Tuesday, March 4, 2014

ಕುಡ್ಲದಲ್ಲಿ ಮಿಂಚು ಹರಿಸಿದ ಫ್ಯಾಶನ್ ದುನಿಯಾ

* ಸ್ಟೀವನ್ ರೇಗೊ, ದಾರಂದಕುಕ್ಕು ಮಿರಿಮಿರಿ ಮಿನುಗುವ ಬೆಳಕು. ಜತೆ ಜತೆಗೆ ಲೈಟ್ ಮ್ಯೂಸಿಕ್. ಟೋಟಲಿ ರ‍್ಯಾಂಪ್ ಮೇಲೆ ನಡೆಯುವ ಮಂದಿಗೆ ಒಂದು ಹುಮ್ಮಸ್ಸು ತಮಗೆ ಗೊತ್ತಿಲ್ಲದೇ ಬೆಳೆದು ಬರುತ್ತದೆ. ಹೌದು. ಇದು ಫ್ಯಾಶನ್ ಎಬಿಸಿಡಿಯ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಮೂರನೇ ಸರಣಿಯ ಅಂತಿಮ ಪಯಣದ ಜಸ್ಟ್ ಹೊಳಪಿನ ಮಾತು.
ಕುಡ್ಲದ ಮಂದಿಗೆ ಫ್ಯಾಶನ್ ಪರೇಡ್ ಎನ್ನುವ ಕಲ್ಪನೆಯೇ ತೀರಾ ಹೊಸತು. ಇಲ್ಲಿಯ ಸೌಂದರ್ಯವನ್ನು ವೇದಿಕೆಯ ಮೇಲೆ ತಂದು ಕೂರಿಸುವಲ್ಲಿ ಮಂಗಳೂರಿನ ಫ್ಯಾಶನ್ ಎಬಿಸಿಡಿ ಸಂಸ್ಥೆಯವರು ಪಡುವ ಪರಿಶ್ರಮದ ಫಲವೇ ಇಂದಿನ ಸೌಂದರ್ಯ ಸ್ಪರ್ಧೆಗಳೇ ಸಾಕ್ಷಿ. ದೂರ ದೂರದ ಊರುಗಳಲ್ಲಿ ನಡೆಯುವ ಫ್ಯಾಶನ್ ಪರೇಡ್‌ಗಳನ್ನು ನೋಡು ನೋಡುತ್ತಾ ಇರುವ ಕುಡ್ಲದ ಮಂದಿಗೆ ಇದೊಂದು ವಿಶೇಷ ಅನುಭವ. ಭಾನುವಾರ ಮೂಡುಬಿದಿರೆಯ ಪಂಡಿತ್ ಹೆಲ್ತ್ ರೆಸಾರ್ಟ್‌ನ ಭವ್ಯ ಸ್ಟೇಜ್ ಮೇಲೆ ೧೪ಯುವ ಮೊಡೆಲ್‌ಗಳು ಹಾಗೂ ೧೭ ರೂಪದರ್ಶಿಗಳು ರ‍್ಯಾಂಪ್ ಮೇಲೆ ನಡೆದು ಸೌಂದರ್ಯ ಲಹರಿಗೆ ಸಾಥ್ ಕೊಟ್ಟರು. ವೆಸ್ಟರ್ನ್ ಹಾಗೂ ಶಾಸ್ತ್ರೀಯ ಸಂಗೀತದ ಹದವಾದ ಮಿಶ್ರಣದಲ್ಲಿ ಮೂಡಿ ಬರುತ್ತಿದ್ದ ಹಾಡುಗಳ ತಾಳ ಮೊಡೆಲ್‌ಗಳ ಕ್ಯಾಟ್‌ವಾಕ್‌ಗೆ ಸಾಥ್ ಕೊಡುವಂತಿತ್ತು. ಮೂರು ಹಂತಗಳಲ್ಲಿ ನಡೆದ ಈ ಸೌಂದರ್ಯ ಸ್ಪರ್ಧೆಯಲ್ಲಿ ಎರಡನೇ ಹಂತದಲ್ಲಿ ೧೨ ಹಾಗೂ ಮೂರನೇ ಹಂತದಲ್ಲಿ ೬ರಂತೆ ಕೊನೆಗೆ ಮೂವರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಈ ಸೌಂದರ್ಯ ಸ್ಪರ್ಧೆಯ ಹೈಲೇಟ್‌ಗಳಲ್ಲಿ ಒಂದಾಗಿದೆ. ಈ ಬಾರಿ ಸಖತ್ ಡಿಫರೆಂಟ್: ಫ್ಯಾಶನ್ ಎಬಿಸಿಡಿಯ ಆಯೋಜಿತ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಸ್ಪರ್ಧೆಯೇ ಒಂದು ಡಿಫರೆಂಟ್ ಕಲ್ಪನೆ. ಮಂಗಳೂರು ಮೂಲದ ಅದರಲ್ಲೂ ತುಳುನಾಡಿನಲ್ಲಿ ಹುಟ್ಟಿ ನಂತರ ದೇಶ- ವಿದೇಶದಲ್ಲಿರುವ ನಾನಾ ಸುಂದರ ಯುವಕ-ಯುವತಿಯರನ್ನು ಫ್ಯಾಶನ್ ದುನಿಯಾಕ್ಕೆ ಕರೆ ತರುವುದು ಈ ಫ್ಯಾಶನ್ ಶೋನ ಮೂಲ ಉದ್ದೇಶ. ಈ ಸ್ಪರ್ಧೆಯ ಮೂಲಕ ಕರಾವಳಿಯ ಸಂಪ್ರದಾಯ, ಕಲಾಚಾರ ಜತೆಗೆ ಪ್ರವಾಸೋದ್ಯಮಕ್ಕೆ ವಿಶೇಷ ಮನ್ನಣೆ ಒದಗಿಸಿ ಕೊಡುವ ಪ್ರಯತ್ನ ಕೂಡ ಇಲ್ಲಿ ನಡೆಯುತ್ತದೆ. ಅದರಲ್ಲೂ ಇಲ್ಲಿ ವಿಜೇತರಾದವರಿಗೆ ದೇಶದ ಪ್ರತಿಷ್ಠಿತ ಮಿಸ್ ಸೌತ್ ಇಂಡಿಯಾ ಸ್ಪರ್ಧೆಗೆ ನೇರ ಪ್ರವೇಶಾತಿ ಕೂಡ ಸಿಗಲಿದೆ.
ಮಿಸ್ಟರ್ ಮಂಗಳೂರಿನಲ್ಲಿ ವಿಜೇತರಾದವರಿಗೆ ಹೊಸದಿಲ್ಲಿಯಲ್ಲಿ ನಡೆಯುವ ಮಿಸ್ಟರ್ ಇಂಡಿಯಾ ಗ್ಲೋಬಲ್‌ನಲ್ಲಿ ನೇರ ಪ್ರವೇಶ ಪಡೆಯುತ್ತಾರೆ. ಮುಖ್ಯವಾಗಿ ಸಿನಿಮಾದಲ್ಲಿ ನಟನೆ, ನಾನಾ ಕಂಪನಿಗಳ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸೀಡರ್ ಆಗುವ ಯೋಗ ಕೂಡ ಲಭ್ಯವಾಗಲಿದೆ ಎನ್ನುವುದು ಫ್ಯಾಶನ್ ಎಬಿಸಿಡಿ ಸಂಸ್ಥೆಯವರು ಹೇಳುವ ಮಾತು. ಮಿಸ್ ಆಂಡ್ ಮಿಸ್ಟರ್ ಮಂಗಳೂರು ಗೆದ್ದವರು: ಮಂಗಳೂರಿನಲ್ಲಿ ನಡೆಯುತ್ತಿರುವ ಮೂರನೇ ಸರಣಿಯ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಸರಣಿಯಲ್ಲಿ ಈ ಬಾರಿಯ ವಿಜೇತರಾದ ಮಿಸ್ ಮಂಗಳೂರು ಫಾಹಿಮ್ ಪಾತಿಮಾ ಅದೇ ರೀತಿಯಲ್ಲಿ ಮಿಸ್ ಮಂಗಳೂರು ಫಸ್ಟ್ ರನ್ನರ್ ಆಫ್ ಅವಿನ್ ದಿವ್ಯಾ ವಾಸ್, ಸೆಕೆಂಡ್ ರನ್ನರ್ ಆಫ್ ವರುಣಾ ಸಂಪತ್ ಆಯ್ಕೆಯಾದರು. ಮಿಸ್ಟರ್ ಮಂಗಳೂರಿನಲ್ಲಿ ಪುನೀತ್ ಜಯದೇವ್ ವಿನ್ನರ್ ಆಗಿ ಮೂಡಿಬಂದರು. ಉಳಿದಂತೆ ಫಸ್ಟ್ ರನ್ನರ್ ಆಫ್ ವಿಕಾಸ್ ಪುತ್ರನ್, ಸೆಕೆಂಡ್ ರನ್ನರ್ ಆಫ್ ಆಗಿ ಸನಾಂ ಅಮೀನ್ ಆಯ್ಕೆಯಾದರು. ಫ್ಯಾಶನ್ ದುನಿಯಾಕ್ಕೆ ಲುಕ್ ತಂದ ಗೆಸ್ಟ್‌ಗಳು: ಈ ವಿಶೇಷ ಫ್ಯಾಶನ್ ಶೋನಲ್ಲಿ ಮುಂಬಯಿ ಖ್ಯಾತ ಫರ್‌ಸೆಫ್ಟ್ ಗ್ರೂಫ್‌ನ ಮುಖ್ಯಸ್ಥ ಹರೀಂದರ್ ಸಿಂಗ್, ಲ್ಯಾಕ್ಮೆ ಫ್ಯಾಶನ್ ವೀಕ್‌ನ ನಿಕಿತಾ ಪೂಂಜಾ, ಮಿಸ್ ಸೌತ್ ಇಂಡಿಯಾದ ರೂವಾರಿ ಅಜಿತ್ ರವಿ, ಸಿನಿಮಾ ನಿರ್ಮಾಪಕ ರಾಜೇಶ್ ಭಟ್,ಮಹಾರಾಷ್ಟ್ರದ ಡಿಜಿಪಿ ಶ್ರೀದೇವಿ ಗೋಯಲ್, ಮಿಸ್ ಇಂಡಿಯಾ ಫೈನಲಿಸ್ಟ್ ಪ್ರಥ್ವಿ ರಾವ್, ಡಾ. ಶಿಲ್ಪಾ ಶೆಟ್ಟಿ ನಾಯಕ್, ಡಾ. ಸ್ವಪ್ನಾ ಧನಂಜಯ್, ಚಿತ್ರ ನಿರ್ದೇಶಕ ಸಂದೀಪ್ ಮಲಾನಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

No comments:

Post a Comment