Sunday, March 13, 2011

ಬಾಲಿವುಡ್‌ಗೆ ಕುಡ್ಲದ ಬೆಳಕು !


ಇಡೀ ಬಾಲಿವುಡ್‌ಗೆ ಬೆಳಕು ನೀಡುವವರು ಕುಡ್ಲದವರು ಎಂದರೆ ಅದೊಂದು ಸಿಂಪಲ್ ಸಬ್ಜೆಕ್ಟ್ ಅಲ್ವೇ ಅಲ್ಲ..ಕುಡ್ಲದ ಕಾಪುವಿನ ಕಲ್ಯಾಮೂಡು ಮನೆಯ ಪ್ರದೀಪ್ ಜೆ.ಶೆಟ್ಟಿ, ಪ್ರಕಾಶ್ ಜೆ.ಶೆಟ್ಟಿ ಹಾಗೂ ಪ್ರಶಾಂತ್ ಜೆ. ಶೆಟ್ಟಿ ಸಹೋದರರು ಶ್ರೀ ಗಣೇಶ್ ಮೂವಿ ಲೈಟ್ಸ್ ಎಂಬ ಕಂಪನಿಯನ್ನು ಕಟ್ಟಿಕೊಂಡು ಬಾಲಿವುಡ್‌ಗೆ ಬೆಳಕು ನೀಡುತ್ತಿದ್ದಾರೆ.

ಫುಲ್ ಲೈಟ್ಸ್
ಇದು ಯಾವುದೇ ಸಿನಿಮಾ ಆರಂಭವಾಗುವುದಕ್ಕಿಂತ ಮೊದಲ ಮಾತು. ನಂತರ ಜಗಮಗಿಸುವ ಲೈಟ್‌ಗಳು ಹೊಳೆಯುತ್ತಿರುತ್ತದೆ. ಸಿನಿಮಾ ಕ್ಷೇತ್ರದವರಿಗೆ ಬೆಳಕಿನ ಜತೆಗಿನ ಒಡನಾಟ ಬಹಳಷ್ಟಿರುತ್ತದೆ. ಪ್ರತಿಯೊಂದು ಸೀನ್‌ಗಳ ಮೇಲೆ ಬೆಳಕಿನಾಟದ ಅಧ್ಯಯನವನ್ನು ಸಿರೀಯಸ್ ಆಗಿ ಪ್ರೇಕ್ಷಕರು ಸ್ಟಡಿ ಮಾಡಬೇಕಾದರೆ ಅವರು ಸಿನಿಮಾ ಥಿಯೇಟರ್‌ಗಳಿಗೆ ಹೋಗಬೇಕಾಗುತ್ತದೆ. ಕತ್ತಲೆಯನ್ನು ಬದಿಗೆ ಸರಿಸಿ ಮಿಂಚುವ ಈ ಬೆಳಕಿನ ಕುರಿತು ವ್ಯಾಖ್ಯೆನ ನೀಡುವುದು ಕವಿಗಳಿಗೆ ಮಾತ್ರ ಸಾಧ್ಯ.
ಇಡೀ ಬಾಲಿವುಡ್‌ಗೆ ಬೆಳಕು ನೀಡುವವರು ಕುಡ್ಲದವರು ಎಂದರೆ ಅದೊಂದು ಸಿಂಪಲ್ ಸಬ್ಜೆಕ್ಟ್ ಅಲ್ವೇ ಅಲ್ಲ.. ಕುಡ್ಲದ ಕಾಪುವಿನ ಕಲ್ಯಾಮೂಡು ಮನೆಯ ಪ್ರದೀಪ್ ಜೆ. ಶೆಟ್ಟಿ, ಪ್ರಕಾಶ್ ಜೆ. ಶೆಟ್ಟಿ ಹಾಗೂ ಪ್ರಶಾಂತ್ ಜೆ. ಶೆಟ್ಟಿ ಸಹೋದರರು ಶ್ರೀ ಗಣೇಶ್ ಮೂವಿ ಲೈಟ್ಸ್ ಎಂಬ ಕಂಪನಿಯನ್ನು ಕಟ್ಟಿಕೊಂಡು ಬಾಲಿವುಡ್‌ಗೆ ಬೆಳಕು ನೀಡುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಹಾಗೂ ಬೆಳಕಿನ ಜತೆಯಲ್ಲಿ ಆಡುವ ಸಂಜಯ್ ಲೀಲಾ ಬನ್ಸಾಲಿ ತನ್ನ ‘ಬ್ಲ್ಯಾಕ್’ಚಿತ್ರಕ್ಕಾಗಿ ಈ ಸಹೋದರರನ್ನು ಬಳಸಿಕೊಂಡಿದ್ದರು. ಬರೀ ಲೈಟಿಂಗ್‌ಗಾಗಿಯೇ ಬನ್ಸಾಲಿ ಸಾಹೇಬ್ರು ಎರಡೂವರೆ ಕೋಟಿ ರೂ.ಗಿಂತ ಅಕ ಖರ್ಚು ಮಾಡಿದ್ದರು. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಹೆಸರು ಮಾಡಿತ್ತು.
ಅದಕ್ಕಿಂತಲೂ ಹೆಚ್ಚು ಗಟ್ಟಿ ಕತೆ ಹಾಗೂ ಬೆಳಕಿನಾಟದಲ್ಲಿ ಪ್ರೇಕ್ಷಕರನ್ನು ಚಿತ್ರ ಗಟ್ಟಿಯಾಗಿ ಹಿಡಿದುಕೊಂಡಿತ್ತು. ಬನ್ಸಾಲಿ ಅವರ ‘ಸಾವರಿಯಾ’ಕೂಡ ಬೆಳಕಿನಾಟದಿಂದ ಡಿಫರೆಂಟ್ ಸಿನಿಮಾ ಅನ್ನಿಸಿಕೊಂಡಿತ್ತು. ಸೂಪರ್ ಸ್ಟಾರ್ ಶಾರೂಕ್ ಖಾನ್‌ರ ‘ರೆಡ್ ಚಿಲ್ಲಿಸ್’ ಬ್ಯಾನರ್ ಇರಬಹುದು. ಕರಣ್ ಜೋಹರ್‌ರ ‘ಧರ್ಮ ಪ್ರೊಡಕ್ಷನ್’ ಇರಬಹುದು. ಬಾಲಿವುಡ್‌ನ ದೊಡ್ಡ ಬ್ಯಾನರ್ ಯಶ್‌ರಾಜ್‌ರಿಗೂ ಬೆಳಕಿನ ವಿಚಾರದಲ್ಲಿ ನೆರವು ನೀಡುವವರು ಕಾಪುವಿನ ಸಹೋದರರು ಎಂದರೆ ಅದು ಖಂಡಿತಕ್ಕೂ ಮಿರಕಲ್.
ಹಾಲಿವುಡ್‌ನ ಖ್ಯಾತ ಸಿನಿಮಾಟೋಗ್ರಾಫರ್ ಸ್ವೀವೆನ್ ಬ್ಯಾಸ್ಟಿನ್ ಕೂಡ ಬೆಳಕಿನ ವಿಚಾರಕ್ಕೆ ಬಂದಾಗ ಮೊದಲು ಭೇಟಿಯಾಗಿ ಸಲಹೆ ಸೂಚನೆಗಳನ್ನು ಪಡೆಯುವುದು ಕೂಡ ಈ ಸಹೋದರರಿಂದ ಅದು ಖಂಡಿತಕ್ಕೂ ಹೆಚ್ಚುಗಾರಿಕೆ ಎನ್ನಿಸುವುದಿಲ್ಲ. ಶಾರೂಕ್ ಖಾನ್‌ರ ಹೊಸ ಚಿತ್ರ ‘ರಾ-ವನ್’ ವಿದೇಶ ತಂತ್ರಜ್ಞಾನರಿಂದ ಈಗಾಗಲೇ ಸುದ್ದಿ ಮಾಡಿದೆ. ಈ ವಿದೇಶಿ ತಂತ್ರಜ್ಞಾನರು ಬರೀ ಹಾಲಿವುಡ್‌ನ ಶೈಲಿಗೆ ಹೆಚ್ಚು ಒತ್ತು ನೀಡುತ್ತಾರೆ. ಅವರ ಜತೆಯಲ್ಲಿ ಲೈಟಿಂಗ್ ಕೆಲಸ ಮಾಡುವುದು ಕೂಡ ಸುಲಭದ ಕೆಲಸವಲ್ಲ. ಇಂತಹ ಕಷ್ಟದ ಕೆಲಸವನ್ನು ಈ ಸಹೋದರರು ಮಾಡುತ್ತಿದ್ದಾರೆ.
ಬೆಳಕಿನ ಹಿಂದಿನ ಶಕ್ತಿ:
ಪ್ರದೀಪ್ ಜೆ.ಶೆಟ್ಟಿ ಗ್ರಾಜ್ಯುವೇಶನ್ ಮುಗಿಸಿಕೊಂಡು ಮುಂಬಯಿಯ ಸಿನಿಮಾ ಕ್ಷೇತ್ರದಲ್ಲಿದ್ದ ತನ್ನ ಮಾವ ಮೋಹನ್ ಶೆಟ್ಟಿ ಜತೆಯಲ್ಲಿ ಲೈಟ್ ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡರು. ಭಾರ ಭಾರದ ಲೈಟ್‌ಗಳನ್ನು ಹೊತ್ತುಕೊಂಡು ಸಿನಿಮಾ ತಂಡದಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಸಹೋದರ ಪ್ರಕಾಶ್ ಶೆಟ್ಟಿ ಕೂಡ ಅವರ ಕೆಲಸಕ್ಕೆ ಜತೆಗೂಡಿದರು. ಇತ್ತ ಕಡೆ ಇದ್ದ ಒಬ್ಬ ಸಹೋದರ ಪ್ರಶಾಂತ್ ಬೇರೆ ಉದ್ಯೋಗದಲ್ಲಿ ಇರಲಿ ಎನ್ನುವುದು ಇಬ್ಬರು ಸಹೋದರರ ಬಯಕೆಯಾಗಿತ್ತು. ಯಾಕೋ ಏನೋ ಬೇರೆ ವೃತ್ತಿ ಬೇಡ ಎಂದುಕೊಂಡು ಪ್ರಶಾಂತ್ ಕೂಡ ಸಹೋದರರ ಜತೆಗೆ ಸೇರಿಕೊಂಡರು.
೨೦೦೧ರಲ್ಲಿ ಪ್ರಶಾಂತ್ ತಮ್ಮದೇ ಆದ ಶ್ರೀ ಗಣೇಶ್ ಮೂವಿ ಲೈಟ್ಸ್ ಕಂಪನಿಯನ್ನು ತೆರೆದರು. ಇಬ್ಬರು ಸಹೋದರರು ಈ ಕಂಪನಿಯನ್ನು ಸೇರಿಕೊಂಡು ಕೆಲಸ ಮಾಡಲು ಅಣಿಯಾದರು. ಎರಡು- ಮೂರು ವರ್ಷಗಳಲ್ಲಿ ಇಡೀ ಬಾಲಿವುಡ್‌ನ ಮೂವಿ ಲೈಟಿಂಗ್ಸ್ ನಲ್ಲಿ ಪ್ರಾಬಲ್ಯ ಮೆರೆದ ಮಲ್ಲಿಕ್ ಮೂಲ್‌ಚಂದಾನಿ ಲೈಟಿಂಗ್ಸ್ ಕಂಪನಿಗೆ ಪೈಪೋಟಿ ನೀಡಲು ಆರಂಭ ಮಾಡಿದರು. ಬಿಗ್ ಬಜೆಟ್ ಚಿತ್ರಗಳಿಗೆ ಲೈಟಿಂಗ್ ಮಾಡುವ ಸರದಿಯಲ್ಲಿ ಮೂಲ್ ಚಂದಾನಿ ಕಂಪನಿ ಮೊದಲ ಸ್ಥಾನದಲ್ಲಿ ಬಂದು ನಿಲ್ಲುತ್ತದೆ. ಎರಡನೇ ಸ್ಥಾನ ನಮ್ಮ ಕುಡ್ಲದ ಸಹೋದರರ ಶ್ರೀಗಣೇಶ್ ಮೂವಿ ಲೈಟ್ಸ್‌ಗೆ ಎಂದರೆ ಅದು ಕುಡ್ಲದವರು ಹೆಮ್ಮೆ ಪಡಬೇಕಾದ ವಿಷ್ಯಾ.
ಲೈಟಿಂಗ್ ಕ್ಷೇತ್ರದಲ್ಲಿ ಕ್ರಾಂತಿ:
ಕಪ್ಪು- ಬಿಳುಪು ಚಿತ್ರಗಳ ಜಮಾನದಿಂದಲೂ ಲೈಟ್ಸ್‌ಗಳ ಕಂಬಗಳು ಲೋಹದಿಂದ ಕೂಡಿರುತ್ತಿತ್ತು. ಅದಕ್ಕಿಂತಲೂ ಹೆಚ್ಚಾಗಿ ಬಹಳ ಭಾರ ಇರುತ್ತಿತ್ತು. ಅದನ್ನು ಒಬ್ಬರು ಹೊತ್ತುಕೊಂಡು ಹೋಗಿ ಸಿನಿಮಾದ ಬೇರೆ ಬೇರೆ ಜಾಗದಲ್ಲಿ ಇಡಲು ಸಾಧ್ಯವಿಲ್ಲ. ಆದರೆ ಲೈಟ್‌ಮ್ಯಾನ್‌ಗಳಾಗಿ ಕೆಲಸ ಮಾಡಿದ ಅನುಭವ ಇದ್ದ ಶೆಟ್ಟಿ ಸಹೋದರರು ಇದಕ್ಕೊಂದು ಹೊಸ ಪ್ಲಾನ್ ಮಾಡಿದರು. ಲೋಹದ ಜಾಗದಲ್ಲಿ ಸ್ಟೀಲ್‌ರಾಡ್‌ಗಳು ಬಂತು.
ಬಾಳ್ವಿಕೆ, ಹೊತ್ತು ಕೊಂಡು ಹೋಗಲು ಸುಲಭ ಹಾಗೂ ನೋಡಲು ಸುಂದರ ಇರುವ ಈ ಸ್ಟೀಲ್ ರಾಡ್‌ಗಳು ಸಿನಿಮಾದ ಲೈಟಿಂಗ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿತು. ಇದು ಶೆಟ್ಟಿ ಸಹೋದರರ ಸಾಧನೆ. ಪ್ರದೀಪ್ ಜೆ. ಶೆಟ್ಟಿ ಲೈಟಿಂಗ್ ಉದ್ಯಮವನ್ನು ನಡೆಸುತ್ತಿದ್ದಾರೆ. ಸಹೋದರ ಪ್ರಕಾಶ್ ಶೆಟ್ಟಿ ಲೈಟಿಂಗ್‌ನ ಡಿಸೈನ್ ಮೇಲೆ ಕೆಲಸ ಮಾಡುತ್ತಾರೆ. ಲೈಟಿಂಗ್‌ನ ತಂತ್ರಜ್ಞಾನದ ಮೇಲೆ ಪ್ರಶಾಂತ್ ಕೈಯಾಡಿಸುತ್ತಾರೆ.
ಟೋಟಲಿ ಶೆಟ್ಟಿ ಸಹೋದರರ ಪ್ರಯತ್ನ, ಪ್ರಾಮಾಣಿಕತೆ, ಗುರಿ ಮುಟ್ಟುವ ತನಕ ನಿಲ್ಲದ ಹೋರಾಟದ ಬದುಕು ಕೋಟ್ಯಂತರ ರೂಪಾಯಿ ಬೆಳೆಬಾಳುವ ಕಂಪನಿಯ ಮಾಲೀಕರಾಗಿ ಮಾಡಿದೆ. ಬಾಲಿವುಡ್‌ನಲ್ಲಿ ಇತ್ತೀಚೆಗೆ ರಿಲೀಸ್ ಆಗುವ ದೊಡ್ಡ ದೊಡ್ಡ ಸಿನಿಮಾಗಳ ಪೋಸ್ಟರ್‌ಗಳಲ್ಲಿ ಈ ಮೂವರು ಸಹೋದರರ ಹೆಸರುಗಳಿರುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಅವರ ಬೆಳಕಿನ ವರ್ಣನೆ ಇರುತ್ತದೆ. ಅದನ್ನು ನೋಡಿಕೊಂಡು ಸಿನಿಮಾಕ್ಕೆ ಬರುವ ಪ್ರೇಕ್ಷಕರು ಕೂಡ ಇದ್ದಾರೆ ! ನಿಜಕ್ಕೂ ಶೆಟ್ಟಿ ಸಹೋದರರು ನೆಲದಿಂದ ಏಕ್‌ದಂ ಮೇಲೆ ಬಂದರೂ ಇಂದಿಗೂ ಅವರ ಕಾಲು ನೆಲದದಲ್ಲಿಯೇ ಇದೆ ಎನ್ನುವ ಮಾತು ಅವರನ್ನು ನೋಡಿದಾಗ ನಿಜ ಅನ್ನಿಸಿಬಿಡುತ್ತದೆ. ಒಂದು ಕಾಲದಲ್ಲಿ ಲೈಟ್‌ಮ್ಯಾನ್‌ಗಳಾಗಿ ಹೊಟ್ಟೆ ಹೊರೆಯುತ್ತಿದ್ದ ಶೆಟ್ಟಿ ಸಹೋದರರು ಈಗ ಇಡೀ ಬಾಲಿವುಡ್‌ಗೆ ಬೆಳಕು ನೀಡುತ್ತಿರುವ ವಿಚಾರ ನಿಜಕ್ಕೂ ಅವರನ್ನು ನೋಡಿ ಹ್ಯಾಟ್ಸಾಫ್ ಎನ್ನಲೇಬೇಕು.

No comments:

Post a Comment