Sunday, April 17, 2011

ಗಾಂ...ನಗರದ ‘ಕತೆ’ ಕುಲಗೆಟ್ಟಿದೆ !


ಥಿಯೇಟರ್‌ಗಳಲ್ಲಿ ಬಾಡಿಗೆ ದರಗಳು ಕಡಿಮೆಯಾಗುತ್ತಿಲ್ಲ. ವಿಐಪಿಗಳು ಸಿನಿಮಾಕ್ಕೆ ಬರದಿದ್ದರೂ ಅಡ್ಡಿಯಿಲ್ಲ. ಶ್ರೀಸಾಮಾನ್ಯರೂ ಬಂದು ಸಿನಿಮಾ ನೋಡಬೇಕು. ಅಂತಹ ವ್ಯವಸ್ಥೆ ನಡೆದರೆ ಮಾತ್ರ ಸಿನಿಮಾ ಉದ್ಯಮ ಬದುಕುತ್ತದೆ. ನಮ್ಮಂತಹ ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬರುತ್ತೇವೆ ಎನ್ನೋದು ವಿನೋದ್ ರಾಜ್ ಮಾತು.

ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿ ಯಾವುದೇ ಸಿನ್ಮಾಗಳು ಓಡುತ್ತಿಲ್ಲ. ನಟರ ಹೆಸರು ಉಳಿಸುವ ಭರದಲ್ಲಿ ಚಿತ್ರಗಳನ್ನು ಓಡಿಸಲಾಗುತ್ತಿದೆ. ಗಾಂ...ನಗರದ ಕತೆನೇ ಈಗ ಬದಲಾಗುತ್ತಿದೆ. ಥಿಯೇಟರ್ ಬಾಡಿಗೆಯಲ್ಲೂ ಯಾವುದೇ ಬದಲಾವಣೆಯಾಗುತ್ತಿಲ್ಲ. ಪ್ರೇಕ್ಷಕ ವರ್ಗ ಕನ್ನಡ ಸಿನ್ಮಾಗಳ ಮೇಲೆ ವ್ಯಾಮೋಹ ತೋರಿಸುತ್ತಿಲ್ಲ. ಗಾಂ...ನಗರದಲ್ಲಿ ಬಡವ- ಶ್ರೀಮಂತ ಎನ್ನುವ ಕೇಟಗರಿ ಕ್ರಿಯೇಟ್ ಆಗಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಸಿನ್ಮಾ ಮಾಡೋದು ಆದ್ರೂ ಹೇಗೆ ಮಾರಾಯ್ರೆ ಅಂತಾ ಡ್ಯಾನ್ಸ್ ಕಿಂಗ್ ವಿನೋದ್ ರಾಜ್ ಕನ್ನಡ ಚಿತ್ರರಂಗದ ಕುರಿತು ಪ್ರಶ್ನೆ ಎತ್ತಿ ಕೂತಿದ್ದರು. ಇತ್ತೀಚೆಗೆ ತಮ್ಮ ತಾಯಿ ಎಂ. ಲೀಲಾವತಿಯ ಜತೆಯಲ್ಲಿ ಮಂಗಳೂರಿನ ತಮ್ಮ ಮೂಲಮನೆಯ ದೈವ ಸ್ಥಳಗಳಿಗೆ ಭೇಟಿ ನೀಡುವಾಗ ವಿನೋದ್ ಲವಲವಿಕೆಯ ಜತೆ ಕೊಂಚ ಹೊತ್ತು ಸಿನ್ಮಾ ಉದ್ಯಮದ ಕುರಿತು ಮಾತಿಗೆ ಕುಳಿತಿದ್ದರು.
ಗಾಂನಗರದ ಕುಲಗೆಟ್ಟ ಜನರ ಬಗ್ಗೆ ನೇರ ನುಡಿಯಲ್ಲಿ ಮಾತನಾಡಿದ ವಿನೋದ್ ಹೇಳುವುದಿಷ್ಟು: ಸ್ಯಾಂಡಲ್‌ವುಡ್ ಇಂಡಸ್ಟ್ರಿ ಈಗ ಮೊದಲಿನ ರೀತಿ ಉಳಿದಿಲ್ಲ. ಇಲ್ಲಿ ಈಗ ಸಿನಿಮಾಗಳು ಹಿಟ್ ಆಗುತ್ತಿಲ್ಲ. ಬದಲಾಗಿ ಸೂಪರ್ ಹಿಟ್ ಆಯಿತು ಎನ್ನುವ ಮಾದರಿಯಲ್ಲಿ ಫೋಕಸ್ ಮಾಡಲಾಗುತ್ತಿದೆ. ಓಡುವ ಚಿತ್ರಗಳ ಬದಲಾಗಿ ಸ್ಯಾಂಡಲ್‌ವುಡ್‌ನಲ್ಲಿ ಓಡಿಸುವ ಚಿತ್ರಗಳು ಹುಟ್ಟಿ ಕೊಳ್ಳಲಾರಂಭಿಸಿದೆ. ಇಂತಹ ಓಡಿಸುವ ಚಿತ್ರಗಳಿಂದ ಯಾರಿಗೂ ಲಾಭವಿಲ್ಲ. ಬರೀ ದೊಡ್ಡವರು ಎನ್ನಿಸಿಕೊಂಡವರು ಉದ್ಯಮದಲ್ಲಿ ಉಳಿದು ಬಿಡುತ್ತಾರೆ. ಉಳಿದವರು ಸುದ್ದಿ ಇಲ್ಲದೇ ಮರೆಯಾಗಿ ಬಿಡುತ್ತಾರೆ ಎನ್ನುವುದು ದಿಟ.
ನಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಾಣವಾದ ‘ಯಾರದು?’ ಹಾಗೂ ‘ಕನ್ನಡದ ಕಂದ’ ನಂತರ ಸಿನ್ಮಾ ಇಂಡಸ್ಟ್ರಿಯಿಂದ ದೂರಕ್ಕೆ ಯಾಕೆ ಹೋದ್ರಿ ಅಂತಾ ಕೇಳಿದ್ರೆ. ಅಮ್ಮ( ಎಂ.ಲೀಲಾವತಿ) ಹಾಗೂ ನಾನು ಯಾವತ್ತಿಗೂ ಸಿನ್ಮಾ ಇಂಡಸ್ಟ್ರಿಯಿಂದ ದೂರಕ್ಕೆ ಹೋದವರೇ ಅಲ್ಲ. ಉದ್ಯಮ ನಮಗೊಂದು ಬದುಕು, ಗೌರವ ಎಲ್ಲವೂ ತಂದುಕೊಟ್ಟಿದೆ. ಅಂತಹ ಇಂಡಸ್ಟ್ರಿಯನ್ನು ಮರೆಯಲು ಹೇಗೆ ತಾನೇ ಸಾಧ್ಯ. ಆದರೆ ಉದ್ಯಮದವರು ಮಾತ್ರ ನಮ್ಮನ್ನು ಮರೆತಿದ್ದಾರೆ. ಅದು ಅವರ ತಪ್ಪಲ್ಲ. ನಮ್ಮ ತಪ್ಪಲ್ಲ. ಯಾರ ತಪ್ಪು ಅಂತಾ ತಿಳೀತಾ ಇಲ್ಲ ಎಂದು ಮೌನದ ಮೋಡದಲ್ಲಿ ಜಾರಿ ಹೋದರು ವಿನೋದ್‌ರಾಜ್.
ಮತ್ತೆ ಐದು ನಿಮಿಷಗಳ ಕಾಲ ನೀರವ ಮೌನ. ಕೇಳುವ ಪ್ರಶ್ನೆಗಳು ಎಲ್ಲೋ ಕಳೆದು ಹೋಗಿ ಬಿಡುತ್ತದೆ ಎನ್ನುವ ಭೀತಿ. ಮತ್ತೆ ವಿನೋದ್‌ರಾಜ್ ಮಾತಿನ ಹಳಿಗೆ ಬಂದು ನಿಂತರು. ಕನ್ನಡ ಸಿನಿಮಾಗಳು ಯಾಕೆ ಓಡುತ್ತಿಲ್ಲ ಮಾರಾಯ್ರೆ ಎಂದಾಗ ಥಿಯೇಟರ್‌ಗಳಲ್ಲಿ ಬಾಡಿಗೆ ದರಗಳು ಕಡಿಮೆಯಾಗುತ್ತಿಲ್ಲ. ವಿಐಪಿಗಳು ಸಿನಿಮಾಕ್ಕೆ ಬರದಿದ್ದರೂ ಅಡ್ಡಿಯಿಲ್ಲ. ಶ್ರೀಸಾಮಾನ್ಯರೂ ಬಂದು ಸಿನಿಮಾ ನೋಡಬೇಕು. ಅಂತಹ ವ್ಯವಸ್ಥೆ ನಡೆದರೆ ಮಾತ್ರ ಸಿನಿಮಾ ಉದ್ಯಮ ಬದುಕುತ್ತದೆ. ನಮ್ಮಂತಹ ನಿರ್ಮಾಪಕರು ಸಿನಿಮಾ ಮಾಡಲು ಮುಂದೆ ಬರುತ್ತಾರೆ . ಕಳೆದ ಎರಡು ವರ್ಷಗಳನ್ನು ಗಣನೆಗೆ ತೆಗೆದುಕೊಳ್ಳಿ ‘ಅಪ್ತರಕ್ಷಕ’ ಯಾವುದೇ ಗಿಮಿಕ್ ಇಲ್ಲದೇ ಗೆದ್ದಿದೆ. ಉಳಿದಂತೆ ಯಾವುದು ಕೂಡ ಸೂಪರ್ ಹಿಟ್ ಅಲ್ವೇ ಅಲ್ಲ. ಎಲ್ಲವೂ ಸಾಧಾರಣ ಎನ್ನುವುದು ವಿನೋದ್‌ರ ವಾದ.
ತುಳುವಿನಲ್ಲಿ ಚಿತ್ರ:
ಈ ವರ್ಷದ ಮೇ- ಜೂನ್ ಹೊತ್ತಿಗೆ ತುಳುವಿನಲ್ಲಿ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದೇವೆ. ಕರಾವಳಿಯ ಹೊಸ ಕಲಾವಿದರನ್ನು ಹಾಕಿ ಮಾಡಬೇಕು ಎನ್ನೋದು ನಮ್ಮ ಕನಸು. ತಾಯಿ ಕೂಡ ಒಂದು ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ. ನಾನು ಬರೀ ನಿರ್ಮಾಪಕನ ಕುರ್ಚಿಯಲ್ಲಿ ಕಾಣ ಸಿಗುತ್ತೇನೆ. ಕತೆ, ಬಜೆಟ್, ನಿರ್ದೇಶಕರು ಯಾರು ಎನ್ನುವ ಕುರಿತು ಯಾವುದೇ ಡಿಟೇಲ್ ಸಧ್ಯಕ್ಕೆ ಕೊಡುವುದಿಲ್ಲ. ಚಿತ್ರದ ತಂಡದಲ್ಲಿ ಕರಾವಳಿಯ ಮಂದಿಗೆ ಜಾಸ್ತಿ ಒತ್ತು ನೀಡುತ್ತೇವೆ. ಎರಡು- ಮೂರು ನಿರ್ದೇಶಕರು ನಮ್ಮ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ತುಳು ಹಾಗೂ ಕನ್ನಡ ಭಾಷೆಯಲ್ಲಿ ಚಿತ್ರ ಮಾಡುತ್ತೇವೆ. ಹೊಸ ನಟ- ನಟಿಯರು, ಕತೆಗಾರರು, ನಿರ್ದೇಶಕರು ಇದ್ದಾರೆ ನಮ್ಮನ್ನು ಸಂಪರ್ಕಿಸಬಹುದು. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಪಕ್ಕಾವಾಗಿ ನಿಮ್ಮ ಮುಂದೆ ಬಂದೇ ಬರುತ್ತೇವೆ ಎನ್ನುತ್ತಾರೆ ವಿನೋದ್ ರಾಜ್.

No comments:

Post a Comment