Friday, March 11, 2011

ಕೊಂಕಣಿ ಭಾಷೆಗೆ ಬಿದ್ದಿದೆ ಕಿಡಿ !

ಒಂದು ಸಣ್ಣ ಕಿಡಿಯಿಂದ ಕಾಡು ನಾಡಾಯಿತು, ನಾಡು ನಗರವಾಯಿತು, ನಗರ ದೇಶವಾಯಿತು, ದೇಶ ವಿಶ್ವವಾಯಿತು. ಈಗ ಇಂತಹ ಒಂದು ಕಿಡಿ ಕೊಂಕಣಿ ಸಾಹಿತ್ಯ ವಲಯದಲ್ಲಿ ಬಿದ್ದಿದೆ. ಬನ್ನಿ ಕಿಡಿಯ ಮೂಲದ ಕಡೆ ಹುಡುಕಾಡೋಣ....
ಕನ್ನಡ ಸೇರಿದಂತೆ ಯಾವುದೇ ಪ್ರಾದೇಶಿಕ ಭಾಷೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಿ ನೂರಾರು ಬ್ಲಾಗ್‌ಗಳು, ಅಂರ್ತಜಾಲಗಳು ಬಾಯಿ ತೆರೆದು ನಿಮ್ಮನ್ನು ಹತ್ತಿರಕ್ಕೆ ಕರೆದುಕೊಂಡು ಬಿಡುತ್ತದೆ. ನಾನಾ ಬಗೆಯ ಬರಹಗಳು, ವಿಚಾರ, ಬದುಕು- ಬವಣೆಗಳ ನುಡಿಚಿತ್ರಗಳು ಅಂರ್ತಜಾಲದ ದುನಿಯಾದಲ್ಲಿ ಥಟ್ ಅಂತಾ ಗಮನಸೆಳೆದು ಬಿಡುತ್ತದೆ. ಈಗ ಎಲ್ಲೆಡೆ ತಿರುಗಾಡಿದ್ದು ಸಾಕು. ನಮ್ಮ ಕುಡ್ಲ ಏರಿಯಾಕ್ಕೆ ಬನ್ನಿ. ಕರಾವಳಿಯಲ್ಲಿರುವ ಕೊಂಕಣಿ ಭಾಷೆಯಲ್ಲೊಂದು ಈಗ ಅಂರ್ತಜಾಲದ ಹೊಸ ಪುಟವೊಂದು ತೆರೆದಿದೆ. ಕೊಂಕಣಿಯಲ್ಲಿ ‘ಕಿಟಾಳ್’ ಬಂದಿದೆ. ಕನ್ನಡದಲ್ಲಿ ಹೇಳುವುದಾದರೆ ‘ಕಿಡಿ’. ಈಗ ಇದೇ ಕಿಟಾಳ್ ಕೊಂಕಣಿ ಭಾಷಿಗರ ಅಂರ್ತಜಾಲದ ಪುಟದಲ್ಲಿ ಮೊದಲ ಸ್ಥಾನದಲ್ಲಿ ಇಣುಕಾಡುತ್ತಿದೆ.
ತನ್ನ ನಿಷ್ಠುರ ಬರಹಗಳಿಂದ, ವಿಮರ್ಶೆಗಳಿಂದ ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಮನೆಮಾತಾಗಿರುವ ಎಚ್.ಎಂ. ಪೆರ್ನಾಳ್ ಅವರ ಕನಸಿನ ಕೂಸು. ಕಿಟಾಳ್‌ನ ಟ್ಯಾಗ್‌ಲೈನ್ ಹೇಳುವಂತೆ ‘ಉಜ್ಯಾಕ್ ದಾಕ್ಶೆಣ್ ನಾ’ (ಬೆಂಕಿಗೆ ಸುಡುವುದೇ ಗುಣ) ಎನ್ನುವುದು ಅಂರ್ತಜಾಲದ ಬರಹದ ತೀವ್ರತೆಯನ್ನು ಬಿಂಬಿಸುತ್ತದೆ. ಹೆನ್ರಿ ಮೆಂಡೋನ್ಸಾ ಅವರ ಕಾವ್ಯನಾಮ ಎಚ್.ಎಂ. ಪೆರ್ನಾಳ್. ಮೂಲತಃ ಉಡುಪಿ ಜಿಲ್ಲೆಯ ಪೆರ್ನಾಳ್‌ನವರು. ಓದಿದ್ದು ಬಿ.ಕಾಂ. ವಿದ್ಯಾರ್ಥಿಯಾಗಿರುವಾಗಲೇ ತರಂಗ , ಸುದ್ಧಿಸಂಗಾತಿ , ಸಂಕ್ರಮಣದಲ್ಲಿ ಅವರು ಬರೆದ ಸಣ್ಣಕಥೆ , ಕವಿತೆ ಮತ್ತು ಲೇಖನಗಳ ಮೂಲಕ ಗಮನ ಸೆಳೆದವರು. ಹುಡುಗರೇ ಹುಷಾರ್ , ಕಯ್ದ್ಯಾಚ್ಯೊ ಕವಿತಾ(ಕೈದಿಯ ಕವಿತೆಗಳು), ಭಾಮ್ಣಾಂಚೆಂ ಚೆಡುಂ(ಬ್ರಾಹ್ಮಣರ ಹುಡುಗಿ) ಕವನ ಸಂಕಲನಗಳು. ದೆವಾಕ್ ಸೊಡುಲ್ಲೊ ಪಾಡೊ (ದೇವರಿಗೆ ಬಿಟ್ಟ ಹೋರಿ) ಕಥಾ ಸಂಕಲನ ಈಗಾಗಲೇ ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಗಮನ ಸೆಳೆದಿದೆ. ಕಳೆದ ಕೆಲವು ವರ್ಷಗಳಿಂದ ಸಾಹಿತ್ಯ ಮತ್ತು ಸಂಸ್ಕೃತಿ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಿಟಾಳ್ ಹೊತ್ತಿಸಿದಾಗ:
ಕಿಡಿ ನಾಗರಿಕತೆಯ ಆರಂಭ. ಒಂದು ಸಣ್ಣ ಕಿಡಿಯಿಂದ ಕಾಡು ನಾಡಾಯಿತು, ನಾಡು ನಗರವಾಯಿತು , ನಗರ ದೇಶವಾಯಿತು , ದೇಶ ವಿಶ್ವವಾಯಿತು. ಆದರೆ ಇಂದಿನ ನಾಗರಿಕ ಸಮಾಜದಲ್ಲಿ ಕಾಡಾಗುತ್ತಿದೆ. ಮನುಷ್ಯ ಮತ್ತೆ ಮೃಗವಾಗುತಿದ್ದಾನೆ. ಮತ್ತೆ ಸಮಾಜದಲ್ಲಿ ಜಾಗೃತಿ ತರಲು ಒಂದು ಕಿಡಿಯ ಅಗತ್ಯದ ಹಿನ್ನೆಲೆಯಲ್ಲಿ ಕಿಟಾಳ್(ಕಿಡಿ) ಹುಟ್ಟಿಕೊಂಡಿದೆ. ಬದಲಾವಣೆ ಪ್ರಕೃತಿಯ ನಿಯಮ ನಿಜ. ಆದರೆ ಅದು ತನ್ನಿಂತಾನೆ ಆಗಲ್ಲ. ನಾಗರಿಕ ಸಮಾಜದಲ್ಲಿ ಬದಲಾವಣೆ ಬರಬೇಕಾದರೆ ಮೊದಲು ಜಾಗೃತಿ ಮೂಡಬೇಕು. ಮತ್ತು ಆ ಜಾಗೃತಿ ಮೂಡಿಸುವ ಕೆಲಸ ಸಾಹಿತ್ಯದಿಂದಾಗಬೇಕು. ಕಿಟಾಳ್ ಕೊಂಕಣಿ ಸಾಹಿತ್ಯಕ್ಕೆ ಕಸುವು ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎನ್ನೋದು ಎಚ್. ಎಂ. ಪೆರ್ನಾಳ್‌ರ ವಾದ.
ಕೊಂಕಣಿ ಸಾಹಿತ್ಯ, ಸಂಗೀತ , ಸಾಂಸ್ಕ್ರತಿಕ ಕಾರ್ಯಕ್ರಮಗಳ ಬಗ್ಗೆ ಓದುಗರಿಗೆ ಮಾಹಿತಿ ನೀಡುವುದು. ಉತ್ತಮ ಗುಣಮಟ್ಟದ ಸಣ್ಣಕಥೆ , ಕವಿತೆ , ಹಾಸ್ಯಬರೆಹ , ವಿಚಾರ , ಪುಸ್ತಕ, ಎಚ್ಚೆಮ್ ವಿಚಾರ್ ಎಂಬ ಸಂಪಾದಕೀಯವನ್ನೂ ಕಿಟಾಳ್ ಪ್ರಕಟಿಸುತ್ತದೆ. ಅಂದಹಾಗೆ ಅದೆಲ್ಲವೂ ಕೊಂಕಣಿ ಭಾಷೆಯಲ್ಲಿ ಮಾತ್ರ ಲಭ್ಯವಾಗಿರುತ್ತದೆ. ಹೀಗೆ ಕಿಟಾಳ್‌ನಲ್ಲಿ ಬಂದ ಬರಹಗಳನ್ನು ವರ್ಷಾಂತ್ಯಕ್ಕೆ ಒಟ್ಟು ಸೇರಿಸಿ ಪುಸ್ತಕದ ರೂಪ ನೀಡಲಾಗುತ್ತದೆ. ಅಂದಹಾಗೆ ಕಿಟಾಳ್ ಯಾವುದೇ ಜಾಹೀರಾತುಗಳಿಂದ ನಡೆಯದ ಅಂರ್ತಜಾಲ. ಅದಕ್ಕಾಗಿ ಈ ಅಂರ್ತಜಾಲಕ್ಕೆ ಸದಸ್ಯರಾದರೇ ಬಹಳ ಉತ್ತಮ. ಈ ರೀತಿ ಸದಸ್ಯರಾದವರಿಗೆ ವರ್ಷಾಂತ್ಯಕ್ಕೆ ಕಿಟಾಳ್ ವರ್ಷದ ಹೊತ್ತಗೆ ನೀಡಲಾಗುತ್ತದೆ ಎನ್ನುತ್ತಾರೆ ಕಿಟಾಳ್‌ನ ಮಾಲೀಕ ಕಮ್ ಬರಹಗಾರ ಎಚ್.ಎಂ. ಪೆರ್ನಾಳ್. ಉಳಿದಂತೆ ಹೆಚ್ಚಿನ ಮಾಹಿತಿಗೆ ಒಂದ್ ಸಾರಿ
www.kittall.com

No comments:

Post a Comment