
ದಯಾ(ನಂದ) ನಾಯಕ್...ಅಲ್ಲಲ್ಲ ಅವರಲ್ಲ...ಇವರು ದಯಾನಂದ ಶೆಟ್ಟಿ. ಯಾರಿವರು ಎಂದು ಅಚ್ಚರಿಯೇ? ಅದೇ...ಸೋನಿ ಕಿರುತೆರೆ ವಾಹಿನಿಯ ಸಿಐಡಿ ಎಂಬ ಸರಣಿ ಧಾರಾವಾಹಿಯಲ್ಲಿ ಇನ್ಸ್‌ಪೆಕ್ಟರ್ ದಯಾ ಪಾತ್ರದಲ್ಲಿ ಮಿಂಚುತ್ತಿರುವರಲ್ಲ...ಅವರು ಯಾರೆಂದು ಬಲ್ಲಿರೇನು? ನಮ್ಮೂರಿನ ಹುಡ್ಗನೇ ಆತ...! ಕುತೂಹಲ ಹೆಚ್ಚಾಯಿತೇ...ಬನ್ನಿ ಓದೋಣ...
ಅದು ಒಂದೇ ಹೊಡೆತ. ಅಪರಾಗಳು ತಮಗೆ ಗೊತ್ತಿಲ್ಲದ, ಗೊತ್ತಿರುವ ವಿಚಾರ ಒಂದೇ ಬಾರಿಗೆ ಕಕ್ಕುತ್ತಾರೆ.ಯಾವುದೇ ಭದ್ರಮನೆ ಬಾಗಿಲಿರಲಿ ಒಂದೇ ಬಾರಿಗೆ ಮುರಿದು ಹಾಕುವ ಧಮ್ ಇರೋ ವ್ಯಕ್ತಿ ಯಾರಾದರೂ ಇದ್ದಾರಾ..? ಹೌದು ಇದ್ದಾರೆ.. ಅವರೇ ಸಿಐಡಿ ಸೀನಿಯರ್ ಇನ್ಸ್‌ಸ್ಪೆಕ್ಟರ್ ದಯಾನಂದ ಶೆಟ್ಟಿ ಯಾನೆ ದಯಾ.
ಭಾರತೀಯ ಕಿರುತೆರೆಯಲ್ಲಿ ಇತಿಹಾಸ ನಿರ್ಮಿಸಿದ ಟಿವಿ ಸರಣಿ ಇದ್ದರೆ ಅದು ಸಿಐಡಿ ಮಾತ್ರ. ಹಿಂದಿಯ ಸೋನಿ ವಾಹಿನಿಯಲ್ಲಿ ಸಿಐಡಿ ಟಿವಿ ಸರಣಿ ೧೨ ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಸಾಗುತ್ತಿದೆ. ಸಿಐಡಿಯನ್ನು ಬಿ.ಪಿ. ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಟಿವಿ ಸರಣಿ ಗಿನ್ನೆಸ್ ರೆಕಾರ್ಡ್ ಬುಕ್‌ನಲ್ಲಿ ಜಾಗ ಪಡೆದಿದೆ. ರಂಗಭೂಮಿ ಹಿರಿಯ ಕಲಾವಿದ ಶಿವಾಜಿ ಸತ್ಯಂ ( ಎಸಿಪಿ.ಪ್ರದ್ಯುಮನ್) ಸಹಿತ ಹಲವು ಕಲಾವಿದರ ಒಂದು ದಂಡೇ ಸಿಐಡಿ ಟೀಮ್‌ನಲ್ಲಿದೆ. ಬಿ.ಪಿ. ಸಿಂಗ್, ಪ್ರದೀಪ್ ಹೂಪರ್ ಇದರ ನಿರ್ಮಾಪಕರು.
ದಯಾ(ದಯಾನಂದ ಶೆಟ್ಟಿ) ಕಿನ್ನಿಗೋಳಿಯ ಶಿಮಂತ್ತೂರು ಮಜಲುಗುತ್ತು ಮನೆತನದ ಹುಡುಗ. ಶಾಟ್‌ಪುಟ್, ಡಿಸ್ಕಸ್‌ನ ರಾಷ್ಟ್ರೀಯ ಪ್ರತಿಭೆ. ಕ್ರೀಡೆಯಲ್ಲಿ ತೊಡಗಿದ್ದಾಗ ಆದ ಅಪಘಾತ ಕ್ರೀಡಾಬದುಕಿನ ಫುಲ್‌ಸ್ಟಾಪ್‌ಗೆ ಕಾರಣವಾಯಿತು. ದಯಾ ಹುಟ್ಟಿದ್ದು ಕಿನ್ನಿಗೋಳಿಯಲ್ಲದರೂ ಬೆಳೆದದ್ದು ಮುಂಬಯಿಯಲ್ಲಿ. ಪ್ರಾಥಮಿಕ ಶಿಕ್ಷಣ ಹಾಗೂ ಬಿಕಾಂ ಪದವಿ ಎಲ್ಲವೂ ಮರಾಠಿ ಶಾಲೆಗಳಲ್ಲಿ.
ಸಿಐಡಿ ಆದದ್ದು
ಪುತ್ರನ ವಿದ್ಯಾಭ್ಯಾಸ ಬಳಿಕ ತಂದೆ ಚಂದ್ರಶೇಖರ್ ಕಾಂದೀವಿಲಿಯಲ್ಲಿ ‘ಸಂಧ್ಯಾ’ ಹೋಟೆಲ್ ತೆರೆದರು. ಈ ಸಂದರ್ಭ ಚಂದ್ರಶೇಖರ್ ಶೆಟ್ಟಿ ನಿಧನರಾದರು. ಹೋಟೆಲ್ ಗಲ್ಲಾ ಪೆಟ್ಟಿಗೆ ಮೇಲೆ ದಯಾನಂದ ಶೆಟ್ಟಿ ವಿರಾಜಮಾನರಾದರು. ಇದೇ ಸಮಯ ಸೋನಿ ಚಾನೆಲ್‌ನ ಸಿಐಡಿ ಸೀರಿಯಲ್‌ಗಾಗಿ ಸಮರ್ಥ ಪೊಲೀಸ್ ಅಕಾರಿ ಪಾತ್ರಕ್ಕಾಗಿ ಅಡಿಷನ್ ನಡೆಯಿತು. ೧೯೯೮ ಜ.೧ರಂದು ದೇಶ, ವಿದೇಶದ ಲಕ್ಷಾಂತರ ಮಂದಿಯ ಅಡಿಷನ್ ನಡುವೆ ದಯಾ ಎಂಬ ‘ಮಸಲ್‌ಮ್ಯಾನ್’ ಕೂಡ ಭಾಗವಹಿಸಿದರು. ಜಡ್ಜ್‌ಗಳು ದಯಾರ ಪರ್ಸನಾಲಿಟಿ, ಡೈಲಾಗ್ ಡೆಲಿವರಿಗೆ ದಂಗಾಗಿದ್ದರು.
‘ಮೊದಲ ಸಲವೇ ಜಡ್ಜ್‌ಗಳಿಂದ ‘ಯೂ ಆರ್ ಸೆಲೆಕ್ಟ್ ಫಾರ್ ಸಿಐಡಿ ಟೀಮ್’ ಎಂದಾಗ ನನ್ನ ಸಂತಸಕ್ಕೆ ಪಾರವೇ ಇರಲಿಲ್ಲ. ನಾನು ಸಿಐಡಿ ಸೀರಿಯಲ್‌ನ್ನು ಬಹಳ ಸೀರಿಯಸ್ಸಾಗಿ ನೋಡುತ್ತಿದ್ದೆ. ಆದರೆ ಇದೇ ಸೀರಿಯಲ್‌ನಲ್ಲಿ ನಟಿಸುವ ಭಾಗ್ಯ ಬರುತ್ತದೆ ಎಂಬ ಕನಸು ಮಾತ್ರ ಎಂದಿಗೂ ಇರಲಿಲ್ಲ.’ಎನ್ನುತ್ತಾರೆ ದಯಾನಂದ ಶೆಟ್ಟಿ. ಅಂದಿನಿಂದ ಸಿಐಡಿಯಲ್ಲಿ ಫುಲ್‌ಟೈಮ್ ಸೀನಿಯರ್ ಇನ್‌ಸ್ಪೆಕ್ಟರ್ ಆಗಿ ದಯಾ ಮಿಂಚುತ್ತಿದ್ದಾರೆ.
ತಂದೆ ಬಂಗಾರದ ಲಿಫ್ಟರ್
ದಯಾರ ತಂದೆ ಚಂದ್ರಶೇಖರ್ ಶೆಟ್ಟಿ ೧೯೫೮ರಿಂದ ೧೯೬೫ರ ವರೆಗೆ ರಾಷ್ಟ್ರಮಟ್ಟದ ಖ್ಯಾತ ವೇಟ್‌ಲಿಫ್ಟರ್. ರಾಷ್ಟ್ರಮಟ್ಟದಲ್ಲಿ ೮ಕ್ಕಿಂತ ಹೆಚ್ಚು ಚಿನ್ನದ ಬೇಟೆಯಾಡಿದ ಕ್ರೀಡಾಪಟು. ಕೇಂದ್ರ ರೈಲ್ವೆ ಇಲಾಖೆಯಲ್ಲಿನ ಕೆಲಸದಿಂದಾಗಿ ಕಿನ್ನಿಗೋಳಿ ಬಿಟ್ಟು ಮುಂಬಯಿಗೆ ಬಂದು ನೆಲೆಸಿದರು. ವಿಶ್ವದ ಟಾಪ್‌ಲಿಫ್ಟರ್‌ಗಳ ಪಟ್ಟಿಯಲ್ಲಿ ಶೆಟ್ಟರ ಹೆಸರು ದಾಖಲಾಗಿತ್ತು. ಆದರೆ ಜಕಾರ್ತದಲ್ಲಿನ ಕ್ರೀಡಾಕೂಟದಲ್ಲಿ ಚಂದ್ರಶೇಖರ್ ಶೆಟ್ಟಿ ಮರಾಠಿ ಸಮುದಾಯದ ವ್ಯಕ್ತಿ ಅಲ್ಲ ಎಂಬ ಕಾರಣ ನೀಡಿ ಈ ಸ್ಪರ್ಧೆಯಲ್ಲಿ ರೈಲ್ವೆ ಇಲಾಖೆ ಚಂದ್ರಶೇಖರ್‌ರಿಗೆ ಯಾವುದೇ ನೆರವು ನೀಡುವುದಿಲ್ಲ ಎಂದು ಬಿಟ್ಟಿತು. ಇದೇ ಕೊರಗಿನಿಂದ ಚಂದ್ರಶೇಖರ್ ಶೆಟ್ಟಿ ರೈಲ್ವೆ ಇಲಾಖೆ ಬಿಟ್ಟರು. ತನ್ನ ಕೊನೆಗಾಲದವರೆಗೂ ಇದೇ ಚಿಂತೆಯಲ್ಲಿದ್ದರು ಎಂದು ಅವರ ಸಂಬಂ ಕಿನ್ನಿಗೋಳಿಯ ಪುಷ್ಪರಾಜ್ ಶೆಟ್ಟಿ ಹೇಳುತ್ತಾರೆ. ‘ದಯಾನಂದ ಕೂಡ ಒಳ್ಳೆಯ ಕ್ರೀಡಾಪಟು. ಆದರೆ ತಂದೆಯ ಈ ಕೊರಗು ಹಾಗೂ ಕ್ರೀಡಾಕ್ಷೇತ್ರದಲ್ಲಿರುವ ರಾಜಕೀಯದಾಟ ಇವರಿಗೆ ಸರಿಬರಲಿಲ್ಲ. ಇದೇ ಸಮಯದಲ್ಲಾದ ಅಪಘಾತದಿಂದ ದಯಾರ ಕಾಲಿಗೆ ದೊಡ್ಡ ಪೆಟ್ಟು ಬಿತ್ತು ’ಎಂದು ಹೇಳುತ್ತಾರೆ ಪುಷ್ಪರಾಜ್.
ಕುಡ್ಲ ಎಂದರೆ ಪಂಚಪ್ರಾಣ
ಕುಡ್ಲ ಎಂದರೆ ದಯಾರಿಗೆ ಪಂಚಪ್ರಾಣ. ಅದಕ್ಕಾಗಿ ಮೂಲ್ಕಿಯಲ್ಲಿ ಒಂದು ಫ್ಲ್ಯಾಟ್ ಖರೀದಿಸಿದ್ದಾರೆ. ವರ್ಷದಲ್ಲಿ ಒಂದೆರಡು ವಾರ ಈ ಮನೆಯಲ್ಲಿರುತ್ತಾರೆ. ಕಿನ್ನಿಗೋಳಿಯಲ್ಲಿ ತಾಯಿ ಉಮಾ ಶೆಟ್ಟಿಯವರ ಮನೆಯಿದೆ. ವರ್ಷಂಪ್ರತಿ ಇಲ್ಲಿ ನಡೆಯುವ ಧಾರ್ಮಿಕ ಕಾರ್‍ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕಾಂದೀವಿಲಿಯಲ್ಲಿರುವ ಫ್ಲ್ಯಾಟ್‌ನಲ್ಲಿ ದಯಾ ತನ್ನ ತಾಯಿ, ಪತ್ನಿ, ಪುಟ್ಟ ಮಗಳು ವೀವಾಳೊಂದಿಗೆ ಇದ್ದಾರೆ. ಪತ್ನಿ ಸ್ಮಿತಾ ಮೂಲತಃ ಮಂಗಳೂರಿನ ಹಂಪನಕಟ್ಟೆಯವರು. ಈಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಯಾರ ತಂಗಿಯರಾದ ಸಂಧ್ಯಾ, ನಯನಾ ಮುಂಬಯಿಯಲ್ಲಿಯೇ ವಿವಾಹವಾಗಿ ನೆಲೆನಿಂತಿದ್ದಾರೆ.
ಹಾಸ್ಯ ಸರಣಿಯಲ್ಲಿಯೂ ಇದ್ದಾರೆ:
ಸೋನಿಯ ಸಬ್ ಟಿವಿ( ಶ್ರೀ ಅಕಾರಿ ಬ್ರದರ್‍ಸ್)ನಲ್ಲಿ ದಯಾನಂದ ಶೆಟ್ಟಿ ಒಂದು ಹಾಸ್ಯ ಸರಣಿಯಲ್ಲಿ ಪ್ರತಿವಾರ ಬರುತ್ತಿದ್ದಾರೆ. ಅದೇ ‘ಗುಟುರುಗು’. ೨೦೦೭ರಲ್ಲಿ ಹಿಂದಿಯ ‘ಜಾನಿ ಗದ್ಧಾರ್’ ಹಾಗೂ ೨೦೦೯ ‘ರನ್‌ವೇ’ ಚಿತ್ರದಲ್ಲಿ ದಯಾ ಪೊಲೀಸ್ ಅಕಾರಿ ಪಾತ್ರದಲ್ಲಿ ನಟಿಸಿದ್ದರು. ತಮಿಳು ಚಿತ್ರವೊಂದರಲ್ಲಿ ನಟಿಸುವ ಅವಕಾಶ ಬಂದಿತ್ತು, ಬ್ಯೂಸಿಯಾಗಿರುವುದರಿಂದ ನಿರಾಕರಿಸಿದೆ. ಕನ್ನಡ ಅಥವಾ ತುಳು ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕರೆ ನಟಿಸುವುದಾಗಿ ದಯಾ ನಗುತ್ತಾ ಹೇಳುತ್ತಾರೆ.
ಸಿಐಡಿ ‘ಫಸ್ಟ್’
ಸಿಐಡಿ ನನ್ನ ಮೊದಲ ಆಯ್ಕೆ. ಇಲ್ಲಿ ಒಳ್ಳೆಯ ಪಾತ್ರ, ಕೈತುಂಬಾ ಸಂಭಾವನೆ ಎಲ್ಲವೂ ಇದೆ. ಒಂದು ಎಪಿಸೋಡ್ ಶೂಟಿಂಗ್‌ಗಾಗಿ ಬರೋಬ್ಬರಿ ೪ರಿಂದ ೫ ದಿನ ಬೇಕಾಗುತ್ತದೆ. ವಿದೇಶದಲ್ಲೂ ಶೂಟಿಂಗ್ ನಡೆಯುತ್ತದೆ. ಎಲ್ಲ ರೀತಿಯಲ್ಲೂ ಸಿಐಡಿ ಉತ್ತಮ. ಆದರೆ ಸಿನಿಮಾ ನಿರ್ಮಾಪಕರು ಕೇಳುವ ಡೇಟ್ಸ್, ಸಂಭಾವನೆ ಎರಡರಲ್ಲೂ ವ್ಯತ್ಯಾಸ ಹಾಗೂ ನಕಾರಾತ್ಮಕ ಅಂಶ ಜಾಸ್ತಿ ಇರುತ್ತದೆ ಎಂದು ದಯಾ ತನ್ನ ಅನುಭವ ಲವಲವಿಕೆ ಜತೆ ಹಂಚಿಕೊಂಡರು.
No comments:
Post a Comment