
ಬರೀ ೫೦ ಸಾವಿರ ಹಾಡುಗಳು..ಜಾಸ್ತಿಯಾಗದ ಏಳು ರಾಷ್ಟ್ರಪ್ರಶಸ್ತಿಗಳು..ಕೇರಳ ರಾಜ್ಯ ಸರಕಾರದ ಪ್ರಶಸ್ತಿಗಳು ಯುವ ಹಿನ್ನೆಲೆ ಹಾಡುಗಾರರಿಗೆ ಹೋಗಲಿ ಎಂದು ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಕೇರಳದ ಆಸ್ಥಾನ ಹಾಡುಗಾರ ಕೆ.ಜೆ. ಜೇಸುದಾಸ್ ಅವರೊಂದಿಗೆ ಒಂದು ಲವಲವಿಕೆಯ ಟಾಕ್ ಟೈಮ್.
ಕೇರಳ ಶೈಲಿಯ ಬಿಳಿ ವೈಟ್ ಆಂಡ್ ವೈಟ್ ದೋತಿ, ಜುಬ್ಬಾ ... ಮುಖದಲ್ಲೊಂದು ಶೇವ್ ಗೀವ್‌ಗೆ ಒಗ್ಗದ- ಬಗ್ಗದ ಗಡ್ಡ. ಇದು ಭಾರತೀಯ ಸಂಗೀತ ಕ್ಷೇತ್ರದ ಬೃಹತ್ ಮೈಲಿಗಲ್ಲು ಕೆ.ಜೆ. ಜೇಸುದಾಸ್‌ರ ಸ್ಮಾಲ್ ಪರಿಚಯ. ಕಟ್ಟೆಶ್ಶೇರಿ ಜೋಸೆಪ್ ಜೇಸುದಾಸ್ ಇದು ಜೇಸುದಾಸ್ ಅವರ ಪೂರ್ತಿ ಹೆಸರು. ಕೆಲವೊಂದು ಬಾರೀ ಕೆ.ಜೆ. ಜೇಸುದಾಸ್ ಎಂದೇ ಶಾರ್ಟ್ ಆಂಡ್ ಸ್ವೀಟ್ ಆಗಿ ಕರೆಯುವ ಅಭಿಮಾನಿ ವರ್ಗವೇ ದೊಡ್ಡದಿದೆ. ರಾಜ್ಯದ ಹಲವು ಭಾಷೆಗಳ ಮೇಲೆ ಹಿಡಿತ ಇರುವ ಗಟ್ಟಿ ಮನುಷ್ಯ ಜೇಸುದಾಸ್, ವಿವಿಧ ಭಾಷೆಗಳಲ್ಲಿ ಈಗಾಗಲೇ ೫೦ ಸಾವಿರಕ್ಕಿಂತ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಏಳು ಬಾರೀ ರಾಷ್ಟ್ರ ಪ್ರಶಸ್ತಿಗಳ ಜತೆಯಲ್ಲಿ ವಿವಿಧ ರಾಜ್ಯಗಳ ಹತ್ತಾರು ಸಿನಿಮಾ ಪ್ರಶಸ್ತಿಗಳು ಅವರ ಮನೆಯ ಶೋಕೇಸ್‌ನೊಳಗೆ ಭದ್ರವಾಗಿ ಕೂತಿದೆ. ಇದು ಬರೀ ಒಬ್ಬ ಹಿನ್ನೆಲೆ ಹಾಡುಗಾರನ ಸಾಧನೆ ಮಾತ್ರವಲ್ಲ . ಇಡೀ ಸಂಗೀತ ಕ್ಷೇತ್ರದಲ್ಲೊಂದು ಅಳಿಸಲಾಗದ ದಾಖಲೆ.
೭೦ ಹಾಗೂ ೮೦ರ ದಶಕದಲ್ಲಿ ಮಲಯಾಳಂ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿ ಮಲಯಾಳಂ ಚಿತ್ರರಂಗದ ಸಂಗೀತದಲ್ಲಿ ಹೊಸ ಆಯಾಮವನ್ನು ಸೃಷ್ಟಿಮಾಡಿದವರು. ೧೯೬೦ರ ದಶಕದಲ್ಲಿ ಮಲಯಾಳಂನಲ್ಲಿ ಬಿಡುಗಡೆಯಾದ ‘ಕಾಲ ಪದಕ್ಕಳ್’ನಿಂದ ಹೊರಟ ಅವರ ಸಂಗೀತ ಯಾತ್ರೆ ಈಗಲೂ ಭರ್ಜರಿಯಾಗಿ ಮುಂದುವರಿಯುತ್ತಿದೆ. ೨೦೦೧ರಲ್ಲಿ ಸಂಸ್ಕೃತ,ಲ್ಯಾಟಿನ್ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬಂದ ಅವರ ‘ಅಹಿಂಸಾ’ ಸಂಗೀತ ಆಲ್ಬಂ ಕರ್ನಾಟಿಕ್ ಸಂಗೀತ ಕ್ಷೇತ್ರದಲ್ಲಿ ಎಬ್ಬಿಸಿದ ಕ್ರಾಂತಿ ಈಗಲೂ ಅದರ ಒರಿಜಿನಾಲ್ ಸಿಡಿಗಳು ಹುಡುಕಾಟಕ್ಕೂ ಅಲಭ್ಯವಾಗಿದೆ. ಭಾರತೀಯ ಸಂಗೀತ ಲೋಕದ ಬ್ರ್ಯಾಂಡ್ ಅಂಬಾಸೀಡರ್‌ನಂತೆ ಕೆಲಸ ಮಾಡಿದ ಜೇಸುದಾಸ್ ಮಲಯಾಳಂನ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದರು. ಕೊಲ್ಲೂರಿನ ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಪದೇ ಪದೇ ಭೇಟಿ ನೀಡುವ ಜೇಸುದಾಸ್ ಈ ಬಾರೀ ಸಿಕ್ಕಿದ್ದು ಸುರತ್ಕಲ್ ಬಳಿಯ ಶಿಬರೂರಿನ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕದಲ್ಲಿ ಅವರ ಜತೆ ಲವಲವಿಕೆಯ ಒಂದು ಟಾಕ್ ಟೈಮ್..
* ನಿಮಗೆ ಬಹಳ ಇಷ್ಟವಾದ ಸಂಗೀತ ಪ್ರಕಾರ ಯಾವುದು?
- ಹಿಂದೂಸ್ತಾನಿ, ಶಾಸ್ತ್ರೀಯ ಹಾಗೂ ಕರ್ನಾಟಿಕ್‌ನಲ್ಲಿ ನಾನು ಹಾಡಬಲ್ಲೆ. ಆದರೆ ನನಗೆ ಶಾಸ್ತ್ರೀಯ ಸಂಗೀತದಿಂದ ಮಾತ್ರ ಅತೀ ಹೆಚ್ಚಿನ ತೃಪ್ತಿ ಇದೆ. ನನ್ನ ತಂದೆ ಆಗಸ್ಟಿನ್ ಜೋಸೆಪ್ ಅವರು ಶಾಸ್ತ್ರೀಯ ಸಂಗೀತದಲ್ಲಿ ನನಗೆ ಹೆಚ್ಚಿನ ಒಲವು ಮೂಡಿಸಲು ಕಾರಣರಾದರು. ಅವರು ಕೂಡ ನಟ ಹಾಗೂ ಶಾಸ್ತ್ರೀಯ ಹಾಡುಗಾರಿಕೆಯಲ್ಲಿ ದೊಡ್ಡ ಹೆಸರು. ನಿಜಕ್ಕೂ ತಂದೆಯೇ ನನ್ನ ಪಾಲಿನ ಮೊದಲ ಗುರು.
*ಕರಾವಳಿ ತೀರದಲ್ಲಿ ನಿಮ್ಮ ಶೋಗಳು ಜಾಸ್ತಿಯಾಗುತ್ತಿದೆ ಅಲ್ಲ?
- ಇಲ್ಲ. ಎಲ್ಲ ಕಡೆ ಒಂದೇ ರೀತಿಯಲ್ಲಿ ಜೇಸುದಾಸ್ ನೈಟ್‌ಗಳು ನಡೆಯುತ್ತಿದೆ. ಮುಖ್ಯವಾಗಿ ಕೇರಳ ಹಾಗೂ ಗಲ್ಪ್ ದೇಶಗಳಲ್ಲಿ ಜಾಸ್ತಿ ಎನ್ನಬಹುದು. ಆದರೆ ಕರಾವಳಿಯಲ್ಲಿ ನನ್ನ ಅಭಿಮಾನಿ ವರ್ಗ ಜಾಸ್ತಿ ಇದೆ. ಎಲ್ಲಕ್ಕೂ ಮುಖ್ಯವಾಗಿ ಕರಾವಳಿ ತೀರದ ದೇವಸ್ಥಾನಗಳಿಗೆ ನಾನು ಭೇಟಿ ನೀಡುವುದು ಜಾಸ್ತಿ ಅಂತಾ ಹೇಳಬಹುದು.
* ನೀವು ಭಾರತದ ಎಲ್ಲ ಭಾಷೆಗಳಲ್ಲಿ ಹಾಡಿದ್ದೀರಿ ಅಂತೆ ?
- ಒಂದು ಅರ್ಥದಲ್ಲಿ ಭಾರತದ ಬಹುತೇಕ ಭಾಷೆಗಳಲ್ಲಿ ಹಾಡಿದ್ದೇನೆ. ಆದರೆ ಕಾಶ್ಮೀರಿ, ಅಸ್ಸಾಮೀ ಹಾಗೂ ಕೊಂಕಣಿಯಲ್ಲಿ ನಾನು ಹಾಡಿಲ್ಲ. ಲ್ಯಾಟಿನ್, ಇಂಗ್ಲೀಷ್,ಮಲಯಾ, ರಷ್ಯಾ,ಅರೇಬಿಕ್‌ನಲ್ಲೂ ಕೆಲವೊಂದು ಹಾಡುಗಳನ್ನು ಹಾಡಿದ್ದೇನೆ. ಅಂದಹಾಗೆ ಈ ಎಲ್ಲ ಭಾಷೆಗಳು ನನಗೆ ಬರುತ್ತದೆ ಅಂತಾ ಯಾವುದೇ ಗ್ಯಾರಂಟಿ ಇಲ್ಲ. ಆದರೆ ಹಾಡಿಗೆ ಯಾವುದೇ ಭಾಷೆ ಮುಖ್ಯವಲ್ಲ ಎಂದು ನಂಬಿದವರ ಸಾಲಿನಲ್ಲಿ ನಾನು ಸೇರಿಕೊಂಡಿದ್ದೇನೆ.
* ನಿಮ್ಮ ನೆಚ್ಚಿನ ರೋಲ್ ಮೊಡಲ್‌ಗಳು?
-ನನ್ನ ರೋಲ್ ಮೊಡಲ್‌ಗಳ ಪಟ್ಟಿ ದೊಡ್ಡದಿದೆ. ಅದರಲ್ಲೂ ನನ್ನ ನೆಚ್ಚಿನ ರೋಲ್ ಮೊಡಲ್‌ಗಳೆಂದರೆ ಬಾಲಿವುಡ್‌ನ ಮಹಮ್ಮದ್ ರಫೀ, ಬಾಲಮುರಳಿಕೃಷ್ಣ ಹಾಗೂ ಚೆಂಬಿ ವೈದ್ಯನಾಥ್ ಭಗವತರ್. ಆದರೆ ನಾರಾಯಣ ಗುರು ಅವರ ಸಂದೇಶ ನನಗೆ ಬಹಳ ಇಷ್ಟ. ‘ಒಂದು ಜಾತಿ, ಒಂದು ಧರ್ಮ, ಒಂದು ದೇವರು’ ಈ ಸಂದೇಶದ ಮೇಲೆ ನನ್ನ ಬದುಕು ರೂಪಿತಗೊಂಡಿದೆ.
* ಕೊಲ್ಲೂರು ದೇವಸ್ಥಾನಕ್ಕೆ ಭೇಟಿಯ ಹಿಂದಿರುವ ರಹಸ್ಯ.?
- ಕಳೆದ ೩೦ ವರ್ಷಗಳಿಂದ ನಾನು ಪ್ರತಿಯೊಂದು ನನ್ನ ಹುಟ್ಟಿದ ದಿನದಂದು ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ಬರುತ್ತೇನೆ. ಇದು ದೇವಿಯ ಮೇಲಿಟ್ಟಿರುವ ನಂಬಿಕೆ ಮಾತ್ರ. ಇದರ ಹಿಂದೆ ಯಾವುದೇ ದೊಡ್ಡ ರಹಸ್ಯ ಇಲ್ಲ. ಈ ದೇವಿಯಿಂದ ನಾನು ಬಹಳಷ್ಟು ಪಡೆದುಕೊಂಡಿದ್ದೇನೆ. ಅದನ್ನು ಈಗ ಹಿಂದಿರುಗಿಸುವ ಪ್ರಯತ್ನ ಮಾಡುತ್ತಿದ್ದೇನೆ. ನನ್ನ ೬೦ನೇ ವರ್ಷದ ಹುಟ್ಟುಹಬ್ಬದಂದು ಇಲ್ಲಿ ಸಂಗೀತ ಕೀರ್ತನೆಗಳ ಜತೆಯಲ್ಲಿ ೯ ದಿನಗಳ ಸಂಗೀತ ಮಹೋತ್ಸವನ್ನು ನಡೆಸಿದ್ದೇನೆ. ಇಲ್ಲಿ ಮತ್ತಷ್ಟೂ ಸಂಗೀತ ಮಹೋತ್ಸವಗಳನ್ನು ನಡೆಸುವ ಇರಾದೆನೂ ಇದೆ.
* ನಟನಾ ಕ್ಷೇತ್ರವನ್ನು ಯಾಕೆ ಬಿಟ್ಟು ಹೋದ್ರಿ?
ಹೌದು, ಸಂಗೀತದ ಜತೆಯಲ್ಲಿ ನಾನು ನಾಲ್ಕೈದು ಮಲಯಾಳಂ ಚಿತ್ರಗಳಲ್ಲಿ ನಟಿಸಿಕೊಂಡು ಬಂದಿದ್ದೆ. ಆದರೆ ನಾನು ನಟನೆಯನ್ನು ನಿಜಕ್ಕೂ ಸಿರೀಯಸ್ ಎಂದುಕೊಂಡು ಬಂದವನಲ್ಲ. ಈ ಸಿನಿಮಾಗಳಲ್ಲಿ ನಾನು ಬರೀ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡೆ ಅಷ್ಟೇ..ಈಗ ನಟಿಸುವ ವಯಸ್ಸು ಕೂಡ ನನ್ನಲ್ಲಿ ಇಲ್ಲ ಬಿಡಿ.
* ಕೇರಳ ಸರಕಾರದ ರಾಜ್ಯ ಪ್ರಶಸ್ತಿ ಬೇಡ ಅಂದ್ರಾ..?
-ನಿಜ. ನನಗೆ ಈಗಾಗಲೇ ೨೭ಬಾರಿ ಕೇರಳ ರಾಜ್ಯ ಸರಕಾರದ ಸಿನಿಮಾ ಪ್ರಶಸ್ತಿಗಳು ಬಂದಿದೆ. ಈ ಪ್ರಶಸ್ತಿಯ ಮೇಲೆ ನನಗೆ ಗೌರವ ಭಾವನೆ ಇದೆ. ಆದರೆ ಹೊಸ ಹಾಗೂ ಯುವ ಪೀಳಿಗೆಯ ಹಿನ್ನೆಲೆ ಹಾಡುಗಾರರಿಗೆ ಈ ಪ್ರಶಸ್ತಿ ಸಲ್ಲಬೇಕು ಎಂಬ ಕಾರಣದಿಂದ ಪ್ರಶಸ್ತಿ ಬೇಡ ಅಂದೆ. ಇದರಲ್ಲಿ ಬೇರೆ ಯಾವುದೇ ಬೇರೆ ವಿಚಾರ ಇರಲಿಲ್ಲ.
* ನೀವು ಆರಂಭಿಸಿದ ‘ಶಾಂತಿ ಸಂಗೀತ ಯಾತ್ರೆ’ ಕುರಿತು ಹೇಳಿ ?
- ೨೦೦೯ರಲ್ಲಿ ನಾನು ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ವಿರುದ್ಧ ಸಂಗೀತ ಸಮರವನ್ನು ಆರಂಭಿಸಿದ್ದೆ. ತಿರುವನಂತಪುರದಿಂದ ಹೊರಟ ಈ ಸಂಗೀತ ಯಾತ್ರೆ ಮುಂಬಯಿಯಲ್ಲಿ ಕೊನೆಗೊಂಡಿತ್ತು. ಮುಂಬಯಿ ಸ್ಪೋಟದಲ್ಲಿ ಮಡಿದ ಹೇಮಂತ್ ಕರ್ಕರೆಯ ಪತ್ನಿ ಕವಿತಾ ಕರ್ಕರೆ ಈ ಯಾತ್ರೆಯ ಜ್ಯೋತಿ ಹಿಡಿದು ಮುನ್ನಡೆಸಿದವರು. ನಿಜಕ್ಕೂ ಇದೊಂದು ಒಳ್ಳೆಯ ಪ್ರಯತ್ನ ಎಂದು ಬಹಳಷ್ಟು ಜನರು ನನಗೆ ತಿಳಿಸಿದ್ದರು.
* ನಿಮ್ಮ ‘ತರಂಗಿಣಿ ’ ಸಂಸ್ಥೆಯ ಕಾರ್‍ಯ ಚಟುವಟಿಕೆ ಏನು?
- ೧೯೮೦ರಲ್ಲಿ ‘ತರಂಗಿಣಿ’ ಸಂಗೀತ ಸ್ಟುಡಿಯೋ ತಿರುವನಂತಪುರದಲ್ಲಿ ಆರಂಭ ಆಯಿತು. ೧೯೯೨ರ ನಂತರ ಇದನ್ನು ಚೆನ್ನೈಗೆ ಸ್ಥಳಾಂತರ ಮಾಡಬೇಕಾಯಿತು. ೧೯೯೮ರಲ್ಲಿ ಅಮೆರಿಕದ ಸಂಸ್ಥೆಯೊಂದರ ಜತೆಯಲ್ಲಿ ಒಪ್ಪಂದ ಮಾಡಿಕೊಂಡು ಅಲ್ಲಿಯೂ ಕಚೇರಿಯೊಂದು ಆರಂಭವಾಯಿತು. ಕೇರಳದಲ್ಲಿ ಮಲಯಾಳಂ ಸಿನಿಮಾಗಳ ಸ್ಟಿರಿಯೋ ಟೈಪ್‌ನ ಕ್ಯಾಸೆಟ್‌ಗಳನ್ನು ಬಿಡುಗಡೆ ಮಾಡಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ‘ತರಂಗಿಣಿ’ ಪಾತ್ರವಾಗಿದೆ. ಹೊಸ ಗಾಯಕರಿಗೆ ಒಳ್ಳೆಯ ವೇದಿಕೆ ನೀಡಲು ‘ತರಂಗಿಣಿ’ ಸಂಸ್ಥೆ ಸದಾ ಮುಂದಾಗಿದೆ.
...............
ಚಿತ್ರ: ಲೋಕೇಶ್ ಸುರತ್ಕಲ್
......................
No comments:
Post a Comment