Monday, March 17, 2014

ಬಾಲಿವುಡ್ ಬಿಟ್ಟ ಹುಡುಗ ನೀಲ್

* ಸ್ಟೀವನ್ ರೇಗೊ,ದಾರಂದಕುಕ್ಕು ನೀಲ್ ನಿತಿನ್ ಮುಕೇಶ್ ಎಂದಾಗ ನತದೃಷ್ಟ ಎನ್ನುವ ಮಾತು ಗೊತ್ತಿಲ್ಲದೇ ಪ್ರೇಕ್ಷಕರ ಮನದಲ್ಲಿ ಅರಳಿಬಿಡುತ್ತದೆ. ಇದು ನೀಲ್ ನಟಿಸಿದ ಫಿಲ್ಮೋಗ್ರಾಫಿ ನೋಡಿದ ಎಲ್ಲರೂ ಹೇಳುವ ಮಾತು. ಒಂದಲ್ಲ ಎರಡಲ್ಲ ಬರೋಬರಿ ೧೧ ಬಾಲಿವುಡ್ ಚಿತ್ರಗಳಲ್ಲಿ ನೀಲ್ ನಟಿಸಿದ್ದಾರೆ. ಆದರೆ ಒಂದೇ ಒಂದು ಸಿನಿಮಾ ಕೂಡ ಬಾಕ್ಸಾಫೀಸ್ ರೆಕಾರ್ಡ್ ಮುರಿಯುವ ಮಾತೇ ಆಡಿಲ್ಲ.
ಅದಕ್ಕೂ ಮುಖ್ಯವಾಗಿ ಸಾಮಾನ್ಯ ಕಲೆಕ್ಷನ್ ಕಂಡು ಥಿಯೇಟರ್‌ನಿಂದಲೇ ಡುಮ್ಕಿ ಹೊಡೆದಿದೆ. ಈ ಎಲ್ಲ ವಿಚಾರಗಳಿಂದ ನೀಲ್ ನಿತಿನ್ ಮುಕೇಶ್ ಸಧ್ಯಕ್ಕೆ ಬಾಲಿವುಡ್ ಬಿಟ್ಟು ಕಾಲಿವುಡ್ ಸಿನಿಮಾ ರಂಗದಲ್ಲೇ ಠಿಕಾಣಿ ಹೂಡುತ್ತಾರೆ ಎನ್ನುವ ಗುಸುಗುಸು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಲು ಆರಂಭವಾಗಿದೆ. ಇವುಗಳ ಜತೆಯಲ್ಲಿ ನೀಲ್ ನಿತಿನ್ ಮುಕೇಶ್ ಅವರ ಬತ್ತಳಿಕೆಯಲ್ಲಿ ಬಾಲಿವುಡ್‌ನ ಎರಡು ಚಿತ್ರಗಳಿವೆ. ಆದರೆ ಅದು ಪಕ್ಕಾ ಸಿನಿಮಾಗಳಲ್ಲ. ಅಂದರೆ ಕಳೆದ ಎರಡು ವರ್ಷಗಳಿಂದ ಹೆಸರು ಮಾತ್ರ ಬುಕ್ಕಿಂಗ್ ನಡೆದಿದೆ. ಉಳಿದಂತೆ ಸಿನಿಮಾದ ಕೆಲಸ ಕಾರ‍್ಯಗಳು ಆರಂಭವೇ ಆಗಿಲ್ಲ. ಈ ಕಾರಣದಿಂದ ಈ ಎರಡು ಚಿತ್ರಗಳನ್ನು ಬಿಟ್ಟು ನೀಲ್ ಬಗ್ಗೆ ಮಾತಿಗಿಳಿದರೆ ಹುಟ್ಟುವ ಪ್ರಶ್ನೆ ನೀಲ್ ಈಗ ನಿರುದ್ಯೋಗಿ ! ಆದರೂ ಈಗ ಕಾಲಿವುಡ್‌ನಿಂದ ಅವಕಾಶವೊಂದು ಬಡಿದಿದೆ. ಚಿತ್ರನೂ ದೊಡ್ಡ ಬ್ಯಾನರ್‌ನಡಿಯಲ್ಲಿ ಸಿದ್ಧವಾಗುತ್ತಿದೆ. ಈ ಎಲ್ಲ ಕಾರಣಗಳಿಂದ ನೀಲ್ ಕಾಲಿವುಡ್ ಅಂಗಳದಲ್ಲಿಯೇ ತನ್ನ ಆಟ ಮುಂದುವರಿಸುತ್ತಾರೆ ಎನ್ನುವುದು ಗುಲ್ಲು. ಕಾಲಿವುಡ್ ಮೇಲೆ ನೀಲ್ ಕಣ್ಣು: ತೀರಾ ಇತ್ತೀಚೆಗೆ ಕಾಲಿವುಡ್ ಅಂಗಳದ ಖ್ಯಾತ ನಿರ್ದೇಶಕ ಎ.ಆರ್.ಮುರುಗದಾಸ್ ತಮ್ಮ ಹೆಸರಿಡದ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ನೀಲ್ ನಿತಿನ್ ಮುಕೇಶ್‌ರನ್ನು ಬುಕ್ ಮಾಡಿದ್ದಾರೆ. ಅಂದಹಾಗೆ ಇದು ನೀಲ್ ಕಾಲಿವುಡ್‌ನಿಂದ ಬಂದ ಎರಡನೇ ಆಫರ್ ಎನ್ನುವುದು ಗಮನಿಸಬೇಕಾದ ವಿಷ್ಯಾ. ಈ ಹಿಂದೆ ಚಿತ್ರ ನಿರ್ದೇಶಕ ಸುಸೈ ಗಣೇಶ್ ಅವರ ‘ಶಾರ್ಟ್ ಕಟ್ ರೋಮಿಯೋ’ ಹಿಂದಿಯಲ್ಲಿ ಬಂದಿತ್ತು. ಆದರೆ ಚಿತ್ರದ ನಿರ್ದೇಶಕ ಸುಸೈ ಗಣೇಶ್ ಪಕ್ಕಾ ಕಾಲಿವುಡ್ ಇಂಡಸ್ಟ್ರಿಯ ಜನ. ಅದಕ್ಕೂ ಮುಖ್ಯವಾಗಿ ಈ ಚಿತ್ರ ತಮಿಳುನಾಡಿನಲ್ಲೂ ಓಡಿತ್ತು. ಆದರೆ ಬಾಲಿವುಡ್ ಅಂಗಳದಲ್ಲಿ ಸುದ್ದಿ ಮಾಡಲು ವಿಫಲವಾಯಿತು. ಈ ಬಳಿಕ ನೀಲ್ ನಟಿಸಿದ ಯಾವುದೇ ಚಿತ್ರಗಳು ಬಾಲಿವುಡ್ ಅಂಗಳದಲ್ಲಿ ಬಂದೇ ಇಲ್ಲ. ಅದಕ್ಕೂ ಮುಖ್ಯವಾಗಿ ಕಾಲಿವುಡ್ ಪಡಸಾಲೆಯಲ್ಲೇ ನೀಲ್ ನಿತಿನ್ ಓಡಾಡಿಕೊಂಡಿರುವುದನ್ನು ಗಮನಿಸಿದ ಮುರುಗದಾಸ್ ತಮ್ಮ ಮುಂದಿನ ಚಿತ್ರಕ್ಕೆ ನೀಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಹಿಂದೆ ನಟ ವಿಜಯ್ ಅವರನ್ನು ಹಾಕಿಕೊಂಡು ಮಾಡಿದ ‘ತೂಫಾಕಿ’ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡಿತ್ತು. ಈಗ ಮುರುಗದಾಸ್ ವಿಜಯ್ ಯನ್ನು ನಾಯಕನಾಗಿ ನೀಲ್ ನಿತಿನ್ ಮುಕೇಶ್ ರನ್ನು ವಿಲನ್ ಆಗಿ ಚಿತ್ರದಲ್ಲಿ ತೋರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ವರ್ಷದ ಕೊನೆ ಭಾಗದಲ್ಲಿ ಚಿತ್ರ ಹೊರಬರುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ. ಅದಕ್ಕೂ ಮಿಗಿಲಾಗಿ ನೀಲ್ ನಿತಿನ್ ಕಾಲಿವುಡ್‌ನಲ್ಲೇ ತಮ್ಮ ಮುಂದಿನ ಚಿತ್ರ ಬದುಕು ಕಳೆಯುತ್ತಾರಾ ಎನ್ನುವುದು ಕಾದು ನೋಡಬೇಕು.

No comments:

Post a Comment