Monday, March 28, 2011

ಮುಂಗಾರು ಹುಡುಗಿ ಸೂಳೆ ಸಿದ್ದು !


ಕರಾವಳಿಯಲ್ಲಿ ನಾಟಕ, ಯಕ್ಷಗಾನ ರೂಪದಲ್ಲಿ ಬಂದ ‘ಬೀರೆ ದೇವು ಪೂಂಜೆ’ ಈಗ ಸಿನಿಮಾ ಆಗಲಿದೆ. ಅದರಲ್ಲೂ ಮುಂಗಾರು ಹುಡುಗಿ ಪೂಜಾ ನಟಿಸುತ್ತಿದ್ದಾರೆ. ಸಕ್ಸಸ್ ಚಿತ್ರಗಳಿಲ್ಲದೇ ಒದ್ದಾಟ ಮಾಡುತ್ತಿರುವ ಪೂಜಾ ಸಕ್ಸಸ್‌ಗಾಗಿ ಡಿಫರೆಂಟ್ ಪಾತ್ರ ಮಾಡುತ್ತಿದ್ದಾರೆ.

ಸೂಳೆ ಸಿದ್ದು !
ಇದು ಮುಂಗಾರು ಹುಡುಗಿ ಪೂಜಾ ಲೇಟೆಸ್ಟ್ ಪಾತ್ರ ! ‘ಚಾಮೇಲಿ’ಯಲ್ಲಿ ಕರೀನಾ ‘ಚಾಂದಿನಿ ಬಾರ್’ನಲ್ಲಿ ಟಬು,‘ರಕ್ತ ಕಣ್ಣೀರು’ನಲ್ಲಿ ರಮ್ಯಕೃಷ್ಣ ಈಗ ಅದೇ ಸಾಲಿನಲ್ಲಿ ಮುಂಗಾರು ಹುಡುಗಿ ಬಂದು ನಿಂತಿದ್ದಾಳೆ. ‘ಮುಂಗಾರು ಮಳೆ ’ ಹಿಟ್ ಚಿತ್ರದ ನಂತರ ಪೂಜಾ ಹೆಸರು ಸ್ಯಾಂಡಲ್‌ವುಡ್‌ನಲ್ಲಿ ಹೇಳಿಕೊಳ್ಳುವಂತೆ ಓಡಿಲ್ಲ ಎನ್ನುವುದು ಮುಂಗಾರು ಹುಡುಗಿಗೆ ಮನದಟ್ಟಗಿದೆ.
ಸಿಕ್ಕಿ ಸಿಕ್ಕಿದ ಚಿತ್ರಗಳನ್ನು ಒಪ್ಪಿಕೊಂಡು ಬೇಡಿಕೆ ಕಳೆದುಕೊಂಡು ಮೂಲೆ ಸೇರುವ ಹುಡುಗಿ ಈಗ ‘ಬೀರೆ ದೇವು ಪೂಂಜೆ’ಯಲ್ಲಿ ‘ಸೂಳೆ ಸಿದ್ದು’ ಪಾತ್ರದಲ್ಲಿ ವೀಳ್ಯದೆಲೆ ಜಗಿಯಲಿದ್ದಾರೆ. ‘ಕೋಟಿ ಚೆನ್ನಯ’ ಐತಿಹಾಸಿಕ ಚಿತ್ರ ನಿರ್ಮಿಸಿದ ಆರ್.ಧನರಾಜ್ ಈ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ. ಸರಿಸುಮಾರು ೪೫೦ ವರ್ಷಗಳ ಹಿಂದಿನ ಕತೆಯನ್ನು ಅಗೆದು ಬಗೆದು ಚಿತ್ರ ಮಾಡುತ್ತಿದ್ದಾರೆ. ಕರಾವಳಿ ಬಂಟ ಸಮಾಜದ ವೀರ ಪುರುಷ ‘ದೇವು ಪೂಂಜ’ನ ಕತೆ ತುಳುನಾಡಿನಲ್ಲಿ ಬಹಳ ಫೇಮಸ್.
ದಂಡನಾಯಕನಾಗಿರುವ ದೇವು ಪೂಂಜನಿಗೆ ಕರಾವಳಿ ಜುಮಾದಿ ದೈವದ ಬೆಂಬಲ ಇರುತ್ತದೆ. ಯಾವ ಯುದ್ಧದಲ್ಲೂ ದೇವು ಪೂಂಜನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ತಿಳಿದ ನಂದಾವರ ಅರಸ ಯುಕ್ತಿಯಿಂದ ಗೆಲ್ಲುವ ಯೋಜನೆಯೊಂದಕ್ಕೆ ಸಿದ್ದನಾಗುತ್ತಾನೆ. ನಂದಾವರ ಅರಸನ ನೃತ್ಯಗಾರ್ತಿ(ವೇಶ್ಯೆ) ‘ಸೂಳೆ ಸಿದ್ದು’ವನ್ನು ಈ ಕೆಲಸಕ್ಕೆ ನಿಯೋಜಿಸಿ ಬಿಡುತ್ತಾನೆ. ದೇವು ಪೂಂಜ ಹಾಗೂ ಸೂಳೆ ಸಿದ್ದುವಿನ ಚೆನ್ನೆಮಣೆಯಾಟ...ಸೋಲು- ಗೆಲುವು, ಸಾವು ಹೀಗೆ ಪೂಜಾ ಗಾಂ ಇಡೀ ಚಿತ್ರ ಕತೆಯ ಸೆಂಟರ್ ಪಾಯಿಂಟ್‌ನಲ್ಲಿ ಮಿಂಚುತ್ತಾರೆ.
ಸೆ.೨೨ರಿಂದ ಚಿತ್ರಕ್ಕೆ ಕರಾವಳಿಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ತುಳು ಸೇರಿದಂತೆ ಕನ್ನಡ ಭಾಷೆಯಲ್ಲೂ ‘ಬೀರೆ ದೇವು ಪೂಂಜೆ ’ ತೆರೆ ಕಾಣುವ ಸಾಧ್ಯತೆ ಇದೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಸುಮಧುರ ಸಂಗೀತವಿದೆ. ಉಳಿದಂತೆ ಆರ್. ಸಿದ್ಧಾರ್ಥ್ ‘ದೇವು ಪೂಂಜ’ನ ಪಾತ್ರಕ್ಕೆ ಇಳಿದಿದ್ದಾರೆ. ನಟಿ ವಿನಯಪ್ರಕಾಶ್ ಹಾಗೂ ತುಳು ರಂಗಭೂಮಿಯ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತುಳುವಿನಲ್ಲಿ ದೊಡ್ಡ ಬಜೆಟ್ ಹಾಗೂ ಐತಿಹಾಸಿಕ ಚಿತ್ರ ಎನ್ನಲಾಗುತ್ತಿದೆ. ಅದರಲ್ಲೂ ಕರಾವಳಿಯಲ್ಲಿ ನಾಟಕ, ಯಕ್ಷಗಾನ ರೂಪದಲ್ಲಿ ಬಂದ ‘ಬೀರೆ ದೇವು ಪೂಂಜೆ’ ಸೂಪರ್ ಹಿಟ್ ಆಗಿತ್ತು. ಯಕ್ಷಗಾನದ ಕೋಲ್ಯಾರು ರಾಮಚಂದ್ರ ರಾವ್ ‘ಸೂಳೆ ಸಿದ್ದು’ವಿನ ಪಾತ್ರವನ್ನು ಹೈ ಕ್ಲಾಸ್ ಮಾದರಿಯಲ್ಲಿ ಮಾಡಿ ಪ್ರೇಕ್ಷಕರ ಮನಸು ಗೆಲ್ಲುತ್ತಿದ್ದರು. ಆದರೆ ಪೂಜಾಳಿಗೆ ಈ ಪಾತ್ರ ಎಷ್ಟರ ಮಟ್ಟಿಗೆ ಸಕ್ಸಸ್ ತಂದು ಕೊಡುತ್ತದೆ ಎನ್ನೋದು ಈಗ ಉಳಿದಿರುವ ಡಾಲರ್ ಪ್ರಶ್ನೆ. ಟೋಟಲಿ ಚಿತ್ರ ಬಿಡುಗಡೆ ವರೆಗೂ ಕಾದು ನೋಡಲೇ ಬೇಕು.

No comments:

Post a Comment