Tuesday, March 15, 2011

ಕತ್ತರಿ ಕಲಾವಿದ


ಕತ್ತಲೆ ಕೋಣೆಯಲ್ಲಿ ನಿರ್ದೇಶಕನ ಜತೆ ಕೂತು ಕತ್ತರಿ ಪ್ರಯೋಗ ಮಾಡಿ ಚಿತ್ರವನ್ನು ಅದ್ದುತವಾಗಿ ಹೊರ ತಂದ ಸಂಕಲನಕಾರ ಎಲ್ಲಿಯೋ ಮರೆಯಾಗಿ ಹೋಗುತ್ತಾನೆ. ಸಿನ್ಮಾಲ್ಯಾಂಡ್‌ನಲ್ಲಿ ಅವರು ಔಟ್ ಆಫ್ ಫೋಕಸ್ .ರಾಜ್ಯದಿಂದ ಗುಳೇ ಹೊರಟು ಗೆದ್ದು ಬಂದ ಸುರೇಶ್ ಅರಸ್ ನಮ್ಮ ಮುಂದೆ ನಿಂತು ಸಿನ್ಮಾಲ್ಯಾಂಡ್ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದಾರೆ.

ಸುರೇಶ್ ಅರಸ್. ಹೆಮ್ಮೆಯಿಂದ ಹೇಳಿಬಿಡಬಹುದು ಅವರು ಕನ್ನಡದ ಸುಪುತ್ರ. ರಾಜ್ಯದಿಂದ ಹೊರಗಡೆ ಹೋಗಿ ಶೈನ್ ಆದ ನಟರಾದ ಕೋಕಿಲ ಮೋಹನ್, ರಜನಿಕಾಂತ್, ಮುರುಳಿ, ಪ್ರಕಾಶ್ ರಾಜ್, ಅರ್ಜುನ್ ಸರ್ಜಾ ಸಾಲಿನಲ್ಲಿ ಸುರೇಶ್ ಅರಸ್ ಕೂಡ ಇದ್ದಾರೆ. ದಕ್ಷಿಣ ಭಾರತೀಯ ಸಿನಿಮಾ ಸಂಕಲನ ಕ್ಷೇತ್ರದಲ್ಲಿ ಸುರೇಶ್ ಅರಸ್‌ರ ದು ಬಹಳ ದೊಡ್ಡ ಹೆಸರು. ಅಂದಹಾಗೆ ‘ಅರಸ್’ ಕನ್ನಡ ಸಿನ್ಮಾ ಲ್ಯಾಂಡ್‌ನಲ್ಲಿ ಬಹಳ ಚಿರಪರಿಚಿತ ಸರ್‌ನೇಮ್. ಕನ್ನಡದ ಖ್ಯಾತ ನಟ, ಡಬ್ಬಿಂಗ್ ಕಲಾವಿದ, ನಿರ್ದೇಶಕ ಹೀಗೆ ಹಲವಾರು ನೇಮ್ ಪ್ಲೇಟ್‌ಗಳನ್ನು ತೂಗಾಡಿಸಿಕೊಂಡಿದ್ದ ದಿ.ಸುಂದರ್ ಕೃಷ್ಣ ಅರಸ್ ಫ್ಯಾಮಿಲಿ ಮೆಂಬರ್‌ಗಳ ಲೀಸ್ಟ್‌ನಲ್ಲಿ ಸುರೇಶ್ ಅರಸ್ ಕೂಡ ಒಬ್ಬರು.
ಸುಂದರ್ ಕೃಷ್ಣ ಅರಸ್ ಅವರ ತಾಯಿ ಹಾಗೂ ಸುರೇಶ್ ಅರಸ್‌ರ ತಾಯಿ ಅಕ್ಕ- ತಂಗಿಯಂದಿರು. ಎಲ್ಲಕ್ಕೂ ಮುಖ್ಯವಾಗಿ ಸುಂದರ್ ಆಕ್ಟಿಂಗ್ ಫೀಲ್ಡ್ ಆಯ್ಕೆ ಮಾಡಿಕೊಂಡರೆ ಸುರೇಶ್ ಅರಸ್ ಸಂಕಲನ ಕ್ಷೇತ್ರವನ್ನು ಸೆಲೆಕ್ಟ್ ಮಾಡಿದರು. ಸುರೇಶ್ ಎಲ್ಲಿಯಾದರೂ ಆಕ್ಟಿಂಗ್ ಕ್ಷೇತ್ರವನ್ನು ಅಪ್ಪಿಕೊಂಡು ಬಿಟ್ಟಿದ್ದಾರೆ ಕತೆ ಅಲ್ಲಿಗೆ ಮುಗಿದು ಹೋಗುತ್ತಿತ್ತು. ಆದರೆ ಸುರೇಶ್ ಆಯ್ಕೆ ಮಾಡಿದ ಕ್ಷೇತ್ರದಿಂದ ಅವರ ಹೆಸರಿಗೊಂದು ಕಿಮ್ಮತ್ತು ಕುದುರಿಸಿದೆ. ಭಾರತೀಯ ಸಿನಿಮಾ ಕ್ಷೇತ್ರದ ಖ್ಯಾತ ನಿರ್ದೇಶಕ ಮಣಿರತ್ನಂರಂತಹ ಕೈಕೆಳಗೆ ಸುರೇಶ್ ಕೆಲಸ ಮಾಡಿದ್ದಾರೆ.
ತಮಿಳಿನಲ್ಲಿ ತೆರೆಕಂಡ ‘ದಳಪತಿ’ ‘ಇರುವರ್’ ‘ತಿರುಡಾ ತಿರುಡಾ’ ಹಿಂದಿ ಹಾಗೂ ತಮಿಳು ಭಾಷೆಯಲ್ಲಿ ಬಂದ ‘ರೋಜಾ’ ‘ಬಾಂಬೆ’ ಹಾಗೂ ‘ದಿಲ್ ಸೇ’ ಬರೀ ನಿರ್ದೇಶಕ ಮಣಿಗೆ ಹೆಸರು ತಂದುಕೊಟ್ಟಿಲ್ಲ. ಬದಲಾಗಿ ರಾಜ್ಯದ ಸುಪುತ್ರ ಸುರೇಶ್ ಅರಸ್‌ಗೂ ಬಹಳ ದೊಡ್ಡ ಹೆಸರನ್ನು ತಂದು ಕೊಟ್ಟಿತು. ಕನ್ನಡದ ನಟ, ನಿರ್ದೇಶಕ ಶಂಕರ್‌ನಾಗ್ ಅವರ ಮಾಸ್ಟರ್ ಪೀಸ್ ವರ್ಕ್ ‘ಮಾಲ್ಗುಡಿ ಡೇಸ್’ಗೂ ಸುರೇಶ್ ಅರಸ್ ಕೆಲಸ ಮಾಡಿದ್ದಾರೆ. ಹೀಗೆ ಮಣಿಯ ಚಿತ್ರಗಳು ಮಾತ್ರವಲ್ಲ ಅವರ ೩೫ ವರ್ಷಗಳ ಸಿನ್ಮಾ ಫೀಲ್ಡ್‌ನಲ್ಲಿ ತಮಿಳು, ಕನ್ನಡ, ಮಳಯಾಳಂ, ಬೆಂಗಾಲಿ, ತೆಲುಗು, ತುಳು,ಕೊಂಕಣಿ, ಕೊಡವ, ಹಿಂದಿಯ ಸೇರಿದಂತೆ ೫೫೦ಕ್ಕಿಂತ ಅಕ ಚಿತ್ರಗಳಿಗೆ ಸಂಕಲನ ಕೆಲಸ ಮಾಡಿದ್ದಾರೆ. ಜತೆಗಿಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.
ಸುರೇಶ್ ಅರಸ್ ಇತ್ತೀಚೆಗೆ ಮಂಗಳೂರಿನ ಖಾಸಗಿ ಕಂಪ್ಯೂಟರ್ ಸಂಸ್ಥೆಯೊಂದರಲ್ಲಿ ಎಡಿಟಿಂಗ್ ಕುರಿತು ವಿದ್ಯಾರ್ಥಿಗಳಿಗೆ ಬರೋಬರಿ ಒಂದು ದಿನದ ಕ್ಲಾಸ್ ತೆಗೆದುಕೊಂಡಿದ್ದರು. ವಿದ್ಯಾರ್ಥಿಗಳ ಎಡಿಟಿಂಗ್ ಗೊಂದಲ, ಪ್ರಶ್ನೆ, ಸಂದೇಹಗಳಿಗೆ ಉತ್ತರ ಕೊಡುತ್ತಿದ್ದ ಸುರೇಶ್ ಲವಲವಿಕೆಯ ಜತೆಯಲ್ಲೂ ಒಂಚೂರು ಮಾತನಾಡಿದರು. ‘ಅರ್ಧ ಗಂಟೆ ಮಾತು. ಉಳಿದದ್ದು ಪ್ರ್ಯಾಕ್ಟಿಕಲ್’ ಎನ್ನುವ ಉಪನ್ಯಾಸಕರ ಸಿದ್ಧಾಂತಕ್ಕೆ ಅರಸರು ಗಂಟು ಬಿದ್ದಿದ್ದರು. ಲವಲವಿಕೆಯ ಮಾತಿನ ನಡುನಡುವೆ ತನ್ನ ಪುಟ್ಟ ಲ್ಯಾಪ್‌ಟಾಪ್‌ನಲ್ಲಿ ಎಡಿಟಿಂಗ್ ಮಾಡಿದ ಚಿತ್ರಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಕತ್ತಲೆ ಕೋಣೆ ವರ್ಸಸ್ ಕತ್ತರಿಯ ಜುಗಲ್‌ಬಂಯ ಬಗ್ಗೆ ಲವಲವಿಕೆ ಕೇಳಿದಾಗ, ‘ಸಂಕಲನ ಎನ್ನುವುದು ಬರೀ ಒಂದು ಕತ್ತರಿಯ ಪ್ರಯೋಗವಲ್ಲ. ಅಲ್ಲಿ ತಾಳ್ಮೆ ಬೇಕು. ಎಲ್ಲಕ್ಕೂ ಮುಖ್ಯವಾಗಿ ಕತೆಗೆ ಪೂರಕವಾಗಿರಬೇಕು. ವೃತ್ತಿಯ ಬಗ್ಗೆ ಆಳವಾದ ಜ್ಞಾನ, ತಂತ್ರಜ್ಞಾನದ ಅರಿವು ಇರಬೇಕು. ಜತೆಗೆ ನಿರ್ದೇಶಕನ ಉತ್ಸುಕತೆನೂ ಮುಖ್ಯವಾಗುತ್ತದೆ. ಅಂತಹ ಸಮಯದಲ್ಲಿ ಒಳ್ಳೆಯ ಚಿತ್ರ ಹೊರ ಬರುತ್ತದೆ. ಎಲ್ಲಕಿಂತ ಮುಖ್ಯವಾಗಿ ಥಿಯೇಟರ್‌ಗೆ ಬರುವ ಪ್ರೇಕ್ಷಕ ಚಿತ್ರವನ್ನು ನೋಡಿದಾಗ ಎಲ್ಲಿಯೂ ಕತ್ತರಿ ಪ್ರಯೋಗ ನಡೆದಿಲ್ಲ ಎಂದು ತಿಳಿದುಕೊಳ್ಳಬೇಕು ಎನ್ನೋದು ಅರಸ್ ಅವರ ವಾದ.
ಸುರೇಶ್ ಅರಸ್ ದಿನದ ಇಪ್ಪತ್ತ ನಾಲ್ಕು ಗಂಟೆಗಳಲ್ಲಿ ೧೮ ಗಂಟೆಗಳ ಕಾಲ ದುಡಿಯುತ್ತಾರೆ. ಅದರಲ್ಲೂ ಮನೆ ಹಾಗೂ ಕಚೇರಿ ಎರಡು ಜತೆಜತೆಗಿದೆ. ಎಂಟು ಮಂದಿಯ ಎಡಿಟಿಂಗ್ ಟೀಮ್ ಇದೆ. ಕರ್ನಾಟಕದಲ್ಲಿ ಯಾವುದಾದರೂ ಕನ್ನಡ ಸಿನ್ಮಾ ಒಪ್ಪಿಕೊಂಡರೆ ಅಪರೂಪಕ್ಕೊಮ್ಮೆ ಬೆಂಗಳೂರಿಗೆ ಬರುತ್ತಾರೆ. ಸುರೇಶ್ ಇರೋದೆಲ್ಲ ಚೆನ್ನೈಯಲ್ಲಿರುವ ‘ಸಾಲಿಗ್ರಾಮಂ’ ಎಂಬ ಪುಟ್ಟ ನಗರದಲ್ಲಿ ಅವರ ಕೆಲಸ ಕಾರ್‍ಯಗಳು ನಿರಂತರವಾಗಿ ನಡೆಯುತ್ತಿದೆ. ಅವರ ಜತೆಯಲ್ಲಿ ಪುತ್ರ ರಾಘವ್ ಅರಸ್ ಕೂಡ ಇದ್ದಾರೆ. ವಿಶುವಲ್ ಕಮ್ಯೂನೀಕೇಷನ್‌ನಲ್ಲಿ ಪದವಿ ಪಡೆದಿರುವ ರಾಘವ್ ಚಿತ್ರ ನಿರ್ದೇಶಕನಾಗಬೇಕೆಂದು ಕನಸು ಕಾಣುತ್ತಿದ್ದಾರೆ. ಅಪ್ಪನ ಜತೆಯಲ್ಲಿ ನಿಂತು ಸಿನ್ಮಾ ತಂತ್ರಜ್ಞಾನವನ್ನು ನಿಧಾನವಾಗಿ ಅಭ್ಯಾಸದಲ್ಲಿ ತೊಡಗಿದ್ದಾರೆ. ಇನ್ನೊಬ್ಬ ಪುತ್ರ ಗೌತಮ್ ಅರಸ್ ಬೆಂಗಳೂರಿನಲ್ಲಿ ಬಿಬಿಎಂ ಅಧ್ಯಯನ ಮಾಡುತ್ತಿದ್ದಾರೆ. ಅದಷ್ಟೂ ಬೇಗನೆ ಸಿನ್ಮಾ ಲ್ಯಾಂಡ್‌ಗೆ ಎಂಟ್ರಿಯಾಗಬೇಕೆನ್ನುವುದು ಗೌತಮ್‌ರ ಕನಸು ಎನ್ನುತ್ತಾರೆ ಸುರೇಶ್.
ಅರಸರ ಜೋಳಿಗೆಯಿಂದ:
‘ಕನ್ನಡದ ನಿರ್ದೇಶಕ ಶಂಕರ್‌ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಚಿತ್ರದ ಸಂಕಲನ ಕಾರ್‍ಯವನ್ನು ನೋಡಿದ ಮಣಿರತ್ನಂ ನನ್ನನ್ನು ‘ದಳಪತಿ’ ಚಿತ್ರಕ್ಕೆ ಎಡಿಟಿಂಗ್ ಮಾಡಲು ಕರೆದರು. ದೊಡ್ಡ ನಿರ್ದೇಶಕರೊಬ್ಬರು ಈ ರೀತಿಯಲ್ಲಿ ಕರೆದಾಗ ಖುಷಿ ಆಯಿತು. ತಕ್ಷಣ ಒಪ್ಪಿಕೊಂಡೆ. ನಂತರ ಮಣಿ ನಿರ್ದೇಶನದ ನಾಲ್ಕೈದು ಚಿತ್ರಗಳಿಗೆ ಸಂಕಲನಕಾರನಾಗಿ ಕೆಲಸ ಮಾಡಿದೆ. ಒಳ್ಳೆಯ ಹೆಸರು ಕೂಡ ಕೊಟ್ಟಿತು. ದೊಡ್ಡ ನಿರ್ದೇಶಕನ ಕೈಕೆಳಗೆ ಕೆಲಸ ಮಾಡಿದ ಅನುಭವ ಕೂಡ ಲಭ್ಯವಾಯಿತು. ಅದು ನನ್ನ ಪುಣ್ಯ.. ಎಂದರು ಸುರೇಶ್ ಅರಸ್. ‘ಮಣಿರತ್ನಂರ ಆರಂಭದ ಬಹುತೇಕ ಚಿತ್ರಗಳಿಗೆ ಸಂಕಲನಕಾರನಾಗಿ ದುಡಿದ ಬಿ.ಲೆನಿನ್ ‘ಒರುಕ್ಕು ನೂರು ಪೇರ್’ ಚಿತ್ರ ನಿರ್ಮಾಣ ಮಾಡಿದರು. ಅವರು ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರರಾಗಿದ್ದರೂ ಕೂಡ ಅವರ ಚಿತ್ರವನ್ನು ನನ್ನ ಕೈಯಲ್ಲಿ ಎಡಿಟಿಂಗ್ ಮಾಡಿಸಿದರು ಇದೆಲ್ಲವೂ ಸಂಕಲನಕಾರನ ಬದುಕಿನಲ್ಲಿ ಮರೆಯಲಾಗದ ಕ್ಷಣಗಳು’ ಎಂದು ನೆನಪುಗಳ ಮೂಟೆಯನ್ನು ಬಿಚ್ಚಿಟ್ಟರು ಸುರೇಶ್ ಅರಸ್.
೩೫ ವರ್ಷಗಳ ಹಿಂದೆ ಇದೇ ಮಂಗಳೂರಿನ ಪೀಟರ್ ಗೊನ್ಸಾಲ್ವೀಸ್ ಕೊಂಕಣಿಯಲ್ಲಿ ‘ತಿಸ್ರಿ ಚೀಟ್’ಎನ್ನುವ ಚಿತ್ರವನ್ನು ನನ್ನ ಎಡಿಟಿಂಗ್ ಟೇಬಲ್ ಮೇಲೆ ಇಟ್ಟುಹೋದರು. ಅದೇ ನನ್ನ ಮೊದಲ ಸಂಕಲನ ಚಿತ್ರ. ಕರಾವಳಿಯಲ್ಲಿರುವ ದೇವಸ್ಥಾನಗಳ ಮೇಲೆ ನನಗೆ ವಿಶೇಷ ಮೋಹ. ಟೈಮ್ ಸಿಕ್ಕಾಗ ಇಲ್ಲಿಗೆ ಬಂದು ಹೋಗುತ್ತೇನೆ. ಈ ಬಾರಿ ಬಂದಾಗಲೂ ಕದ್ರಿಗೆ ಹೋದೆ, ಹಳೆಯ ನೆನಪುಗಳು ಒಂದೊಂದಾಗಿ ಬಿಚ್ಚಿಕೊಂಡವು ಪದೇ ಪದೇ ಕರಾವಳಿಗೆ ಭೇಟಿ ಕೊಡಬೇಕು ಎನ್ನುವುದು ಕೂಡ ನನ್ನ ಬಯಕೆ ಎಂದರು ಅರಸರು.
ಮತ್ತೆ ಸಿನ್ಮಾಲ್ಯಾಂಡ್ ಕುರಿತು ಮಾತು ಹರಿಯಿತು. ಸುರೇಶ್ ಅರಸ್ ಮತ್ತೆ ಮನಸಿನಾಳದ ದುಗುಡಗಳನ್ನು ಬಿಚ್ಚಿಡಲಾರಂಭಿಸಿದರು. ಕನ್ನಡ ವರ್ಸಸ್ ತಮಿಳು ಚಿತ್ರಗಳ ಕುರಿತು ಪುಟ್ಟ ಚರ್ಚೆಯೇ ಪ್ರಕೋಪಕ್ಕೆ ಹೋಗುತ್ತಿದೆಯೇ ಎಂದುಕೊಂಡಾಗ ಅರಸರು ಮತ್ತೆ ಕೂಲ್ ಆಗಿ ಉತ್ತರ ಕೊಟ್ಟರು. ‘ಕರ್ನಾಟಕ ಬಿಟ್ಟು ಹೋಗದಿದ್ದಾರೆ ನಾನು ಬೆಳೆಯುತ್ತಿರಲಿಲ್ಲ. ಗಾಂನಗರದಲ್ಲಿ ರಾಜ್ಯದವರಿಗೆ ಅವಕಾಶ ಕಡಿಮೆ. ಎಲ್ಲವೂ ಹೊರರಾಜ್ಯದ ಮಂದಿಗೆ ಮೊದಲ ಮಣೆ ಹಾಕುತ್ತಾರೆ. ಆದರೆ ತಮಿಳುನಾಡಿನಲ್ಲಿ ಪರಿಸ್ಥಿತಿ ಆಗಿಲ್ಲ ಬಿಡಿ. ಅಲ್ಲಿ ಪ್ರತಿಭೆ, ಪ್ರಾಮಾಣಿಕತೆಗೆ ಮೊದಲ ಮಣೆ ಇಡುತ್ತಾರೆ. ಅದರಲ್ಲೂ ತಮಿಳಿಗೆ ವಿಸ್ತಾರವಾದ ಮಾರುಕಟ್ಟೆ ಇದೆ. ಗಾಂನಗರಕ್ಕೆ ಅದು ಇಲ್ಲ. ಕೈಯಲ್ಲಿ ಹಣ ಇದೆ ಎಂದುಕೊಂಡು ಕನ್ನಡದಲ್ಲಿ ಸಿನ್ಮಾ ಮಾಡುತ್ತಾರೆ. ಅದೇ ಕಳಪೆ ಗುಣಮಟ್ಟದ ಚಿತ್ರಗಳಿಗೆ ಕಾರಣವಾಗುತ್ತಿದೆ ಎನ್ನುವುದು ಅರಸರ ಬೇಸರ.
ಎಲ್ಲಕ್ಕೂ ಒಂದು ಟೈಮ್ ಇದೆ ಸರ್. ಕನ್ನಡ ಸಿನಿಮಾಗಳು ಕೂಡ ಬೆಳೆಯುತ್ತದೆ. ಹೊಸಬರಿಗೂ ಅವಕಾಶಗಳಿವೆ. ಆದರೆ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವ ಜಾಣ್ಮೆ ಗಾಂನಗರಕ್ಕೆ ಬರಬೇಕು. ಹೊಸ ಪ್ರಯತ್ನಗಳು ನಡೆಯುತ್ತಿದೆ ಜತೆಗೆ ಅದನ್ನು ಮಾರುಕಟ್ಟೆಗೆ ಬಿಡುವ ಕೆಸಲ ಮಾಡಬೇಕು. ಈ ವಿಚಾರದಲ್ಲಿ ತಮಿಳು ಸಿನ್ಮಾ ಇಂಡಸ್ಟ್ರಿ ಬಹಳಷ್ಟು ಮಟ್ಟಿಗೆ ಗೆದ್ದು ಬಂದಿದೆ. ಅಲ್ಲಿ ಸೋತ ವ್ಯಕ್ತಿ ಕೂಡ ಗೆದ್ದು ಬರುತ್ತಾನೆ. ಸೋತವನಿಗೂ ಗೆಲ್ಲುವ ಅವಕಾಶ ತಮಿಳು ಸಿನ್ಮಾ ನೀಡುತ್ತಿದೆ ಎನ್ನುವುದು ಖುಶಿಯ ವಿಚಾರ ಎನ್ನುತ್ತಾರೆ ಅರಸರು.
ಸಧ್ಯಕ್ಕೆ ಅರಸರ ಎಡಿಟಿಂಗ್ ಟೇಬಲ್ ಮ್ಯಾಲೆ ತಮಿಳಿನ ಆರ್. ಬಾಲನ್ ನಿರ್ದೇಶನದ ‘ಅವನ್ ಇವನ್’ ಕನ್ನಡದಲ್ಲಿ ದಿಗಂತ್ ಅಭಿನಯದ ‘ಪುತ್ರ’ ನಿರ್ದೇಶಕ ಶಿವರುದ್ರಯ್ಯರ ‘ಮಾಗಿಯ ಕಾಲ’ ಹಾಗೂ ಬರಗೂರು ರಾಮಚಂದ್ರಪ್ಪ ಅವರ ‘ಭೂಮಿತಾಯಿ’ ಇದೆ. ಉಳಿದಂತೆ ಬಂಗಾಳಿಯ ಆರ್ಟ್ ಮೂವಿಗಳು, ತುಳುವಿನ ಒಂದು ಸಿನ್ಮಾ ಈಗಾಗಲೇ ಬುಕ್ ಆಗಿದೆಯಂತೆ. ಮಣಿಯ ಜತೆಗಿನ ಮುಂದಿನ ವರ್ಕ್ ಯಾವುದಾದರೂ ಇದೆಯಾ ಅಂತಾ ಲವಲವಿಕೆ ಪ್ರಶ್ನೆ ಎತ್ತಿದಾಗ ‘ ನಿಜಕ್ಕೂ ಮಣಿಯ ಜತೆಯಲ್ಲಿ ಕೆಲಸ ಮಾಡಲು ತುಂಬಾ ಖುಷಿಯಾಗುತ್ತದೆ. ಆದರೆ ಅವರು ಒಂದು ಚಿತ್ರ ನಿರ್ದೇಶನಕ್ಕೆ ತೆಗೆದುಕೊಳ್ಳುವ ಅವ ಸುದೀರ್ಘವಾಗಿರುತ್ತದೆ. ಈ ಸಮಯದಲ್ಲಿ ಬೇರೆ ಚಿತ್ರಗಳಿಗೆ ಒಪ್ಪಿಕೊಂಡ ಎಲ್ಲ ಕೆಲಸಗಳು ಬಾಕಿ ಉಳಿಯುತ್ತದೆ. ಮಣಿಯ ಜತೆಗೆ ಇನ್ನಷ್ಟೂ ಕೆಲಸ ಮಾಡಬೇಕು ಎನ್ನುವುದು ಕೂಡ ನನ್ನ ಉದ್ದೇಶ ’ ಎನ್ನುತ್ತಾರೆ ಸುರೇಶ್ ಅರಸ್.
ತನ್ನ ಕೆಲಸವೇ ದೇವರು ಎನ್ನುವ ಅರಸರ ಯಶಸ್ಸಿನ ಹಿಂದೆ ಇರುವ ಶಕ್ತಿ ಪ್ರಾಮಾಣಿಕತೆ ಹಾಗೂ ಕೆಲಸದ ಮೇಲಿನ ನಿಷ್ಠೆ. ಏನೂ ತಪ್ಪಿದೆ ಅಂತಾ ನೇರವಾಗಿ ತಿಳಿಸುವ ಧೈರ್ಯ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎನ್ನುವುದು ಅವರ ಜತೆಗೆ ಮಾತಿಗೆ ಇಳಿದಾಗ ಗೊತ್ತಾಗುತ್ತದೆ. ಚದುರಿದ ಚಿತ್ರಗಳನ್ನು ಸರಿಯಾಗಿ ಪೋಣಿಸಿಕೊಂಡು ಪ್ರೇಕ್ಷಕನ ಮುಂದೆ ಇಡುವ ಸಂಕಲನಕಾರ ಸಿನ್ಮಾಲ್ಯಾಂಡ್‌ನ ಗ್ಲಾಮರ್ ಇಲ್ಲದೇ ಫೋಕಸ್ ಇಲ್ಲದೇ ಕೆಲಸ ಮಾಡುವುದು ಮಾತ್ರ ಗ್ರೇಟ್‌ನೆಸ್ ಅಲ್ವಾ..?
...............
ಚಿತ್ರ: ಸುಧಾಕರ್ ಎರ್ಮಾಳ್
...................

No comments:

Post a Comment