
ಕೋಸ್ಟಲ್‌ವುಡ್‌ಗೆ ತಲೆ ಹಾಕಿ ಮಲಗೋದಿಲ್ಲ ಎಂದು ಮುನಿಸಿಕೊಂಡು ಹೋಗಿದ್ದ ನೀತು ಈಗ ಕೊಂಕಣಿ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏನ್ ಇದರ ಕತೆ ಅಂತೀರಾ..?
ನೀತು ಬ್ಯಾಕ್ ಟೂ ಕೋಸ್ಟಲ್‌ವುಡ್. ಸ್ಯಾಂಡಲ್‌ವುಡ್‌ನಲ್ಲಿ ಹೊರಳಾಡಿದ ಕರಾವಳಿಯ ಹುಡುಗಿ ನೀತು ಕೊಂಕಣಿ ಚಿತ್ರವೊಂದಕ್ಕೆ ಸಹಿ ಮಾಡಿದ್ದಾರೆ ಎನ್ನುವ ಗರಮ ಗರಂ ಸುದ್ದಿ ಹೊರ ಬಂದಿದೆ. ಈಗಾಗಲೇ ಕೋಸ್ಟಲ್‌ವುಡ್‌ನ ಕೋಟಿ ಚೆನ್ನಯ ಚಿತ್ರದ ನಂತರ ನೀತು ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಚಿತ್ರಗಳನ್ನು ಕೊಳ್ಳೆ ಹೊಡೆದಿದ್ದರು. ಪೂಜಾರಿ, ಗಾಳಿಪಟದಂತಹ ಕಮರ್ಷಿಯಲ್ ಚಿತ್ರಗಳ ಮೂಲಕ ಕನ್ನಡ ಪ್ರೇಕ್ಷಕ ವಲಯಕ್ಕೆ ಬಹಳ ಆಪ್ತರಾಗಿ ಹೋಗಿದ್ದರು.
ಕೋಟಿ ಚೆನ್ನಯ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ಧನರಾಜ್ ಹಾಗೂ ನೀತು ನಡುವೆ ನಡೆದ ಪ್ರಶಸ್ತಿ ವಿವಾದದಿಂದಾಗಿ ನೀತು ಎಂದಿಗೂ ಕೋಸ್ಟಲ್‌ವುಡ್ ಇಂಡಸ್ಟ್ರಿಗೆ ಕಾಲಿಡುವುದಿಲ್ಲ ಎನ್ನುವ ಮಾತು ಕುಡ್ಲದಲ್ಲಿ ಹರಿದಾಡಿತ್ತು. ಬಹಳಷ್ಟು ಕೋಸ್ಟಲ್‌ವುಡ್ ನಿರ್ದೇಶಕರು ನೀತು ಮನೆಯ ಮುಂದಿನ ಬಾಗಿಲಲ್ಲಿ ಕೂತುನಿಂತು ನೀತು ಕಾಲ್‌ಶೀಟ್ ಇಲ್ಲದೇ ವಾಪಸ್ಸು ಬಂದ ಘಟನೆಗಳು ನಡೆದಿತ್ತು.
ಈಗ ನೀತು ಕರಾವಳಿಯ ರಂಗಭೂಮಿಯ ಕಲಾವಿದ ಕಾಸರಗೋಡು ಚಿನ್ನಾರ ಮಾತಿನ ಮೋಡಿಗೆ ಸಿಕ್ಕಿ ಕೊಂಕಣಿ ಚಿತ್ರವೊಂದರಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ನೀತು ಅವರ ಮಾತೃಭಾಷೆ ಕೂಡ ಕೊಂಕಣಿ ಅದೇ ಭಾಷೆಯ ಚಿತ್ರದಲ್ಲಿ ಕಾಣಿಸಿಕೊಳ್ಳುವುದು ನೀತುರ ಕಾಲು ನೆಲದ ಮೇಲೆ ನಿಲ್ಲುತ್ತಿಲ್ಲವಂತೆ.
ಅಂದಹಾಗೆ ಈ ಸಿನಿಮಾವನ್ನು ಕಾಸರಗೋಡು ಚಿನ್ನಾ ನಿರ್ದೇಶನ ಮಾಡುತ್ತಿದ್ದಾರೆ. ಕರಾವಳಿಯ ರಂಗಭೂಮಿಯಲ್ಲಿ ಚಿನ್ನಾರಿಗೆ ತನ್ನದೇ ಆದ ಒಂದು ಇಮೇಜ್ ಇದೆ. ರಂಗಭೂಮಿಯಲ್ಲಿ ಸಿಕ್ಕಿದ ಕೆಲವು ಅನುಭವಗಳನ್ನು ಒಟ್ಟು ಸೇರಿಸಿಕೊಂಡು ಈ ಚಿತ್ರವನ್ನು ಚಿನ್ನಾ ಮಾಡುತ್ತಿದ್ದಾರೆ ಎನ್ನುವುದು ಬಂದ ಮಾತು.
‘ಉಜ್ವಾಡ್’ ಎಂಬುದು ಆ ಚಿತ್ರದ ಹೆಸರು. ಅಂದಹಾಗೆ ‘ಉಜ್ವಾಡ್’ ಎಂದರೆ ಬೆಳಕು ಎನ್ನುವ ಅರ್ಥ ಇದೆ. ದಕ್ಷಿಣ ಕನ್ನಡದ ಗೌಡ ಸಾರಸತ್ವ ಬ್ರಾಹ್ಮಣ ಕುಟುಂಬಗಳ ಸಂಸ್ಕೃತಿಯನ್ನು ಬಿಂಬಿಸುವ ಜತೆಯಲ್ಲಿ ಅವರ ಬದುಕಿನ ಒಳನೋಟವನ್ನು ತೋರಿಸುವ ಪ್ರಯತ್ನ ಚಿತ್ರದಲ್ಲಿ ನಡೆಯಲಿದೆ.
ತನ್ನ ನ್ಯಾಚುರಲಾಟಿಗೆ ತಕ್ಕಂತೆ ಇರುವ ಪಾತ್ರ ಇದಾಗಿದ್ದು, ಕತೆನೂ ಬಹಳ ಇಷ್ಟವಾಗಿದೆ. ಬಹಳ ದಿನಗಳಿಂದ ಮಾತೃಭಾಷೆಯ ಚಿತ್ರದಲ್ಲಿ ನಟಿಸಬೇಕು ಎನ್ನೋದು ನನ್ನ ಕನಸ್ಸಾಗಿತ್ತು ಈಗ ಅದು ಈ ಚಿತ್ರದ ಮೂಲಕ ನನಸ್ಸಾಗಿದೆ ಎನ್ನುತ್ತಾರೆ ನೀತು.
ಈ ಚಿತ್ರದ ನಿರ್ಮಾಣದ ಹೊಣೆಯನ್ನು ಚಿನ್ನಾ ಅವರ ಸಂಬಂಕರೇ ಹೊತ್ತುಕೊಂಡಿದ್ದಾರೆ. ಕರಾವಳಿಯ ಪ್ರತಿಭೆಗಳಿಗೆ ಚಿತ್ರದಲ್ಲಿ ಹೆಚ್ಚು ಅವಕಾಶ ಕಲ್ಪಿಸುವುದಕ್ಕೆ ಚಿನ್ನಾ ಯೋಚಿಸುತ್ತಿದ್ದಾರೆ. ವಿ.ಮನೋಹರ್ ಅವರ ಸಂಗೀತ ಚಿತ್ರಕ್ಕಿದೆ. ಏಪ್ರಿಲ್ ಮಧ್ಯಭಾಗದಲ್ಲಿ ಕಾರ್ಕಳ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮೂಲವೊಂದು ತಿಳಿಸಿದೆ.
No comments:
Post a Comment