‘ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ....’ ಈ ಜಾಹೀರಾತು ಸ್ಲೋಗನ್ ಕೇಳಿರದ ಮಂದಿ ಯಾರು ಇಲ್ಲ ಬಿಡಿ. ಇಂತಹ ಸಾವಿರಾರು ಜಾಹೀರಾತು... ಫಿಲ್ಮ್ ಡಿವಿಷನ್ ನಿರ್ಮಾಣದ ಹತ್ತಾರು ಸಾವಿರ ಡಾಕ್ಯುಮೆಂಟರಿಗಳ ಹಿಂದೆ ಕುಡ್ಲದ ವಾಯ್ಸ್ ಇದೆ ಅಂತಾ ಎಷ್ಟು ಮಂದಿಗೆ ಗೊತ್ತು...ಈ ಅಪರೂಪದ ಕಂಠಕ್ಕೆ ಈಗ ಮಹಾರಾಷ್ಟ್ರ ಸರಕಾರದ ‘ದಾದಾ ಸಾಹೇಬ್ ಫಾಲ್ಕೆ ’ ಬಂದಿದೆ. ಆದರೆ ಕನ್ನಡಿಗರಿಗೆ ಈ ವಾಯ್ಸ್ ಗೊತ್ತೇ ಇಲ್ಲ ಬಿಡಿ...
ಕಳೆದ ೪೦ ವರ್ಷಗಳಿಂದ ದೃಶ್ಯ, ಶ್ರವ್ಯ ಮಾಧ್ಯಮಗಳಲ್ಲಿ ನಿರಂತರವಾಗಿ ಓಡಾಡುತ್ತಿರುವ ‘ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ....’ ಜಾಹೀರಾತು ಕೇಳಿರದ ಮಂದಿ ಯಾರು ಇರಲಿಕ್ಕಿಲ್ಲ ಬಿಡಿ. ಅಂದಿನಿಂದ ಇಂದಿನವರೆಗೂ ಈ ಜಾಹೀರಾತು ತನ್ನ ವರಸೆಯನ್ನು ಮುಂದುವರಿಸಿಕೊಂಡು ಹೋಗಿದೆ. ಈ ಜಾಹೀರಾತು ಸ್ಲೋಗನ್ ಹಿಂದೆ ಇರುವ ವಾಯ್ಸ್ ಪಡುಬಿದ್ರಿಯ ಫಲಿಮಾರಿನ ಶಿವರಾಜ್ ಸುವರ್ಣ ಅಂತಾ ಬಹುತೇಕ ಮಂದಿಗೆ ಗೊತ್ತಿರಲು ಸಾಧ್ಯವಿಲ್ಲ. ಕೋಲ್ಗೇಟ್ ಟೂಥ್ ಪೇಸ್ಟ್‌ನಿಂದ ಹಿಡಿದು ಫೋರ್ ವಿಲರ್‍ಸ್‌ವರೆಗೆ ಇತರ ಭಾಷೆಗಳಿಂದ ಕನ್ನಡ ಭಾಷೆಗೆ ಈ ಕಮರ್ಷಿಯಲ್ ಜಾಹೀರಾತುಗಳು ಡಬ್ ಆಗಬೇಕಾದರೆ ಅಲ್ಲಿ ಶಿವರಾಜ್ ಸುವರ್ಣ ಇರಬೇಕು. ಅವರೊಬ್ಬರೇ ಇದ್ದಾರೆ ಸಾಲದು ಕಂಪನಿಯ ಪ್ರಾಡಕ್ಟ್‌ಗಳನ್ನು ಪ್ರಮೋಶನ್ ಮಾಡಲು ಅವರ ಧ್ವನಿ ಕೂಡ ಸಾಥ್ ಕೊಡಬೇಕು.
ಪಡುಬಿದ್ರಿಯ ತನ್ನ ಅಜ್ಜಿಯ ಮನೆಯಲ್ಲಿ ಶಿವರಾಜ್ ಸುವರ್ಣ ಬಾಲ್ಯದ ದಿನಗಳನ್ನು ಕಳೆದದ್ದು, ಸರಿಸುಮಾರು ೧೨ ವರ್ಷಗಳ ವರೆಗೆ ಪಡುಬಿದ್ರಿಯ ಪ್ರಾಥಮಿಕ ಶಾಲೆಯಲ್ಲಿ ಓದಿಕೊಂಡಿದ್ದ ಪ್ರತಿಭಾವಂತ ಶಿವರಾಜ್ ಸುವರ್ಣ ನಂತರ ತನ್ನ ತಂದೆಯೊಂದಿಗೆ ಮುಂಬಯಿಯ ಪಡಸಾಲೆಯ ಮೇಲೆ ನಡೆಯಲಾರಂಭಿಸಿದರು. ಅಲ್ಲಿಂದಲೇ ಅವರ ಕಂಠದಾನ ಕಲಾವಿದನಾಗಿ ವೃತ್ತಿಯನ್ನು ಆರಂಭ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಅದೇ ಕಂಠದಾನ ಕಲಾವಿದನಾಗಿ ಮುಂದುವರಿದಿದ್ದಾರೆ. ಆದರೆ ಕರ್ನಾಟಕ ರಾಜ್ಯ ಸರಕಾರ ಇವರನ್ನು ಗುರುತಿಸುವ ಬದಲಾಗಿ ಮಹಾರಾಷ್ಟ್ರ ಸರಕಾರ ಏ.೩೦ ರಂದು ೧೪೧ನೇ ದಾದಾ ಸಾಹೇಬ್ ಫಾಲ್ಕೆ ಅವರ ಜನ್ಮಾದಿನಾಚರಣೆಯ ಸಂದರ್ಭದಲ್ಲಿ ಕಂಠದಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಶಿವರಾಜ್ ಸುವರ್ಣ ಅವರಿಗೆ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿದೆ.
ಹುಲಿಯ ಹೊಟ್ಟೆಯಲ್ಲಿ....
ಶಿವರಾಜ್ ಸುವರ್ಣ ಅವರ ತಂದೆ ಪಡುಬಿದ್ರಿಯ ಫಲಿಮಾರು ಕರ್ನಿರೆಯ ಕೆ.ಕೆ. ಸುವರ್ಣ ರಂಗಭೂಮಿ ಕ್ಷೇತ್ರದಲ್ಲಿ ಬಹಳ ದೊಡ್ಡ ಹೆಸರು. ಕೋಲ್ಗೇಟ್ ಟೂಥ್ ಪೌಡರ್ ಜಾಹೀರಾತಿನಲ್ಲಿ ಮೊತ್ತ ಮೊದಲ ಬಾರಿಗೆ ಕಾಣಿಸಿಕೊಂಡ ಮೊಡೆಲ್ ಕೂಡ ಇವರೇ ಆಗಿದ್ದಾರೆ. ಮುಂಬಯಿಯಲ್ಲಿರುವ ಖ್ಯಾತ ಸಭಾಂಗಣ ಷಣ್ಮುಗಾನಂದದ ಮ್ಯಾನೇಜರ್ ಆಗಿದ್ದವರು. ಈ ಷಣ್ಮುಗಾನಂದ ಸಭಾಂಗಣ ಅಂದಿನ ಕಾಲದಲ್ಲಿ ಬಹಳಷ್ಟು ಖ್ಯಾತಿ ಪಡೆದ ಸಭಾಂಗಣವಾಗಿತ್ತು. ಈಗಲೂ ಅದರ ಇಮೇಜ್ ಕೊಂಚನೂ ಕಡಿಮೆಯಾಗಿಲ್ಲ ಬಿಡಿ. ದಕ್ಷಿಣ ಭಾರತದ ಖ್ಯಾತ ಕಾರ್‍ಯಕ್ರಮಗಳು , ಸಿನಿಮಾ ಅವಾರ್ಡ್ ಕಾರ್‍ಯಕ್ರಮಗಳು ಇಲ್ಲಿಯೇ ನಡೆಯುತ್ತಿದೆ. ಈ ಸಭಾಂಗಣದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಗ ಟಾಟಾ ಸಂಸ್ಥೆಯವರು ಇವರನ್ನು ಅವರು ನಡೆಸುತ್ತಿರುವ ಎನ್‌ಸಿಪಿಎ( ರಾಷ್ಟ್ರೀಯ ನಾಟ್ಯಕಲಾ ಕೇಂದ್ರ) ಗೆ ಸಹಾಯಕ ನಿರ್ದೇಶಕರಾಗಿ ಸೇರಿಸಿಕೊಂಡರು. ಹಲವಾರು ವರ್ಷಗಳ ಕಾಲ ಅಲ್ಲಿ ದುಡಿದ ಅವರು ನಿರ್ದೇಶಕರಾಗಿ ನಿವೃತ್ತರಾದವರು. ಹಲವಾರು ಜಾಹೀರಾತು ಹಾಗೂ ಡಾಕ್ಯುಮೆಂಟರಿಗಳಿಗೆ ಧ್ವನಿ ಗೂಡಿಸಿಕೊಂಡು ಸೈ ಎನ್ನಿಸಿದ್ದರು. ಈಗ ಅವರ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಕೂಡಾ ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ. ಅದರಲ್ಲೂ ಶಿವರಾಜ್ ಸುವರ್ಣ ಫುಲ್‌ಟೈಂ ವೃತ್ತಿಯಾಗಿ ಅದನ್ನು ನೆಚ್ಚಿಕೊಂಡಿದ್ದಾರೆ.
ಕತ್ತೆಗೆ ಕೊಟ್ಟ ಕಂಠ:
ಶಿವರಾಜ್ ಸುವರ್ಣ ಮೊತ್ತ ಮೊದಲ ಬಾರಿಗೆ ಫಿಲ್ಮ್ ಡಿವಿಷನ್ ನಿರ್ಮಾಣದ ಮಕ್ಕಳ ಚಿತ್ರವೊಂದಕ್ಕೆ ಬರೀ ೧೨ರ ವಯಸ್ಸಿನಲ್ಲಿ ಕತ್ತೆಗೆ ಕಂಠವನ್ನು ದಾನ ಮಾಡಿದ್ದರು. ಈ ಚಿತ್ರ ಕೂಡ ಹಲವಾರು ಪ್ರಶಸ್ತಿಗಳನ್ನು ಅಂದು ಬಾಚಿಕೊಂಡಿತು. ಹಿಂದಿ, ಇಂಗ್ಲೀಷ್, ಗುಜರಾತಿ, ಮರಾಠಿ, ತುಳು, ಕನ್ನಡ ಹೀಗೆ ಹತ್ತಾರು ಭಾಷೆಗಳಲ್ಲಿ ಪ್ರಾವೀಣ್ಯತೆಯನ್ನು ಸಾಸಿಕೊಂಡ ಶಿವರಾಜ್ ಖ್ಯಾತ ನಿರ್ದೇಶಕ ಜಿ.ವಿ. ಅಯ್ಯರ್ ಅವರ ಸಂಸ್ಕೃತ ಭಾಷೆಯ ‘ಭಗವದ್ಗೀತಾ’ವನ್ನು ಹಿಂದಿಗೆ ಡಬ್ಬಿಂಗ್ ಸೇರಿದಂತೆ ಬಹುತೇಕ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳಿಗೆ ಕಂಠದಾನ ಕೊಟ್ಟಿದ್ದಾರೆ. ಬಾಲಿವುಡ್ ಮೆಗಾ ಸ್ಟಾರ್‌ಗಳಿಗೆ ಕಂಠದಾನ ಕಲಾವಿದರಾಗಿ ದುಡಿದಿರುವ ಶಿವರಾಜ್ ಇತ್ತೀಚೆಗೆ ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ್ ಗುರೂಜಿ ಕುರಿತಾಗಿ ಡಾಕ್ಯುಮೆಂಟರಿಯೊಂದನ್ನು ದೇಶದ ೧೪ ಭಾಷೆಗಳಿಗೆ ಡಬ್ಬಿಂಗ್ ಮಾಡಿ ಎಲ್ಲರ ಕೈಯಿಂದಲೂ ಭೇಷ್ ಎನ್ನಿಸಿಕೊಂಡಿದ್ದಾರೆ. ರೇಡಿಯೋದ ಸ್ಪಾಟ್ ಜಾಹೀರಾತು, ಜಿಂಗಲ್ಸ್, ರೇಡಿಯೋ ನಾಟಕಗಳು ಹೀಗೆ ಕಂಠದಾನ ಕಲಾವಿದರಾಗಿ ಶಿವರಾಜ್ ಸುವರ್ಣ ದುಡಿದದ್ದು ಬಹಳಷ್ಟಿದೆ ಎಂದು ಅವರ ಪತ್ನಿ ಪ್ರೊ. ಸುಮತಿ ಶಿವರಾಜ್ ಸುವರ್ಣ ಹೇಳುತ್ತಾರೆ. ಮುಂಬಯಿಯ ಅಂಧೇರಿಯಲ್ಲಿ ಶಿವರಾಜ್ ಸುವರ್ಣ ತನ್ನ ಪತ್ನಿಯೊಂದಿಗೆ ಪಡುಬಿದ್ರಿಗೆ ಆಗಾಗ ಬಂದು ಹೋಗುತ್ತಾ ಇರುತ್ತಾರೆ.
ಈಗ ಕೊಂಚ ಸುಲಭ:
‘ನಾನು ಈ ಕಂಠದಾನ ಕ್ಷೇತ್ರಕ್ಕೆ ಕಲಾವಿದನಾಗಿ ಬರುವ ಹೊತ್ತಲ್ಲಿ ತಾಂತ್ರಿಕತೆ ಅಷ್ಟೊಂದು ಫಾಸ್ಟ್ ಆಗಿರಲಿಲ್ಲ. ಒಂದು ಜಾಹೀರಾತಿಗೆ ಕಂಠ ಕೊಡಬೇಕಾದರೆ ೨ರಿಂದ ೩ ದಿನಗಳು ಬೇಕಾಗಿತ್ತು. ಈಗ ಬರೀ ಅರ್ಧ ಗಂಟೆಯೊಳಗೆ ಒಂದು ಜಾಹೀರಾತು ತಯಾರು ಮಾಡಿಕೊಡಬಹುದು. ಹಿಂದಿನ ಟೈಮ್‌ನಲ್ಲಿ ಜಾಹೀರಾತು ಅಥವಾ ಡಾಕ್ಯುಮೆಂಟರಿಗಳಿಗೆ ಕಂಠದಾನ ನೀಡಬೇಕಾದರೆ ಯಾರು ಮುಂದೆ ಬರುತ್ತಿರಲಿಲ್ಲ. ಈ ಕ್ಷೇತ್ರದಲ್ಲಿ ತಾಳ್ಮೆ ಅತೀ ಅವಶ್ಯಕವಾಗಿರುತ್ತದೆ. ಭಾವನೆಗಳು, ಉದ್ವೇಗ ಎಲ್ಲವೂ ಜಾಹೀರಾತಿಗೆ ಬೇಕಾದಂತೆ ಅಳವಡಿಸಿಕೊಳ್ಳೋದು ಅಷ್ಟೊಂದು ಸಲೀಸಲ್ಲ. ಇಂದಿನ ಕಂಠದಾನ ಕ್ಷೇತ್ರದಲ್ಲಿ ತಾಂತ್ರಿಕತೆ ಬಹಳಷ್ಟು ಕೆಲಸ ಮಾಡಿದೆ. ಈ ಕ್ಷೇತ್ರವನ್ನು ಈಗ ಮೆಚ್ಚುವವರು ಕೂಡ ಬಹಳಷ್ಟು ಮಂದಿ ಇದ್ದಾರೆ ಎಂದು ಶಿವರಾಜ್ ಸುವರ್ಣ ಅನುಭವದ ಮೂಸೆಯೊಳಗೆ ಇಳಿದು ಹೋದರು.
ಇಷ್ಟು ವರ್ಷಗಳ ಕಾಲ ನಿಮ್ಮ ಪರಿಚಯ ಕನ್ನಡಿಗರಿಗೆ ಯಾಕೆ ಆಗಿಲ್ಲ ಎಂದು ಲವಲವಿಕೆಯ ತಂಡ ಪ್ರಶ್ನೆ ಎತ್ತಿದಾಗ..‘ಯಾವುದೇ ಕ್ಷೇತ್ರವಾಗಿರಬಹುದು ಅಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳದೇ ಬರೀ ಆ ಕ್ಷೇತ್ರದ ಹಿಂದೆ ನಿಂತು ಕೆಲಸ ಮಾಡುವ ಮಂದಿ ಜಾಸ್ತಿ ಸಂಖ್ಯೆಯಲ್ಲಿರುತ್ತಾರೆ. ಮುಖ್ಯವಾಗಿ ಸಿನಿಮಾ ಇಂಡಸ್ಟ್ರಿ ಅಥವಾ ಮಾಧ್ಯಮಗಳನ್ನು ಗಣನೆಗೆ ತೆಗೆದುಕೊಂಡಾಗ ಈ ವಿಚಾರ ಸರಿ ಎನ್ನಿಸಿಬಿಡಬಹುದು. ಸಿನಿಮಾದಲ್ಲಿ ಬರೀ ಹೀರೋ, ನಿರ್ದೇಶಕ ಹೀಗೆ ಕೆಲವರು ಮಾತ್ರ ಪ್ರೇಕ್ಷಕರಿಗೆ ಪರಿಚಯವಾಗುತ್ತಾರೆ. ಆದರೆ ಅದರ ಹಿಂದೆ ಒಬ್ಬ ಲೈಟ್ ಬಾಯ್‌ನಿಂದ ಹಿಡಿದು ಎಡಿಟಿಂಗ್ ರೂಂನ ವರೆಗೂ ಕಾಣದ ಕೈಗಳು ಕೆಲಸ ಮಾಡುತ್ತದೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ. ಕಂಠದಾನ ಕ್ಷೇತ್ರ ಕೂಡ ಅದೇ ರೀತಿಯಲ್ಲಿದೆ. ಕಂಠದ ಪರಿಚಯ ಎಲ್ಲರಿಗೂ ಇರುತ್ತೇ ಆದರೆ ಮುಖದ ಪರಿಚಯ ಇರುವುದೇ ಇಲ್ಲ. ಇದು ನಮ್ಮ ಕ್ಷೇತ್ರದ ಒಂದು ವೀಕ್ ಪಾಯಿಂಟ್ ಎಂದು ಶಿವರಾಜ್ ಸುವರ್ಣ ಕಂಠದಾನ ಕ್ಷೇತ್ರದ ವೀಕ್‌ನೆಸ್ ಪಾಯಿಂಟ್‌ಗಳನ್ನು ಹೆಕ್ಕುತ್ತಾ ಹೋದರು.
‘ಮಹಾರಾಷ್ಟ್ರದ ಸರಕಾರ ವಿವಿಧ ಭಾಷೆಗಳ ಸಿನಿಮಾದಲ್ಲಿ ದುಡಿಯುವ ಮಂದಿಯನ್ನು ಗುರುತಿಸಿ ನೀಡುವ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಬಂದಾಗ ಶಿವರಾಜ್ ಸುವರ್ಣ ಬಹಳಷ್ಟು ಖುಶಿ ಪಟ್ಟರು. ಕಂಠದಾನ ಕ್ಷೇತ್ರದಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿದ ಹಿರಿಯರನ್ನು ಮಹಾರಾಷ್ಟ್ರ ಸರಕಾರ ಗುರುತಿಸಿ ಪ್ರೋತ್ಸಾಹಿಸುವುದರಿಂದಲೇ ಇಲ್ಲಿನ ಸಿನಿಮಾ ಇಂಡಸ್ಟ್ರಿ ಈ ರೀತಿಯಲ್ಲಿ ಬೆಳೆಯುತ್ತಿದೆ. ಮುಂಬಯಿಯಲ್ಲಿ ನೆಲೆನಿಂತಿರುವ ಕಾರಣ ನಮ್ಮ ಕುರಿತು ಕರ್ನಾಟಕದ ಸಿನಿಮಾ ಅಥವಾ ಇತರರಿಗೆ ಅಷ್ಟೊಂದು ಪರಿಚಯ ಇರಲು ಸಾಧ್ಯವಿಲ್ಲ ಎಂದು ಅವರ ಪ್ರೊ.ಸುಮತಿ ಶಿವರಾಜ್ ಸುವರ್ಣ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು. ಅಂದಾಹಾಗೆ ಕಂಠದಾನ ಕಲಾವಿದ ಶಿವರಾಜ್ ಸುವರ್ಣರಿಗೆ ಒಂದು ಬೆಸ್ಟ್ ಆಫ್ ಲಕ್ ಹೇಳಬೇಕಾದರೆ ಅವರಿಗೊಂದು ಇ-ಮೇಲ್ ಮಾಡಿ - shivrajsuvarna@gmail.com.