Friday, March 18, 2011

ಶಿವಪ್ಪ ಕಾಯೋ ತಂದೆ.....?


ಸ್ಯಾಂಡಲ್‌ವುಡ್ ಹೀರೋ ವಸಂತ್‌ಕುಮಾರ್ ನಾನು‘ಕೆಳದಿಯ ಶಿವಪ್ಪ ನಾಯಕ ’ನಾಗಿ ಬರುತ್ತಾನೆ ಎಂದು ಉದ್ದ ಕೂದಲು ಬಿಟ್ಟು ಮಂಗಳೂರಿನ ಮಾವನ ಮನೆಯಲ್ಲಿ ಕೂತಿದ್ದರು. ಕೈಯಲ್ಲಿ ಚಿತ್ರಗಳಿಲ್ಲದೇ ರಾಜಕೀಯದಲ್ಲೂ ನೆಲೆಯಿಲ್ಲದ ವಸಂತರ ಬದುಕಿನ ಹುಡುಕಾಟದಲ್ಲಿ ......


ಅದು ವಸಂತ್ ಕುಮಾರ್ ಅಲ್ಲ ಮಾರಾಯ್ರೆ ಅಂತಾ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿಯಲ್ಲಿ ಹೂ ಮಾರುತ್ತಿದ್ದ ಪೂವಪ್ಪಣ್ಣ ಲವಲವಿಕೆಯ ತಂಡಕ್ಕೆ ಹೇಳಿಬಿಟ್ರು. ಸ್ಯಾಂಡಲ್‌ವುಡ್ ನಟ ವಸಂತ್ ಕುಮಾರ್ ಪೂವಪ್ಪಣ್ಣರಿಗೆ ಬಹಳ ಹತ್ತಿರದ ಪರಿಚಯ. ಮಂಗಳಾದೇವಿ ದೇವಸ್ಥಾನದ ಪಕ್ಕದ ಓಣಿಯಲ್ಲಿಯೇ ವಸಂತ್‌ಕುಮಾರ್‌ಗೆ ಹೆಣ್ಣು ಕೊಟ್ಟು ಮಾವನ ಮನೆ ಇರೋದು.. ಈ ಓಣಿಯ ಮುಂಭಾಗದಲ್ಲಿ ಪೂವಪ್ಪಣ್ಣ ಹೂವಿನ ಅಂಗಡಿ ಹಾಕಿರೋದು. ವಸಂತ್‌ಕುಮಾರ್ ಯಾರ ಕೈಯಿಂದಲೂ ತಪ್ಪಿಸಿಕೊಳ್ಳಬಹುದು ಆದರೆ ಪೂವಪ್ಪಣ್ಣ ಕೈಯಿಂದ ‘ನೋ ಚಾನ್ಸ್ ’ಎಂದು ಮಲ್ಲಿಗೆ ಹೂವಿನ ಚೆಂಡಿಗೆ ಕೈ ಹಾಕಿ ನಕ್ಕು ಬಿಟ್ರು.
ಬಹಳ ವರ್ಷಗಳಿಂದ ಪೂವಪ್ಪಣ್ಣ ಈ ಹೂವಿನ ವ್ಯಾಪಾರದಲ್ಲಿ ಸಖತ್ ಖುಶ್ ಆಗಿದ್ದಾರೆ. ವಸಂತ್ ಕುಮಾರ್ ಮಂಗಳಾದೇವಿಗೆ ಬಂದಾಗ ಪೂವಪ್ಪಣ್ಣರಿಗೆ ಕೈ ಎತ್ತಿ ಸಲಾಂ ಹಾಕಿದ್ರೆ ಸಾಕು. ಪೂವಪ್ಪಣ್ಣ ಮೊಗ ದಾಳಿಂಬೆ ಹಣ್ಣಿನಂತೆ ಆಗಿ ಹೋಗುತ್ತಿತ್ತು. ಆದರೆ ಈ ಬಾರಿ ವಸಂತ್ ಕುಮಾರ್ ಕೈ ಎತ್ತಿದರೂ ಪೂವಪ್ಪಣ್ಣ ಕೈ ಎತ್ತಿಲ್ಲ.. ನಿಜಕ್ಕೂ ಪೂವಪ್ಪಣ್ಣ ಗೊಂದಲದ ಗೂಡಾಗಿದ್ದರು. ವಸಂತ್ ಕುಮಾರ್ ಬಹಳಷ್ಟು ಬದಲಾಗಿದ್ದರು. ಜಡೆ ಕಟ್ಟಿ ಬೀಡುವಂತಹ ಉದ್ದುದ್ದ ಕೂದಲು, ವಿಚಿತ್ರ ವೇಷ- ಭೂಷಣ ಎಲ್ಲವೂ ವಸಂತ್ ಕುಮಾರ್‌ರ ಪರಿಚಯ ಮರೆಮಾಸುತ್ತಿತ್ತು. ಅಂದಹಾಗೆ ವಸಂತ್ ಕುಮಾರ್ ಎಂದರೆ ಯಾರು ಅಂದುಕೊಂಡಿದ್ದೀರಾ...
೮೦ರ ದಶಕದಲ್ಲಿ ‘ವಿಜಯೋತ್ಸವ ’ದ ಮೂಲಕ ಸ್ಯಾಂಡಲ್‌ವುಡ್ ಸಿನಿಮಾ ಜಗತ್ತಿಗೆ ಬಂದವರು. ಹಾಲಿವುಡ್‌ನ ‘ಬ್ಲೂ ಕ್ರಿಸ್ಟಲ್ ’ ಸೇರಿದಂತೆ ಸ್ಯಾಂಡಲ್‌ವುಡ್‌ನ ‘ಶರವೇಗದ ಸರದಾರ’, ‘ನಿರ್ಬಂಧ’, ‘ತೇಜ’, ‘ಕ್ಷೀರಸಾಗರ’, ‘ಅಂಗೈಯಲ್ಲಿ ಅಪ್ಸರೆ’, ‘ಚೈತ್ರದ ಚಿಗುರು’ ‘ನವತಾರೆ’ ಹೀಗೆ ಹತ್ತಾರು ಚಿತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬಂದು ನಿಂತರೂ ಕೂಡ ಅವರನ್ನು ಕರೆಯುವುದು ‘ಕುಮಾರ್ ಬಂಗಾರಪ್ಪ ’ಎಂದು... ವಸಂತ್‌ಕುಮಾರ್ ಎನ್ನುವುದು ಕುಮಾರ್ ಬಂಗಾರಪ್ಪರ ಮೂಲ ನಾಮಧೇಯ. ಆದರೆ ವಿಜಯೋತ್ಸವ ಯಾವಾಗ ಸೆಟ್ಟೇರಿ ಕೂತಿತೋ ಅದೇ ಟೈಮ್‌ನಲ್ಲಿ ತಂದೆ ಬಂಗಾರಪ್ಪ ರಾಜ್ಯದ ಮುಖಮಂತ್ರಿಯಾಗಿ ಕಂಗೋಳಿಸಿದರು. ವಸಂತ್ ಎನ್ನುವ ಹೆಸರು ಕಿತ್ತಾಕಿ ಅದರ ಜಾಗದಲ್ಲಿ ಬಂಗಾರಪ್ಪ ಬಂದು ಹೋದ್ರು.
ಅಲ್ಲಿಂದ ‘ಕುಮಾರ್ ಬಂಗಾರಪ್ಪ ’ಎಂದೇ ಎಲ್ಲರಿಗೂ ಗೊತ್ತಿರುವ ಸತ್ಯ. ಅರ್ಧ ಸಿನಿಮಾ ಆಂಡ್ ಅರ್ಧ ರಾಜಕಾರಣ ಎರಡರಲ್ಲೂ ಕುಮಾರ್ ಮಾಡಿದ್ದು ಏನೂ ಇಲ್ಲ ಬಿಡಿ. ಶಿವಮೊಗ್ಗದ ‘ಸೊರಬ’ ಬಂಗಾರಪ್ಪರ ಮನೆಯಂತಿತ್ತು. ಅದೇ ಕ್ಷೇತ್ರದಿಂದ ಗೆದ್ದು ಬರುತ್ತಿದ್ದ ಕುಮಾರ್ ಬಂಗಾರಪ್ಪ ಈ ಬಾರಿ ಸಂಪೂರ್ಣವಾಗಿ ರಾಜಕೀಯ ರಂಗದಿಂದ ನಿವೃತ್ತಿ ಘೋಷಣೆ ಮಾಡುವಂತಹ ಪರಿಸ್ಥಿತಿ ಎಲ್ಲರಿಗೂ ಗೊತ್ತಿರೋದು ಬಿಡಿ. ಸಿನ್ಮಾಕ್ಕೂ ಬಂದರೆ ‘ಅಶ್ವಮೇಧ’ ಚಿತ್ರ ಬಿಟ್ಟರೆ ಬೇರೆ ಯಾವ ಚಿತ್ರಗಳು ಕುಮಾರ್ ಬಂಗಾರಪ್ಪರನ್ನು ಕನ್ನಡದ ಪ್ರೇಕ್ಷಕರು ಸರಿಯಾಗಿ ಗುರುತಿಸಿಲ್ಲ. ಹತ್ತಾರು ಸಿನ್ಮಾಗಳು ಬಂದರೂ ಪ್ರೇಕ್ಷಕರಿಗೆ ಕುಮಾರ್ ಬಂಗಾರಪ್ಪ ಬರೀ ಬಂಗಾರಪ್ಪ ಅವರ ಪುತ್ರ ಎಂದೇ ಗೊತ್ತು ಬಿಡಿ.
ಸಿನ್ಮಾ ಮಾಡುವ ಹೊಸ ಹುಚ್ಚು :
ಮಂಗಳೂರಿನಲ್ಲಿ ಕುಟುಂಬಿಕರ ಮದ್ವೆಗಾಗಿ ಬಂದಿದ್ದ ಕುಮಾರ್ ಬಂಗಾರಪ್ಪ ಲವಲವಿಕೆಯ ತಂಡಕ್ಕೆ ಸಿಕ್ಕಿ ಬಿದ್ದಿದ್ದರು. ಉದ್ದ ಕೂದಲಿನ ರಹಸ್ಯವನ್ನು ಭೇದಿಸಿದಾಗ ತಮ್ಮ ‘ರೇಣುಕಾಂಬ ಬ್ಯಾನರ್ ಅಡಿಯಲ್ಲಿ ಐತಿಹಾಸಿಕ ಚಿತ್ರವೊಂದನ್ನು ತಯಾರು ಮಾಡುತ್ತಿದ್ದೇನೆ. ಅದಕ್ಕಾಗಿ ಉದ್ದ ಕೂದಲು ಬಿಟ್ಟಿದ್ದೇನೆ. ‘ರಕ್ತ ಕಣ್ಣೀರು’ ನಂತರ ನಟಿಸುವ ಚಿತ್ರ ಇದಾಗಿದೆ ಎಂದು ಮಾತು ಆರಂಭ ಮಾಡಿದರು.
ನಿರ್ದೇಶಕ ನಾಗಭರಣರ ಜತೆಯಲ್ಲಿ ಐತಿಹಾಸಿಕ ಚಿತ್ರ ‘ಕೆಳದಿಯ ಶಿವಪ್ಪ ನಾಯಕ’ ಚಿತ್ರ ನಿರ್ಮಾಣ ಮಾಡಬೇಕು ಎಂದುಕೊಂಡು ಕಳೆದ ಎರಡು ವರ್ಷಗಳಿಂದ ಕುಮಾರ್ ಬಂಗಾರಪ್ಪ ಉದ್ದ ಕೂದಲು ಬಿಟ್ಟುಕೊಂಡು ತಿರುಗಾಡುತ್ತಿದ್ದಾರೆ. ಇತ್ತ ಕಡೆ ನಿರ್ದೇಶಕ ನಾಗಭರಣ ಟಿವಿ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಕುಮಾರ್ ಬಂಗಾರಪ್ಪ ಮಂಗಳೂರು ಪ್ಲಸ್ ಸೊರಬ ಎಂದು ಮಾಧ್ಯಮಗಳ ಕಣ್ಣು ತಪ್ಪಿಸಿಕೊಂಡು ತಿರುಗಾಡ ಪ್ರದರ್ಶನ ಆರಂಭ ಮಾಡಿದ್ದಾರೆ.
ಹೊಸ ಚಿತ್ರದ ಕತೆ ಏನ್ರಿ ಎಂದರೆ.. ಐತಿಹಾಸಿಕ ಚಿತ್ರ ಇನ್ನೂ ಒಂದೆರಡು ವರ್ಷ ಕಾಯಬೇಕಾಗಬಹುದು. ಈಗಾಗಲೇ ಶೂಟಿಂಗ್ ಸ್ಪಾಟ್‌ಗಳ ಬೇಟೆ ಆರಂಭ ಮಾಡಿಕೊಂಡಿದ್ದೇವೆ ಎಂದೇಳಿ ಆಗಸ ತೋರಿಸುತ್ತಾರೆ. ಚಿತ್ರ ನಿರ್ಮಾಣಕ್ಕೆ ಇಳಿದಿರುವ ಈ ರೇಣುಕಾಂಬ ಸಂಸ್ಥೆ, ಜತೆಯಲ್ಲಿ ಎಡಿಟಿಂಗ್ ಹೌಸ್, ಥಿಯೇಟರ್, ಕ್ಯಾಮಾರಾ ಯೂನಿಟ್ ಇಷ್ಟು ಬಿಟ್ಟರೆ ಕುಮಾರ್ ಬಂಗಾರಪ್ಪ ಆಸ್ತಿತ್ವವನ್ನು ಹೇಳುವ ಪುರಾವೆಗಳು ಈಗ ಯಾವುದು ಸಿಗುತ್ತಿಲ್ಲ. ಈಗಾಗಲೇ ಶಿವಮೊಗ್ಗದ ಪೇಟೆಯಲ್ಲಿ ಕುಮಾರ್ ಬಂಗಾರಪ್ಪ ಸೊರಬದಿಂದ ಔಟ್.. ಸಿನ್ಮಾ ಇಂಡಸ್ಟ್ರಿಯಿಂದಲೂ ಔಟ್ ಎಂದು ಹೇಳಿಕೊಂಡು ತಿರುಗಾಡುವವರು ಜಾಸ್ತಿಯಾಗಿದ್ದಾರೆ.
ಕಾಲ್ ಮಾಡಿ ಮೊಬೈಲ್ ಎತ್ತಲ್ಲ ಬಿಡಿ:
ಸಿನ್ಮಾ ಇಂಡಸ್ಟ್ರಿಯಲ್ಲಿ ‘ಹೆಚ್ಚುಮಾತುಗಾರ ’ಎಂದು ಕನ್ನಡದ ಸಿನಿಮಾ ಪತ್ರಕರ್ತರಿಂದ ಕರೆಸಿಕೊಂಡ ಕುಮಾರ್ ಬಂಗಾರಪ್ಪ ಅವರ ಬಳಿಯಲ್ಲಿ ಒಂದು ಮೊಬೈಲ್ ಇದೆ. ಅದರಲ್ಲಿ ಏನಪ್ಪಾ ವಿಶೇಷ ಅಂದ್ರೆ ಯಾರು ಬೇಕಾದರೂ ಈ ಸಂಖ್ಯೆಗೆ ಕಾಲ್ ಮಾಡಬಹುದು. ಆದರೆ ಹತ್ತು, ಹದಿನೈದು ಬಾರಿ ಮಿಸ್ ಕಾಲ್ ಕೊಟ್ಟ ಬಳಿಕ ರಿಸೀವ್ ಮಾಡುವಷ್ಟು ಗಟ್ಟಿ ಮನುಷ್ಯ ಅವರು ಎನ್ನೋದು ಅವರ ಆಪ್ತ ವಲಯದ ಮಾತು. ಇದೇ ಒಂದು ಅವರ ವರ್ತನೆ ಖ್ಯಾತ ಸಿನ್ಮಾ ನಿರ್ದೇಶಕ, ನಿರ್ಮಾಪಕರಿಂದ ದೂರ ಮಾಡಿದೆ ಎಂಬ ಮಾತು ಪ್ರಚಲಿತದಲ್ಲಿದೆ. ಟೋಟಲಿ ಕುಮಾರ್ ಬಂಗಾರಪ್ಪ ‘ಅಶ್ವಮೇಧ’ದ ಟೂ ಫೇಮಸ್ ಸಾಂಗ್ ‘ಹೃದಯ ಸಮುದ್ರವ ಕಲುಕಿ..’ ಹಾಡುತ್ತಾ, ಕುಣಿಯುತ್ತಾ ಇರುವುದನ್ನು ಪ್ರೇಕ್ಷಕರು ನೋಡಿದರೆ ಅಶ್ಚರ್ಯ ಪಡಬೇಕಾಗಿಲ್ಲ ..
.........
ಚಿತ್ರ: ಡಿ.ಸಿ. ನಾಗೇಶ್
..............

No comments:

Post a Comment