Tuesday, March 22, 2011

ಬರುತ್ತಾಳೆ ‘ಕಂಚಿಲ್ದ ಬಾಲೆ’


ಕೋಸ್ಟಲ್‌ವುಡ್‌ಗೆ ಈಗ ೪೦ರ ಹರೆಯ. ೪೦ರ ಏಜ್‌ನಲ್ಲಿ ‘ಕಂಚಿಲ್ದಬಾಲೆ ’ ೪೦ನೇ ಚಿತ್ರವಾಗಿ ಮಾ.೨೫ರಂದು ಕರಾವಳಿ ಭಾಗದ ಸಿನಿಮಾ ಥಿಯೇಟರ್‌ಗಳಿಗೆ ಲಗ್ಗೆ ಇಡಲಿದೆ. ನಾನಾ ಕಾರಣಗಳಿಂದ ಚಿತ್ರ ಈಗಾಗಲೇ ಕರಾವಳಿ ತುಂಬಾ ಸುದ್ದಿಯಾಗಿದೆ.

ಅಂತೂ ಇಂತೂ ಕೋಸ್ಟಲ್‌ವುಡ್‌ಗೆ ೪೦ ವರ್ಷ ಆಗಿಯೇ ಹೋಯಿತು ಮಾರಾಯ್ರೆ. ಪುಟ್ಟ ಮಗುವಿನಂತೆ ಕಣ್ಣು ಮಿಟಿಕಿಸುತ್ತಿದ್ದ ತುಳು ಸಿನಿಮಾ ಇಂಡಸ್ಟ್ರಿ ಈಗ ೪೦ ವರ್ಷ ತುಂಬಿದೆ ಎಂದಾಗ ಹಿಪ್‌ಹಿಪ್ ಹುರ್ರೆಂ ಎನ್ನಲೇಬೇಕು. ಅಂದಿನ ಪರಿಸ್ಥಿತಿಯ ಮೇಲೊಂದು ತಿರುಗು ದೃಷ್ಟಿ ಬೀರಿ ನೋಡಿ. ‘ತುಳು ಸಿನಿಮಾ ನಾ... ’ಎಂದುಕೊಂಡು ಮೂಗು ಮುರಿಯುವವರ ಸಂಖ್ಯೆನೇ ಜಾಸ್ತಿ ಇತ್ತು ಬಿಡಿ. ಆದರೆ ಈಗ ತುಳು ಸಿನಿಮಾದ ಬಗ್ಗೆಯೂ ಜನರಲ್ಲಿ ಸ್ವಲ್ಪ ಮಟ್ಟಿನ ಆಸಕ್ತಿ ಮೂಡಿದೆ ಜತೆಗೆ ತುಳು ಚಿತ್ರ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ವರ್ಷ ಪ್ಲಸ್ ಹಾಗೂ ಈ ವರ್ಷ ಎರಡನ್ನು ತುಲನೆ ಮಾಡಿ. ನಾಲ್ಕು ತುಳು ಸಿನಿಮಾಗಳು ಸೆಟ್ಟೇರಿದೆ. ಅದರಲ್ಲಿ ಎರಡು ಚಿತ್ರಗಳು ಸಧ್ಯಕ್ಕೆ ತುಳು ಪ್ರೇಕ್ಷಕರ ಮುಂದೆ ಬಂದು ನಿಲ್ಲಲಿದೆ. ಅದರಲ್ಲಿ ಒಂದು ‘ಕಂಚಿಲ್ದ ಬಾಲೆ’.
ಕರೆಕ್ಟ್ ಆಗಿ ಹೇಳಿಬಿಡುವುದಾದರೆ ಈ ಚಿತ್ರ ಕೋಸ್ಟಲ್ ವುಡ್‌ನ ೪೦ನೇ ಚಿತ್ರ. ನಾನಾ ಕಾರಣಗಳಿಂದ ಚಿತ್ರ ಆರಂಭವಾಗುವ ಮೊದಲೇ ಬಹಳ ಸುದ್ದಿ ಮಾಡಿತ್ತು. ಚಿತ್ರದ ನಿರ್ದೇಶಕರು ಬದಲಾವಣೆಯಾಗಿದ್ದು, ನಿರ್ಮಾಪಕ ರಘುನಾಥ ರೈ ಚಿತ್ರವನ್ನು ಡೈರೆಕ್ಟ್ ಮಾಡಿ ನಿರ್ದೇಶಕರ ವಲಯವನ್ನೇ ಬೆಚ್ಚಿ ಬೀಳಿಸಿದ್ದು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪ್ರಮುಖ ಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದು, ಜಯಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ಮೊದಲ ಬಾರಿಗೆ ಬಣ್ಣ ಹಾಕಿದ್ದು ಹೀಗೆ ನಾನಾ ಕಾರಣಗಳಿಗೆ ಚಿತ್ರ ಕರಾವಳಿ ಭಾಗದಲ್ಲಿ ಸುದ್ದಿ ಮಾಡಿದೆ.
ಕಂಚಿಲ್ದ ಬಾಲೆ:
ದಕ್ಷಿಣ ಕನ್ನಡದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಹಲವು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಎತ್ತರ ಸ್ಥಾನದಲ್ಲಿ ನಿಲ್ಲುವುದು ಭೂತರಾಧನೆ. ಇಲ್ಲಿನ ಪ್ರತಿ ಕುಟುಂಬಗಳು ಭೂತರಾಧನೆಗೆ ಹೆಚ್ಚಿನ ಮಹತ್ವ ಕೊಡುತ್ತವೆ. ಜತೆಗೆ ತಮ್ಮ ಎಲ್ಲಾ ಕಷ್ಟ ಸುಖಗಳಿಗೆ ತಾವು ನಂಬಿದ ದೈವವೇ ಕಾರಣ ಎಂದು ನಂಬುತ್ತವೆ. ಅದಕ್ಕಾಗಿಯೇ ವರ್ಷಂಪ್ರತಿ ‘ಭೂತಕೋಲ’ ಎಂಬ ಹೆಸರಿನಲ್ಲಿ ತಾವು ನಂಬಿದ ದೈವಕ್ಕೆ ಕಾಣಿಕೆ, ಪೂಜೆಯನ್ನು ನೀಡುವುದು ಇಲ್ಲಿನ ರೂಢಿ. ಈ ಭೂತರಾಧನೆಯ ಕುರಿತು ಈಗಾಗಲೇ ಹಲವು ಪುಸ್ತಕಗಳು ಬಂದಿವೆ. ಈಗ ಇದೇ ಕತೆಯನ್ನು ಇಟ್ಟುಕೊಂಡು ‘ಕಂಚಿಲ್ದ ಬಾಲೆ ’ ರೆಡಿಯಾಗಿದೆ. ಕುಂಬ್ರ ರಘುನಾಥ ರೈ ೧೪ ವರ್ಷಗಳ ಹಿಂದೆ ‘ಮಾರಿಬಲೆ’ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರ ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಸಾಮಾಜಿಕ ಕಳಕಳಿಯ ಚಿತ್ರಪ್ರಶಸ್ತಿಯನ್ನು ಪಡೆದಿತ್ತು. ಜತೆಗೆ ಕರಾವಳಿಯಲ್ಲಿ ದೊಡ್ಡ ಯಶಸ್ಸನ್ನೂ ಕಂಡಿತ್ತು. ಈಗ ಭೂತರಾಧನೆಯನ್ನು ಕೇಂದ್ರವನ್ನಾಗಿಟ್ಟುಕೊಂಡು ಈ ಚಿತ್ರ ಮಾಡಿದ್ದಾರೆ.
ಭೂತರಾಧನೆಯನ್ನು ಅನುಸರಿಸಿಕೊಂಡು ಬರುತ್ತಿರುವ ಒಂದು ಮನೆತನದಲ್ಲಿ ಎರಡು ತಲೆಮಾರುಗಳ ವ್ಯಕ್ತಿಗಳ ನಡುವೆ ನಡೆಯುವ ಸಂಘರ್ಷ, ತಣ್ಣಗಿನ ಹೋರಾಟ, ಈ ನಡುವೆ ಕುಟುಂಬದ ಸಮಸ್ತ ಆಸ್ತಿ ಹಕ್ಕಿಗೆ ಭಾಜನಳಾಗುವಂಥ ಒಂದು ಚಿಕ್ಕಪ್ರಾಯದ ಹೆಣ್ಣು ಮಗಳು ತನ್ನ ತಂದೆ, ತಾಯಂದಿರೊಂದಿಗೆ ಕ್ಯಾಲಿಪೋರ್ನಿಯಾದಿಂದ ಮನೆಯ ಭೂತ ಕೋಲಕ್ಕೆ ಊರಿಗೆ ಆಗಮಿಸಿ ಹಿಂದಿರುಗುವ ಮಧ್ಯೆ ನಡೆಯುವ ಘಟನಾವಳಿಗಳೇ ‘ಕಂಚಿಲ್ದ ಬಾಲೆ’ಯ ಕಥಾಹಂದರ. ಭೂತರಾಧನೆ ಒಂದು ನಂಬಿಕೆಯೋ, ಅಂಧಶ್ರದ್ಧೆಯೋ ಎಂದು ತೊಳಲಾಡುತ್ತಿರುವವರ ಮನಸ್ಥಿತಿಯನ್ನು ವಿಶ್ಲೇಷಿಸುವ ಪ್ರಯತ್ನ ಕೂಡ ಈ ಚಿತ್ರದ ಮೂಲಕ ನಡೆದಿದೆ ಎನ್ನುವುದು ನಿರ್ದೇಶಕ ಕಮ್ ನಿರ್ಮಾಪಕ ಕುಂಬ್ರ ರಘುನಾಥ ರೈ ಅವರ ಅಭಿಪ್ರಾಯ. ‘ನಾವಿಲ್ಲಿ ತುಲನಾತ್ಮಕವಾಗಿ ವಿಶ್ಲೇಷಣೆ ಮಾಡುತ್ತೇವೆಯೇ ಹೊರತು ಜನರ ಶ್ರದ್ಧೆ, ನಂಬಿಕೆಗೆ ನೋವು ಮಾಡುವುದಿಲ್ಲ. ಇದು ಬರೀ ಚಿತ್ರವಾಗಿ ಉಳಿಯದೇ ಒಂದು ಮಾಹಿತಿ ಕೋಶವಾಗಿಯೂ ಅನೇಕರಿಗೆ ಸಹಾಯವಾಗಲಿದೆ ಎಂಬ ಅಭಿಪ್ರಾಯವನ್ನೂ ರಘುನಾಥ್ ಹೊರಹಾಕುತ್ತಾರೆ.
ಕರಾವಳಿಯ ಸುತ್ತಮುತ್ತವಿರುವ ಹಳೆಯ ಗುತ್ತಿನ ಮನೆಯಲ್ಲಿ ಚಿತ್ರೀಕರಣ ನಡೆದಿದೆ. ವಂಡಾರು ಗದ್ದೆಯಲ್ಲಿ ಕಂಬಳ ಓಟ ನಡೆಸಿದ್ದಾರೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಚರಿತ್ರಾ, ಸುರ್ ರಾಜ್ ಕಟೀಲ್, ಮಾನಸಿ, ರವಿ ಬೈಂದೂರು ಸೇರಿದಂತೆ ಸ್ಥಳೀಯ ಕಲಾವಿದರು ನಟಿಸುತ್ತಿದ್ದಾರೆ. ಚಿತ್ರಕ್ಕೆ ರೇಣು ಸಂಗೀತ, ರವಿ ಸುರತ್ಕಲ್ ಅವರ ಛಾಯಾಗ್ರಹಣವಿದೆ. ‘ಮಾ.೨೫ ರಂದು ಕರಾವಳಿಯ ಪ್ರಮುಖ ಸಿನಿಮಾ ಥಿಯೇಟರ್‌ಗಳಿಗೆ ‘ಕಂಚಿಲ್ದ ಬಾಲೆ ’ ಬರುತ್ತಿದ್ದಾಳೆ. ಅವಳು ನಿಮ್ಮವಳು, ತುಳು ಪ್ರೇಕ್ಷಕರು ಕೈ ಹಿಡಿದು ಮುಂದೆ ನಡೆಸಲಿ’ ಎನ್ನುತ್ತಾರೆ ಕುಂಬ್ರ ರಘುನಾಥ ರೈ. ಅಂದಹಾಗೆ ಚಿತ್ರದ ನಾಲ್ಕಾರು ಪ್ರೀಮಿಯರ್ ಶೋಗಳು ಈಗಾಗಲೇ ರಾಜ್ಯದ ಕೆಲವು ಭಾಗಗಳಲ್ಲಿ ನಡೆದಿದೆ. ಚಿತ್ರ ನೋಡಿದವರು ಚಿತ್ರ ಸ್ಯಾಂಡಲ್‌ವುಡ್‌ಕ್ಕಿಂತ ಚೆನ್ನಾಗಿ ಬಂದಿದೆ ಎಂದಿದ್ದಾರಂತೆ. ಹಾಗಾದರೆ ಸ್ಯಾಂಡಲ್‌ವುಡ್ ಚಿತ್ರ ನಿರ್ದೇಶಕರಿಗಂತೂ ಕರೆಗಂಟೆ ಕೊಟ್ಟಾಗಾಯಿತು.

......
ಮುತ್ತಪ್ಪ ರೈ, ಶಕ್ಕು ಅಕ್ಕ
ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಮುತ್ತಪ್ಪ ರೈ ನಟಿಸುತ್ತಿರುವುದು. ಈ ಹಿಂದೆ ಹಲವು ಆಫರ್‌ಗಳು ಬಂದಿದ್ದರೂ ಮುತ್ತಪ್ಪ ರೈ ಅವ್ಯಾವುದನ್ನು ಒಪ್ಪಿಕೊಳ್ಳಲಿಲ್ಲ. ಈಗ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ರೈ ಈ ಚಿತ್ರದಲ್ಲಿ ಒಂದೆರಡು ದೃಶ್ಯಗಳಷ್ಟೇ ಬಂದು ಹೋಗುತ್ತಾರೆ. ಜತೆಗೆ ಅವರ ಬೆಂಗಳೂರಿನ ಬಿಡದಿಯಲ್ಲಿರುವ ಮನೆಯ ದೃಶ್ಯಗಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಈ ಚಿತ್ರದ ಮೂಲಕವಾದರೂ ತುಳು ಪ್ರೇಕ್ಷಕರು ಮುತ್ತಪ್ಪ ರೈ ಅವರ ಮನೆಯ ದರ್ಶನ ಭಾಗ್ಯ ಪಡೆದುಕೊಳ್ಳಬಹುದು. ಅಂದಹಾಗೆ ರೈ ತುಳು ಚಿತ್ರವನ್ನೇ ಒಪ್ಪಿಕೊಳ್ಳಲು ಕಾರಣವೇನು? ಇದಕ್ಕೆ ರೈ ಹೇಳುವುದಿಷ್ಟು; ನಾನು ಕ್ಯಾಮರಾ ಎದುರಿಸಿದರೆ ವೊದಲು ತುಳು ಚಿತ್ರದಲ್ಲೇ ಅಂದುಕೊಂಡಿದ್ದೆ. ಅದು ನನ್ನ ಮಾತೃಭಾಷೆ ಕೂಡ. ‘ಕಂಚಿಲ್ದ ಬಾಲೆ’ಯ ಕಥೆ ನನಗೆ ಇಷ್ಟವಾಯಿತು. ದೈವ-ದೇವರ ಬಗೆಗಿನ ಚಿತ್ರ. ಒಂದರ್ಥದಲ್ಲಿ ಇದು ಮೌಲ್ಯವನ್ನು ಸಾರುವ ಚಿತ್ರವೆಂದರೂ ತಪ್ಪಲ್ಲ. ಒಂದೆರಡು ಡೈಲಾಗ್‌ಗಳೂ ನನ್ನ ಪಾಲಿಗೆ ಇವೆ ಎಂದಿದ್ದಾರೆ. ಉಳಿದಂತೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ದೈವದ ಮೇಲೆ ಅಪಾರ ನಂಬಿಕೆ ಹೊತ್ತುಕೊಂಡಿರುವ ಅಜ್ಜಿಯ ಪಾತ್ರ ಶಕು ಅಕ್ಕರಿಗೆ ಬಂದಿದೆ.

No comments:

Post a Comment