
ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಸೆಕ್ಸ್ ಸಿಂಬಲ್ ಖ್ಯಾತಿಯ ಸಿಲ್ಕ್ ಸ್ಮಿತಾ ಯಾರಿಗೆ ತಾನೇ ಗೊತ್ತಿಲ್ಲ? ಒಂದು ಲೆಕ್ಕಚಾರದ ಪ್ರಕಾರ ಸಿಲ್ಕ್ ಇದ್ರೆ ಸಾಕು ಸಿನಿಮಾ ಕಲೆಕ್ಷನ್ ಗ್ಯಾರಂಟಿ ಎನ್ನುವ ಮಾತಿತ್ತು. ಅಂತಹ ಸಿಲ್ಕ್ ಈಗ ತೆರೆಗೆ ಬರುತ್ತಿದ್ದಾಳೆ. ಅದೇ ‘ದಿ ಡರ್ಟಿ ಪಿಕ್ಟರ್’ಮಾತು.
‘ನಾನು ಬಹಳಷ್ಟು ಬಳಲಿ ಬೆಂಡಾಗಿದ್ದೇನೆ. ಬಣ್ಣದ ಲೋಕದ ಮಂದಿ ನನಗೆ ಬದುಕು ನೀಡಿದ್ದಾರೆ. ಆದರೆ ಈಗ ಸೋಲುಗಳು ನನ್ನನ್ನು ಮುತ್ತಿಕೊಂಡಿದೆ. ಅದರಿಂದ ಹೊರಬರಲು ಆಗುತ್ತಿಲ್ಲ. ಅದಕ್ಕಾಗಿ ಈ ನಿರ್ಧಾರಕ್ಕೆ ಬಂದು ಬಿಟ್ಟಿದ್ದೇನೆ. ನನ್ನ ಕಲಾಭಿಮಾನಿಗಳಿಗೆ ಧನ್ಯವಾದ’
ಸೆಪ್ಟೆಂಬರ್ ೨೩, ೧೯೯೬
ಚೆನ್ನೈ ಸಾಲಿಗ್ರಾಮಂ
ನಿಮ್ಮ ಸಿಲ್ಕ್
ಚೆನ್ನೈಯ ಸಾಲಿಗ್ರಾಮಂನ ಫ್ಲ್ಯಾಟ್‌ವೊಂದರಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಸಿನಿಮಾ ಇಂಡಸ್ಟ್ರಿಯನ್ನು ಬಿಟ್ಟು ಹೋದ ಸಿಲ್ಕ್ ಸ್ಮಿತಾ ತನ್ನ ಬದುಕಿನ ಕೊನೆಯ ಗಳಿಗೆಯಲ್ಲಿ ತೆಲುಗಿನಲ್ಲಿ ಬರೆದಿಟ್ಟ ಪತ್ರವಿದು. ಅಂದಹಾಗೆ ನೋಡುಗನನ್ನು ನಶೆಯಲ್ಲಿ ಬೀಳಿಸುವ ಮಾದಕ ಕಣ್ಣು. ಮದಹುಟ್ಟಿಸುವ ತುಟಿ. ಎಂತವರನ್ನು ಖೆಡ್ಡಾಕ್ಕೆ ದೂಡಿಹಾಕುವ ಬ್ಯೂಟಿ. ಟೋಟಲಿ ಅವಳು ಮದಿರೆಕ್ಕಿಂತ ಜಾಸ್ತಿ ಕಿಕ್ ಕೊಡುವ ಮಾದಕರಸ.
ಸರಿಸುಮಾರು ೭೦-೮೦ರ ದಶಕಗಳಲ್ಲಿ ಪಡ್ಡೆ ಹುಡುಗರ ನಿದ್ದೆ ಬಿಡಿಸಿದ ದಕ್ಷಿಣ ಭಾರತದ ಸೆಕ್ಸ್ ಸಿಂಬಲ್ ಖ್ಯಾತಿಯ ಸಿಲ್ಕ್ ಸ್ಮಿತಾ ಯಾರಿಗೆ ತಾನೇ ಗೊತ್ತಿಲ್ಲ? ಆಂಧ್ರಪ್ರದೇಶದ ಎಲ್ಲೂರಿನ ರಾಯಲ್‌ಸೀಮೆಯ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಮನೆಯಲ್ಲಿ ತುಂಬು ಬಡತನ. ತುತ್ತು ಅನ್ನಕ್ಕೂ ಕೈಚಾಚಿ ಬಿಡುವ ಪರಂಪರೆಯಲ್ಲಿ ಅರಳಿ ಬಂದವಳು ವಿಜಯಲಕ್ಷ್ಮಿ.
ಸಿಲ್ಕ್‌ರ ಆರಂಭದ ಹೆಸರು ವಿಜಯ ಲಕ್ಷ್ಮಿ. ಕಲಿಯಬೇಕೆನ್ನುವ ತುಡಿತ ಮನೆಯಲ್ಲಿ ಬಿಡದೇ ಕಾಡುವ ಬಡತನ ವಿಜಯಲಕ್ಷ್ಮಿ ಡೈರೆಕ್ಟ್ ಎಂಟ್ರಿ ಪಡೆದದು, ದಕ್ಷಿಣ ಭಾರತದ ಹಾಲಿವುಡ್ ಎಂದೇ ಕರೆಯಲಾಗುವ ಮದ್ರಾಸ್ ಈಗ ಚೆನ್ನೈಗೆ. ಅಲ್ಲಿ ವಿಜಯಲಕ್ಷ್ಮಿಯ ದೂರದ ಸಂಬಂಯೊಬ್ಬರು ನೆಲೆ ನಿಂತಿದ್ದರು. ಹುಡುಗಿ ನೋಡಲು ಅಪ್ಸರೆಯಂತಿರುವುದನ್ನು ನೋಡಿದ ಸಂಬಂ ಸಿನಿಮಾ ನಿರ್ದೇಶಕನ ಬಳಿಗೆ ಕರೆದುಕೊಂಡು ಹೋದರು.
ಅಲ್ಲಿ ಬದಲಾಯಿತು ನೋಡಿ ವಿಜಯಲಕ್ಷ್ಮಿಯ ಅದೃಷ್ಟ. ೧೯೭೯ರ ‘ವಂಡಿ ಚಕ್ರಂ’ನಲ್ಲಿ ಸಣ್ಣ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಳು. ಅಲ್ಲಿಯ ಅವಳ ಪಾತ್ರದ ಹೆಸರೇ ಸಿಲ್ಕ್. ಈ ಚಿತ್ರದ ನಂತರ ವಿಜಯಲಕ್ಷ್ಮಿಯ ಹೆಸರು ಮರೆಯಾಗಿ ‘ಸಿಲ್ಕ್ ಸ್ಮಿತಾ’ ಬಂದು ಬಿಟ್ಟಿತು. ಅಲ್ಲಿಂದ ಸಿಲ್ಕ್ ನಟಿಸಿದ ಸಿನ್ಮಾಗಳ ಸಂಖ್ಯೆ ೨೦೦ಕ್ಕಿಂತ ಅಕ. ಅದು ಕೂಡ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹೀಗೆ ಎಲ್ಲದರಲ್ಲೂ ಐಟಂ ಸಾಂಗ್ಸ್‌ಗಳು ಸಿಲ್ಕ್‌ಗೆ ರಿಸರ್ವ್ ಆಗಿತ್ತು.
ಚಿತ್ರದ ಲೀಡ್ ರೋಲ್‌ನಲ್ಲಿ ಕಾಣುವಷ್ಟು ತಾಕತ್ತು ಸಿಲ್ಕ್ ಬಳಿ ಇದ್ರೂ ಅವಳು ಸಿನಿಮಾ ಜಗತ್ತಿನಲ್ಲಿ ಬರೀ ಐಟಂ ಬೊಂಬೆಯಾಗಿ ಮೆರೆದು ನಿಂತಳು. ೭೦-೮೦ರ ದಶಕಗಳಲ್ಲಿ ಬರೀ ಬಿಕಿನಿಯಲ್ಲಿ ಸಿಲ್ಕ್ ಕುಣಿಯುವ ಮೂಲಕ ದಕ್ಷಿಣ ಭಾರತದ ಐಟಂ ಸಾಂಗ್‌ನಲ್ಲಿ ಮಾದಕತೆಯನ್ನು ಬಿಚ್ಚಿಟ್ಟಳು. ಸಿಲ್ಕ್ ಕೌಟುಂಬಿಕ ಚಿತ್ರಗಳಲ್ಲಿ ನಟಿಸಿದಾಗಲೂ ಪ್ರೇಕ್ಷಕರು ಅವಳನ್ನು ಸೆಕ್ಸ್ ಸಿಂಬಲ್ ರೀತಿಯಲ್ಲಿ ನೋಡಲು ಬಯಸಿದರು. ಅದರಲ್ಲೂ ‘ಮೂನ್‌ಡ್ರಮ್ ಪಿರೈ’ ತಮಿಳು ಸಿನಿಮಾ ಸಿಲ್ಕ್ ಸ್ಮಿತಾರನ್ನು ಒಂದು ಪಕ್ಕಾ ಕೌಟುಂಬಿಕ ಹುಡುಗಿಯ ಇಮೇಜ್ ಕ್ರಿಯೇಟ್ ಮಾಡಿ ಕೊಟ್ಟಿತ್ತು. ಅದೇ ಚಿತ್ರ ಹಿಂದಿಯಲ್ಲಿ ‘ಸದ್ಮಾ’ ಎನ್ನುವ ಹೆಸರಿನಲ್ಲಿ ರಿಮೇಕ್ ಆಯಿತು.
ಒಂದು ನಿರ್ಧಾರ ಬದುಕು ಕೈ ಬಿಟ್ಟಿತು:
ಸಿಲ್ಕ್ ಸ್ಮಿತಾ ಬರೀ ನಟನೆಯಲ್ಲಿ ಮಿಂಚುತ್ತಿದ್ದಾಗ ಯಾಕೋ ಗೊತ್ತಿಲ್ಲ. ಒಂದು ಕೆಟ್ಟ ನಿರ್ಧಾರಕ್ಕೆ ಬಂದು ನಿಂತುಬಿಟ್ಟಳು. ತಾನೇ ಒಂದು ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಬೇಕು. ಆ ಚಿತ್ರಕ್ಕೆ ಬಂಡವಾಳ ಸುರಿಯಬೇಕು ಎನ್ನುವ ಒಂದು ನಿರ್ಧಾರ ಇಡೀ ಬದುಕು ಕೈಕೊಟ್ಟಿತು. ಹೇಗೆ ಅಂತೀರಾ... ಮುಂದೆ ನೋಡಿ. ನೂರಾರು ಚಿತ್ರಗಳಲ್ಲಿ ಗಳಿಸಿದ್ದ ಹಣವನ್ನು ತಂದು ತನ್ನ ಕನಸ್ಸಿನ ಪ್ರಾಜೆಕ್ಟ್‌ಗಾಗಿ ಸಂಪೂರ್ಣವಾಗಿ ಸುರಿದು ಬಿಟ್ಟಳು. ಚಿತ್ರದ ಆರಂಭದ ನಡೆಯೇ ಬಹಳ ಭಯ ಹುಟ್ಟಿಸಿ ಬಿಟ್ಟಿತು. ಚಿತ್ರದ ಅರ್ಧ ಭಾಗ ಮುಗಿದು ಹೋಗುತ್ತಿದ್ದಾಗಲೇ ಸಿಲ್ಕ್‌ರ ಜೋಳಿಗೆಯಲ್ಲಿದ್ದ ಹಣವೆಲ್ಲವೂ ಖಾಲಿಯಾಗುತ್ತಿತ್ತು. ಬಹಳಷ್ಟು ನಂಬಿಕೆ ಇಟ್ಟುಕೊಂಡು ಮಾಡಿದ ಪ್ರಾಜೆಕ್ಟ್ ಕತೆ ಈ ರೀತಿಯಾದರೆ, ತಾನು ಬಿದ್ದು ಬಿದ್ದು ಪ್ರೀತಿಸಿದ್ದ ಪ್ರೇಮಿಯೊಬ್ಬ ಸಿಲ್ಕ್‌ರನ್ನು ದೂರ ಮಾಡಿಬಿಟ್ಟ. ಸಿಲ್ಕ್‌ರ ಬದುಕು ಸೂತ್ರವಿಲ್ಲದ ಗಾಳಿಪಟದಂತೆ ಹಾರಾಡುತ್ತಿತ್ತು.
ಭಾವನೆಗಳ ಜತೆಯಲ್ಲಿ ನರಳಾಟ. ಆರ್ಥಿಕ ಸೋಲಿನ ಭೀತಿಯಿಂದ ಸಿಲ್ಕ್ ನಲುಗಿ ಹೋಗಿದ್ದಳು. ಒತ್ತಡದ ಬದುಕಿನಲ್ಲಿ ತನಗೆ ಗೊತ್ತಿಲ್ಲದೇ ಮಾದಕ ಹುಡುಗಿ ಮದಿರೆಯ ದಾಸಳಾಗಿ ಬಿಟ್ಟಿದ್ದಳು. ಅದು ಕುಡಿತದ ಮತ್ತೋ ಗೊತ್ತಿಲ್ಲ. ಆದರೆ ಮತ್ತೊಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ಮಾಡಿದ್ದಳು. ಸೆಪ್ಟೆಂಬರ್ ೨೩, ೧೯೯೬ ರಂದು ತಾನು ಉಳಿದು ಕೊಂಡಿದ್ದ ಚೆನ್ನೈ ಸಾಲಿಗ್ರಾಮಂ ಫ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಟೇಬಲ್ ಮೇಲೊಂದು ಪುಟ್ಟ ಬಿಳಿ ಕಾಗದವಿತ್ತು. ಅದೇ ಸಿಲ್ಕ್‌ರ ಪುಟ್ಟ ಸೂಸೈಡ್ ನೋಟ್. ಅಲ್ಲಿಗೆ ಸಿಲ್ಕ್ ಸ್ಮಿತಾ ಎನ್ನುವ ಐಟಂ ಹುಡುಗಿಯ ಮಾತಿಗೆ ಫುಲ್‌ಸ್ಟಾಪ್. ಅಲ್ಲಿಂದ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ‘ಸಿಲ್ಕ್ ’ ಎನ್ನುವ ಐಟಂ ಹುಡುಗಿ ಮರೆಯಾಗಿ ಹೋದಳು. ಕಾಲ ಬದಲಾಯಿತು ಸಿನಿಮಾಗಳು ಸಾಲು ಸಾಲಾಗಿ ಬಂದವು.. ಆದರೆ ಅಂದಿನ ಐಟಂ ಹುಡುಗಿ ಸಿಲ್ಕ್‌ನನ್ನು ಹೋಲುವ ಐಟಂ ಹುಡುಗಿಯರು ಮತ್ತೆ ಪ್ರೇಕ್ಷಕರ ಬಂದೇ ಇಲ್ಲ. ಅದೇ ನೋಡಿ ಸಿಲ್ಕ್‌ಗೆ ಇದ್ದ ಕಿಮ್ಮತ್ತು. ಬೆಂಕಿಯಲ್ಲಿ ಅರಳಿದ ಹೂವು ಕೊನೆಗೆ ಬೆಂಕಿಯಲ್ಲಿ ಬೆಂದು ಹೋದವಳ ಪಟ್ಟಿಯಲ್ಲಿ ಸಿಲ್ಕ್ ಖಂಡಿತವಾಗಿಯೂ ಸ್ಥಾನ ಪಡೆದುಕೊಂಡಿದ್ದಾಳೆ.
ದಿ ಡರ್ಟಿ ಪಿಕ್ಟರ್:
ಈಗ ಇದೇ ಸಿಲ್ಕ್‌ರ ಆತ್ಮಕತೆಯನ್ನು ತೆರೆಗೆ ತರುವ ಸಿದ್ಧತೆ ನಡೆಯುತ್ತಿದೆ. ಸಿಲ್ಕ್ ಹೋಗಿ ಬಹಳ ವರುಷಗಳೇ ಉರುಳಿ ಹೋಗಿದೆ. ಇಂತಹ ಟೈಮ್‌ನಲ್ಲಿ ಚಿತ್ರ ಯಾಕೆ ಎನ್ನೋದು ಬಹಳಷ್ಟು ಜನರ ಮಿಕ್ಸಡ್ ಅಭಿಪ್ರಾಯ. ಆದರೆ ಸಿಲ್ಕ್ ಚಿತ್ರ ಬರಬೇಕು ಎನ್ನೋದು ಖ್ಯಾತ ಕಿರುತೆರೆಯ ಹಿರಿ ಬ್ಯಾನರ್‌ನ ನಿರ್ಮಾಪಕಿ ಏಕ್ತಾಕಪೂರ್ ಅವರ ಅಭಿಪ್ರಾಯ. ಅದಕ್ಕಾಗಿ ಏಕ್ತಾ ಕಪೂರ್ ‘ದಿ ಡರ್ಟಿಪಿಕ್ಚರ್’ ಎನ್ನುವ ಹೆಸರಿನಲ್ಲಿ ಸಿಲ್ಕ್ ಸ್ಮಿತಾರ ಬಯೋಗ್ರಾಫಿಯನ್ನು ತೆರೆಗೆ ತರುತ್ತಿದ್ದಾರೆ. ರಿಯಲ್ ಸ್ಟೋರಿಯ ರೀಲ್ ನಾಯಕಿಯಾಗಿ ವಿದ್ಯಾ ಬಾಲನ್ ಕಾಣಿಸಿಕೊಳ್ಳುತ್ತಿದ್ದಾರೆ.
ಒಂದು ಕಾಲದಲ್ಲಿ ದಕ್ಷಿಣ ಭಾರತ ಸಿನಿಮಾಗಳ ಅವಿಭಾಜ್ಯ ಅಂಗವಾಗಿದ್ದ ಐಟಂ ಹುಡುಗಿ ಸಿಲ್ಕ್ ಸ್ಮಿತಾಳ ದುರಂತ ಬದುಕು ಮತ್ತು ಸಾವಿನ ಕಥಾನಕವುಳ್ಳ ಈ ಚಿತ್ರ ಪ್ರೇಕ್ಷಕ ವರ್ಗದಲ್ಲಿ ಆಸಕ್ತಿ ಹುಟ್ಟಿಸುವುದರಲ್ಲಿ ಸಂಶಯವಿಲ್ಲ ಎನ್ನುವುದು ನಿರ್ಮಾಪಕಿ ಏಕ್ತಾ ಕಪೂರ್‌ರ ಮಾತು. ೭೦ರ ದಶಕದಲ್ಲಿ ಪುರುಷ ಪ್ರಧಾನವಾಗಿದ್ದ ಸಿನಿಮಾಗಳಲ್ಲಿ ಸ್ತ್ರೀಯರನ್ನು ಕೇವಲ ಒಂದು ಸೆಕ್ಸ್ ಸಿಂಬಲ್‌ಗಳಾಗಿ ಮಾತ್ರವೇ ಬಿಂಬಿಸಲಾಗುತ್ತಿತ್ತು. ಆ ಕಾಲದಲ್ಲಿ ಸಿಲ್ಕ್ ಸ್ಮಿತಾ ಹೇಗಿದ್ದಳೆಂಬುದನ್ನೆಲ್ಲಾ ತಿಳಿಯಲು ಖಂಡಿತ ಜನ ಕುತೂಹಲ ತಾಳುತ್ತಾರೆ ಎನ್ನುತ್ತಾರೆ ಏಕ್ತಾ.
ಮೂಲಗಳು ಹೇಳುವ ಪ್ರಕಾರ ಸಿಲ್ಕ್ ಸ್ಮಿತಾ ಕಾಲದ ಚಿತ್ರ ನಿರ್ಮಾಪಕನ ಪಾತ್ರವನ್ನು ಅಜಯ್ ದೇವಗನ್ ವಹಿಸಿಕೊಳ್ಳುತ್ತಾರೆ. ಈಗಾಗಲೇ ‘ವನ್ಸ್ ಆಪನ್ ಟೈಮ್ ಇನ್ ಮುಂಬಯಿ’ಯಲ್ಲಿ ‘ಸುಲ್ತಾನ್’ ಎನ್ನುವ ಡಾನ್ ಪಾತ್ರ ಮಾಡಿದ ಅಜಯ್ ಈ ಪಾತ್ರಕ್ಕೆ ಒಗ್ಗಿಕೊಳ್ಳುತ್ತಾರೆ ಎನ್ನೋದು ಚಿತ್ರದ ನಿರ್ದೇಶಕ ಮಿಲನ್ ಲೂತ್ರಿಯಾರ ಮಾತು. ಈಗಾಗಲೇ ವಿದ್ಯಾಬಾಲನ್ ‘ಪರಿಣಿತಾ’, ‘ಇಷ್ಕಿಯಾ’ ಚಿತ್ರಗಳಲ್ಲಿ ಗಮನ ಸೆಳೆದಿದ್ದು, ಹಳ್ಳಿಯ ಬಡ ಹುಡುಗಿಯಿಂದ ಮಾದಕ ನಟಿಯ ಮಟ್ಟಕ್ಕೆ ಬೆಳೆದ ಸಿಲ್ಕ್ ಸ್ಮಿತಾಳ ಸಂಕೀರ್ಣ ಮತ್ತು ದುರಂತಗಾಥೆಯನ್ನು ಬಿಂಬಿಸುವ ಪಾತ್ರಕ್ಕೆ ಎಷ್ಟರ ಮಟ್ಟಿಗೆ ವಿದ್ಯಾಬಾಲನ್ ಜೀವ ತುಂಬುತ್ತಾರೆಂಬುವುದನ್ನು ಕಾದು ನೋಡಬೇಕು.
No comments:
Post a Comment