Tuesday, March 11, 2014

ಕೊಂಕಣಿ ಚಿತ್ರದಲ್ಲಿ ಡಿಪ್ಸ್ !

* ಸ್ಟೀವನ್ ರೇಗೊ, ದಾರಂದಕುಕ್ಕು ಎಲ್ಲಿಯ ಕೊಂಕಣಿ ಎಲ್ಲಿಯ ಬಾಲಿವುಡ್ ಟೋಟಲಿ ಎರಡಕ್ಕೂ ಸಂಬಂಧ ಕಟ್ಟಿ ಹೇಳುವುದು ಸುಲಭದ ಮಾತಲ್ಲ. ದೈತ್ಯವಾಗಿ ಬೆಳೆದು ನಿಂತಿರುವ ಬಾಲಿವುಡ್ ಒಂದು ಕಡೆಯಲ್ಲಿ ನಿಂತು ಕೇಕೆ ಹಾಕುತ್ತಿದ್ದಾರೆ. ಮತ್ತೊಂದೆಡೆ ಯಾರಿಗೂ ಗೊತ್ತಿಲ್ಲದೇ ಸಿನಿಮಾಗಳನ್ನು ಮಾಡಿ ಸುಮ್ಮನೆ ಕೂತು ಬಿಡುವ ಕೊಂಕಣಿ ಸಿನಿಮಾ ಇಂಡಸ್ಟ್ರಿ. ಟೋಟಲಿ ಎರಡಕ್ಕೂ ಯಾವುದೇ ಲಿಂಕ್ ಇಲ್ಲವೇ ಇಲ್ಲ. ಆದರೆ ಕೊಂಕಣಿ ಸಿನಿಮಾದಲ್ಲಿ ಬಾಲಿವುಡ್ ಮಂದಿಯೇ ಟೆಂಟ್ ಹಾಕಿ ಕೂರಲು ಕಾರಣ ಏನೂ ಎನ್ನೋದು ಮಾತ್ರ ನಿಜಕ್ಕೂ ಅನ್ಸರ್ ಇಲ್ಲದೇ ಬಿದ್ದುಕೊಂಡಿರುವ ಪ್ರಶ್ನೆ.
ಬಾಲಿವುಡ್ ಪಡಸಾಲೆಯಲ್ಲಿ ಸಧ್ಯಕ್ಕಂತೂ ಭರ್ಜರಿಯಾಗಿ ಚಿತ್ರಗಳ ಮೂಲಕ ಓಡುತ್ತಿರುವ ದೀಪಿಕಾ ಪಡುಕೋಣೆ ಈಗ ಕೊಂಕಣಿ ಚಿತ್ರವೊಂದರಲ್ಲಿ ಲೀಡ್ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ದೀಪಿಕಾ ಪಡುಕೋಣೆಯ ಮಾತೃಭಾಷೆ ಕೂಡ ಕೊಂಕಣಿಯಾಗಿರೋದು ಕೂಡ ಈ ಚಿತ್ರಕ್ಕೆ ವರದಾನವಾಗಿದೆ. ಅದಕ್ಕೂ ಮುಖ್ಯವಾಗಿ ಬಾಲಿವುಡ್‌ನಲ್ಲಿ ಬ್ಯುಸಿ ನಟಿ ಡಿಪ್ಸ್ ಯಾಕೆ ಕೊಂಕಣಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಬಾಲಿವುಡ್ ನಟ ಸೈಫ್ ಆಲಿಖಾನ್ ಎನ್ನುವುದು ಡಿಪ್ಸ್ ಆಪ್ತರಿಂದ ಹೊರಬಂದ ಮಾತು. ಡಿಪ್ಸ್ ಹಾಗೂ ಸೈಫ್ ಜತೆಯಾಗಿ ಕಾಣಿಸಿಕೊಂಡ ಎಲ್ಲ ಚಿತ್ರದಲ್ಲೂ ಹೋಮಿ ಅದಾಜಾನಿಯಾ ಎನ್ನುವ ಸ್ಕೂಬಾ ಡೈವಿಂಗ್ ಇನ್‌ಸ್ಟ್ರಕ್ಟರ್ ಹೆಸರು ಕೇಳಿಸಿಕೊಳ್ಳುತ್ತದೆ. ಈ ಹಿಂದೆ ಇದೇ ಹೋಮಿಯ ಕಾಕ್‌ಟೇಲ್ ಚಿತ್ರದಲ್ಲಿ ಡಿಪ್ಸ್ ಹಾಗೂ ಸೈಫ್ ಜತೆಯಾಗಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುಖ್ಯವಾಗಿ ಸೈಫ್ ಆಲಿಖಾನ್ ಅವರ ಬಹುತೇಕ ಸಿನಿಮಾಗಳ ಹಿಂದೆ ದುಡಿಯುತ್ತಿರುವ ಹುಡುಗ ಕೂಡ ಇದೇ ಹೋಮಿ. ಈ ಕಾರಣದಿಂದ ಹೋಮಿ ಇಂಗ್ಲೀಷ್ ಹಾಗೂ ಕೊಂಕಣಿ ಎರಡು ಭಾಷೆಯಲ್ಲಿ ಮಾಡುತ್ತಿರುವ ಚಿತ್ರ ‘ಫೈಡಿಂಗ್ ಫನ್ನಿ ಫೆರ್ನಾಂಡೀಸ್’ನ ನಿರ್ಮಾಣ ಜವಾಬ್ದಾರಿಯನ್ನು ಬಾಲಿವುಡ್ ನಟ ಸೈಫ್ ವಹಿಸಿಕೊಂಡಿದ್ದಾರೆ. ಈಗಾಗಲೇ ಗೋವಾದಲ್ಲಿ ಚಿತ್ರೀಕರಣ ಆರಂಭವಾಗಿದೆ. ಗೋವಾದ ಕತೆಯನ್ನು ಇಟ್ಟುಕೊಂಡು ಹೋಮಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಮುಖ್ಯವಾಗಿ ಇದು ಗೋವಾ ಕೊಂಕಣಿಯ ಭಾಷೆಯಲ್ಲಿ ಇರಲಿದೆ ಎನ್ನುವುದು ಹೋಮಿ ಮಾತು. ಡಿಪ್ಸ್ ಜತೆಯಲ್ಲಿ ಅರ್ಜುನ್ ಕಪೂರ್, ನಾಸಿರುದ್ದೀನ್ ಶಾ, ಡಿಂಪಲ್ ಕಪಾಡಿಯಾ, ಪಂಕಜ್ ಕಪೂರ್ ಮೊದಲಾದ ಬಾಲಿವುಡ್ ದಿಗ್ಗಜರ ದಂಡೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಖ್ಯವಾಗಿ ಈ ವರ್ಷದ ಜುಲೈ ತಿಂಗಳ ಕೊನೆಯಲ್ಲಿ ಚಿತ್ರವನ್ನು ತೆರೆಗೆ ಬಿಡುವ ಕುರಿತು ಮಾತುಕತೆ ನಡೆಯುತ್ತಿದೆ. ಗೋವಾದ ಪ್ರಯಾಣದಲ್ಲಿ ಐದು ಪಾತ್ರಗಳ ಜತೆಗೆ ಈ ಚಿತ್ರ ಸಾಗುತ್ತದೆ ಎನ್ನುವ ಮಾಹಿತಿಯನ್ನು ಚಿತ್ರದ ನಿರ್ದೇಶಕ ಹೋಮಿ ಬಿಚ್ಚಿಟ್ಟಿದ್ದಾರೆ. ಗೋವಾದ ಖ್ಯಾತ ನಟ ಕೇವಿನ್ ಡಿಮೆಲ್ಲೋ ಕೂಡ ಚಿತ್ರಕ್ಕೆ ಸಾಥ್ ಕೊಡುತ್ತಿದ್ದಾರೆ. ಬಾಲಿವುಡ್ ನಟ ರಣವೀರ್ ಸಿಂಗ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾಹಿತಿಯನ್ನು ಚಿತ್ರ ತಂಡ ಹೇಳಿಕೊಂಡಿದೆ. ಟೋಟಲಿ ಇಂಗ್ಲೀಷ್ ಹಾಗೂ ಕೊಂಕಣಿ ಎರಡು ಭಾಷೆಯಲ್ಲೂ ಏಕಕಾಲದಲ್ಲಿ ಬಿಡುಗಡೆ ಕಾಣುತ್ತಿರುವ ಚಿತ್ರ ನಿರೀಕ್ಷೆಯ ಪೊಟ್ಟಣವನ್ನು ಪ್ರೇಕ್ಷಕರ ಮುಂದೆ ಇಟ್ಟಿದೆ ಎನ್ನುವ ಮಾತು ಮಾತ್ರ ದಿಟವಾಗುತ್ತಿದೆ.

No comments:

Post a Comment