
ಅಂದ ಕಾಲತ್ತಿಲ್ನ ಕನ್ನಡ ನಟಿ ಮಂಜುಳಾ ಕೊನೆಯದಾಗಿ ಅತ್ಯಂತ ಕಡಿಮೆ ಸಂಭಾವಣೆಗೆ ತುಳು ಚಿತ್ರವೊಂದರಲ್ಲಿ ನಟಿಸಿದ್ದರು. ಚಿತ್ರ ತಯಾರಾಗಿ ಈಗ ೨೫ ವರ್ಷ. ಆದರೆ ಈಗಲೂ ಡಬ್ಬಾ ಪೆಟ್ಟಿಗೆಯಲ್ಲಿ ಚಿತ್ರದ ರೀಲುಗಳು ಧೂಳು ತಿನ್ನುತ್ತಿದೆ. ಈ ವರ್ಷವಾದರೂ ಸಿನಿಮಾ ಹೊರ ತರಬೇಕು ಎನ್ನುವ ಆಸೆಯ ಕಣ್ಣುಗಳಲ್ಲಿ ಲವಲವಿಕೆಯ ಜತೆ ಚಿತ್ರದ ನಿರ್ಮಾಪಕ ಕಮ್ ನಟ ಕೆ.ಎನ್. ಟೇಲರ್ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ಬೇವರ್ಸಿ ಹಳೆ ಬೇವರ್ಸಿ... ಅಂತ ಬಜಾರಿ ಹೆಣ್ಣು ಮಗಳು ರೇಗೊ ದೃಶ್ಯ ನೋಡಿದಾಗ ಕನ್ನಡ ಚಿತ್ರರಂಗದ ಅಭೂತಪೂರ್ವ ನಟಿ ಮಂಜುಳಾ ಇನ್ನು ನಮ್ಮೊಂದಿಗೆ ಜೀವಂತ ಆಗಿರೋದು ಸ್ಪಷ್ಟ ಆಗುತ್ತೆ.. ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಮಂಜುಳಾರ ‘ಎರಡು ಕನಸು’ ಚಿತ್ರ ಪ್ರಸಾರವಾಗುತ್ತಿದ್ದಾಗ ನಮ್ಮ ಮಂಜುಳಾ ಇಲ್ವಾ ಅಂತ ಮನಸು ಮುದುಡಿತು. ಅವರ ನಟನೆಯೇ ಅಂತಹುದು. ಸಿನಿಮಾ ಹೆಸರಿಗಿಂತ ಕಲಾವಿದರು ಸುರಿಸುವ ಡೈಲಾಗ್ಗಳೇ ಹೆಚ್ಚು ಮನದಲ್ಲಿ ಉಳಿಯೋದು. ಬೇವರ್ಸಿ ಅಂತ ಕಿರಿಚೋ ಮಂಜುಳಾ ವನ್ಸೈಡ್ನಲ್ಲಿ ಇಷ್ಟವಾದರೆ ಮತ್ತೊಂದೆಡೆ ಬಿಕನಾಸಿ ಅಂತ ಕಿಚಾಯಿಸೋ ಡಾ.ರಾಜ್ ಇಷ್ಟವಾಗುತ್ತಾರೆ ಅಂತಾ ತುಳು ನಿರ್ದೇಶಕ ಕಮ್ ನಟ ಕೆ.ಎನ್ ಟೇಲರ್ ಲೈಫ್ ಲೈನ್ ಬೇಡ ಎಂದುಕೊಂಡು ದುನಿಯಾ ಬಿಟ್ಟ ನಟಿ ಮಂಜುಳಾರ ಬಗ್ಗೆ ಲವಲವಿಕೆಯ ತಂಡದ ಜತೆಗೆ ಮಾತಿನ ಬುತ್ತಿ ಇಟ್ಟು ಕೂತಿದ್ದರು.
ಅಂದಹಾಗೆ ೭೦ರಿಂದ ೮೦ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸೂಪರ್ ನಾಯಕಿಯಾಗಿ ಮಿಂಚಿದ ನಟಿ ಮಂಜುಳಾ ನೂರಕ್ಕಿಂತ ಅಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಶ್ರೀನಾಥ್ ಹಾಗೂ ಮಂಜುಳಾ ಜೋಡಿಯಾಗಿ ನಟಿಸಿದ ಚಿತ್ರಗಳ ಸಂಖ್ಯೆ ಬರೋಬರಿ ೩೪ ! ಈ ಒಂದು ಕಾರಣದಿಂದ ಈ ಜೋಡಿಯನ್ನು ‘ಪ್ರಣಯ ಜೋಡಿ’ ಎಂದೇ ಸಿನಿಮಾ ಜಗತ್ತಿನಲ್ಲಿ ಗುರುತಿಸಲಾಗುತ್ತಿತ್ತು. ನಾಲ್ಕು ತೆಲುಗು ಹಾಗೂ ಮೂರು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮಂಜುಳಾ ಡಾ. ರಾಜ್ ಸೇರಿದಂತೆ ಕನ್ನಡ ಚಿತ್ರರಂಗದ ಘಟಾನುಘಟಿ ಚಿತ್ರ ತಾರೆಯರ ಜತೆಯಲ್ಲಿ ಬಣ್ಣ ಹಚ್ಚಿಕೊಂಡಿದ್ದರು. ಹಣ, ಗೌರವ, ಖ್ಯಾತಿ ಎಲ್ಲವೂ ಮಂಜುಳಾರ ಬಗಲಲ್ಲಿ ಮಲಗಿ ಕೂತಿತ್ತು.
ಯಾಕೋ ಏನೋ ಇದೆಲ್ಲ ಬೇಡ ಅಂತಾ ಲೈಫ್ ಲೈನ್ ಕಿತ್ತುಕೊಂಡು ಹೊರಟು ಹೋದರು. ಆದರೆ ಸ್ಯಾಂಡಲ್ವುಡ್ನಲ್ಲಿ ಮಂಜುಳಾ ಸೂಪರ್ ಪಟ್ಟ ಗಿಟ್ಟಿಸಿಕೊಂಡಿದ್ದಾಗ... ಅವರ ಸಂಭಾವನೆ ಲಕ್ಷ ತೂಗುತ್ತಿದ್ದಾಗ ....ಅತ್ಯಂತ ಕಡಿಮೆ ಸಂಭಾವಣೆ ಪಡೆದು ತುಳು ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ತುಳು ಚಿತ್ರ ನಟ ಹಾಗೂ ನಿರ್ಮಾಪಕ ಕೆ.ಎನ್. ಟೇಲರ್ ಗಣಪತಿ ಫಿಲಂ ಬ್ಯಾನರ್ನಡಿಯಲ್ಲಿ ತುಳು ಹಾಗೂ ಕನ್ನಡ ಭಾಷೆಯಲ್ಲಿ ‘ನಮ್ಮ ಭಾಗ್ಯ’ ಚಿತ್ರ ತಯಾರಾಗಿತ್ತು. ಆದರೆ ಚಿತ್ರ ಏನೋ ಸಂಪೂರ್ಣವಾಯಿತು. ಚಿತ್ರದ ರೆಕಾರ್ಡಿಂಗ್, ಡಬ್ಬಿಂಗ್, ಪ್ರಿಂಟ್, ಸೆನ್ಸಾರ್ ಅಂತಾ ಬಹಳಷ್ಟು ಕೆಲಸಗಳು ಹಾಗೆಯೇ ಉಳಿದು ಹೋಯಿತು.
ಈ ಚಿತ್ರವನ್ನು ಖ್ಯಾತ ನಿರ್ದೇಶಕ ಅರೂರು ಪಟ್ಟಾಬಿ ನಿರ್ದೇಶನ ಮಾಡಿದ್ದರು. ಚಿತ್ರದ ನಿರ್ಮಾಣಕ್ಕಾಗಿ ಸರಿಸುಮಾರು ೨೦ ಲಕ್ಷ ರೂ .ಮೊತ್ತವನ್ನು ಅಂದಿನ ಕಾಲದಲ್ಲಿ ಕೆ. ಎನ್ ಟೇಲರ್ ಸುರಿದಿದ್ದರು.ನಟ ಸುಂದರ ಕೃಷ್ಣ ಅರಸ್, ರಾಜೇಶ್, ತಾರಾ, ಕೆ. ವಿಜಯ ಸೇರಿದಂತೆ ಕನ್ನಡ ಹಾಗೂ ತುಳು ರಂಗಭೂಮಿಯ ಬಹಳಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಸಂಗೀತಕ್ಕಾಗಿ ಚೆನ್ನೈಯಿಂದ ರಾಮ್ ಪ್ರಸಾದ್ರನ್ನು ಕರೆ ತರಲಾಗಿತ್ತು. ಹೀಗೆ ಚಿತ್ರ ಎಲ್ಲ ರೀತಿಯಿಂದಲೂ ಸಕಲ ಸನ್ನದ್ಧವಾಗಿತ್ತು. ಆದರೆ ಇತ್ತ ಕಡೆ ನಿರ್ಮಾಪಕರಲ್ಲಿ ಇನ್ನಷ್ಟೂ ಹಣ ಸುರಿಯುವ ತಾಕತ್ತು ಮುರಿದು ಬಿದ್ದಿತ್ತು... ಚಿತ್ರ ತೆರೆಗೆ ಬರುವ ಸೂಚನೆಗಳು ಬಹುತೇಕ ಮಂಕಾಗಿ ಹೋಗಿತ್ತು. ಇದೆಲ್ಲ ಆಗಿ ಹೋಗಿ ಭರ್ಜರಿ ೨೫ ವರ್ಷಗಳಾಗಿದೆ. ಚಿತ್ರ ಇಂದು ನಾಳೆ ಬಿಡುಗಡೆ ಮಾಡೋಣ ಅಂತಾ ಚಿತ್ರದ ಎಲ್ಲರೂ ಕಾಯುತ್ತಿದ್ದಾರೆ.
‘ನಮ್ಮ ಭಾಗ್ಯ’ದ ಸ್ಟೋರಿ ಲೈನ್ ಅಂತದ್ದು.. ಇಂದಿಗೂ ಚಿತ್ರ ಸಖತ್ ರನ್ ಆಗುತ್ತದೆ. ಆದರೆ ಚಿತ್ರ ತೆರೆಗೆ ತರಬೇಕಾದರೆ ಬರೋಬರಿ ೧೦ ಲಕ್ಷ ರೂ. ಕೈಯಲ್ಲಿ ಇರಬೇಕು. ನನ್ನ ಬಳಿ ಖರ್ಚು ಮಾಡುವಷ್ಟು ಹಣ ಇದ್ದಿದ್ದಾರೆ, ಯಾವಾಗಲೋ ಚಿತ್ರ ತರುತ್ತಿದ್ದೆ... ಚಿತ್ರಕ್ಕೆ ಹಣ ಸುರಿಯುವವರು ಮುಂದೆ ಬಂದರೆ ಚಿತ್ರ ರಿಲೀಸ್ ಮಾಡುತ್ತೇನೆ. ೨೫ ವರ್ಷಗಳ ನಂತರವಾದರೂ ಚಿತ್ರ ಹೊರ ಬರುತ್ತದೆ ಅನ್ನುವ ಆಸೆ ನನ್ನದು ಎಂದು ಮಾತು ಮುಗಿಸಿ ಚಿತ್ರದ ನಿರ್ಮಾಪಕ ಕೆ.ಎನ್. ಟೇಲರ್ ನಮ್ಮ ಮುಖ ನೋಡಲಾರಂಭಿಸಿದರು. ಅಂದಹಾಗೆ ‘ನಮ್ಮ ಭಾಗ್ಯ’ ಚಿತ್ರದ ಕ್ಲೈಮ್ಯಾಕ್ಸ್ಗೂ ಮಂಜುಳಾರ ಬದುಕಿಗೂ ತೀರಾ ಹತ್ತಿರದ ಸಂಬಂಧವಿದೆ. ಚಿತ್ರದಲ್ಲಿ ನಾಯಕನಿಗೆ ಬಾಯಿ ಬರುವಂತೆ ಮಾಡಲು ಹೋಗಿ ಮಂಜುಳಾ ಬೆಂಕಿಗೆ ಬೀಳುವ ಮೂಲಕ ಆತ್ಮಹತ್ಯೆ ಮಾಡಿಕೊಂಡರೆ ಇತ್ತ ಮಂಜುಳಾರ ನಿಜ ಬದುಕು ಕೂಡ ಬೆಂಕಿ ಆಕಸ್ಮಿಕ ಅಥವಾ ಆತ್ಮಹತ್ಯೆ ಮೂಲಕ ಕೊನೆಗೊಂಡಿತ್ತು ಎನ್ನುವುದು ವಿಪರಾಸ್ಯ.