Wednesday, March 5, 2014
ಕನ್ನಡಕ್ಕೆ ಬಂದ್ರು ಬಾಲಿವುಡ್ ದೊಡ್ಡಣ್ಣ ಕಬೀರ್ ಗುರು ಬಿಗ್ ಬಿ
* ಸ್ಟೀವನ್ ರೇಗೊ, ದಾರಂದಕುಕ್ಕು
ಸ್ಯಾಂಡಲ್‌ವುಡ್ ಸಖತ್ ಖುಷಿ ಮೂಡ್‌ನಲ್ಲಿದೆ. ಯಾಕ್ ಅಂತೀರಾ..ಬಾಲಿವುಡ್ ಅಂಗಳದ ದಿಗ್ಗಜರೊಬ್ಬರು ಸ್ಯಾಂಡಲ್‌ವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸೂಚನೆಯೊಂದು ಗಾಂಧಿನಗರದ ಗಲ್ಲಿಯಲ್ಲಿ ಜೋರಾಗಿ ಕೇಳಿಸಿಕೊಳ್ಳುತ್ತಿದೆ. ಹೌದು. ಇದು ಬಾಲಿವುಡ್ ಪಡಸಾಲೆಯ ಬಿಗ್ ಬಿಯ ಮಾತು. ಅಂದಹಾಗೆ ಬಾಲಿವುಡ್‌ನ ಬಿಗ್ ಬಿಗೆ ಕನ್ನಡ ಸಿನಿಮಾ ರಂಗ ಹೊಸತೇನೂ ಅಲ್ಲ..
ಈ ಹಿಂದೆ ಕನ್ನಡದ ಮೇಷ್ಟ್ರು ಎಂದೇ ಕರೆಸಿಕೊಳ್ಳುವ ನಾಗತಿಹಳ್ಳಿ ಚಂದ್ರ ಶೇಖರ್ ಅವರ ಸಿನಿಮಾ ಅಮೃತಧಾರೆಯಲ್ಲಿ ಬಿಗ್ ಬಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರಾದೇಶಿಕ ಭಾಷೆಯ ಸಿನಿಮಾಗಳಲ್ಲೂ ನಟಿಸಲು ತಾನು ರೆಡಿ ಎನ್ನುವ ಮಾತನ್ನು ಗಟ್ಟಿಯಾಗಿ ಹೇಳಿದ್ದರು.
ಈ ಬಳಿಕ ಬಿಗ್ ಬಿ ಬಾಲಿವುಡ್ ಸಿನಿಮಾಗಳಲ್ಲಿಯೇ ಪೂರ್ತಿ ಮುಳುಗಿ ಹೋಗಿದ್ದರ ಪರಿಣಾಮ ಕನ್ನಡದ ಬಹುತೇಕ ಸಿನಿಮಾ ನಿರ್ದೇಶಕರ ಕೈಗೆ ಬಿಗ್ ಬಿ ಸಿಗಲೇ ಇಲ್ಲ. ಆದರೂ ಕನ್ನಡದ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರು ಬಿಗ್ ಬಿ ಹಿಂದೆ ಬೀಳುವ ಕೆಲಸವನ್ನು ಮಾತ್ರ ಬಿಟ್ಟಿರಲಿಲ್ಲ.
ಈಗ ಇಂತಹ ಒಂದು ಅವಕಾಶ ಕನ್ನಡದ ಸಿನಿಮಾ ನಿರ್ದೇಶಕ ನರೇಂದ್ರ ಬಾಬು ಅವರ ಕೈಗೆ ಸಿಕ್ಕಿದೆ. ಅವರು ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರ ‘ಕಬೀರ’ದಲ್ಲಿ ಬಿಗ್ ಬಿ ಕಾಣಿಸಿಕೊಳ್ಳುವ ಮಾತುಗಳು ಕೇಳಿಸಿಕೊಳ್ಳುತ್ತಿದೆ. ಅಂದಹಾಗೆ ಇದು ಸಂತ. ಕಬೀರ್‌ದಾಸ್ ಮೇಲೆ ಮೂಡಿಬರುತ್ತಿರುವ ಸಿನಿಮಾ ಎನ್ನುವ ಮಾತಿದೆ. ಕಬೀರ್ ಪಾತ್ರದಲ್ಲಿ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಂಡರೆ ಕಬೀರ್‌ರ ಗುರು ಪಾತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ.
ಬಿಗ್ ಬಿ ಜತೆ ಶಿವಣ್ಣ ಈ ಹಿಂದೆ ನಟಿಸಿದ್ದರು:
ಶಿವರಾಜ್ ಕುಮಾರ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಈ ಹಿಂದೆ ಕೂಡ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ದೇಶದ ಖ್ಯಾತ ಜುವೆಲ್ಲರಿ ಕಂಪನಿಯ ಜಾಹೀರಾತಿನಲ್ಲಿ ಶಿವಣ್ಣ ಅವರ ತಂದೆಯ ಪಾತ್ರದಲ್ಲಿ ಬಿಗ್ ಬಿ ಕಾಣಿಸಿಕೊಂಡಿದ್ದರು. ಇಲ್ಲಿ ತಂದೆ- ಮಗನ ಸೂಕ್ಷ್ಮ ಸಂಬಂಧಗಳ ಅನಾವರಣವನ್ನು ಚಿತ್ರಿಸಿಕೊಳ್ಳುವ ಮೂಲಕ ಜಾಹೀರಾತು ಸಖತ್ ವರ್ಕ್ ಔಟ್ ಆಗಿತ್ತು. ಈಗಲೂ ಈ ಜಾಹೀರಾತು ವಾಹಿನಿಗಳಲ್ಲಿ ಓಡಾಡಿಕೊಂಡಿದೆ.
ಕನ್ನಡದ ವರನಟ ರಾಜ್ ಕುಮಾರ್ ಕುಟುಂಬದ ಜತೆಯಲ್ಲಿ ಬಿಗ್ ಬಿ ಉತ್ತಮ ಬಾಂಧವ್ಯ ಹೊಂದಿದ್ದರು. ಕನ್ನಡದಲ್ಲಿ ಅಮೃತಧಾರೆಯ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಬಿಗ್ ಬಿ ಅಮಿತಾಬ್ ಬಚ್ಚನ್ ಸಂತ. ಕಬೀರ್ ಅವರ ಜೀವನ ಕತೆಯನ್ನು ಆಧರಿಸಿಕೊಂಡು ಬರುತ್ತಿರುವ ಐತಿಹಾಸಿಕ ಚಿತ್ರವಾದ ‘ಮಹಾತ್ಮ ಕಬೀರ್’ನಲ್ಲಿ ಗುರುವಿನ ಪಾತ್ರದಲ್ಲಿ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಮಾತ್ರ ಪ್ರೇಕ್ಷಕರು ತೆರೆಯ ಮೇಲೆ ನೋಡಿ ತಿಳಿಯಬೇಕು. ಟೋಟಲಿ ಪ್ರಾದೇಶಿಕ ಭಾಷೆಗಳ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿರುವ ಇಂತಹ ದಿಗ್ಗಜ ನಟರಿಂದ ಸಿನಿಮಾ ರಂಗ ಮತ್ತಷ್ಟೂ ಪ್ರಜ್ವಲಿಸುತ್ತದೆ ಎನ್ನುವ ಮಾತು ಮಾತ್ರ ದಿಟವಗುತ್ತಿದೆ.
Subscribe to:
Post Comments (Atom)
No comments:
Post a Comment