
ಎಸ್‌ಎಸ್‌ಎಲ್‌ಸಿ ಮುಗಿಸಲು ಪರದಾಡುತ್ತಿದ್ದ ಹುಡುಗ ಈಗ ಇಂಟರ್ ನ್ಯಾಷನಲ್ ಫೇಮ್. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಾಹಿನಿಗಳಲ್ಲಿ ಕ್ಯಾಮೆರಾ ವರ್ಕ್ ಎಂಬ ನೇಮ್ ಪ್ಲೇಟಿನಲ್ಲಿ ಲಕ್ಷ್ಮೀಶ್ ಶೆಟ್ಟಿಯ ಹೆಸರು ಚಾಲ್ತಿಯಲ್ಲಿದೆ. ಕ್ಯಾಮೆರಾದಲ್ಲಿ ಬದುಕಿನ ಹುಡುಕಾಟದ ಜಾಡು ಹಿಡಿದು ಅವರ ಹೆಜ್ಜೆ.
ಕಾರ್ಕಳದ ಪುಟ್ಟ ಹೃದಯ ಎಂದೇ ಬಿಂಬಿತ ಅಜೆಕಾರಿನ ಜ್ಯೋತಿ ಹೈಸ್ಕೂಲ್‌ಗೆ ಹೋಗುತ್ತಿದ್ದ ಈ ಹುಡುಗ ಕಲಿಕೆಯಲ್ಲಿ ದಡ್ಡ. ಆದರೆ ಭಾರೀ ಚುರುಕು. ಈಗ ಅವನದು ಅಂತಾರಾಷ್ಟ್ರೀಯ ಪ್ರಸಿದ್ಧಿ. ಎಸ್ ಎಸ್‌ಎಲ್‌ಸಿ ಮುಗಿಸಲು ಕಷ್ಟ ಪಡುತ್ತಿದ್ದ ಹುಡುಗನನ್ನು ನೋಡಿದ ಅಜೆಕಾರಿನ ಹಿರಿ ತಲೆಗಳು ಅಂದು ನೀನು ಗದ್ದೆ ಉಳಲು ಲಾಯಕ್ಕು ಎಂದಿದ್ದುಂಟು. ಈಗ ಅವರಿಂದಲೇ ಮೆಚ್ಚು ಮಾತು. ಅಂತೂ ಇಂತೂ ಅವನು ಎಸ್‌ಎಸ್ ಎಲ್‌ಸಿ ಮುಗಿಸಿದಾಗ ಇಡೀ ಊರೇ ಅವನಿಗಾಗಿ ಖುಶಿ ಪಟ್ಟಿತು. ಚಡ್ಡಿ ಹಾಕಿಕೊಂಡು ಚೂಟಿಯಿಂದ ಓಡಾಡುತ್ತಿದ್ದ ಪುಟ್ಟ ಹುಡುಗ ‘ನೀನು ಎಸ್‌ಎಸ್‌ಎಲ್‌ಸಿ ಪಾಸ್ ಆಗಿದ್ದೀಯಾ ’ ಅಂತಾ ಸ್ನೇಹಿತರು ಬಂದು ಹೇಳಿದಾಗ ಖುಷಿಯೋ ಖುಷಿ.
ಈಗ ಅದೇ ಹುಡುಗನಿಗಾಗಿ ದೇಶದ ಬಹುತೇಕ ಚಾನೆಲ್‌ಗಳು ಮುಗಿಬೀಳುತ್ತಿವೆ. ಚಾನೆಲ್‌ಗೆ ಬಂದರೆ ಸಾಕಪ್ಪಾ ಎಂದು ಗೋಗೆರೆಯುವ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದ ಚಾನೆಲ್‌ನ ಸಿಇಒಗಳಿದ್ದಾರೆ. ಕಾರ್ಕಳದ ಅಜೆಕಾರಿನ ಮರ್ಣೆಯ ಲಕ್ಷ್ಮೀಶ್ ಶೆಟ್ಟಿ ಪಕ್ಕಾ ಗ್ರಾಮೀಣ ಪ್ರತಿಭೆ. ಅಜೆಕಾರಿನ ಕೃಷಿ ಕುಟುಂಬದ ಅಶೋಕ್ ಶೆಟ್ಟಿ ಹಾಗೂ ಲಲಿತಾ ಶೆಟ್ಟಿ ಅವರ ಹಿರಿಯ ಪುತ್ರ ಈ ಲಕ್ಷ್ಮೀಶ್ ಶೆಟ್ಟಿ. ಇಂದು ಸುಮಾರು ೮೭ ದೇಶಗಳ ೨೦೦ಕ್ಕೂ ಅಕ ಮಹಾನಗರಗಳಲ್ಲಿ ನಡೆದಿರುವ ವಿವಿಧ ಸಂಗೀತ, ನೃತ್ಯ ಪ್ರದರ್ಶನ, ಕ್ರೀಡೆ, ಅಮೇಜಿಂಗ್ ರೇಸ್ ಸೌತ್ ಈಸ್ಟ್ ಏಷ್ಯಾದಂತಹ ರಿಯಾಲಿಟಿ ಕಾರ್ಯಕ್ರಮಗಳ ಚಿತ್ರೀಕರಣ ಮಾಡಿದ್ದಾರೆ.
ಬಾಲ್ಯದಲ್ಲೇ ಕ್ಯಾಮರಾ ನಂಟು
ಅಜೆಕಾರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಲಕ್ಷ್ಮೀಶ್ ಶೆಟ್ಟಿಗೆ ಪಾಠದ ಕಡೆ ಗಮನ ಕಡಿಮೆ. ಪಠ್ಯೇತರ ಚಟುವಟಿಕೆಗಳತ್ತಲೇ ಒಲವು. ಶಾಲೆಗೆ ಫೋಟೋ ಕ್ಲಿಕ್ ಮಾಡಲು ಬಂದಿದ್ದ ಫೋಟೋಗ್ರಾಫರ್‌ನನ್ನು ನೋಡಿದ ಲಕ್ಷ್ಮೀಶ್‌ನಿಗೆ ಅದೇ ವೃತ್ತಿ ಮಾಡಬೇಕೆನ್ನುವ ಆಸೆ . ನಂತರ ಇತ್ತ ಕಡೆ ಶಿಕ್ಷಣ ಮುಗಿದು ಹೋಗುತ್ತಿದ್ದಂತೆ ಪೋಟೋಗ್ರಾಫಿಯ ಮೇಲೆ ಹೆಚ್ಚು ಆಸಕ್ತಿ ಬೆಳೆಯಿತು. ಮುಂದೆ ಸಂಪೂರ್ಣವಾಗಿ ಎಸ್‌ಎಸ್‌ಎಲ್‌ಸಿಯಲ್ಲಿಯೇ ಶಿಕ್ಷಣಕ್ಕೆ ಗುಡ್‌ಬೈ ಹೇಳಿ ಬ್ರಹ್ಮಾವರದ ನವಿ ಕಾವೇರಿ ಪೋಟೋ ಸ್ಟುಡಿಯೋದ ಮಾಲೀಕ ಚಂದ್ರಕಾಂತ್ ಆಚಾರ್ಯ ಅವರ ಬಳಿಯಲ್ಲಿ ಫೋಟೋಗ್ರಾಫಿಯ ಅಧ್ಯಯನ ಆರಂಭ. ಉಡುಪಿಯ ಕಲ್ಸಂಕದಲ್ಲಿರುವ ಮಾಡರ್ನ್ ಸ್ಟುಡಿಯೋದ ಮಾಲೀಕ ಅರುಣ್ ಶಿರಾಲಿ ಲಕ್ಷ್ಮೀಶ್‌ರ ಕೈಗೆ ವಿಡಿಯೋ ಕ್ಯಾಮೆರಾ ಕೊಟ್ಟಾಗ ಪಟ್ಟ ಖುಷಿ ಇಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅನುಭವದ ಆಳದೊಳಗೆ ಲಕ್ಷ್ಮೀಶ್ ಇಳಿದು ಹೋದರು.
ಬೆಂಗಳೂರು ದೂರದರ್ಶನದ ನಿರ್ದೇಶಕರಾಗಿದ್ದ ಶಿವಾನಂದ ಬೇಕಲ್ ಸಹಾಯದಿಂದ ಎಚ್.ಎಮ್.ಕೆ ಮೂರ್ತಿಯವರ ಮಾಲೀಕತ್ವದ ಓಂ ಶ್ರೀ ಫಿಲಂಸ್ ನಿರ್ಮಾಣ ಮಾಡುತ್ತಿದ್ದ ಧಾರಾವಾಹಿ, ಟೆಲಿಫಿಲ್ಮ್‌ಗಳ ಚಿತ್ರೀಕರಣದಲ್ಲಿ ಸೆಕೆಂಡ್ ಯೂನಿಟ್ ಕ್ಯಾಮೆರಾ ಮ್ಯಾನ್ ಆಗಿ ಸೇರಿಕೊಂಡರು. ಬಳಿಕ ಝೀ ಟಿವಿಯ ನ್ಯೂಸ್ ಚಾನೆಲ್‌ಗೆ ಕ್ಯಾಮೆರಾಮನ್ ಆಗಿ ಸೇರಿಕೊಂಡು ಅಲ್ಲಿಂದ ಆಜ್‌ತಕ್,ಎನ್‌ಡಿ ಟಿವಿ ಮುಂತಾದ ನ್ಯೂಸ್ ಚಾನೆಲ್‌ಗಳಲ್ಲಿ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸಿದರು. ೧೯೯೬ರ ನಂತರ ಎಎನ್‌ಐ ನ್ಯೂಸ್ ಏಜೆನ್ಸಿಯ ಬೆಂಗಳೂರು ಬ್ಯೂರೋ ಕ್ಯಾಮೆರಾಮನ್. ದೇಶದ ಮೊದಲ ಖಾಸಗಿ ಸುದ್ದಿವಾಹಿನಿಯಾಗಿದ್ದ ಟಿವಿ ಇಂಡಿಯಾದ ಲಕ್ನೋ, ಅಹಮದಾಬಾದ್ ಬ್ಯೂರೋದ ಮುಖ್ಯ ಕ್ಯಾಮೆರಾಮನ್ ಆಗಿ ಕೆಲಸ ನಿರ್ವಹಿಸಿದರು. ನಂತರ ಟಿವಿ ಇಂಡಿಯಾದ ನ್ಯೂಸ್ ಬ್ಯೂರೋದ ಮುಖ್ಯಸ್ಥರಾಗಿದ್ದ ಇಮ್ರಾನ್ ಖುರೇಶಿ ನೆರವಿನಿಂದ ದಿಲ್ಲಿಯ ನ್ಯೂಸ್ ಚಾನೆಲ್‌ನ ಉತ್ತರಪ್ರದೇಶ ನ್ಯೂಸ್ ಬ್ಯೂರೋಗೆ ಕ್ಯಾಮೆರಾಮನ್ ಆಗಿ ಸೇರ್ಪಡೆಯಾದರು.
ಅದು ಉತ್ತರ ಪ್ರದೇಶದಲ್ಲಿ ಮಾಯಾವತಿ ಸರಕಾರ ಇದ್ದ ಕಾಲ. ಇದೇ ಸಮಯದಲ್ಲಿ ಆಡಳಿತ ಪಕ್ಷದ ಶಾಸಕರು ಮತ್ತು ವಿರೋಧ ಪಕ್ಷದ ಶಾಸಕರು ಸದನದಲ್ಲಿ ಮೈಕ್‌ನಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದ ದೃಶ್ಯಗಳನ್ನು ಬೇರಾವ ಚಾನೆಲ್‌ಗಳು ಚಿತ್ರೀಕರಣ ಮಾಡಲಿಲ್ಲ. ಆದರೆ ಲಕ್ಷ್ಮೀಶ್ ಶೆಟ್ಟಿಯವರು ಚಿತ್ರೀಕರಿಸಿದ್ದರು. ನಂತರ ಸರಕಾರವೂ ಪತನಗೊಂಡದ್ದು ಈಗ ಹಳೇ ಸುದ್ದಿ. ಬಳಿಕ ಟಿವಿ ಇಂಡಿಯಾ ನ್ಯೂಸ್ ಚಾನೆಲ್‌ನ ಕ್ಯಾಮೆರಾಮನ್ ಆಗಿ ಕಾರ್ಗಿಲ್ ಯುದ್ದದ ೬೨ ದಿನಗಳನ್ನು ಭಾರತೀಯ ಸೇನೆಯ ಜತೆಗಿದ್ದು ಗುಂಡಿನ ಕಾಳಗದ ನೈಜ ದೃಶ್ಯಗಳನ್ನು ಸೆರೆಹಿಡಿದಿದ್ದರು.
೧೯೯೯ರಲ್ಲಿ ಲಂಡನ್ ಕ್ರೀಡಾ ಸುದ್ದಿ ಸಂಸ್ಥೆ ಟಿ.ಡಬ್ಲ್ಯೂ.ಐ ನ ಕ್ಯಾಮೆರಾಮನ್ ಆಗಿ ಮಲೇಷ್ಯಾ, ಸಿಂಗಪುರ,ಶ್ರೀಲಂಕಾ,ಪಾಕಿಸ್ತಾನ, ಚೀನಾ ಮುಂತಾದ ದೇಶಗಳಲ್ಲಿ ನಡೆಯುತ್ತಿದ್ದ ಟೆನ್ನಿಸ್, ಕ್ರಿಕೆಟ್, ಇನ್ನಿತರ ಪಂದ್ಯಗಳ ನೇರಪ್ರಸಾರಗಳಲ್ಲಿ ಪ್ರಮುಖ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸಿದ್ದರು. ಎಂಟಿವಿ ಮ್ಯೂಸಿಕ್ ಚಾನೆಲ್‌ನಲ್ಲಿ ಪ್ರಸಾರವಾಗುವ ಮ್ಯೂಸಿಕ್ ಶೋಗಳ ಚಿತ್ರೀಕರಣದ ಜವಾಬ್ದಾರಿ ವಹಿಸಿದರು. ೨೦೦೨ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಗುತ್ತಿದ್ದ ‘ಕೌನ್ ಬನೇಗಾ ಕರೋಡ್‌ಪತಿ’, ‘ಕಿಸ್ ಮೇ ಕಿತ್ನಾ ಹೈ ಧಮ್’ ಎಂಬ ಶೋಗಳಲ್ಲಿ ಮೇಜರ್ ಕ್ಯಾಮೆರಾಮನ್ ಅಗಿ ಮಹತ್ವದ ಜವಾಬ್ದಾರಿ ನಿರ್ವಹಿಸಿ ಸೈ ಎನಿಕೊಂಡಿದ್ದರು.
ಇದಲ್ಲದೇ ಎನ್.ಜಿ.ಸಿ. ಡಿಸ್ಕವರಿ, ಎ.ಎಕ್ಸ್.ಎನ್ ಚಾನೆಲ್‌ನ ‘ಸೌತ್ ಈಸ್ಟ್ ಏಶಿಯಾ’ ವ್ಯಾಪ್ತಿಯಲ್ಲಿ ನಡೆಯುವ ‘ಅಮೇಜಿಂಗ್ ರೇಸ್ ಸೌತ್ ಈಸ್ಟ್ ಏಷ್ಯಾ’ಎಂಬ ಪ್ರತಿಷ್ಠಿತ ಅಂತಾರಾಷ್ಟೀಯ ಸ್ಪರ್ಧೆಯ ನಿರಂತರ ೯೦ ಗಂಟೆಗಳ ಶೂಟಿಂಗ್ ಸಮರ್ಥವಾಗಿ ನಿಭಾಯಿಸಿದ್ದು, ಈ ಚಿತ್ರೀಕರಣದ ಟೇಪ್ ಉತ್ತಮ ನಾನ್‌ಸ್ಕ್ರಿಪ್ಟೆಡ್ ರಿಯಾಲಿಟಿ ಶೋಗೆ ನಾಮನಿರ್ದೇಶನವಾಯಿತಲ್ಲದೇ, ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯುವ ಟೆಲಿವಿಷನ್ ವರ್ಲ್ಡ್‌ಗೆ ನೀಡುವ ಗೌರವಾನ್ವಿತ ‘ಎಮಿ’ ಪ್ರಶಸ್ತಿ ಸುತ್ತಿಗೂ ಬಂದಿತ್ತು.
ಬಂಡಸಾಲೆಯಲ್ಲಿ ದುಡಿದ ಯುವಕ:
ದೂರದ ಮುಂಬಯಿಯ ನೆರೋಲ್ ಆರ್ಮಿ ಕಾಲೋನಿಯಲ್ಲಿದ್ದರೂ ತಿಂಗಳಿಗೊಮ್ಮೆಯಾದರೂ ತಾನು ಹುಟ್ಟಿದ ಊರಿಗೆ ಬರುತ್ತಾರೆ. ಇವರು ಕೆಲ ವರ್ಷಗಳ ಹಿಂದೆ ಶಿಕ್ಷಣ ವಂಚಿತ ಮಕ್ಕಳಿಗಾಗಿ ಮೊದಲ ಬಾರಿಗೆ ತುಳು ಭಾಷೆಯಲ್ಲಿ ನಿರ್ಮಿಸಿದ್ದ ‘ಬರವುದ ಬಂಡಸಾಲೆ’ ಎಂಬ ಕಿರುಚಿತ್ರ ವಿಶೇಷ ಜನಮನ್ನಣೆಗೆ ಪಾತ್ರವಾಗಿತ್ತು. ‘ಅಂದಿನ ಕಾಲದಲ್ಲಿ ತುಳು ಸಿನೆಮಾ ಹಾಗೂ ರಂಗಭೂಮಿ ಬಹಳ ಸೊರಗಿ ಹೋಗಿತ್ತು. ಈ ಸಂದರ್ಭ ತುಳುವಿನಲ್ಲಿ ಕಿರುಚಿತ್ರಗಳ ನಿರ್ಮಾಣ ಕಾರ್‍ಯ ಸರಿಯಾಗಿ ನಡೆಯುತ್ತಿರಲಿಲ್ಲ. ಈಗಲೂ ಇಲ್ಲಿನ ರಂಗಭೂಮಿ ಹಾಗೂ ತುಳು ನಿರ್ದೇಶಕರಲ್ಲಿರುವ ರಾಜಕಾರಣ, ತಾಂತ್ರಿಕವಾಗಿ ತುಳು ಚಿತ್ರೋದ್ಯಮ ಇತರ ಚಿತ್ರೋದ್ಯಮಗಳಿಗೆ ಸರಿಯಾಗಿ ಬೆಳೆಯದೆ ಇರೋದು ಇಲ್ಲಿನ ಉದ್ಯಮ ಹಿಂದೆ ಉಳಿಯಲು ಮುಖ್ಯ ಕಾರಣ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಹುಡುಕುವ ಅವಶ್ಯಕತೆ ಈಗ ನಿರ್ಮಾಣವಾಗಿದೆ. ಸದ್ಯದಲ್ಲೇ ಕಿರುಚಿತ್ರ ಹಾಗೂ ಚಲನಚಿತ್ರಗಳನ್ನು ತಯಾರಿಸುವ ಕುರಿತು ಚಿಂತನೆ ನಡೆಸುತ್ತಿದ್ದೇನೆ ಎಂದು ಲಕ್ಷ್ಮೀಶ್ ಮುಂದಿನ ತುಳುನಾಡಿನ ಯೋಜನೆಗಳನ್ನು ತೆರೆದಿಟ್ಟರು.
‘ಸ್ಟಡಿ ಕ್ಯಾಮೆರಾ’ ಎಂಬ ಅದ್ಬುತ !
೩೫ ವರ್ಷಗಳ ಇತಿಹಾಸ ಇರುವ ಸ್ಟಡಿ ಕ್ಯಾಮೆರಾ ಮೇಡ್ ಇನ್ ಯುಎಸ್‌ಎಯ ಪ್ರಾಡಕ್ಟ್. ೩೫ ಕೆ.ಜಿಯಷ್ಟು ವೈಟ್ ಇರುವ ಈ ಕ್ಯಾಮೆರಾ ಯುಎಸ್‌ಎ ಡಾಲರ್ ಲೆಕ್ಕಚಾರದಲ್ಲಿ ತೂಗುವುದಾದರೆ ಬರೀ ೬೮ ಸಾವಿರ ಡಾಲರ್ ಅಂತೆ ! ಭಾರತದ ರೂಪಾಯಿಯಲ್ಲಿ ಕೌಂಟ್ ಮಾಡೋದಾದರೆ ಅದು ೩೨ ಲಕ್ಷ ರೂ ಕ್ಯಾಷ್. ಒಂದು ಸಮಾರಂಭದ ಶೂಟಿಂಗ್ ನಡೆಯುತ್ತಿದ್ದಾರೆ ಅದನ್ನು ಯಾವುದೇ ಮೂಲೆಯಿಂದ ಅಥವಾ ಓಡಾಡಿಕೊಂಡು ದೃಶ್ಯಗಳನ್ನು ಶೂಟ್ ಮಾಡುವ ಕ್ಯಾಮೆರಾವನ್ನು ಸ್ಟಡಿ ಕ್ಯಾಮೆರಾ ಎಂದು ಕರೆಯಲಾಗುತ್ತದೆ. ದೇಶದಲ್ಲಿ ಇಂತಹ ಕ್ಯಾಮೆರಾ ಹೊಂದಿರುವ ಮಂದಿಯನ್ನು ಕೌಂಟ್ ಮಾಡಿದರೆ ಅವರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಅದರಲ್ಲಿ ಒಬ್ಬರು ಲಕ್ಷ್ಮೀಶ್ ಶೆಟ್ಟಿ. ಈ ಕ್ಯಾಮೆರಾದ ಒಂದು ಪ್ಲ ಸ್ ಪಾಯಿಂಟ್ ಏನಪ್ಪಾ ಅಂದರೆ ಓಡಾಡಿಕೊಂಡು ದೃಶ್ಯಗಳನ್ನು ಸೆರೆ ಹಿಡಿದಾಗ ದೃಶ್ಯಗಳು ಕುಣಿಯುವುದಿಲ್ಲ.. ಸ್ಟಡಿಯಾಗಿ ದೃಶ್ಯಗಳು ಒಂದೊಂದಾಗಿ ಹರಿದು ಬರುತ್ತದೆ. ಇದನ್ನು ಬೆಲ್ಟ್‌ನ ಸಹಾಯದಿಂದ ಕಟ್ಟಿಕೊಂಡು ಯಾವುದೇ ಕೋನಗಳಲ್ಲೂ ಸ್ಪಷ್ಟ ಹಾಗೂ ನಿಖರವಾಗಿ ಚಿತ್ರೀಕರಣ ಮಾಡಬಹುದು.
.........
ಚಿತ್ರ : ಕೃಷ್ಣ ಕುಮಾರ್ ಅಜೆಕಾರು
No comments:
Post a Comment