Saturday, March 15, 2014

ತುಳುನಾಡಿನ ‘ದುಡಿ ನಲಿಕೆ’ಗೆ ಒಲಿದ ಅದೃಷ್ಟ ಸಾರಂಗಕ್ಕೆ ಒಲಿದು ಬಂತು ರಾಷ್ಟ್ರಪ್ರಶಸ್ತಿ

* ಸ್ಟೀವನ್ ರೇಗೊ, ದಾರಂದಕುಕ್ಕು ತುಳುನಾಡಿನ ಅಳಿವಿನ ಅಂಚಿನಲ್ಲಿರುವ ‘ದುಡಿ ನಲಿಕೆ’ ಕುಣಿತ ಈ ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಮಂಗಳೂರು ಸಂತ. ಅಲೋಶಿಯಸ್ ಕಾಲೇಜಿನ ಸಮುದಾಯ ಬಾನುಲಿ ‘ಸಾರಂಗ’ ತಂಡ ಈ ದುಡಿ ಕುಣಿತವನ್ನು ರಾಷ್ಟ್ರಮಟ್ಟಕ್ಕೆ ಸಾಗಿಸಿ ಪ್ರಶಸ್ತಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉಡುಪಿ, ದ.ಕ.ಜಿಲ್ಲೆಯ ವಿಶಿಷ್ಟ ಜಾನಪದ ಕಲೆಯಾದ ‘ದುಡಿ ನಲಿಕೆ’ ಕುಣಿತ ಈಗ ಅಪರೂಪವಾಗಿದೆ. ಕರಾವಳಿಯ ಒಂದು ಬುಡಕಟ್ಟು ಜನಾಂಗ ಮಾತ್ರ ಈ ಕುಣಿತವನ್ನು ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ನಡೆಸುತ್ತಿದೆ. ವಿಶೇಷವಾಗಿ ದುಡಿಯನ್ನು ಬಡಿದು ಪುರುಷರು ಹಾಗೂ ಮಹಿಳೆಯರು ಕುಣಿಯುತ್ತಾ ಹಾಡುವುದು ಇದರ ವೈಶಿಷ್ಟ್ಯತೆಗಳಲ್ಲಿ ಒಂದಾಗಿದೆ. ಇಂತಹ ಕಲೆಯನ್ನು ಸಾರಂಗದ ಸಿಬ್ಬಂದಿ ಕಡಬದ ತಿಮ್ಮಪ್ಪರು ರೆಕಾರ್ಡ್ ಮಾಡಿಕೊಂಡು ಸಾರಂಗ ಸಮುದಾಯ ಬಾನುಲಿಯಲ್ಲಿ ೨ ಗಂಟೆಗಳ ಕಾಲ ಪ್ರಸಾರ ಮಾಡಿದ್ದರು. ಅದರಲ್ಲೂ ಮುಖ್ಯವಾಗಿ ರಾಷ್ಟ್ರಮಟ್ಟದ ಸಮುದಾಯ ಬಾನುಲಿ ಕೇಂದ್ರಗಳಿಗೆ ಪ್ರತಿ ವರ್ಷ ಹಮ್ಮಿಕೊಳ್ಳುತ್ತಿರುವ ಸ್ಪರ್ಧೆಯ ಸ್ಥಳೀಯ ಕಲೆಯ ಉತ್ತೇಜನ ವಿಭಾಗದಲ್ಲಿ ಈ ‘ದುಡಿ ಕುಣಿತ’ಕ್ಕೆ ಮೂರನೇ ಸ್ಥಾನ ಲಭ್ಯವಾಗಿದೆ. ಇದು ಕರ್ನಾಟಕದ ೧೦ ಸಮುದಾಯ ಬಾನುಲಿಗಳ ನಡುವೆ ಸಾರಂಗ ರಾಜ್ಯದ ಮೊದಲ ಸಮುದಾಯ ಬಾನುಲಿ ಕೇಂದ್ರವಾಗಿದೆ. ೨೦೧೨ರಲ್ಲಿ ಸಾರಂಗ ಸಮುದಾಯ ಬಾನುಲಿ ಏಡ್ಸ್ ಕುರಿತಾಗಿ ಬ್ಯಾರಿ ಸಮುದಾಯದ ಮಹಿಳೆಯರು ನಡೆಸಿಕೊಟ್ಟ ಕಾರ‍್ಯಕ್ರಮ ಕೂಡ ರಾಷ್ಟ್ರಮಟ್ಟದ ಪ್ರಶಸ್ತಿ ಬಾಚಿಕೊಂಡಿತು. ಸಾರಂಗ ಎರಡನೇ ಬಾರಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪಾತ್ರವಾಗಿದೆ. ‘ಸಾರಂಗ’ದಲ್ಲಿ ಈಗಾಗಲೇ ೨೫ ಗಂಟೆಯ ಪಾಡ್ದನಗಳ ಸಂಗ್ರಹವಿದೆ. ಇಂತಹ ಸಂಗ್ರಹ ಆಕಾಶವಾಣಿ ಕೇಂದ್ರಗಳಲ್ಲೂ ಇಲ್ಲ. ಅದಕ್ಕೂ ಮುಖ್ಯವಾಗಿ ೩೬೫ ದಿನಗಳ ಕಾಲನೂ ಯಕ್ಷಗಾನದ ಪ್ರಸಾರ ನಡೆಯುತ್ತದೆ. ಪ್ರತಿದಿನ ಬೆಳಗ್ಗೆ ೬ರಿಂದ ರಾತ್ರಿ ೧೦ರ ವರೆಗೆ ನಿರಂತರವಾಗಿ ಕೊಂಕಣಿ, ತುಳು, ಕನ್ನಡ, ಬ್ಯಾರಿ, ಇಂಗ್ಲೀಷ್‌ಗಳಲ್ಲಿ ಕಾರ‍್ಯಕ್ರಮಗಳನ್ನು ನೀಡುತ್ತಾ ಅಪಾರ ಶೋತೃಗಳನ್ನು ಹುಟ್ಟುಹಾಕಿರುವ ಸಾರಂಗದ ತಂಡದಲ್ಲಿ ಕಾರ‍್ಯಕ್ರಮ ನಿರ್ಮಾಪಕರಾಗಿ ಅಭಿಷೇಕ್ ಭಂಡಾರಿ, ಎಡ್ವರ್ಡ್ ಲೋಬೋ, ರೋಷನ್ ಕ್ರಾಸ್ತಾ, ಪ್ರಗತಿ ಕಾರ‍್ಯನಿರ್ವಹಣೆ ಮಾಡುತ್ತಿದ್ದಾರೆ. ಫಾ. ವಾಲ್ಟರ್ ಅಂದ್ರಾದೆ ಹಾಗೂ ಫಾ. ಸ್ಟೀಬರ್ಟ್ ಡಿಸಿಲ್ವಾ ಸಾರಂಗದ ಉಸ್ತುವಾರಿ ಹೊತ್ತುಕೊಂಡಿದ್ದಾರೆ.
ಕರಾವಳಿ ಮೀನುಗಾರರ ಸಮೂಹ, ಕೃಷಿಕ ಬಂಧುಗಳಿಗೆ ಮಾಹಿತಿ, ಆರೋಗ್ಯ- ಕಾನೂನು ಕ್ಷೇತ್ರದ ಜತೆಗೆ ವಿದ್ಯಾರ್ಥಿಗಳಿಗೆ ಆಸಕ್ತಿ ನೀಡುವಂತಹ ಕಾರ್ಯಕ್ರಮಗಳು, ರಸ್ತೆ ಸುರಕ್ಷೆಯ ಜತೆಗೆ ಮಳೆ ನೀರು ಕೊಯ್ಲು ಕಾರ್ಯಕ್ರಮಗಳು ಸಾರಂಗದಲ್ಲಿ ಜಾಸ್ತಿಯಾಗಿ ಪ್ರಸಾರವಾಗುತ್ತಿದೆ. ಮಂಗಳೂರು ಸುತ್ತಮುತ್ತಲಿನ ಊರುಗಳ ಜತೆಗೆ ದೂರದ ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ ಹಾಗೂ ಉಡುಪಿ ಮುಂತಾದ ಪ್ರದೇಶಗಳಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಇತರ ವರ್ಗದ ಜನರು ಸಾರಂಗದಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಎನ್ನುತ್ತಾರೆ ಸಾರಂಗ ೧೦೭.೮ ಸಮುದಾಯ ಬಾನುಲಿಯ ಉಸ್ತುವಾರಿ ಹೊತ್ತುಕೊಂಡಿರುವ ಫಾ.ವಾಲ್ಟರ್ ಅಂದ್ರಾದೆ ಅವರು. ಕರಾವಳಿಯಲ್ಲಿ ಐದಾರು ಧರ್ಮ, ಭಾಷೆ, ಸಂಸ್ಕೃತಿಯ ಮಂದಿ ಬದುಕುತ್ತಿದ್ದಾರೆ. ಈ ಎಲ್ಲ ಮಂದಿಯನ್ನು ಒಂದು ಎಂಬ ಸಂಕೇತ ರೂಪವಾಗಿ ‘ಸಾರಂಗ’ ಎಂಬ ಹೆಸರನ್ನು ಸೂಚಿಸಲಾಗಿದೆ. ‘ಸಾರಂಗ’ ಎಂದರೆ ಹಲವು ಬಣ್ಣಗಳು ಎಂಬ ಅರ್ಥ ನೀಡುತ್ತದೆ. ವಿವಿಧ ಕಾರ್ಯಕ್ರಮಗಳು ಈ ‘ಸಾರಂಗ’ಕ್ಕೆ ಮತ್ತಷ್ಟೂ ಬಲ ನೀಡಿದೆ ಎನ್ನುವುದು ಕೇಳುವ ಶೋತೃಗಳು ಹೇಳುವ ಮಾತು.

No comments:

Post a Comment