Tuesday, March 4, 2014
ಸಿನಿಮಾ ಇನ್ ಪಾಲಿಟಿಕಲ್ ವಾರ್
* ಸ್ಟೀವನ್ ರೇಗೊ, ದಾರಂದಕುಕ್ಕು
ಬಣ್ಣದ ನಗರಿಗೂ ರಾಜಕೀಯಕ್ಕೂ ತೀರಾ ಹತ್ತಿರದ ನಂಟಿದೆ ಎನ್ನೋದು ಇತಿಹಾಸವೇ ಬಾಯಿಬಿಟ್ಟುಕೊಂಡು ಹೇಳುತ್ತಿದೆ. ಬಣ್ಣದ ನಗರಿಯಲ್ಲಿ ಸಲ್ಲುವ ಬಹುತೇಕ ಮಂದಿ ರಾಜಕೀಯಕ್ಕೂ ಸಲ್ಲುತ್ತಾರೆ ಎನ್ನುವ ಮಾತಿಗೆ ಈಗಾಗಲೇ ನೂರು ಶೇಕಡಾದಷ್ಟು ಮತ ಸಿಕ್ಕಿದೆ. ಈಗ ಇಂತಹ ಒಂದು ರಾಜಕೀಯ ಅಖಾಡಕ್ಕೆ ಇಳಿಯಲು ಸಿದ್ಧತೆಯೊಂದು ಬಾಲಿವುಡ್ ಅಂಗಳದಲ್ಲಿ ನಡೆಯುತ್ತಿದೆ ಎನ್ನುವ ಗುಸುಗುಸು ತೆರೆ ಮರೆಯಲ್ಲಿ ಕೇಳಿಸಿಕೊಳ್ಳುತ್ತಿದೆ.
ಹೌದು. ಇದು ಬಾಲಿವುಡ್ ನಟಿ ಪ್ರೀತಿ ಝಿಂಟಾ ಮೇಡಂ ಅವರ ಮಾತು. ಬಾಲಿವುಡ್ ಅಂಗಳದಲ್ಲಿ ಸರಿಯಾಗಿ ನೆಲೆ ಸಿಕ್ಕಲು ಒದ್ದಾಟ ಮಾಡಿಕೊಂಡೇ ಬದುಕು ಕಟ್ಟಿದ ದಿಟ್ಟೆಯೊಬ್ಬರ ಕತೆ. ಪ್ರೀತಿ ಝಿಂಟಾ ಈಗ ಸಕ್ರೀಯ ರಾಜಕಾರಣದಲ್ಲಿ ಮುಳುಗಲಿದ್ದಾರೆ ಎನ್ನುವುದು ಸಿಕ್ಕಿರುವ ಬ್ರೇಕಿಂಗ್ ನ್ಯೂಸ್.
ಅಂದಹಾಗೆ ಸಿನಿಮಾ ಬಿಟ್ಟು ನಂತರ ಐಪಿಎಲ್ ಕ್ರಿಕೆಟ್‌ನಲ್ಲಿ ಸದ್ದು ಮಾಡಿರುವ ಹುಡುಗಿ ಪ್ರೀತಿ ಯಾಕೆ ಏಕ್‌ದಂ ರಾಜಕಾರಣಕ್ಕೆ ಇಳಿದು ಹೋದಳು ಎನ್ನುವ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿಲ್ಲ. ಆದರೆ ರಾಜಕಾರಣಕ್ಕೆ ಬರುವ ವಿಚಾರವಂತೂ ಗ್ಯಾರಂಟಿಯಾಗಿದೆ.
ಬಿಜೆಪಿಯಿಂದ ಪ್ರೀತಿಗೆ ಟಿಕೇಟ್:
ಬಾಲಿವುಡ್ ಚಿಗರೆ ಪ್ರೀತಿ ಝಿಂಟಾ ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೇಟ್ ಪಡೆದುಕೊಂಡು ಅಖಾಡಕ್ಕೆ ಇಳಿಯುತ್ತಾರೆ. ಮುಂಬಯಿಯ ನಾರ್ತ್ ಸೆಂಟ್ರಲ್‌ನಿಂದ ಪ್ರೀತಿ ಇಳಿಯುವ ಸಾಧ್ಯತೆಗಳು ದಟ್ಟವಾಗಿದೆ. ಅಂದಹಾಗೆ ಈ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಇಳಿಯುವರು ಪ್ರಿಯಾ ದತ್.
ನಟ ಸಂಜಯ್ ದತ್ ಅವರ ಸಹೋದರಿ ಹಾಗೂ ಸುನೀತ್ ದತ್ ಅವರ ಪುತ್ರಿ ಪ್ರಿಯಾ ದತ್ ವಿರುದ್ಧ ಪ್ರೀತಿ ಝಿಂಟಾ ತೊಳ್ಬಲ ಪ್ರದರ್ಶನಕ್ಕೆ ಇಳಿಯುತ್ತಾರೆ. ಇದರ ಹಿಂದೆ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ಕೆಲಸ ಮಾಡಿದ್ದಾರೆ. ಅಂದಹಾಗೆ ಪ್ರೀತಿಗೂ ರೂಡಿಗೂ ಎಲ್ಲಿಯ ಸಂಬಂಧ ಎಂದು ಕೇಳುವ ಮೊದಲು ಜಸ್ಟ್ ಒಂದ್ ಸಾರಿ ನಿಂತು ಬಿಡಿ.
ಯಾಕ್ ಅಂದ್ರೆ ಇಬ್ಬರು ತೀರಾ ಹತ್ತಿರದ ಸಂಬಂಧಿಗಳು. ಅದಕ್ಕೂ ಮೊದಲು ಬಿಜೆಪಿ ಪಾಳೆಯದಲ್ಲಿ ಈ ಹಿಂದೆ ಕೂಡ ಪ್ರೀತಿಯ ಹೆಸರು ಕೇಳಿಸಿಕೊಂಡಿತ್ತು. ಆದರೆ ಸಿನಿಮಾ, ಕ್ರಿಕೆಟ್ ಎಂದೇ ಉಸಿರಾಡುತ್ತಿದ್ದ ಪ್ರೀತಿ ಝಿಂಟಾಳಿಗೆ ಈ ಹಿಂದಿನ ಆಫರ್ ಅಷ್ಟಾಗಿ ಹಿಡಿಸಲಿಲ್ಲ. ಈಗ ಸಿನಿಮಾನೂ ಇಲ್ಲ ಇತ್ತ ಕ್ರಿಕೆಟ್‌ನಲ್ಲೂ ಹೆಚ್ಚೇನೂ ಮಾಡಲಾಗುವುದಿಲ್ಲ ಎನ್ನುವ ಕಾರಣಕ್ಕೆ ಪ್ರೀತಿ ರಾಜಕಾರಣಕ್ಕೆ ಇಳಿಯಲು ಏಕ್‌ದಂ ತಯಾರಿ ನಡೆಸಿದ್ದಾರೆ ಎನ್ನುವ ಮಾತಿದೆ.
ಆಂಧ್ರದಲ್ಲಿ ಹೊಸ ಪಕ್ಷ ಉದಯ:
ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರ ಪವನ್ ಕಲ್ಯಾಣ ಸಿನಿಮಾಗಳಲ್ಲಿ ಬ್ಯುಸಿ ಇರುವ ಜತೆಗೆ ರಾಜಕಾರಣಕ್ಕೂ ಇಳಿಯುವ ಸೂಚನೆ ಕೊಟ್ಟಿದ್ದಾರೆ. ಈ ಹಿಂದೆ ತನ್ನ ಸಹೋದರನ ಪ್ರಜಾರಾಜ್ಯಂನಲ್ಲಿ ಸಕ್ರೀಯ ರಾಜಕಾರಣಕ್ಕೆ ಇಳಿದ ಪವನ್ ಕಲ್ಯಾಣ್ ತನ್ನದೇ ಸ್ವಂತ ರಾಜಕೀಯ ಪಕ್ಷ ಕಟ್ಟುವ ಯೋಚನೆ ಮಾಡುತ್ತಿದ್ದಾರೆ ಎನ್ನೋದು ಈಗ ಬಂದಿರುವ ಲೇಟೆಸ್ಟ್ ಸುದ್ದಿ. ಪಕ್ಷದ ಹೆಸರು ಹಾಗೂ ಚಿಹ್ನೆಯ ಕುರಿತು ಯಾವುದೇ ಮಾಹಿತಿ ಸಿಗದೇ ಹೋದರೂ ಕೂಡ ಪಕ್ಷ ಕಟ್ಟುವ ಕೆಲಸವಂತೂ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನೋದು ಹೊರ ಬಂದ ಮಾಹಿತಿ. ಬರುವ ಲೋಕಸಭೆ ಚುನಾವಣೆಯಲ್ಲಿ ಪವನ್ ಈ ಪಕ್ಷದಿಂದಲೇ ಕಣಕ್ಕೆ ಇಳಿಯುತ್ತಾರೆ ಎನ್ನೋದು ಅವರ ಆಪ್ತ ವಲಯ ಹೇಳಿಕೊಳ್ಳುತ್ತಿರುವ ಮಾತು. ಅದಕ್ಕಾಗಿ ಪವನ್ ಕಲ್ಯಾಣ್ ನಟಿಸುತ್ತಿರುವ ಎರಡು ಚಿತ್ರಗಳನ್ನು ಲೋಕಸಭೆ ಚುನಾವಣೆಯ ಬಳಿಕವಷ್ಟೇ ಚಿತ್ರೀಕರಣ ನಡೆಸಬೇಕು ಎನ್ನುವ ಪತ್ರವನ್ನು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಪವನ್ ಕಲ್ಯಾಣ್ ನೀಡಿದ್ದಾರೆ ಎನ್ನುವ ಮಾಹಿತಿ ಇದೆ. ಟೋಟಲಿ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ ಇಬ್ಬರು ನಟರು ಸಕ್ರೀಯ ರಾಜಕಾರಣಕ್ಕೆ ಇಳಿಯುವ ಸೂಚನೆಯನ್ನು ಚುನಾವಣೆ ಘೋಷಣೆಯಾಗುವ ಮೊದಲೇ ನೀಡಿದ್ದಾರೆ. ಈ ಮೂಲಕ ಬಣ್ಣದ ನಗರಿಯ ರಂಗು ರಾಜಕಾರಣದಲ್ಲೂ ಕಾಣಿಸಿಕೊಳ್ಳುವ ಮಾತು ಒಪ್ಪಲೇ ಬೇಕಾಗುತ್ತದೆ. ಅದಕ್ಕೂ ಮುಖ್ಯವಾಗಿ ದೇಶದಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಮೊದಲು ಅದೆಷ್ಟೋ ನಟ, ನಟಿಯರು ಈ ರಾಜಕಾರಣಕ್ಕೆ ಇಳಿಯುತ್ತಾರೋ ಎನ್ನುವುದು ಪ್ರೇಕ್ಷಕ ಮಹಾಪ್ರಭು ಕಾದು ಕೂರಬೇಕಾಗುತ್ತದೆ.
Subscribe to:
Post Comments (Atom)
No comments:
Post a Comment