Friday, March 21, 2014

ಧೋನಿಯಾಟದಲ್ಲಿ ರಾಜಪೂತ್ ಮಿಂಚು

*ಸ್ಟೀವನ್ ರೇಗೊ, ದಾರಂದಕುಕ್ಕು ಮಹೇಂದ್ರ ಸಿಂಗ್ ಧೋನಿ ಇದು ಭಾರತೀಯ ಕ್ರಿಕೆಟ್‌ನಲ್ಲಿ ಸದಾ ಕಾಲ ಮಿಂಚುವ ಹೆಸರು. ಶಾರ್ಟ್ ಆಂಡ್ ಸ್ವೀಟಾಗಿ ಯಾವ ರೀತಿಯಲ್ಲೂ ಧೋನಿಯನ್ನು ಲೆಕ್ಕಹಾಕಿದರೂ ಕೂಡ ಆತನ ಮಿಂಚುವ ಬ್ಯಾಟಿಂಗ್, ಎದೆಗುಂದದ ಧೈರ್ಯವಂತಿಕೆ ಹಾಗೂ ಪದೇ ಪದೇ ಬದಲಾಗುತ್ತಿರುವ ಹೇರ್ ಸ್ಟೈಲ್‌ಗಳಿಂದಲೇ ಕ್ರಿಕೆಟ್ ರಂಗದಲ್ಲಿ ಅಳ್ವಿಕೆ ಮಾಡುತ್ತಿರುವ ಹೆಸರು. ಈಗ ಧೋನಿಯ ಕತೆಯನ್ನು ಇಟ್ಟುಕೊಂಡು ಸಿನಿಮಾವೊಂದು ಬಾಲಿವುಡ್ ಅಂಗಳದಲ್ಲಿ ಮೂಡಲಿದೆ.
ಅಂದಹಾಗೆ ಈಗಾಗಲೇ ದೇಶದ ನಾನಾ ಭಾಷೆಗಳಲ್ಲಿ ಧೋನಿಯ ಬಗ್ಗೆ ಸಿನಿಮಾಗಳನ್ನು ಥಿಯೇಟರ್‌ಗಳಿಗೆ ಬಿಡಲಾಗಿದೆ. ಎಲ್ಲವೂ ಅವರೇಜ್ ಕಲೆಕ್ಷನ್‌ಗಳಿಂದ ಸುದ್ದಿಯಾಗಿತ್ತು. ಅದರಲ್ಲೂ ತೀರಾ ಕುತೂಹಲವನ್ನು ಹುಟ್ಟುಹಾಕಿದ ಕನ್ನಡಿಗ ಪ್ರಕಾಶ್ ರಾಜ್( ರೈ) ಅವರ ನಿರ್ಮಾಣದ ತಮಿಳಿನ ‘ಧೋನಿ’ಯಂತೂ ಪುಟ್ಟ ಪೋರನೊಬ್ಬ ಕ್ರಿಕೆಟಿಗನಾಗಬೇಕು ಎಂದು ಬಯಸುವ ಕತೆಯಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೆಲ್ಲವೂ ಧೋನಿಯ ಹೆಸರು ಹಾಗೂ ಆತನ ಕ್ರಿಕೆಟ್ ಬಗ್ಗೆ ಮಾತ್ರ ಹೆಣೆಯಲಾದ ಕತೆಗಳಿಂದ ಸಿನಿಮಾ ನಿರ್ಮಾಣವಾಗಿತ್ತು. ಆದರೆ ಈಗ ಬರುತ್ತಿರುವ ಚಿತ್ರವಂತೂ ಧೋನಿಯ ಆತ್ಮಕತೆಯನ್ನೇ ಸಿನಿಮಾ ಮಾಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ರಾಂಚಿಯಿಂದ ಹಿಡಿದು ಇಂದು ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಮಿಂಚಿದ ಎಲ್ಲ ವಿಚಾರಗಳು ಸಿನಿಮಾದಲ್ಲಿ ದಾಖಲಾಗುತ್ತದೆ. ಇದು ಬಾಲಿವುಡ್ ಪಡಸಾಲೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಾಗಿರುವ ಕಾರಣದಿಂದ ಮಸಾಲೆ, ಗ್ಲಾಮರ್ ಹಾಗೂ ಮನರಂಜನೆಯೂ ಇರಲಿದೆ. ಬಾಲಿವುಡ್ ನಿರ್ದೇಶಕ ನೀರಜ್ ಪಾಂಡೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ ನೀರಜ್ ಪಾಂಡೆ ಪ್ರತಿಭಾವಂತ ನಿರ್ದೇಶಕ. ಈ ಹಿಂದೆ ‘ವೆಡ್‌ನೆಸ್ ಡೇ’ ಚಿತ್ರ ತರುವ ಮೂಲಕ ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡಿದ್ದರು. ಈ ಬಳಿಕ ಸ್ಪೆಶಲ್-೨೬,ವನ್ನು ಕೂಡ ನಿರ್ದೇಶನ ಮಾಡಿದ್ದರು. ಇದು ದೇಶದ ಭ್ರಷ್ಟಾಚಾರದ ಕುರಿತಾದ ಸಿನಿಮಾವಾಗಿತ್ತು. ಇದರ ಜತೆಗೆ ನೀರಜ್ ನಿರ್ಮಾಪಕರಾಗಿ ‘ದೀ ರಾಯಲ್ ಬೆಂಗಾಲ್ ಟೈಗರ್’ ಹಾಗೂ ‘ಟೋಟಲ್ ಸೀಯಾಪ್ಪ’ದಲ್ಲೂ ಕೆಲಸ ಮಾಡಿದ್ದಾರೆ. ಬಾಲಿವುಡ್‌ಗೆ ದಕ್ಕಿದ ರಾಜ್‌ಪೂತ್: ಸುಶಾಂತ್ ಸಿಂಗ್ ರಾಜಪೂತ್ ಈ ಹೆಸರು ಕೇಳಿದಾಕ್ಷಣ ಬಾಲಿವುಡ್‌ನ ಬಿಗ್ ಹಿಟ್ ಚಿತ್ರಗಳ ಲೀಸ್ಟ್‌ನಲ್ಲಿರುವ ‘ಕೈ ಪೋಚೆಂ’ ಸಿನಿಮಾ ಎದುರು ನಿಂತು ಬಿಡುತ್ತದೆ. ಆರಂಭದ ಚಿತ್ರದಲ್ಲಿಯೇ ಸುಶಾಂತ್ ಭರ್ಜರಿ ಹಿಟ್ ಚಿತ್ರ ಕೊಡುವ ಜತೆಗೆ ದೊಡ್ಡ ಬ್ಯಾನರ್‌ನ ಚಿತ್ರಗಳ ನಾಯಕನಾಗಿಯೂ ಬುಕ್ ಆಗಿದ್ದರು. ಯಶ್ ರಾಜ್ ಬ್ಯಾನರ್‌ನ ‘ಶುದ್ಧ್ ದೇಸಿ ರೋಮ್ಯಾನ್ಸ್’ ಜತೆಗೆ ಆಮೀರ್ ಖಾನ್ ಬ್ಯಾನರ್‌ನಲ್ಲಿ ಬರುತ್ತಿರುವ ‘ಪೀಕೆ’ಯಲ್ಲೂ ಸುಶಾಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ನೀರಜ್ ಪಾಂಡೆ ನಿರ್ದೇಶನದ ಧೋನಿ ಆತ್ಮಕತೆ ಆಧಾರಿತ ಚಿತ್ರಕ್ಕೆ ರಾಜ್‌ಪೂತ್ ಒಪ್ಪಿಗೆ ನೀಡಿದ್ದಾರೆ. ಚಿತ್ರಕ್ಕಾಗಿ ರಾಜ್‌ಪೂತ್ ಈಗಾಗಲೇ ಧೋನಿಯ ಜೆರ್ಸಿ, ಮ್ಯಾನರಿಸಂ, ಧೋನಿಯ ಆಟಗಳ ಕ್ಲಿಪ್ಪಿಂಗ್, ಸಂದರ್ಶನಗಳನ್ನು ನೋಡುತ್ತಿದ್ದಾರೆ.
ಸುಶಾಂತ್ ಕ್ರಿಕೆಟಿಗ ಧೋನಿ ಬರುವ ನ್ಯೂಜಿಲ್ಯಾಂಡ್ ಸರಣಿಗೂ ಮೊದಲು ಭೇಟಿ ಮಾಡಿ ಅವರ ಜತೆಯಲ್ಲಿ ತನ್ನ ಚಿತ್ರದ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆಯಲಿದ್ದಾರೆ ಎನ್ನುವ ಮಾತು ಕೂಡ ಬಾಲಿವುಡ್ ಅಂಗಳದಲ್ಲಿ ಓಡುತ್ತಿದೆ. ಇದರ ಜತೆಗೆ ಧೋನಿ ಪತ್ನಿ ಸಾಕ್ಷಿ ಕೂಡ ಈ ಚಿತ್ರದಲ್ಲಿ ಚಿತ್ರೀಸುವ ಇರಾದೆ ಚಿತ್ರದ ನಿರ್ದೇಶಕರಿಗೆ ಇದೆ. ಈ ಕಾರಣದಿಂದ ಸಾಕ್ಷಿ ಪಾತ್ರಕ್ಕೆ ದೀಪಿಕಾ ಪಡುಕೋಣೆ ಇಲ್ಲವೇ ಶ್ರದ್ಧಾ ಕಪೂರ್ ಅವರನ್ನು ಆಯ್ಕೆ ಮಾಡುವ ಕುರಿತು ಸಿನಿಮಾ ನಿರ್ದೇಶಕರು ಯೋಚನೆ ಮಾಡುತ್ತಿದ್ದಾರೆ ಎನ್ನುವ ಮಾತಿದೆ. ೨೦೧೫ರ ಹೊತ್ತಿಗೆ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ. ಇದಕ್ಕೆ ಬಹುಮುಖ್ಯ ಕಾರಣ ಧೋನಿಯ ದೇಹ ರಚನೆ. ಇದಕ್ಕಾಗಿ ಸುಶಾಂತ್ ಧೋನಿಯಂತೆ ದೇಹ ರಚನೆಗಾಗಿ ಕಸರತ್ತು ಮಾಡಲಿದ್ದಾರೆ. ಬಹುಕೋಟಿ ವೆಚ್ಚದ ಈ ಸಿನಿಮಾ ದೇಶ ಹಾಗೂ ವಿದೇಶ ಎರಡರಲ್ಲೂ ಚಿತ್ರೀಕರಣ ನಡೆಯಲಿದೆ.

No comments:

Post a Comment