

ಮೀನಾ ಹುಟ್ಟಿದಾಗಲೂ ಹೆತ್ತವರ ಕೈಯಲ್ಲಿ ಕಾಸಿರಲಿಲ್ಲ. ದೊಡ್ಡ ನಾಯಕಿಯಾಗಿ ಹೆಸರು ಮಾಡಿ ಬದುಕಿನ ಕೊನೆ ಕ್ಷಣದಲ್ಲೂ ಮೀನಾರ ಕೈಯಲ್ಲಿ ಆಸ್ಪತ್ರೆಗೆ ನೀಡಲು ಹಣ ಇರಲಿಲ್ಲ. ಇದು ಮೀನಾ ಕುಮಾರಿ ಎಂಬ ಟ್ರ್ಯಾಜಿಡಿ ಕ್ವೀನ್ ಬದುಕು.
‘ದಿಲ್ ಸಾ ಜಬ್ ಸಾಥಿ ಪಾಯಾ
ಬೇಚೇನ್ ಬೀ ಸಾತ್ ವೋ ಲೇ ಅಯಾ’(ಮನಸ್ಸಿಗೆ ಹತ್ತಿರದ ಗೆಳೆಯನನ್ನು ಪಡೆದೆ ಅದರ ಬೆನ್ನಿಗೆ ದು:ಖವನ್ನು ಅವನು ಜತೆಯಲ್ಲಿ ತಂದ )
ಇದು ಬಾಲಿವುಡ್‌ನ ದುರಂತ ನಾಯಕಿ ಎಂದೇ ಕರೆಯಲಾಗುವ ಮೀನಾ ಕುಮಾರಿಯ ಬದುಕು. ಮೀನಾ ಕುಮಾರಿ ಎಂದಾಕ್ಷಣ ಸಿನಿ ಪ್ರೇಕ್ಷಕನ ಮನಸ್ಸು ೧೯೪೦ಕ್ಕೆ ಓಡಿ ನಿಂತುಬಿಡುತ್ತದೆ. ಅವರು ಅಂದಿನ ಕಾಲದ ಸೂಪರ್ ಲೀಡ್ ನಾಯಕಿ. ಚಿಕ್ಕ ಅವಯೊಳಗೆ ಬಾಲಿವುಡ್‌ನಲ್ಲಿ ಮಹಾರಾಣಿಯಂತೆ ಮರೆದು ನಿಂತವರು. ಆದರೆ ಬದುಕಿನ ಚಕ್ರದಲ್ಲಿ ಮೀನಾರ ಬದುಕು ಎಲ್ಲಿತ್ತೋ ಅಲ್ಲಿಯೇ ಬಂದು ನಿಂತು ಬಿಟ್ಟದ್ದು ಮಾತ್ರ ಬಹಳ ದೊಡ್ಡ ದುರಂತ ! ಯಾಕೇ ಅಂತಾ ಕೇಳ್ತೀರಾ...? ಅದಕ್ಕೆ ಉತ್ತರ ‘ಸಾಹೀಬ್ ಬೀಬಿ ಔರ್ ಗುಲಾಮ್’ಚಿತ್ರ ನೋಡಿ. ೧೯೬೨ರಲ್ಲಿ ಬಾಲಿವುಡ್‌ನಲ್ಲಿ ಬಂದ ಮೋಸ್ಟ್ ಸಕ್ಸಸ್ ರೇಟೆಡ್ ಸಿನ್ಮಾ ಇದು. ಈ ಚಿತ್ರದ ಕತೆಗೂ ಮೀನಾರ ಬದುಕಿಗೂ ಬಹಳ ಹತ್ತಿರದ ನಂಟಿದೆ. ಒಂದಾರ್ಥದಲ್ಲಿ ಮೀನಾ ಕುಮಾರಿಯ ಬದುಕೇ ಈ ಸಿನ್ಮಾದಲ್ಲಿ ಕತೆಯಾಗಿದೆ ಎನ್ನೋದು ಬಹಳ ಸೂಕ್ತ. ಮೀನಾ ಹುಟ್ಟಿದಾಗಲೂ ಹೆತ್ತವರ ಕೈಯಲ್ಲಿ ಕಾಸಿರಲಿಲ್ಲ. ದೊಡ್ಡ ನಾಯಕಿಯಾಗಿ ಹೆಸರು ಮಾಡಿ ಬದುಕಿನ ಕೊನೆ ಕ್ಷಣದಲ್ಲೂ ಮೀನಾರ ಕೈಯಲ್ಲಿ ಆಸ್ಪತ್ರೆಗೆ ನೀಡಲು ಹಣ ಇರಲಿಲ್ಲ. ಇದು ಮೀನಾ ಕುಮಾರಿ ಎಂಬ ಟ್ರ್ಯಾಜಿಡಿ ಕ್ವೀನ್ ಬದುಕು.
ಬನ್ನಿ ಮೀನಾರ ಫ್ಲ್ಯಾಶ್ ಬ್ಯಾಕ್‌ಗೆ ತಿರುಗಿ ಬಿಡೋಣ. ಆಲಿ ಭಕ್ಷ್ ಪರ್ಶಿಯಾದ ಒಬ್ಬ ರಂಗ ಕಲಾವಿದ. ಜತೆಗಿಷ್ಟು ಟೈಮ್ ಪಾಸ್ ಮಾಡಲು ಉರ್ದು ಕವಿತೆಗಳನ್ನು ಬಹಳ ಚೆನ್ನಾಗಿ ಬರೆಯುತ್ತಿದ್ದ. ಈ ಸಮಯದಲ್ಲಿ ರಂಗಭೂಮಿ ಕಲಾವಿದೆ ಹಾಗೂ ನೃತ್ಯಗಾರ್ತಿ ಇಕ್ಬಾಲ್ ಬೇಗಂ ಜತೆ ಸ್ನೇಹ ಬೆಳೆದು ಬಿಡುತ್ತದೆ. ಈ ಸ್ನೇಹ ಪ್ರೀತಿಗೆ ತಿರುಗಿ ಮದುವೆ ನಡೆಯುತ್ತದೆ. ಇವರಿಬ್ಬರ ಮೂರನೇ ಮಗಳಾಗಿ ಹುಟ್ಟುವವಳೇ ಮಹಾಜಾಬೀನ್ ಬಾನು. ಮೀನಾ ಕುಮಾರಿಯನ್ನು ಹೆತ್ತವರು ಕರೆದದ್ದು ಇದೇ ಹೆಸರಿನಲ್ಲಿ. ಆದರೆ ಸಿನಿಮಾ ಜಗತ್ತು ನಂತರ ಅವರನ್ನು ‘ಮೀನಾ ಕುಮಾರಿ ’ಎಂದೇ ಕರೆಯಿತು. ಮೀನಾ ಹುಟ್ಟುವಾಗ ಹೆತ್ತವರು ದಟ್ಟ ದಾರಿದ್ರ್ಯದಲ್ಲಿದ್ದರು. ಬೇಗಂರ ಪ್ರಸೂತಿ ಸಮಯದಲ್ಲಿ ವೈದ್ಯರಿಗೆ ಫೀಸ್ ಕೊಡಲು ಇವರ ಬಳಿ ಹಣ ಇರಲಿಲ್ಲವಂತೆ !
ಆಲಿಭಕ್ಷ್ ಮುಂಬಯಿಯ ರೂಪರ್ಥಾ ಸ್ಟುಡಿಯೋದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಬರುತ್ತಿದ್ದಾಗ ಅಲ್ಲಿಗೆ ತಂದೆಯ ಜತೆಯಲ್ಲಿ ಬರುತ್ತಿದ್ದ ಮೀನಾರನ್ನು ನೋಡಿ ಸಿನಿಮಾ ನಿರ್ದೇಶಕರು ನಟಿಸುವಂತೆ ಕೇಳಿಕೊಳ್ಳುತ್ತಿದ್ದಾರಂತೆ. ಆದರೆ ಮೀನಾಗೆ ಅದು ಒಂಚೂರು ಇಷ್ಟವಾಗುತ್ತಿರಲಿಲ್ಲ. ಮೀನಾ ತನ್ನ ತಾಯಿ ಇಕ್ಬಾಲ್ ಬೇಗಂ ಬಳಿಯಲ್ಲಿ ಒಂದು ಪದೇ ಪದೇ ಹೇಳುತ್ತಿದದ್ದು ಒಂದೇ ಮಾತು. ‘ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ನಾನು ಇತರ ಮಕ್ಕಳಂತೆ ಶಾಲೆಗೆ ಹೋಗುತ್ತೇನೆ ’ಎನ್ನುತ್ತಿದ್ದಾರಂತೆ. ಆದರೆ ಬಡತನದ ಕುಲುಮೆಯಲ್ಲಿದ್ದ ತಂದೆ ಆಲಿಭಕ್ಷ್ ಮಗಳನ್ನು ಸಿನಿಮಾದಲ್ಲಿ ನಟಿಸುವಂತೆ ಒತ್ತಡ ಹಾಕುತ್ತಿದ್ದ. ಅಂತೂ ಇಂತೂ ತಂದೆಯ ಒತ್ತಡಕ್ಕೆ ಬಿದ್ದು ೭ರ ಹರೆಯದಲ್ಲಿ ಬೇಬಿ ಮೀನಾ ಕುಮಾರಿ ‘ಫರ್ಜ್ ಹೀ ವತನ್’ ಚಿತ್ರದಲ್ಲಿ ನಟಿಸಿದರು. ಅದೇ ಅವರ ಮೊದಲ ಚಿತ್ರ. ಪ್ರಕಾಶ್ ಸ್ಟುಡಿಯೋ ಬ್ಯಾನರ್‌ನಡಿಯಲ್ಲಿ ವಿಜಯ್ ಭಟ್ಟ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ೧೯೪೦ರ ಹೊತ್ತಿಗೆ ಬೇಬಿ ಮೀನಾ ಕುಮಾರಿ ಪ್ರಬುದ್ಧ ನಟಿಯಾಗಿ ಹೊರಬಂದರು.
ಐತಿಹಾಸಿಕ ಚಿತ್ರಗಳಾದ ವೀರ್ ಘಟೋತ್ಕಜ(೧೯೪೯), ಶ್ರೀಗಣೇಶ್ ಮಹಿಮಾ(೧೯೫೦) ಫ್ಯಾಂಟಸಿ ಚಿತ್ರ ಅಲ್ಲಾದ್ದೀನ್ ಮತ್ತು ಅದ್ಬುತ ದೀಪ(೧೯೫೨)ರಲ್ಲಿ ಕಾಣಿಸಿಕೊಂಡಿದ್ದರು. ನಂತರ ಬಿಜ್ಜು ಬಾವುರಾ(೧೯೫೨)ಚಿತ್ರದಲ್ಲಿ ನಾಯಕಿಯಾಗಿ ಮೀನಾ ಕುಮಾರಿ ಕಾಣಿಸಿಕೊಂಡರು. ಈ ಚಿತ್ರಕ್ಕಾಗಿ ಮೊದಲ ಫಿಲಂಫೇರ್ ಅವಾರ್ಡ್ ಪಡೆದುಕೊಂಡರು. ತನ್ನ ನಾನಾ ಚಿತ್ರಗಳಿಗಾಗಿ ೧೪ ಬಾರಿ ಫಿಲಂಫೇರ್ ಅವಾರ್ಡ್‌ಗೆ ನಾಮಕಿಂತಗೊಂಡಿದ್ದಾರೆ. ಅದರಲ್ಲಿ ನಾಲ್ಕು ಬಾರಿ ಅವಾರ್ಡ್ ಪಡೆದುಕೊಂಡಿದ್ದಾರೆ. ಅದರಲ್ಲೂ ಮೀನಾ ಕುಮಾರಿಯನ್ನು ಯಶ್ಸಿಸಿನ ಉತ್ತುಂಗಕ್ಕೆ ಕರೆದು ಕೂರಿಸಿದ ಚಿತ್ರಗಳಂದರೆ ‘ಪರಿಣೀತಾ’, ‘ದೀರಾ’, ‘ಏಕ್ ಹೀ ರಸ್ತಾ’, ‘ಶಾರದಾ’, ‘ದಿಲ್ ಅಪ್‌ನಾ ಔರ್ ಪ್ರೀತ್ ಪರಾಹೀ’ಯಲ್ಲಿ ಅಳುಮುಂಜಿಯಲ್ಲಿ ಕಾಣಿಸಿಕೊಂಡರು. ‘ಅಝದ್’, ‘ಮಿಸ್ ಮೇರಿ’, ‘ಶರ್ತ್’, ‘ಕೋಹಿನೂರ್’ ಚಿತ್ರಗಳ ಪಾತ್ರಗಳು ಕುರಿತು ಪ್ರೇಕ್ಷಕ ವರ್ಗದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
ಒಂದು ಸಿನಿಮಾ ಕತೆ:
ನಿರ್ದೇಶಕ ಗುರುದತ್ತ್‌ರ ‘ಸಾಹೀಬ್ ಬೀಬಿ ಔರ್ ಗುಲಾಂ’(೧೯೬೨)ನಲ್ಲಿ ಚೋಟಿ ಬಾವು ಪಾತ್ರದಲ್ಲಿ ಮೀನಾ ಮದ್ಯವ್ಯಸನಿ ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದ್ದು ಮಾತ್ರವಲ್ಲದೇ ಕಮರ್ಷಿಯಲ್ ದೃಷ್ಟಿಯಲ್ಲೂ ಸಕ್ಸಸ್ ಕಂಡಿತು. ಇಂದಿಗೂ ಈ ಪಾತ್ರ ಹಿಂದಿ ಸಿನಿಮಾಗಳಲ್ಲಿಯೇ ಅತೀ ಉತ್ತಮ ಪಾತ್ರ ಎಂದೇ ಪರಿಗಣಿಸಲಾಗುತ್ತದೆ. ಅಂದಹಾಗೆ ಇದು ಬರೀ ಸಿನಿಮಾದ ಪಾತ್ರ ಮಾತ್ರವಾಗಿರಲಿಲ್ಲ . ಬದಲಾಗಿ ಮೀನಾ ಕುಮಾರಿಯ ಬದುಕಿನ ಪಾತ್ರವೇ ಆಗಿ ಹೋಗಿತ್ತು. ‘ಪಿಯಾ ಐಸಾ ಜೀಯಾ ಮನ್...’ ಹಾಡು ಮಹಿಳೆಯರಲ್ಲಿ ಅಡಗಿ ಕೂತಿರುವ ಪ್ರೀತಿ ಹಾಗೂ ಕಾಮದ ಭಾವನೆಗಳನ್ನು ಜಾಗೃತ ಮಾಡುವ ಹಾಡು ಸರ್ವಕಾಲಕ್ಕೂ ಸೂಕ್ತ ಎಂದೇ ವಿಮರ್ಶಕರು ಬರೆದರು. ಈ ಪಾತ್ರದಲ್ಲಿ ತನ್ನ ಆಕಾಂಕ್ಷೆಗಳನ್ನು ಗಂಡ ಪೂರೈಸದೇ ಇದ್ದಾಗ ಅವಳು ಮದ್ಯಕ್ಕೆ ಶರಣಾಗೋದು ನಂತರ ಮತ್ತೊಬ್ಬ ನ ಆಸರೆ ಪಡೆಯಲು ಶ್ರಮ ಪಡೋದು ಎಲ್ಲವೂ ಮೀನಾ ಕುಮಾರಿ ನಿಜ ಬದುಕಿನಲ್ಲಿ ಘಟಿಸಿದ ವಿಚಾರಗಳಾಗಿತ್ತು. ಈ ಚಿತ್ರದ ನಂತರ ನಾಲ್ಕು ವರ್ಷ ಮೀನಾ ಕುಮಾರಿಯನ್ನು ಯಾರು ಕೂಡ ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ‘ದಿಲ್ ಏಕ್ ಮಂದಿರ್’, ‘ಕಾಜಲ್’, ‘ಪೂಲ್ ಔರ್ ಪತ್ತರ್ ’ಎಲ್ಲವೂ ಫಿಲ್ಮ್‌ಫೇರ್‌ಗೆ ನಾಮಕಿಂತಗೊಂಡಿದ್ದು ಮಾತ್ರವಲ’ ‘ಕಾಜಲ್ ’ಚಿತ್ರದ ನಟನೆಗಾಗಿ ಉತ್ತಮ ನಟಿ ಅವಾರ್ಡ್‌ನ್ನು ಪಡೆದುಕೊಂಡಿದ್ದರು.
ಪ್ರೀತಿ ಕೊಡದ ಮದುವೆ:
೧೯೫೨ರಲ್ಲಿ ಮೀನಾ ಕುಮಾರಿ ಖ್ಯಾತ ಬಾಲಿವುಡ್ ನಿರ್ದೇಶಕ, ವಿವಾಹಿತ ಕಮಲ್ ಅಮರೋಹಿ ಅವರನ್ನು ಪ್ರೀತಿಸಿ, ಮದುವೆಯಾಗುತ್ತಾರೆ. ಅವರು ಮೀನಾಕ್ಕಿಂತ ೧೫ ವರ್ಷ ವಯಸ್ಸಿನಲ್ಲಿ ದೊಡ್ಡವರು. ಕಮಲ್ ಅಮರೋಹಿ ಮದುವೆಯಾದ ನಂತರ ಮೀನಾ ಕುಮಾರಿ ಚಿತ್ರಗಳನ್ನು ನಿರ್ಮಾಣ ಮಾಡಲು ಹೊರಟರು. ಮೊತ್ತ ಮೊದಲಿಗೆ ‘ದೀರಾ’ ಚಿತ್ರವನ್ನು ನಿರ್ಮಾಣ ಮಾಡಿದರು. ನಿಜಕ್ಕೂ ಅದು ಅವರಿಬ್ಬರ ಪ್ರೀತಿ ಕತೆಯಾಗಿತ್ತು. ನಂತರ ಮತ್ತೊಂದು ಚಿತ್ರಕ್ಕೆ ಮುಹೂರ್ತ ನಡೆಯಿತು. ಅದುವೇ ‘ಪಕೀಜಾ’ ಆದರೆ ಅದು ಪರದೆಗೆ ಬರಬೇಕಾದರೆ ೧೪ ವರ್ಷ ತೆಗೆದುಕೊಂಡಿತು. ಆದರೆ ಅಮರೋಹಿ ಮೀನಾ ಕುಮಾರಿಯಿಂದ ಮಕ್ಕಳನ್ನು ಪಡೆಯಲು ಬಯಸಿರಲಿಲ್ಲ. ಕಾರಣ ಅಮರೋಹಿ ತನ್ನ ಮೊದಲ ಪತ್ನಿಯಿಂದ ಒಬ್ಬ ಪುತ್ರನನ್ನು ಪಡೆದಿದ್ದರು.
ಈ ಪುತ್ರ ಕೂಡ ಮೀನಾಕುಮಾರಿಯನ್ನು ತನ್ನ ತಾಯಿಯಂತೆ ಭಾವಿಸಿಕೊಂಡಿದ್ದ. ಮತ್ತೊಂದು ಮಗುವಾದರೆ ಎಲ್ಲಿ ಮೀನಾರಿಗೆ ತನ್ನ ಪುತ್ರನ ಮೇಲಿನ ಪ್ರೀತಿ ಕಡಿಮೆಯಾಗುವುದೋ ಎಂದು ಅಮರೋಹಿ ಭಾವಿಸಿಬಿಟ್ಟಿದ್ದರು. ಈ ಒಂದು ವಿಚಾರದಿಂದಲೇ ಮೀನಾ ಕುಮಾರಿ ಹಾಗೂ ಕಮಲ್ ಅಮರೋಹಿ ನಡುವೆ ಮನಸ್ತಾಪ ಹೆಚ್ಚಾಗುತ್ತಿತ್ತು. ತನಗೆ ಪತಿಯಿಂದ ಲೈಂಗಿಕ ಸುಖ ಸಿಗುತ್ತಿಲ್ಲ ಎಂದು ತನ್ನ ಆತ್ಮೀಯ ಸ್ನೇಹಿತರ ವಲಯದಲ್ಲಿ ಹೇಳಿಕೊಂಡಿದ್ದಳು ಮೀನಾ. ಇದೇ ವಿಚಾರ ಇಬ್ಬರ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿತು. ೧೯೬೪ರಲ್ಲಿ ಇಬ್ಬರಿಗೂ ವಿಚ್ಚೇದನ ನಡೆದು ಹೋಯಿತು. ಈ ವಿಚ್ಛೇದನದಿಂದ ಮೀನಾ ಕಂಗಾಲಾಗಿದ್ದರು. ಆಗ ನಟ ಧರ್ಮೇಂದ್ರ ಜತೆಯಲ್ಲಿ ಸಂಬಂಧ ಬೆಳೆಸಲು ಪ್ರಯತ್ನಿಸಿದರು.
ಈ ನಡುವೆ ಮೀನಾ ನಟಿಸಿದ ಚಿತ್ರಗಳು ‘ಚಂದನ್ ಕಾ ಪಲಾನಾ’ ಹಾಗೂ ‘ಮಜಾಲಿ ದೀದಿ’ ಬಾಲಿವುಡ್‌ನಲ್ಲಿ ಮಕಾಡೆ ಮಲಗಿತು. ಒಂದರ ಹಿಂದೆ ಒಂದರಂತೆ ಚಿಂತೆಗಳು ಹೆಚ್ಚಾಯಿತು. ಅಲ್ಲಿಂದ ಮೀನಾ ನಿಧಾನವಾಗಿ ಕುಡಿತದ ದಾಸಿಯಾದರು. ಮದ್ಯದ ಆಕರ್ಷಣೆ ಎಷ್ಟು ಜೋರಾಗಿತ್ತು ಎಂದರೆ ಮದ್ಯ ಇಲ್ಲದೇ ಮೀನಾ ಇಲ್ಲ ಎನ್ನುವ ಪರಿಸ್ಥಿತಿ ಬಂದು ನಿಂತಿತು. ವಿಪರೀತ ಕುಡಿತದಿಂದ ಮೀನಾ ಕುಮಾರಿ ಕರುಳು ಡ್ಯಾಮೇಜ್ ಆಯಿತು. ೧೯೬೮ರಲ್ಲಿ ಕುರುಳಿನ ತೊಂದರೆಯ ಚಿಕಿತ್ಸೆಗಾಗಿ ಲಂಡನ್, ಸ್ವಿಟ್ಜರ್‌ಲ್ಯಾಂಡ್‌ಗೆ ಹೋದರು. ಚಿಕಿತ್ಸೆ ಫಲ ನೀಡಲಿಲ್ಲ. ಮರಳಿ ಭಾರತಕ್ಕೆ ಬಂದು ತನ್ನ ಹಿರಿಯಕ್ಕ ಮಧು ಅವರ ಮನೆಯಲ್ಲಿ ನೆಲೆ ನಿಂತರು. ಆದರೆ ಮಧು ಹಾಗೂ ಮೀನಾರ ನಡುವೆ ಮಾತುಕತೆ ಇರಲಿಲ್ಲ. ವಿಪರೀತ ಕುಡಿತದ ಚಟವೇ ಅವರ ಮಾತುಕತೆ ನಿಲ್ಲಲು ಕಾರಣವಾಗಿತ್ತು. ಮೀನಾರ ಸೌಂದರ್ಯ ಮಾಸುತ್ತಿದ್ದಂತೆಯೇ ಸಿನಿಮಾದಲ್ಲಿ ಸಣ್ಣ ಪಾತ್ರಗಳನ್ನು ಮಾಡುತ್ತಿದ್ದರು.
ಇತ್ತ ಕಡೆ ಅರ್ಧದಲ್ಲಿಯೇ ನಿಂತಿದ್ದ ‘ಪಕೀಜಾ’ ಚಿತ್ರ ಪೂರ್ಣ ಮಾಡಲು ಮೀನಾ ಮುಂದಾದರು. ಅಂತೂ ಇಂತೂ ಫೆಬ್ರವರಿ ೧೯೭೨ರಲ್ಲಿ ‘ಪಕೀಜಾ’ ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯಾದಾಗ ಕುಂಟುತ್ತಿತ್ತು. ಆದರೆ ೩೧ ಮಾರ್ಚ್ ೧೯೭೨ರಲ್ಲಿ ಮೀನಾ ಕುಮಾರಿ ಎಲ್ಲರನ್ನು ಬಿಟ್ಟು ಹೊರಟು ಹೋದರು. ಪಕೀಜಾ ಚಿತ್ರ ಮತ್ತೆ ಗರಿಕೆದರಿಕೊಂಡು ಬಾಕ್ಸಾಫೀಸ್‌ನ್ನು ಚಿಂದಿ ಮಾಡಿತು. ಆದರೆ ಮೀನಾ ಸಾಯುವ ಹೊತ್ತಿನಲ್ಲಿ ಹಣಕಾಸಿನ ಮುಂಗಟ್ಟಿನಲ್ಲಿದ್ದರು. ಹುಟ್ಟುವಾಗಲೂ ಹಣಕಾಸಿನ ಕೊರತೆ ಇತ್ತು. ಸಾಯುವಾಗಲೂ ಆಸ್ಪತ್ರೆಯಲ್ಲಿ ಕೊಡಲು ಕೂಡ ಹಣ ಇರಲಿಲ್ಲ. ಬದುಕಿದ ೩೦ ವರ್ಷಗಳ ಕಾಲ ಮೀನಾ ಕುಮಾರಿ ದುರಂತ ನಾಯಕಿಯಾಗಿ ಉಳಿದರು.
.................
ವಿಜಯ ಕರ್ನಾಟಕದ ಲವಲವಿಕೆಯಲ್ಲಿ ೧೯.೦೪.೨೦೧೧ರಂದು ಪ್ರಕಟವಾಗಿದೆ.
............
No comments:
Post a Comment