯಾಲರಿಯಲ್ಲಿ ತುಂಬಿದ್ದ ಜನರನ್ನು ನೋಡಿ ನಾನು ಕಂಗಾಲು. ನನಗೆ ನೀಡಿದ ಸಂಭಾಷಣೆ ಬಿಟ್ಟು ಜೋರಾಗಿ ಹಾಡಲು ಆರಂಭ ಮಾಡಿದೆ. ಸಂಗೀತದ ಕುರಿತು ಕೊಂಚ ಜ್ಞಾನ ಇತ್ತು. ಆದರೆ ನಾಟಕದ ಸೆಕೆಂಡ್ ಸೀನ್ ಬಂದಾಗ ಸುಧಾರಿಸಿಕೊಂಡು ನನ್ನ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆ. ಇದು ನನ್ನ ರಂಗಭೂಮಿ ವೃತ್ತಿಯಲ್ಲಿ ಮರೆಯಲಾಗದ ಕ್ಷಣ. ಇಂತಹ ಸಿಹಿ- ಕಹಿ ಘಟನೆಗಳು ಬಹಳಷ್ಟು ನಡೆದಿದೆ ಅದೆಲ್ಲವೂ ನನ್ನ ವೃತ್ತಿ ರಂಗಭೂಮಿಯನ್ನು ಗಟ್ಟಿ ಮಾಡಿದೆ ಎನ್ನುತ್ತಾರೆ ದೇವದಾಸ್.
ಲವ್‌ಗೆ ಬಿದ್ದ ದೇವದಾಸ:
ದೇವದಾಸ ಕಾಪಿಕಾಡು ಮದುವೆಯಾಗಿರೋದು ಶರ್ಮಿಳಾ ಡಿ. ಕಾಪಿಕಾಡು ಅವರನ್ನು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಈ ಮದುವೆ ಹಿಂದಿನ ಸಿಕ್ರೇಟ್ ಏನಪ್ಪಾ ಅಂದರೆ ಇಬ್ಬರೂ ಲವ್ ಮಾಡಿ ಮದುವೆಯಾಗಿರುವವರು. ಹಂಪನಕಟ್ಟೆ ಕಾಲೇಜಿನ ಪಿಯುಸಿಯಲ್ಲಿ ಓದುತ್ತಿದ್ದ ಶರ್ಮಿಳಾ ಡಿಗ್ರಿ ಓದುತ್ತಿದ್ದ ದೇವದಾಸರ ಹಾಸ್ಯ ಪ್ರವೃತ್ತಿಗೆ ಸೋತು ಹೋಗಿದ್ದರು. ಫೈನ್ ಆರ್ಟ್ಸ್‌ನಲ್ಲಿ ಬಹುಮಾನಗಳ ಕೊಳ್ಳೆ ಹೊಡೆಯುತ್ತಿದ್ದ ದೇವದಾಸ್ ನಿಧಾನವಾಗಿ ಶರ್ಮಿಳಾರ ಸುತ್ತಮುತ್ತ ಗಿರಕಿ ಹೊಡೆಯಲು ಆರಂಭಿಸಿದರು. ಲವೇರಿಯಾ ಜೋರಾಗಿ ವಿವಾಹದಲ್ಲಿ ಅಂತ್ಯಕಂಡಿತ್ತು. ದೇವದಾಸ್‌ರ ಪ್ರತಿಯೊಂದು ಯಶಸ್ಸಿನ ಹಿಂದೆ ಶರ್ಮಿಳಾ ನಿಂತಿದ್ದಾರೆ ಎನ್ನುವುದು ನಿಜ. ದೇವದಾಸ್‌ರೇ ಹೇಳುವಂತೆ ಒಂದು ಕಾಲದಲ್ಲಿ ಆರ್ಥಿಕವಾಗಿ ಕುಸಿದು ಕೂತಿದ್ದೆ. ನಾಟಕಗಳನ್ನು ಬಿಟ್ಟು ಕೆಲಸವೊಂದಕ್ಕೆ ಸೇರಿಕೊಂಡಿದ್ದೆ. ಆದರೆ ಶರ್ಮಿಳಾ ನನಗೆ ಉತ್ಸಾಹದ ಚಿಲುಮೆಯಾಗಿ ಬಂದರು. ಈಗ ಈ ಉನ್ನತ ಮಟ್ಟದಲ್ಲಿರಲು ಶರ್ಮಿಳಾರೇ ಕಾರಣ ಎನ್ನುತ್ತಾರೆ ಅವರು. ದೇವದಾಸರ ‘ಬಲೇ ಚಾ ಪರ್‍ಕ’ ತಂಡದ ಸಂಪೂರ್ಣ ಉಸ್ತುವಾರಿಯನ್ನು ಶರ್ಮಿಳಾ ಕಾಪಿಕಾಡು ನೋಡಿಕೊಳ್ಳುತ್ತಿದ್ದಾರೆ. ದೇವದಾಸರ ಪುತ್ರ ಅರ್ಜುನ್ ಎಂಬಿಎ ಓದುತ್ತಿದ್ದಾರೆ. ಅರ್ಜುನ್‌ಗಾಗಿ ತುಳುವಿನಲ್ಲಿ ಚಿತ್ರವೊಂದು ತಯಾರಿಸಲು ದೇವದಾಸ್ ಹೊರಟ್ಟಿದ್ದಾರೆ. ಸದ್ಯಕ್ಕೆ ಚಿತ್ರದ ಮುಹೂರ್ತ ನಡೆಯಲಿದೆ. ಎಲ್ಲ ರೀತಿಯಿಂದಲೂ ದೇವದಾಸ್ ಕಾಪಿಕಾಡ್ ತಮ್ಮ ನಾಟಕಗಳ ಮೂಲಕ ತುಳುವರ ಪಾಲಿನ ‘ ಚಾರ್ಲಿ ಚಾಪ್ಲಿನ್’ ಎನ್ನುವುದರಲ್ಲಿ ನೋ ಡೌಟ್..!!
devadaas kaapikaadrena surutha bodedina vishaya ereg gotthijja...avu poora pathrakarterg gotthuppod....?
ReplyDeletegopale