Monday, March 17, 2014

ಕನ್ನಡದಲ್ಲಿ ‘ನವ್ಯಾ’ ದೃಶ್ಯಂ

* ಸ್ಟೀವನ್ ರೇಗೊ, ದಾರಂದಕುಕ್ಕು
ಸ್ಯಾಂಡಲ್‌ವುಡ್ ಸಿನಿಮಾ ಅಡ್ಡಾದಲ್ಲಿ ಮಲಯಾಳಂ ಬೆಡಗಿ ನವ್ಯಾ ನಾಯರ್ ಎಂಟ್ರಿ ಕೊಡುತ್ತಿದ್ದಾರೆ. ಮಲಯಾಳಂ ಸಿನಿಮಾ ‘ದೃಶ್ಯಂ’ ಈಗಾಗಲೇ ಕಲೆಕ್ಷನ್ ವಿಚಾರದಲ್ಲಿ ಬಾಕ್ಸಾಫೀಸ್ ಗಲ್ಲಾ ಪೆಟ್ಟಿಗೆಯನ್ನು ದೋಚಿಕೊಂಡಿತ್ತು. ಇದೇ ಸಿನಿಮಾವನ್ನು ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಸೆಟ್ಟೇರಿಸುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ. ಅಂದಹಾಗೆ ಕನ್ನಡದ ದೃಶ್ಯಂಗಾಗಿ ನವ್ಯಾ ನಾಯರ್ ಬುಕ್ ಆಗಿದ್ದಾರೆ ಎನೋದು ಗಾಂಧಿನಗರದಲ್ಲಿ ಹರಡಿಕೊಂಡಿರುವ ಮಾತು. ಮಲಯಾಳಂನ ದೃಶ್ಯಂನಲ್ಲಿ ನಟಿ ಮೀನಾ ಮಾಡಿದ ಪಾತ್ರವನ್ನು ಕನ್ನಡದಲ್ಲಿ ನವ್ಯಾ ಮಾಡುತ್ತಿದ್ದಾರೆ. ಈ ಕುರಿತು ನವ್ಯಾ ಹೇಳುವ ಮಾತು ಹೀಗಿದೆ: ಈ ಪಾತ್ರದ ಕುರಿತು ನನಗೆ ಅಪಾರ ನಿರೀಕ್ಷೆ ಇದೆ. ಆದರೆ ನನ್ನ ಪುತ್ರನಿಗೆ ಈಗ ಮೂರರ ಹರೆಯ. ಅವನ ಭವಿಷ್ಯದ ದೃಷ್ಟಿಯಿಂದ ಹತ್ತಿರ ಇರೋದು ನನ್ನ ಕರ್ತವ್ಯ. ಈ ಕಾರಣದಿಂದಲೇ ನಾನು ಎಲ್ಲ ಚಿತ್ರಗಳನ್ನು ಕೈ ಬಿಟಟೆ. ಆದರೆ ದೃಶ್ಯಂನ ಮೀನಾರ ಪಾತ್ರ ಮಾತ್ರ ನನಗೆ ಬಹಳ ಹಿಡಿಸಿತು. ಈ ಕಾರಣದಿಂದ ಚಿತ್ರ ಮಾಡುತ್ತಿದ್ದೇನೆ. ಮಲಯಾಳಂನಲ್ಲಿ ಬಂದಿರುವ ದೃಶ್ಯಂವನ್ನು ನಾನು ನೋಡಿದ್ದೇನೆ. ಚಿತ್ರ ತುಂಬಾನೇ ಅದ್ಬುತವಾಗಿದೆ. ಅದಕ್ಕೂ ಮಿಗಿಲಾಗಿ ಚಿತ್ರದಲ್ಲಿರುವ ಸಂದೇಶ ಎಲ್ಲವೂ ಬಹಳಷ್ಟು ಹಿಡಿಸಿಬಿಟ್ಟಿದೆ. ನಾನು ಖಂಡಿತವಾಗಿಯೂ ನನ್ನ ಪಾತ್ರಕ್ಕೆ ನ್ಯಾಯ ದೊರಕಿಸಿಕೊಡಬಲ್ಲೇ ಎನ್ನುವ ಧೈರ್ಯವಿದೆ ಎನ್ನುವುದು ನವ್ಯಾ ನಾಯರ್ ಮಾತು. ಖ್ಯಾತ ನಿರ್ದೇಶಕ ಪಿ. ವಾಸು ಈ ಚಿತ್ರವನ್ನು ಹೊರತರುತ್ತಿದ್ದಾರೆ. ನಟ ವಿ. ರವಿಚಂದ್ರನ್ ಮಲಯಾಳಂನ ಮೋಹನ್‌ಲಾಲ್ ಮಾಡಿದ ಪಾತ್ರವನ್ನು ಕನ್ನಡದಲ್ಲಿ ಮಾಡುತ್ತಿದ್ದಾರೆ. ಕನ್ನಡ ನನಗೇನು ಹೊಸದಾದ ಸಿನಿಮಾ ಇಂಡಸ್ಟ್ರಿ ಅಲ್ಲ. ಕನ್ನಡದ ಸಿನಿಮಾಗಳನ್ನು ನೋಡಿದ್ದೇನೆ ಹಾಗೂ ಸ್ಯಾಂಡಲ್‌ವುಡ್ ಸಿನಿಮಾ ನಟ, ನಟಿಯರ ಜತೆಗೂ ನನಗೆ ಸ್ನೇಹವಿದೆ.ಟೋಟಲಿ ಈ ಬಾರಿಯಂತೂ ದೊಡ್ಡ ತಂಡದ ಜತೆಗೆ ಮಾಡುತ್ತಿದ್ದೇನೆ ಎನ್ನೋದು ಮಾತ್ರ ಕೊಂಚ ಭಯ ಹುಟ್ಟಿಸುತ್ತಿದೆ ಎನ್ನುತ್ತಾರೆ ನವ್ಯಾ ನಾಯರ್. ಮದುವೆಯಾಗಿ ಮಗುವಾದ ನಂತರ ನವ್ಯಾ ಸಿನಿಮಾ ಇಂಡಸ್ಟ್ರಿಯಿಂದ ಕೊಂಚ ದೂರವೇ ಉಳಿದು ಬಿಟ್ಟಿದ್ದರು. ಮಲಯಾಳಂ ಚಿತ್ರ ‘ನಮ್ಮದು ವೀಡು’ ಬಳಿಕ ಕನ್ನಡದಲ್ಲಿ ನವ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ನವ್ಯಾ ಹೇಳುವಂತೆ ‘ ಈ ಹಿಂದೆ ಸಿನಿಮಾ ನನ್ನ ಬದುಕಿನ ಒಂದು ಭಾಗವಾಗಿತ್ತು. ಆದರೆ ಈಗ ಅದೊಂದು ಹವ್ಯಾಸವಾಗಿ ಹೋಗಿದೆ. ಅಂದಹಾಗೆ ನವ್ಯಾ ನಾಯರ್ ಮಗುವಾದ ನಂತರ ಮನೆಯಲ್ಲಿ ಕೂತು ಏನೂ ಮಾಡುತ್ತಿದ್ದರು ಎನ್ನುವ ಕುತೂಹಲ ಬಹಳಷ್ಟು ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ನಿಜಕ್ಕೂ ನವ್ಯಾ ತಮ್ಮ ಸಿನಿ ಬದುಕಿನ ಕುರಿತಾಗಿ ಒಂದು ಕೃತಿಯನ್ನು ಹೊರತರುವ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಅವರ ಆಪ್ತ ಮೂಲದ ಮಾತು. ಮಗುವಿನ ಹಾರೈಕೆಯಲ್ಲಿ ಮಗ್ನರಾಗಿರುವ ನವ್ಯಾ ತಮ್ಮದೇ ಬ್ಲಾಗ್ ಹಾಗೂ ಸೋಶಿಯಲ್ ನೆಟ್‌ವರ್ಕ್ ಸೈಟ್‌ಗಳ ಮೂಲಕ ಅಭಿಮಾನಿಗಳನ್ನು ಹಿಡಿದುಕೊಳ್ಳುವ ಕೆಲಸವನ್ನಂತೂ ಮಾಡುತ್ತಾ ಬರುತ್ತಿದ್ದಾರೆ. ಟೋಟಲಿ ನವ್ಯಾ ನಾಯರ್ ಇರುವ ದೃಶ್ಯಂ ಬಿಡುಗಡೆಯ ಮೊದಲೇ ನಿರೀಕ್ಷೆಯ ಪೊಟ್ಟಣವನ್ನು ಬಿಚ್ಚಿಕೊಟ್ಟಿದೆ.

No comments:

Post a Comment