Saturday, March 19, 2011

ಕುಡ್ಲದ ಯುವಕರ ನ್ಯೂ ಐಡಿಯಾ ೩೩೩ ಆಲ್ಬಂ


ಫೋಟೋಗಳು ಸಾವಿರಾರು ವರ್ಷಗಳ ಕಾಲ ಆಲ್ಬಂಗಳ ಹಂಗಿಲ್ಲದೇ ಬದುಕುತ್ತದೆ ಅಂದ್ರೆ ಯಾರಾದರೂ ನಂಬುವ ವಿಚಾರನಾ..? ಇದು ನಿಜಕ್ಕೂ ಸಾಧ್ಯ ಅಂತಾ ಮಂಗಳೂರಿನ ಯುವಕರ ತಂಡ ವೊಂದು ತೊಡೆತಟ್ಟಿ ನಿಂತಿದೆ. ತಮ್ಮ ಹೊಸ ಅಂರ್ತಜಾಲವೊಂದರ ಮೂಲಕ ಕರಾವಳಿಯಲ್ಲಿ ಮೆಲ್ಲನೇ ಸುನಾಮಿಯ ಅಲೆಯನ್ನು ಎಬ್ಬಿಸುತ್ತಿದ್ದಾರೆ. ಬನ್ನಿ ಏನ್ ವಿಷ್ಯ ಅಂತಾ ಕೇಳೋಣ....


ಇಡೀ ವಿಶ್ವವೇ ಪುಟ್ಟ ಗ್ರಾಮವಾಗುತ್ತಿದೆ ಎಂಬ ಸಮಾಜಶಾಸ್ತ್ರಜ್ಞರ ಮಾತು ಈಗ ದಿಟವಾಗುತ್ತಿದೆ. ತಂತ್ರಜ್ಞಾನ ದಿನದಿಂದ ದಿನಕ್ಕೆ ನಾಗಲೋಟದಲ್ಲಿ ಓಡುತ್ತಿದೆ. ಶ್ರೀ ಸಾಮಾನ್ಯರ ಬದುಕಿನ ಪುಟಗ ಯಾರಿಗೂ ತಿಳಿಯದೇ ಏಕ್‌ದಂ ಚೇಂಜ್ ಆಗುತ್ತಿದೆ. ಕಂಪ್ಯೂಟರ್ ಎಂಬ ಬ್ರಹ್ಮಾಂಡ ಈಗ ಶ್ರೀ ಸಾಮಾನ್ಯರ ಮೂಲಭೂತ ಅವಶ್ಯಕತೆಗಳ ಪಟ್ಟಿಯೊಳಗೆ ನುಸುಳಿಕೊಂಡಿದೆ. ಇಂತಹ ಯುಗಕ್ಕೊಂದು ಹೊಸ ಅಂರ್ತಜಾಲ ಹುಟ್ಟಿಕೊಂಡಿದೆ. ಇದು ೩೩೩ ಆಲ್ಬಂ . ಟೋಟಲಿ ಹೊಸತು ಎನ್ನುವ ಕಾನ್ಸಪ್ಟ್...
ಇದರ ವಿಶೇಷತೆ ಏನಪ್ಪಾ ಅಂದರೆ ಇದೊಂದು ಪಕ್ಕಾ ಫೋಟೋ ಆಲ್ಬಂ. ನೀವು ಅಂದುಕೊಂಡಿರುವಂತೆ ಸಾಮಾನ್ಯವಾದ ಫೋಟೋ ಆಲ್ಬಂ ಆಗಿದ್ದಾರೆ ಅದು ಡಿಫರೆಂಟ್ ಮಾತು. ಅಂರ್ತಜಾಲದ ಮುಖಪುಟದಲ್ಲಿ ಮ್ಯಾರೇಜ್, ಬರ್ತ್‌ಡೇ, ಸ್ಕೂಲ್ ಡೇ, ಕಾಲೇಜ್ ಡೇ ಹೀಗೆ ಯಾವುದೇ ಇರಲಿ ಎಲ್ಲವೂ, ಯಾವಾಗ ಬೇಕಾದರೂ ನಿಮ್ಮ ಕೈಗೆ ಸಿಕ್ಕರೆ ಹೇಗಿರುತ್ತೆ.. ಟೋಟಲಿ ಗ್ರೇಟ್ ಅನ್ನಿಸೊಲ್ವಾ..? ಇಂತಹ ಯೋಜನಾಲಹರಿಯಲ್ಲಿ ಮೂಡಿ ಬಂದಿದೆ ೩೩೩ ಆಲ್ಬಂ. ವಿದೇಶದಲ್ಲಿರುವ ಹೆತ್ತವರಿಗೆ ತಮ್ಮ ಮಕ್ಕಳ ಸ್ಕೂಲ್ ಡೇ ನೋಡಬೇಕು ಎಂದುಕೊಂಡಾಗ ಅವರ ಮುಂದೆ ಈ ಅಂರ್ತಜಾಲ ತೆರೆದು ಕೂರುತ್ತೆ. ಮದುವೆ ಫೋಟೊಗಳನ್ನು ಹತ್ತು ವರ್ಷದ ನಂತರ ದಂಪತಿಗಳು ಮತ್ತೊಂದು ಸಾರಿ ನೋಡಬೇಕು ಅಂದ್ರೆ ಮತ್ತೆ ಅಂರ್ತಜಾಲವನ್ನು ಕ್ಲಿಕ್ ಮಾಡಿದರೆ ಮುಗಿಯಿತು. ಹೊಸ ಮದುವೆಯ ಅನುಭವ ತಂದು ಕೊಡುತ್ತದೆ.
ಅಂದಹಾಗೆ ಗೂಗಲ್‌ನ ಪಿಕಾಸೋ ಇದೇ ರೀತಿಯ ಕೆಲಸವನ್ನು ಮೊದಲು ಮಾಡಿತ್ತು. ಇದೇ ಪಿಕಾಸೋನಿಂದ ಪ್ರಭಾವಿತರಾಗಿ ಈ ಯುವಕರ ತಂಡ ಈ ೩೩೩ ಆಲ್ಬಂವನ್ನು ಕಟ್ಟಿ ಕೂರಿಸಿದ್ದಾರೆ. ಗೂಗಲ್‌ನಲ್ಲಿ ಪೋಟೋಗಳನ್ನು ಕಾಪಿ ಮಾಡಿಕೊಳ್ಳುವ ಅವಕಾಶ ಕೊಂಚ ಮಟ್ಟಿಗೆ ಇದೆ. ಆದರೆ ಈ ಆಲ್ಬಂನಲ್ಲಿ ಹಾಕುವ ಫೋಟೋಗಳಿಗೆ ನೂರು ಶೇಕಡಾದಷ್ಟು ಟೋಟಲಿ ಭದ್ರತೆ ಇದೆ. ಇದರಿಂದ ಫೋಟೋಗಳನ್ನು ಕಾಪಿ ಮಾಡುವ ಹೆದರಿಕೆ ಇರೋದಿಲ್ಲ . ಜತೆಯಲ್ಲಿ ಸಾವಿರಾರು ಪೋಟೋಗಳನ್ನು ಆಪ್‌ಲೋಡ್ ಮಾಡಿಕೊಂಡು ಅಂರ್ತಜಾಲದಲ್ಲಿ ಹಾಕುವ ತಾಕತ್ತನ್ನು ಈ ಆಲ್ಬಂ ಪಡೆದುಕೊಂಡಿದೆ.
೩೩೩ ಆಲ್ಬಂ ಯಾಕೆ ಬಂತು..?
ಕರಾವಳಿ ಸೇರಿದಂತೆ ನಾನಾ ಕಡೆಗಳಿಂದ ಬರುವ ಸಂಸ್ಕೃತಿ,ಆಚಾರ- ವಿಚಾರ, ಸಂಪ್ರದಾಯಗಳನ್ನು ಒಟ್ಟು ಸೇರಿಸಿಕೊಳ್ಳುವ ಕೆಲಸಕ್ಕಾಗಿ ಈ ಅಲ್ಬಂನ್ನು ಸಿದ್ದಪಡಿಸಿಕೊಂಡಿದ್ದೇವೆ ಎಂದು ಅಂರ್ತಜಾಲದ ಮೈನ್ ಬ್ಯಾಕ್‌ಬೋನ್ ರೋಷನ್ ಕ್ಯಾಸ್ಟಲಿನೋ ಹೇಳುತ್ತಾರೆ. ‘ಇಂತಹ ಒಂದು ಆಲ್ಬಂವನ್ನು ಕಟ್ಟುವ ಕೆಲಸ ಬಹಳ ಹಿಂದೆಯೇ ಆರಂಭವಾಗಿತ್ತು. ವ್ಯಕ್ತಿಯ ಬದುಕಿನ ಕೆಲವೊಂದು ಅಮೂಲ್ಯ ಪುಟಗಳನ್ನು ಸಂಗ್ರಹಮಾಡಿ ಕೊಡಬೇಕು ಎನ್ನುವ ಇರಾದೆಯನ್ನು ಇಟ್ಟುಕೊಂಡಿದ್ದೇವು’ ಎಂದು ಸ್ಟೀವನ್ ಡಿ ಸೋಜ ಹೇಳುತ್ತಾರೆ. ಅವರು ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಅಂರ್ತಜಾಲದ ಟೆಕ್ನಿಕಲ್ ಇನ್‌ಚಾರ್ಜ್ ಆಗಿದ್ದಾರೆ.
‘ವಿದೇಶದಲ್ಲಿರುವ ಹೆತ್ತವರಿಗೆ ತಮ್ಮ ಮಕ್ಕಳ ಚಟುವಟಿಕೆಗಳನ್ನು ನೋಡುವ ಹಾಗೂ ತಮ್ಮ ಕೆಲವೊಂದು ಸಮಾರಂಭಗಳ ನೆನಪುಗಳನ್ನು ಸದಾ ಹಸಿರಾಗಿಡಲು ಇಂತಹ ಅಂರ್ತಜಾಲದ ಅವಶ್ಯಕತೆಯನ್ನು ಗಮನಿಸಿ ಈ ತಯಾರಿ’ ಎನ್ನುತ್ತಾರೆ ವಿದೇಶದಲ್ಲಿರುವ ಮಂಗಳೂರು ಮೂಲದ ರೋಷನ್ ರಾಡ್ರಿಗಸ್. ಇವರು ವಿದೇಶದಲ್ಲಿ ನಿಂತು ಈ ಅಂರ್ತಜಾಲದ ಪ್ರಮುಖ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ‘೩೩೩ ಆಲ್ಬಂಗಳಲ್ಲಿ ಫೋಟೋಗಳನ್ನು ಬೇಕಾದಂತೆ ಬಳಸಿಕೊಳ್ಳುತ್ತಿಲ್ಲ ಬದಲಾಗಿ ಆಯ್ಕೆ ಆಧಾರದ ಮೇಲೆ ಇದು ನಿರ್ಧಾರವಾಗುತ್ತದೆ ’ಎನ್ನುತ್ತಾರೆ ಅಂರ್ತಜಾಲದ ಫೋಟೋ ಆಯ್ಕೆದಾರನಾಗಿ ಕೆಲಸ ಮಾಡುತ್ತಿರುವ ಗುರುಪುರದ ನಾಬರ್ಟ್ ಕ್ರಾಸ್ತಾ.
ವಂಶವೃಕ್ಷದ ಐಡಿಯಾ:
ಈಗಾಗಲೇ ೩೩೩ ಆಲ್ಬಂನ ಯಶಸ್ಸಿನಿಂದ ಈ ಯುವಕರು ಈಗ ವ್ಯಕ್ತಿಯ ವಂಶವೃಕ್ಷದ ಬಗ್ಗೆ ಆಲ್ಬಂ ಹಾಗೂ ಮಾಹಿತಿಗಳನ್ನು ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ವಂಶವೃಕ್ಷದ ಮುಖ್ಯ ಪ್ಲಸ್ ಪಾಯಿಂಟ್ ಏನಪ್ಪಾ ಅಂದರೆ ವ್ಯಕ್ತಿಯ ಸಂಪೂರ್ಣ ಬಯೋಗ್ರಾಫಿ ಆತನ ಬಾಲ್ಯದ ಹುಡುಕಾಟ, ಚಿತ್ರ, ಸಾಧನೆ, ಸಾಮಾಜಿಕ ಕ್ಷೇತ್ರದಲ್ಲಿ ಅವನ ಪಾತ್ರ ಈ ಎಲ್ಲ ವಿಚಾರಗಳು ಅದರಲ್ಲಿ ಜಾಗ ಪಡೆಯಲಿದೆ. ‘ಇದೊಂದು ಹೊಸ ಕಲ್ಪನೆ. ಸಾಧಕರನ್ನು ಮತ್ತೊಂದು ಪೀಳಿಗೆಗೆ ಪರಿಚಯಿಸುವ ಕೆಲಸ ಈ ಮೂಲಕ ನಡೆಯುತ್ತದೆ ಎಂಬ ಇರಾದೆಯಿಂದ ನಾವು ಹೊಸ ಪ್ರಯತ್ನಕ್ಕೆ ಇಳಿದಿದ್ದೇವೆ’ ಎನ್ನುತ್ತಾರೆ ರೋಷನ್ ಕ್ಯಾಸ್ಟಲಿನೋ.
‘೩೩೩ ಆಲ್ಬಂಗಳಲ್ಲಿ ಫೋಟೋಗಳನ್ನು ತುಂಬಿಸುವವರು ಬರೀ ೧ ಸಾವಿರ ರೂ.ಗಳನ್ನು ಸರ್ವರ್ ಚಾರ್ಜ್‌ಗಳಾಗಿ ನೀಡಬೇಕಾಗುತ್ತದೆ. ಇದರಲ್ಲಿ ಸ್ಕೂಲ್ ಡೇ ಇತ್ಯಾದಿ ಕಾರ್‍ಯಕ್ರಮಗಳಿಗೆ ವಿನಾಯಿತಿ ಇದೆ. ಅಂದಹಾಗೆ ೩೩೩ ಆಲ್ಬಂ ಗ್ಲೋಬಲ್ ಮಾರ್ಕೆಟ್‌ಗಳನ್ನು ಟಾರ್ಗೆಟ್ ಮಾಡಿಕೊಂಡು ಇಳಿದಿರುವ ಈ ಸೈಟ್ ಇದಾಗಿದೆ. ಇತ್ತೀಚೆಗಷ್ಟೇ ಬಾಲಿವುಡ್‌ನ ಹಾಸ್ಯನಟ ಜಾನಿ ಲೀವರ್ ಈ ಸೈಟ್‌ನ್ನು ಅಕೃತವಾಗಿ ಬಿಡುಗಡೆ ಮಾಡಿದ್ದರು. ಅವರು ನೋಡಿ ‘ಶಹಬ್ಬಾಸ್’ ಎಂದು ಬೆನ್ನು ತಟ್ಟಿ ಹಾರೈಸಿದರು’ ಎನ್ನುತ್ತಾರೆ ರೋಷನ್. ಟೋಟಲಿ ಮಂಗಳೂರಿನ ಯುವಕರು ನಿಧಾನವಾಗಿ ತಾಂತ್ರಿಕ ಕ್ಷೇತ್ರದಲ್ಲಿ ಸುನಾಮಿ ಎಬ್ಬಿಸುತ್ತಿರುವ ಮಾತು ಮಾತ್ರ ಸುಳ್ಳಲ್ಲ.


No comments:

Post a Comment