

ಅದೊಂದು ಕರಾಳ ರಾತ್ರಿ... ಹೊರಗೆ ಭಯಂಕರವಾದ ಸುಂಟರ ಗಾಳಿ... ರಭಸವಾಗಿ ಸುರಿಯುವ ಮಳೆ... ಪುಟ್ಟ ಹೆಂಚಿನ ಮನೆಯೊಳಗಿಂದ ಕೇಳುತ್ತಿದೆ ನರಳಾಟದ ದನಿ. ಕುದಿಯುವ ಜ್ವರದಲ್ಲಿ ಮಲಗಿದ್ದಾಳೆ ದುರ್ಗಾ. ತಾಯಿ ಸರ್ಬಜಯಾ ಮುಖದಲ್ಲಿ ಆತಂಕ. ಮನೆಯೊಳಗೆ ಬೇರಾರು ಇಲ್ಲ. ಉರಿಯುತ್ತಿರುವ ಪುಟ್ಟ ದೀಪ ಬೀಸುವ ಗಾಳಿಯೊಡನೆ ಹೋರಾಡುತ್ತಿದೆ. ಮನೆಯೊಳಗೆ ನುಗ್ಗುತ್ತಿರುವ ಮಳೆ ನೀರನ್ನು ತಡೆಯಲು ತಾಯಿ ಶತಪ್ರಯತ್ನ ನಡೆಸುತ್ತಿದ್ದಾಳೆ. ಸುರಿಯುವ ಮಳೆಯ ವೇಗದೊಡನೆ ಹೆಚ್ಚುತ್ತಿರುವ ಮಗಳ ನರಳಾಟಕ್ಕೆ ಆಕೆ ಅಸಹಾಯಕಳಾಗಿದ್ದಾಳೆ. ಒಂದೇ ಕ್ಷಣ ಮಳೆಯ ಆರ್ಭಟ ತಾರಕಕ್ಕೇರುತ್ತದೆ. ಉರಿಯುತ್ತಿದ್ದ ದೀಪ ಗಾಳಿಯ ಹೊಡೆತಕ್ಕೆ ನಂದಿ ಹೋಗುತ್ತದೆ. ದುರ್ಗಾ ತಾಯಿಯನ್ನು ಬಲವಾಗಿ ಅಪ್ಪಿ ಹಿಡಿಯುತ್ತಾಳೆ ..ಆಕೆಯ ನರಳಾಟ ನಿಂತು ಹೋಗುತ್ತದೆ. ಸರ್ಬಜಯಾ ದುರ್ಗಾಳ ಹಣೆಯ ಮೇಳೆ ಕೈಯ್ಯನ್ನಿಡುತ್ತಾಳೆ... ದುರ್ಗಾ ತಣ್ಣಗಾಗಿರುತ್ತಾಳೆ. ವೀಕ್ಷಕ ನಿಟ್ಟುಸಿರೊಂದನ್ನು ಬಿಡುತ್ತಾನೆ.
ಇಪ್ಪತ್ತೊಂದನೇ ಶತಮಾನದಲ್ಲಿ ಭಾರತೀಯ ಚಿತ್ರರಂಗಕ್ಕೆ ಅಂತರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟ ಏಕೈಕ ಸಿನಿಮಾ ನಿರ್ದೇಶಕ ಸತ್ಯಜಿತ್ ರೇ . ಇವರ ನಿರ್ದೇಶನದ ಮೊದಲ ಬಂಗಾಲಿ ಚಿತ್ರ ಪಥೇರ್ ಪಾಂಚಾಲಿ ಭಾರತೀಯ ಚಿತ್ರರಂಗವನ್ನು ಜಗತ್ತಿಗೇ ಪರಿಚಯಿಸಿತು. ರೇ ನಿರ್ದೇಶನದ ಪಥೇರ್ ಪಂಚಾಲಿ, ಅಪರಾಜಿತೋ ಮತ್ತು ಅಪುರ್ ಸಂಸಾರ್ ಈ ಮೂರೂ ಚಿತ್ರಗಳು ’ಅಪ್ಪು ಟ್ರಿಲಾಜಿ’ ಎಂಬ ಹೆಸರಿನಡಿಯಲ್ಲಿ ಇಂದು ಜಾಗತಿಕ ಚಿತ್ರರಂಗದಲ್ಲಿ ಗುರುತಿಸಲ್ಪಡುತ್ತವೆ.
ಅಪ್ಪು ಟ್ರಿಲಾಜಿಯಲ್ಲಿರುವ ಎಲ್ಲಾ ಚಿತ್ರಗಳ ನಾಯಕ ಕೇವಲ ಒಬ್ಬ ವ್ಯಕ್ತಿ...ಆತನೇ ಅಪ್ಪು. ಅಪ್ಪು ಟ್ರಿಲಾಜಿ ಸಾಮಾನ್ಯ ವ್ಯಕ್ತಿಯ ಸಾಮಾನ್ಯ ಕಥೆ. ಅಪ್ಪುವಿನ ಜನನಕ್ಕೂ ಮುಂಚಿನಿಂದ ಪ್ರಾರಂಭವಾಗುವ ಚಿತ್ರ ಕೊನೆಗೊಳ್ಳುವುದು ಆತನ ಮತ್ತು ಆತನ ಮಗನ ಒಂದಾಗುವಿಕೆಯಿಂದ. ಈ ಎರಡು ಘಟನೆಗಳ ನಡುವೆ ಅಪ್ಪುವಿನ ಜೀವನವೇ ಅಡಗಿದೆ. ನೋವು, ನಲಿವು, ಅಸಹಾಯಕತೆ, ಅನಿರೀಕ್ಷಿತತೆ...ಹೀಗೆ ನೂರಾರು ಭಾವಗಳ ಮೇಳೈಸುವಿಕೆಯಿಂದಾಗಿ ಅಪ್ಪು ಟ್ರಿಲಾಜಿ ಇಂದಿಗೂ ಜೀವಂತವಾಗಿದೆ.
ಪಥೇರ್ ಪಾಂಚಾಲಿ ಅಪ್ಪು ಟ್ರಿಲಾಜಿ ಸರಣಿಯ ಮೊದಲ ಚಿತ್ರ. ಬಂಗಾಲೀ ಬ್ರಾಹ್ಮಣ ಕುಟುಂಬವೊಂದರ ಕಥಾಧಾರಿತ ಚಿತ್ರ ಇದು. ಈ ಚಿತ್ರದ ತಂದೆಯ ಪಾತ್ರಕ್ಕೆ ( ಹರಿಲಾಲ್) ಸಾಹಿತ್ಯದ ಗೀಳು. ಹೆಸರು ಗಳಿಸುವ ಆಸೆಯಲ್ಲಿ ಮನೆಯನ್ನೇ ಮರೆತವನಾತ. ಕಡುಬಡತನದಲ್ಲಿ ಸಂಸಾರ ನೌಕೆಯನ್ನು ಸಾಗಿಸಲು ಹರಸಾಹಸ ಪಡುವವಳು ತಾಯಿ ಸರ್ಬಜಯಾ. ವೃದ್ಧಾಪ್ಯದಲ್ಲೂ ಜೀವನೋತ್ಸಾಹವನ್ನು ಕಳೆದುಕೊಳ್ಳದೇ ಕುಟುಂಬದ ಎಲ್ಲಾ ವಿಚಾರಗಳಲ್ಲಿ ಮೂಗು ತುರಿಸಿ ಆಗಾಗ್ಗೆ ಸೊಸೆಯ ಕೋಪಕ್ಕೆ ತುತ್ತಾಗುವ ಅಜ್ಜಿ ಇಂದಿರ್. ಪ್ರಪಂಚದ ಗೊಡವೆ ಇಲ್ಲದೇ ಪ್ರತಿನಿತ್ಯವೂ ಬಾಲ್ಯದ ಸವಿಯನ್ನುಣ್ಣುವ ಮಗಳು ದುರ್ಗಾ...ಹೀಗೆ ಪಥೇರ್ ಪಾಂಚಾಲಿಯ ಕಥೆ ಸಾಗುತ್ತಿರುತ್ತದೆ...ಅಷ್ಟರಲ್ಲೇ ಚಿತ್ರಕ್ಕೆ ಹೊಸ ಪಾತ್ರವೊಂದರ ಪ್ರವೇಶವಾಗುತ್ತದೆ.
ಅದೇ ಅಪ್ಪುವಿನ ಜನನ.
ಮಗನ ಜನನದಿಂದ ಹರಿಲಾಲ್ ಬದಲಾಗುವುದಿಲ್ಲ. ಆತನ ಬೇಜವಾಬ್ಧಾರೀತನ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ಅದೊಂದು ದಿನ ಏನನ್ನೋ ಅರಸುತ್ತಾ ಮನೆಯಿಂದ ಹೊರಟ ಆತ ಅದೆಷ್ಟೋ ತಿಂಗಳುಗಳು ಬಿಟ್ಟು ಮನೆಗೆ ಬಂದಾಗ ಮನೆ ತುಂಬಾ ಮೌನ. ಮಡದಿಯ ಕಣ್ಣುಗಳಲ್ಲಿ ಕಂಬನಿ...ಕಣ್ಣ ಮುಂದೆ ಓಡಾಡುತ್ತಿದ್ದ ದುರ್ಗಾ ಅಂದೇಕೋ ಆತನಿಗೆ ಕಾಣಿಸುವುದಿಲ್ಲ. ದುರ್ಗಾಳ ಸಾವು ಅಪ್ಪುವಿನ ಜೀವನದ ಮೊದಲ ಆಘಾತ. ಆಕೆ ಆತನ ಅಕ್ಕನಲ್ಲ ತಾಯಿಯಂತಿದ್ದವಳು. ಪ್ರತಿನಿತ್ಯ ಚಲಿಸುವ ರೈಲನ್ನು ಹಿಂಬಾಲಿಸುತ್ತಾ ಗದ್ದೆಗಳ ನಡುವೆ ತಾನು ದುರ್ಗಾ ಕೈ ಹಿಡಿದು ಓಡಿದ್ದು... ಕ್ಯಾಂಡೀ ಮಾಮನನ್ನು ಪೀಡಿಸಿ ಐಸ್ ಕ್ಯಾಂಡಿ ತಿಂದದ್ದು...ಹೊಲಗಳಲ್ಲಿ ಕಬ್ಬಿನ ಜಲ್ಲೆಯನ್ನು ಮೆದ್ದದ್ದು ಇವೆಲ್ಲವೂ ಅಪ್ಪುವಿನ ಜೀವನದಲ್ಲಿ ಎಂದೂ ಮಾಸದ ಸವಿ ನೆನಪುಗಳು...ನೆನಪಾದಾಗಲೆಲ್ಲಾ ಆತನ ಕಣ್ಣುಗಳು ಹನಿಗೂಡುತ್ತವೆ...ಏಕಾಂತ ಕಾಡುತ್ತದೆ.
ದುರ್ಗಾಳ ಸಾವು ಕಥೆಗೆ ಹೊಸ ತಿರುವೊಂದನ್ನು ನೀಡುತ್ತದೆ. ಹರಿಲಾಲ್ ಕುಡುಂಬ ಹಳ್ಳಿ ಬಿಟ್ಟು ಬನಾರಸಿಗೆ ತೆರಳುತ್ತದೆ. ಪಟ್ಟಣದ ಜೀವನ ಪ್ರಾರಂಭವಾಗುತ್ತದೆ. ಪಥೇರ್ ಪಾಂಚಾಲಿ ಕೊನೆಗೊಂಡರೂ ಅಪ್ಪುವಿನ ಕತೆ ಮುಂದುವರಿಯುತ್ತದೆ. ಅಪರಾಜಿತೋ ಅಪ್ಪುವಿನ ಕಿಶೋರ ಜೀವನವನ್ನು ಚಿತ್ರಿಸುತ್ತದೆ. ಪಟ್ಟಣಕ್ಕೆ ಬಂದ ಕೆಲವೇ ದಿನಗಳಲ್ಲಿ ಹರಿಲಾಲ್ ಅನಾರೋಗ್ಯದಿಂದ ಸಾವನ್ನಪ್ಪುತ್ತಾನೆ. ತಾಯಿ-ಮಗ ಭವಿಷ್ಯದ ಕುರಿತು ಚಿಂತಿತರಾಗುತ್ತಾರೆ. ಸರ್ಬಜಯಾ ಮಗನ ಶಿಕ್ಷಣಕ್ಕಾಗಿ ಕೂಲಿಯವಳಾಗಿ ಬಿಡುತ್ತಾಳೆ. ಅಪ್ಪು ಹೆಚ್ಚಿನ ಓದಿಗಾಗಿ ಕಲ್ಕತ್ತಾ ಸೇರುತ್ತಾನೆ. ತಾಯಿ ಒಂಟಿಯಾಗುತ್ತಾಲೆ. ಅನಾರೋಗ್ಯ ಆಕೆಯನ್ನು ಕಾಡುತ್ತಿರುತ್ತದೆ. ಅದೊಂದು ದಿನ ಮಗನ ಬರುವಿಕೆಯನ್ನು ನಿರೀಕ್ಷಿಸುತ್ತಾ ಸರ್ಬಜಯಾ ತಾನು ಕುಳಿತ ಮರದಡಿಯೇ ಪ್ರಾಣ ಬಿಡುತ್ತಾಳೆ. ಅಪ್ಪು ವಿರಾಗಿಯಾಗುತ್ತಾನೆ. ತಾಯಿಯ ಸಾವು ಆತನಿಗೆ ಪ್ರಪಂಚವನ್ನೇ ಮರೆಸುತ್ತದೆ.
ಅಪುರ್ ಸಂಸಾರ ಅಪ್ಪು ಟ್ರಿಲಾಜಿಯ ಕೊನೆಯ ಚಿತ್ರ. ಗೆಳೆಯನೊಬ್ಬನೇ ಈಗ ಅಪ್ಪುವಿನ ಪ್ರಪಂಚ. ಜೀವನದುದ್ದಕ್ಕೂ ತಾನು ಅನಾಥ ಎಂಬ ಭಾವನೆ ಅಪ್ಪುವಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ಅದೊಂದು ದಿನ ಗೆಳೆಯನ ತಂಗಿಯ ಮದುವೆಗೆಂದು ಹೋದ ಅಪ್ಪು ವಿಯಾಟದಿಂದ ತಾನೇ ಮದುಮಗನಾಗುತ್ತಾನೆ. ವಿವಾಹವಾಗಿ ಸಂಸಾರಸ್ಥನಾಗುತ್ತಾನೆ. ಸಂಸಾರ ಸುಖದಲ್ಲಿ ತೇಲಾಡುತ್ತಾನೆ. ಅಷ್ಟರಲ್ಲೇ ಇನ್ನೊಂದು ಸಾವು...ಗರ್ಬಿಣಿಯಾಗಿದ್ದ ಮಡದಿ ಗಂಡು ಮಗುವಿಗೆ ಜನ್ಮವಿತ್ತು ಕಣಚ್ಚುತ್ತಾಳೆ.
ಅಪ್ಪು ಸೋತು ಹೋಗುತ್ತಾನೆ. ಸಾವುಗಳ ನೋವಿನಿಂದ ತಲ್ಲಣಿಸುತ್ತಾನೆ. ಸಂಬಂಧಗಳೇ ದುಖಃಕ್ಕೆ ಕಾರಣವೆಂದು ಎಲ್ಲಾ ಸಂಬಂಧಗಳನ್ನು ಕಳಚಿಕೊಳ್ಳಲು ಯತ್ನಿಸುತ್ತಾನೆ. ತನ್ನ ನವಜಾತ ಶಿಶುವಿನ ಮುಖವನ್ನೂ ನೋಡದೇ ಲೋಕ ಪರ್ಯಟನೆಗೆ ಹೊರಡುತ್ತಾನೆ. ಚಿತ್ರ ಕೊನೆ ತಲುಪುತ್ತಿದ್ದಂತೇ ಒಂಟಿತನ ಆತನನ್ನು ಕಾಡುತ್ತದೆ. ರಕ್ತ ಸಂಬಂಧದ ಸೆಳೆತ ಹೆಚ್ಚಾಗುತ್ತದೆ. ಅಪ್ಪು ಹಾಗೂ ಆತನ ಮಗ ಒಂದಾಗುತ್ತಾರೆ. ಅಪ್ಪುವಿನ ನವಜೀವನಕ್ಕೆ ನಾಂದಿ ಹಾಡುತ್ತಾ ಅಪ್ಪು ಟ್ರಿಲಾಜಿ ಮುಕ್ತಾಯಗೊಳ್ಳುತ್ತದೆ.
ಅಪ್ಪು ಟ್ರಿಲಾಜಿಯ ಮೂರು ಚಿತ್ರಗಳಲ್ಲಿ ಪಥೇರ್ ಪಾಂಚಾಲಿಯನ್ನು ಅತ್ಯತ್ತಮ ಚಿತ್ರವೆಂದು ಪರಿಗಣಿಸಲಾಗುತ್ತದೆ. ಇಪ್ಪತ್ತರ ದಶಕದಲ್ಲಿದ್ದ ಬಂಗಾಲದ ಗ್ರಾಮೀಣ ಜೀವನವನ್ನು ಚಿತ್ರಿಸುವ ಈ ಚಿತ್ರ ಭಾವನಾತ್ಮಕವಾಗಿ ವೀಕ್ಷಕರನ್ನು ಸೆರೆ ಹಿಡಿಯುತ್ತದೆ. ಮಾನವ ಸಂಬಂಧಗಳ ವಿಭಿನ್ನ ತಿರುವುಗಳನ್ನು ಅವರ ಮುಂದಿಡುವ ಮೂಲಕ ಚಿಂತನೆಗೆ ಎಡೆಮಾಡಿ ಕೊಡುತ್ತದೆ. ಚಿತ್ರದುದ್ದಕ್ಕೂ ರವಿಶಂಕರ್ ಅವರು ನೀಡಿದ ಅದ್ಭತ ಹಿನ್ನೆಲೆ ಸಂಗೀತ ಚಿತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿದೆ. ಸುಬ್ರಾತ ಮಿತ್ರಾ ಅವರ ಕ್ಯಾಮರಾವರ್ಕ್ನಲ್ಲಿ ಮೂಡಿಬಂದ ಚಿತ್ರದ ಎಲ್ಲಾ ಶಾಟ್ಗಳು ಕಲಾತ್ಮಕವಾಗಿದ್ದು ನೋಡುಗರ ಮೆಚ್ಚುಗೆಗೆ ಪಾತ್ರವಾಗಿವೆ.
ಸತ್ಯಜಿತ್ ರೇ...
ಸಾಹಿತ್ಯ ಪ್ರಿಯರಾದ ಸತ್ಯಜಿತ್ ರೇ ಭಿಭೂತೀ ಭೂಷಣ ಬಂಧೋಪಾಧ್ಯಾಯರ ಕಾದಂಬರಿಯೊಂದರಿಂದ ಪ್ರಭಾವಿತರಾಗಿ ತಮ್ಮ ಮೊದಲ ಚಿತ್ರ ಪಥೇರ್ ಪಾಂಚಾಲಿಯನ್ನು ನಿರ್ದೇಶಿಸಿದ್ದರು. ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಯಿತು. ರೇ ತಮ್ಮ ನಿರ್ದೇಶನವನ್ನು ಮುಂದುವರಿಸಿದರು. ಅಪ್ಪು ಟ್ರಿಲಾಜಿಯ ಬಳಿಕ ಚಾರುಲತಾ, ಜಲ್ಸಾಘರ್, ದೇವಿ ..ಹೀಗೆ ಒಂದರ ಮೇಲೊಂದು ಯಶಸ್ವೀ ಚಿತ್ರಗಳನ್ನು ನೀರುತ್ತಾ ಬಂದರು. ಚಿತ್ರಗಳ ಜತೆಗೆ ಡಾಕ್ಯೂಮೆಂಟರಿಗಳನ್ನು ನಿರ್ದೇಶಿಸಿದರು. ಪ್ರತಿಯೊಂದರಲ್ಲೂ ತಮ್ಮದೇ ಆದ ಭಿನ್ನತೆಯನ್ನು ಕಾಯ್ದುಕೊಂಡರು. ಪಾಶ್ಚಾತ್ಯ ನಿಯೋರಿಯಲಿಸ್ಟಿಕ್ ಚಿತ್ರಗಳಿಂದ ಅತಿಯಾಗಿ ಪ್ರಭಾವಿತರಾದ ರೇ ತಮ್ಮ ಚಿತ್ರಗಳಲ್ಲೂ ಮಧ್ಯಮ ವರ್ಗದ ಜೀವನವನ್ನು ಬಿಂಬಿಸತೊಡಗಿದರು. ಆ ಮೂಲಕ ಭಾರತದಲ್ಲೂ ನಿಯೋ ರಿಯಲಿಸ್ಟಿಕ್ ಸಂಪ್ರದಾಯವನ್ನು ಹುಟ್ಟು ಹಾಕಿದರು.
ರೇ ನಿರ್ದೇಶನದ ಚಿತ್ರಗಳಲ್ಲಿ ಮಾನವೀಯ ಸಂಬಂಧಗಳಿಗೆ ಎಲ್ಲಿಲ್ಲದ ಪ್ರಾಶಸ್ತ್ಯ. ನೈಜ ಜೀವನವಷ್ಟೇ ಅವರ ಚಿತ್ರದ ಕಥಾವಸ್ತು. ಇವರ ಚಿತ್ರಗಳಲ್ಲಿ ಸಾವು ಪ್ರತಿಯೊಬ್ಬರಿಗೂ ಎದುರಾಗುವ ಸಹಜ ಕ್ರಿಯೆ. ಆಧುನಿಕ ಚಿತ್ರಗಳಲ್ಲಿ ಕಾಣಸಿಗುವ ಸಾವಿನ ಭೀಕರತೆ ಇವರ ಚಿತ್ರಗಳಲ್ಲಿ ಹುಡುಕಿದರೂ ಕಾಣಿಸುವುದಿಲ್ಲ. ಇವರ ಒಂದೊಂದು ಚಿತ್ರಗಳಲ್ಲೂ ಜೀವನದ ಒಂದೊಂದು ಮುಖದ ಪರಿಚಯ ವೀಕ್ಷಕನಿಗಾಗುತ್ತದೆ. ರೇ ಚಿತ್ರಗಳ ಕಥಾವಸ್ತು ಎಷ್ಟು ನೈಜವೋ ಅಷ್ಟೇ ನೈಜ ಇವರ ಸಿನಿಮ್ಯಾಟಿಕ ಟೆಕ್ನೀಕ್. ಇವರ ಚಿತ್ರಗಳಲ್ಲಿ ಕಾಣ ಸಿಗುವ ಚಲಿಸುವ ರೈಲು, ಓಡಾಡುವ ಮೋಡಗಳು, ಸುರಿಯುವ ಮಳೆ ಎಲ್ಲವೂ ನೈಜ. ಕೃತಕ ಶಾಟ್ಗಳಿಗೆ ರೇ ಚಿತ್ರಗಳಲ್ಲಿ ಕಡಿಮೆ ಪ್ರಾಧಾನ್ಯತೆ.
ಸಾಂಕೇತಿಕವಾಗಿ ವಿಷಯಗಳನ್ನು ಕಮ್ಯೂನಿಕೇಟ್ ಮಾಡುವ ಪಾಶ್ಚಾತ್ಯರ ನಿರ್ದೇಶನ ಶೈಲಿಯನ್ನು ರೇ ತಮ್ಮ ಚಿತ್ರಗಳಲ್ಲೂ ಅಳವಡಿಸಿಕೊಂಡಿದ್ದರು. ಇವರ ಚಿತ್ರಗಳಲ್ಲಿ ಮಳೆ ಸುರಿಯುತ್ತಿದೆ ಎಂದರೇ ಪ್ರೇಕ್ಷಕರಿಗೆ ಮುಂದೇನಾಗುತ್ತದೋ ಎಂಬ ಆತಂಕ. ರೇ ಚಿತ್ರಗಳಲ್ಲಿ ಮಳೆ ಟ್ರಾಜಿಡಿಯ ಸಂಕೇತ. ಪಥೇರ್ ಪಾಂಚಾಲಿಯಲ್ಲಿ ರೇ ಸಾವನ್ನು ಸೂಚಿಸುವ ಸಂಕೇತವಾಗಿ ಮಳೆಯನ್ನು ಬಳಸಿರುವ ಪರಿ ಅದ್ಭುತ. ಅನಿರೀಕ್ಷಿತ ಆಘಾತಗಳು ರೇ ಚಿತ್ರಗಳ ಸ್ಪೆಷಾಲಿಟಿ. ಎಷ್ಟೇ ಕಷ್ಟವಾದರೂ ಸರಿ ಪಾತ್ರಕ್ಕೆ ನ್ಯಾಯ ಕೊಡುವವರು ಸಿಕ್ಕುವವರೆಗೆ ಇವರು ತಮ್ಮ ಹುಡುಕಾಟವನ್ನು ನಿಲ್ಲಿಸುತ್ತಿರಲಿಲ್ಲ. ಪಥೇರ್ ಪಾಂಚಾಲಿ ಚಿತ್ರದಲ್ಲಿನ ಇಂದಿರ್ ಎಂಬ ಪಾತ್ರದ ನಿರ್ವಹಣೆಗಾಗಿ ನೂರರ ಸಮೀಪದ ಬಂಗಾಳಿ ನಾಟಕ ಕಲಾವಿದೆ ಚುನ್ನಿಬಾಲಾ ದೇವಿಗಾಗಿ ರೇ ಹಲವಾರು ತಿಂಗಳುಗಳ ಕಾಲ ಚಿತ್ರವನ್ನು ಸ್ಥಗಿತಗೊಳಿಸಿ ಹುಡುಕಾಟ ನಡೆಸಿದ್ದರು ಎಂದರೆ ಆಶ್ಚರ್ಯವೆನಿಸಬಹುದು.
ಸತ್ಯಜಿತ್ ರೇ ಚಿತ್ರಗಳಲ್ಲಿ ಬಳಸಲ್ಪಡುವ ಹಾಡುಗಳ ತುಂಬಾ ಕಥೆಯ ಭಾವಗಳೇ ವ್ಯಕ್ತವಾಗುತ್ತವೆ. ಕ್ಲಾಸಿಕಲ್ ಇನ್ಸ್ಟ್ರುಮೆಂಟಲ್ ಸಂಗೀತವನ್ನಷ್ಟೇ ತಮ್ಮ ಚಿತ್ರಗಳ ಹಿನ್ನೆಲೆಗೆ ಉಪಯೋಗಿಸುತ್ತಿದ್ದ ರೇ ಚಿತ್ರದ ಶೂಟಿಂಗ್ ಪ್ರಾರಂಭಿಸುವ ಬಹಳ ಮುಂಚಿತವಾಗಿ ಅದರ ಸಂಗೀತದ ಬಗ್ಗೆ ಯೋಚಿಸುತ್ತಿದ್ದರು. ಒಬ್ಬ ಉತ್ತಮ ಚಿತ್ರ ನಿರ್ದೇಶಕನ ಜತೆಜತೆಗೇ ರೇ ಒಬ್ಬ ಅತ್ಯತ್ತಮ ವಿಮರ್ಶಕ ಹಾಗೂ ಸಿನಿಮಾಟೊಗ್ರಾಫರ್ ಕೂಡಾ ಆಗಿದ್ದರು. ಪಾಶ್ಚಾತ್ಯ ಸಿನಿಮಾವನ್ನು ಭಾರತೀಯರಿಗೆ ಪರಿಚಯಿಸುವ ನಿಟ್ಟಿನಲ್ಲಿ ೧೯೪೭ರಲ್ಲಿ ಕಲ್ಕತ್ತಾ ಫಿಲ್ಮ್ ಸೊಸೈಟಿಯನ್ನು ಸ್ಥಾಪಿಸಿದರು. ಆ ಮೂಲಕ ಸಿನಿಮಾ ಅಧ್ಯಯನ ಯೋಗ್ಯ ವಿಚಾರವೆಂದು ಜನಸಾಮಾನ್ಯರಿಗೆ ಮನದಟ್ಟು ಮಾಡಿಸುವ ಪ್ರಯತ್ನ ಮಾಡಿದರು.
ಮೂವತ್ತೆರಡು ನಾಷನಲ್ ಫಿಲ್ಮ್ ಅವಾರ್ಡ್ಗಳು ಹಾಗೂ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಮೇಲು ರೇ ಅವರ ಸಿನಿಮಾ ನಿರ್ದೇಶನದ ತೆವಲು ಕಡಿಮೆಯಾಗಲಿಲ್ಲ. ಮನಸ್ಸು ಯೌವ್ವನದಲ್ಲಿದ್ದರೂ ದೇಹ ಮುಪ್ಪಾಗಿತ್ತು. ಅನಾರೋಗ್ಯದ ನಡುವೆಯೇ ’ಘರ್ ಬೈರೆ’ ಚಿತ್ರವನ್ನು ನಿರ್ದೇಶಿಸಿದರು. ಸಾವಿಗೆ ಕೆಲವೇ ವಾರಗಳ ಮುಂಚೆ ಶ್ರೇಷ್ಟ ಗೌರವ ಆಸ್ಕರ್ ಪ್ರಶಸ್ತಿಯನ್ನು ಪಡೆದ ರೇ ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಇದೇ ಆಗಸ್ಟ್ ೨೬ಕ್ಕೆ ಸತ್ಯಜಿತ್ ರೇ ನಿರ್ದೇಶನದ ಮೊದಲ ಚಿತ್ರ ಪಥೇರ್ ಪಾಂಚಾಲಿ ಬಿಡುಗಡೆಗೊಂಡು ಐವತ್ತಾರು ವರುಷಗಳು ತುಂಬುತ್ತವೆ. ಕಮರ್ಶಿಯಲ್ ಚಿತ್ರಗಳ ಅಬ್ಬರದ ನಡುವೆ ಇಂದು ಹಳೆಯ ಕಲಾತ್ಮಕ ಚಿತ್ರಗಳ ನೆನಪುಗಳು ಮಸುಕಾಗಿ ಬಿಟ್ಟಿವೆ. ಕಲಾತ್ಮಕ ಚಿತ್ರಗಳನ್ನು ಆಸ್ವಾದಿಸುವ ಮನಸ್ಸುಗಳು ಕಡಿಮೆಯಾಗುತ್ತಿವೆ ಎಂಬ ಕೂಗು ಇಂದು ಎಲ್ಲೆಲ್ಲೂ ಕೇಳಿ ಬರುತ್ತಿದೆ. ನಿರ್ದೇಶಕರೂ ಹೆಚ್ಚಿನ ಸಂಖ್ಯೆಯಲ್ಲಿ ಕಮರ್ಶಿಯಲ್ ಚಿತ್ರಗಳತ್ತ ಒಲವು ತೋರುತ್ತಿದ್ದಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಕಲಾತ್ಮಕ ಚಿತ್ರಗಳು ಚಿತ್ರರಂಗದಲ್ಲಿ ಮಿಂಚಿ ಮರೆಯಾಗುತ್ತಿವೆ. ಯುವನಜತೆಯಲ್ಲಿ ಕಲಾತ್ಮಕ ಚಿತ್ರಗಳ ಕುರಿತು ಅರಿವು ಮೂಡಬೇಕಾದಲ್ಲಿ ಇಂತಹ ಅರ್ಥಪೂರ್ಣ ಚಿತ್ರಗಳನ್ನೊಮ್ಮೆ ಮೆಲುಕು ಹಾಕುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ.
* ಅಕ್ಷತಾ ಭಟ್. ಸಿ.ಎಚ್.
( ನಗರದ ಖಾಸಗಿ ಕಾಲೇಜುವೊಂದರಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿಯಾಗಿ ಅಕ್ಷತಾ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಜತೆಯಲ್ಲಿ ಹಳೆಯ ಸಿನಿಮಾಗಳನ್ನು ನೋಡಿ ಬರೆಯವುದು ಅವರ ನೆಚ್ಚಿನ ಆಸಕ್ತಿ ಕ್ಷೇತ್ರವಾಗಿದೆ. ‘ಪಥೇರ್ ಪಾಂಚಾಲಿ’ ಸಿನಿಮಾ ಬಂದು ಆ.೨೬ರಂದು ಬರೋಬರಿ ೫೬ ವರ್ಷಗಳು ಸಲ್ಲುತ್ತಿದೆ. ಈ ನೆಪದಲ್ಲಿ ಚಿತ್ರ, ನಿರ್ದೇಶಕನ ಸುತ್ತ ಅಕ್ಷತಾ ಬರೆದುಕೊಂಡಿದ್ದಾರೆ)
No comments:
Post a Comment