Thursday, March 13, 2014
ಐದು ಸಾವಿರ ಹೆರಿಗೆ ಮಾಡಿಸಿದ ಸೂಲಗಿತ್ತಿ ಮುತ್ತಜ್ಜಿ
* ಸ್ಟೀವನ್ ರೇಗೊ, ದಾರಂದಕುಕ್ಕು
ಇಂದಿನಂತೆ ಅಂದು ತಂತ್ರಜ್ಞಾನ ಹೇಳಿದಂತೆ ಬೆಳೆದು ಬಂದಿರಲಿಲ್ಲ. ಆಸ್ಪತ್ರೆಗಳಂತೂ ಮಾರು ದೂರ ಇರುತ್ತಿತ್ತು. ಹೆಣ್ಣು ಮಕ್ಕಳಿಗೆ ಹೆರಿಗೆ ನೋವು ಬಂತು ಎಂದಾದರೆ ಮುತ್ತಕ್ಕ ಓಡಿಹೋಗಿ ಹೆರಿಗೆ ಮಾಡಿಸಿ ಪುಣ್ಯ ಕಟ್ಟುಕೊಳ್ಳುತ್ತಿದ್ದರು. ಕಾರ್ಕಳ, ಬೆಳುವಾಯಿ ಸುತ್ತಮುತ್ತ ಕಳೆದ ೬೦ ವರ್ಷಗಳಿಂದ ಮುತ್ತಕ್ಕ ಮಾಡಿಸಿದ ಹೆರಿಗೆಗಳ ಸಂಖ್ಯೆಯೇ ಐದು ಸಾವಿರ ಸಂಖ್ಯೆ ದಾಟಿ ನಿಲ್ಲುತ್ತದೆ.
ಹನ್ನೆರಡರ ಹರೆಯದಲ್ಲಿ ಮುತ್ತಕ್ಕ ತನ್ನ ತಾಯಿಯ ಜತೆ ಸೇರಿಕೊಂಡು ಹೆರಿಗೆ ಮಾಡಿಸುವ ಕಾಯಕ ನೆಚ್ಚಿಕೊಂಡರು. ಅಲ್ಲಿಂದ ಈಗಲೂ ಯಾವುದೇ ಪ್ರತಿಫಲ ಅಪೇಕ್ಷೆ ಮಾಡಿಕೊಳ್ಳದೇ ಹೆರಿಗೆ ಮಾಡಿಸುತ್ತಿದ್ದಾರೆ. ಇವರ ಸಾಧನೆಯನ್ನು ಮನಗಂಡು ಕರ್ನಾಟಕ ರಾಜ್ಯ ಸರಕಾರ ೧೯೮೫ರಲ್ಲಿ ಹೆರಿಗೆ ಕಿಟ್ ನೀಡಿ ಪ್ರೋತ್ಸಾಹಿಸಿದೆ. ಎರಡನೇ ತರಗತಿವರೆಗೆ ಓದಿರುವ ಮುತ್ತಜ್ಜಿಗೆ ಎರಡು ಹೆಣ್ಣು ಮತ್ತು ಮೂವರು ಗಂಡು ಮಕ್ಕಳಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿದ ಮುತ್ತಜ್ಜಿಗೆ ಈಗ ಭರ್ತಿ ೭೨ ತುಂಬಿದೆ.
‘ಗದ್ದೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ಯಾರಾದರೂ ಬಂದು ನನ್ನ ಮಗಳಿಗೆ ಅಥವಾ ಸೊಸೆಗೆ ಹೆರಿಗೆ ನೋವು ಬರುತ್ತಿದೆ. ದಯವಿಟ್ಟು ಬನ್ನಿ ಎಂದರೆ ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೆ ಬಿಟ್ಟು ತಕ್ಷಣ ಬಂದ ವ್ಯಕ್ತಿಯ ಜತೆಗೆ ಧಾವಿಸುತ್ತಿದ್ದರು ಎಂದು ಮುತ್ತಕ್ಕರನ್ನು ಬಾಲ್ಯದಿಂದಲೂ ಹತ್ತಿರದಿಂದ ಕಂಡು ನೋಡುತ್ತಿದ್ದ ನಿವೃತ್ತ ಅಬಕಾರಿ ಇಲಾಖೆಯ ಅಧಿಕಾರಿಯಾಗಿರುವ ಜಯಕರ ಸಾಲ್ಯಾನ್ ಹೇಳುವ ಮಾತು.
ಈಗಿನ ಕಾಲದಂತೆ ಹಿಂದೆ ಹೆಚ್ಚಿನ ವೈದ್ಯರು ಇರಲಿಲ್ಲ. ಊರಿಗೊಬ್ಬ ವೈದ್ಯರು ಇರುವಂತಹ ಕಾಲದಲ್ಲಿ ಮುತ್ತಕ್ಕ ಊರಲ್ಲಿ ಹೆರಿಗೆ ನಿರ್ವಹಿಸುತ್ತಿರುವುದರಿಂದ ಬಹಳಷ್ಟು ವೈದ್ಯರು ಮುತ್ತಕ್ಕ ಮೇಲೆ ಗರಂ ಆಗುತ್ತಿದ್ದರು. ಆದರೂ ಯಾರಾದರೂ ಬಂದು ಹೆರಿಗೆ ನೋವು ಬರುತ್ತಿದೆ ದಯವಿಟ್ಟು ಬನ್ನಿ ಎಂದರೆ ತಕ್ಷಣ ಯಾವ ಫಲಾಫೇಕ್ಷೆ ಇಲ್ಲದೇ ಅವರ ಸಹಾಯಕ್ಕೆ ಹೋಗುತ್ತಿದ್ದರು. ತಾನು ಹೋದ ಕೆಲಸ ದೇವರ ದಯೆಯಿಂದ ಯಾವುದೇ ತೊಂದರೆ ಇಲ್ಲದೆ ನೆರವೇರಿದೆ ಎನ್ನುವ ಖುಷಿ ತುಂಬಿಕೊಂಡು ಮನೆಗೆ ಹಿಂತಿರುಗುತ್ತಿದ್ದರು. ಅದರಲ್ಲೂ ಅವರು ಮಾಡಿದ ಯಾವುದೇ ಹೆರಿಗೆ ಕೂಡ ಕಷ್ಟವಾಗಿ ಆಸ್ಪತ್ರೆಯ ದಾರಿ ಹಿಡಿದ ಪ್ರಸಂಗವೇ ಇಲ್ಲ ಎನ್ನುತ್ತಾರೆ ಜಯಕರ ಸಾಲ್ಯಾನ್ ಅವರು.
ಮುತ್ತಕ್ಕ ಮಾಡಿದ ಗ್ರಾಮ ಸೇವೆ:
ಮುತ್ತಕ್ಕ ಬರೀ ಸೂಲಗಿತ್ತಿ ವೃತ್ತಿಯಲ್ಲಿ ಮಾತ್ರ ತೊಡಗಿಸಿಕೊಳ್ಳದೆ ಜನಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇವರು ಬೆಳುವಾಯಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಅತ್ಯಧಿಕ ಮತಗಳಿಂದ ಗೆದ್ದು ಬಂದು ಜನಸೇವೆ ಮಾಡಿ ಹೆಸರುಗಳಿಸಿದ್ದಾರೆ. ಇವರ ಕೆಲಸವನ್ನು ಗುರುತಿಸಿದ ಬಹಳಷ್ಟು ಸಂಘ- ಸಂಸ್ಥೆಗಳು ಅವರನ್ನು ಕರೆದು ಸನ್ಮಾನಿಸಿದೆ. ಈಗ ಮುತ್ತಜ್ಜಿ ತನ್ನ ವೃತ್ತಿ ಜೀವನದಲ್ಲಿ ಮಕ್ಕಳ ಮೊದಲ ಅಳು ಕೇಳಿದ ಹಾಗೂ ಮೊದಲು ಕೈಯಲ್ಲಿ ಹಿಡಿದ ಖುಷಿಯನ್ನು ಮೆಲುಕು ಹಾಕುತ್ತ ತನ್ನ ಮನೆಯಲ್ಲಿ ನಿವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ.
Subscribe to:
Post Comments (Atom)
No comments:
Post a Comment