
ತಮಿಳಿನ ಅಲ್ಟಿಮೇಟ್ ಸ್ಟಾರ್ ಅಜಿತ್ ಕುಮಾರ್ ಈ ಬಾರಿ ‘ಅಂದರ್ ಬಾಹರ್’ ಆಟ ಆಡುತ್ತಿದ್ದಾರೆ. ಅಂದಹಾಗೆ ಇದು ಅಜಿತ್ ಕುಮಾರ್ನ ೫೦ನೇ ಆಟ. ಕಾಲಿವುಡ್ನಲ್ಲಿ ಈ ಆಟ ಸಖತ್ ಆಗಿ ನಡೆಯುತ್ತಾ ಎನ್ನೋದು ಮಾತ್ರ ಪ್ರೇಕ್ಷಕ ಮಹಾಪ್ರಭು ಅನ್ಸರ್ ಕೊಡಬೇಕು.
ಗಣೇಶನ ಹಬ್ಬಕ್ಕೆ ಕಾಲಿವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ‘ಅಂದರ್ ಬಾಹರ್’ ಆಟ ಆರಂಭವಾಗಲಿದೆ ಎನ್ನೋದು ತಮಿಳಿನ ಚಿತ್ರ ನಿರ್ದೇಶಕ ವೆಂಕಟ್ ಪ್ರಭು ಅವರ ಮಾತು. ಅರೇ... ಇದೇನ್ ‘ಅಂದರ್ ಬಾಹರ್’ ಆಟ ಎನ್ನುವ ಮೊದಲು ಆ.೩೧ ರಂದು ಕ್ಲೌಡ್ ನೈನ್ ಮೂವೀಸ್ ಬ್ಯಾನರ್ನಡಿಯಲ್ಲಿ ‘ಮಂಗಾಥ’ ಸಿನಿಮಾ ಥಿಯೇಟರ್ಗಳಿಗೆ ಒಮ್ಮೆಲೆ ದಾಳಿ ಮಾಡಲಿದೆ. ಇದು ತಮಿಳಿನ ಅಲ್ಟಿಮೇಟ್ ಸ್ಟಾರ್ ನಟ ಅಜಿತ್ ಕುಮಾರ್ ನಟಿಸಿರುವ ೫೦ ನೇ ಚಿತ್ರ ಅನ್ನೋದು ಗೊತ್ತಿರಬೇಕು.
ಅಂದಹಾಗೆ ತಮಿಳಿನಲ್ಲಿ ಅಜಿತ್ ಸಿನಿಮಾ ಬಂದು ಬಹಳಷ್ಟು ದಿನಗಳೇ ಆದವು. ‘ಅಸಲ್’ ಈ ಹಿಂದಿನ ಚಿತ್ರ. ೨೦೧೦ ಪೆಬ್ರವರಿಯಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಒಂದರ್ಥದಲ್ಲಿ, ಅಲ್ಲಿಂದ ಇಲ್ಲಿವರೆಗೆ ಅಜಿತ್ ಕಾಣೆಯಾಗಿದ್ದರು! ಅದೇನೋ, ಪೆರಾರಿ ಕಾರ್ ರೇಸ್ ಮಾಡುತ್ತೇನೆ ಅಂತ ಹೇಳಿಕೊಂಡು ಹೋಗಿದ್ದ ಅಜಿತ್, ಈಗ ಮರಳಿ ಬಂದಿದ್ದಾರೆ. ಹಾಗೆ ಸುಮ್ಮನೇ ಬರುತ್ತಿಲ್ಲ ಅವರು. ಈ ಬಾರಿ ತಮ್ಮ ಅಭಿಮಾನಿಗಳಿಗೆ ಭೂರಿ ಭೋಜನ ಹೊತ್ತೇ ಬರುತ್ತಿದ್ದಾರೆ.
‘ಅಸಲ್’, ಅಜಿತ್ ಅವರ ೪೯ನೇ ಸಿನಿಮಾ. ಇದೀಗ ಅವರ ಅಭಿನಯದ ೫೦ನೇ ಸಿನಿಮಾ ಬಿಡುಗಡೆಗೆ
ಸಿದ್ಧವಾಗಿದೆ. ಅದರ ಹೆಸರು ಮಂಗಾಥ. ಹೀಗೆಂದರೆ, ತಮಿಳಿನಲ್ಲಿ ‘ಅಂದರ್ ಬಾಹರ್’ ಎಂದರ್ಥ. ಇನ್ನು
ಸಿಂಪಲ್ ಆಗಿ ಹೇಳಬೇಕೆಂದರೆ, ಜೂಜಾಟ ! ಶೀರ್ಷಿಕೆಯಲ್ಲೇ, ‘ಗೇಮ್’ ಇರುವುದರಿಂದ ಇಡೀ
ಸಿನಿಮಾ ಸಖತ್ ‘ಗೇಮ್ ಪ್ಲ್ಯಾನ್’ನಲ್ಲೇ ನಡೆದಿದ್ದು, ಸಿನಿಮಾ ಗೇಮ್ ಕೂಡ ಸೂಪರ್ ಆಗಿಯೇ ಇರಲಿದೆ
ಎಂದುಕೊಂಡರೆ ಅದು ಪ್ರೇಕ್ಷಕನ ತಪ್ಪಲ್ಲ ಬಿಡಿ.
‘ಮಂಗಾಥ’ ಬಹು ತಾರಾಗಣ ಹೊಂದಿರುವ ಚಿತ್ರ. ಅಲ್ಟಿಮೇಟ್ ಸ್ಟಾರ್ ಅಜಿತ್ ಕುಮಾರ್ ಅಲ್ಲದೇ , ಅರ್ಜುನ್ ಸರ್ಜಾ ಹಾಗೂ ತೆಲುಗಿನ ವೈಭವ್ ರೆಡ್ಡಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ತ್ರಿಷಾ ಕೃಷ್ಣನ್ ನಾಯಕಿ. ಕನ್ನಡದ ಲಕ್ಷ್ಮೀ ರೇ ಕೂಡ ಚಿತ್ರದಲ್ಲಿದ್ದಾರೆ. ಇತ್ತೀಚೆಗೆ ತಮಿಳಿನ ಕಮರ್ಷಿಯಲ್ ಚಿತ್ರಗಳ ತಯಾರಿಕೆಯಲ್ಲಿ ಬಹಳ ಮುಂದಿರುವ ದಯಾನಿದಿ ಅಳಗಿರಿಯ ಕ್ಲೌಡ್ ನೈನ್ ಮೂವೀಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದರಿಂದ ಪ್ರಚಾರದ ವಿಚಾರದಲ್ಲಿ ಚಿತ್ರ ಈಗಾಗಲೇ ದೊಡ್ಡ ಮಾರ್ಕೆಟ್ನ್ನು ಕಟ್ಟಿ ಕೊಡುವಲ್ಲಿ ಸಕ್ಸಸ್ ಕಂಡಿದೆ.
ಪವಿತ್ರ ರಂಜಾನ್ ಮತ್ತು ಗೌರಿ-ಗಣೇಶ ಹಬ್ಬವನ್ನು ಟಾರ್ಗೆಟ್ ಮಾಡಿಕೊಂಡು ಸಿನಿಮಾ ಬರುವುದರಿಂದ ಚಿತ್ರದ ಕುರಿತು ನಿರೀಕ್ಷೆಗಳು ಹೆಚ್ಚಾಗುತ್ತಿದೆ. ಯುವನ್ ಶಂಕರ್ ರಾಜಾ ಅವರಿಗೆ ಮತ್ತೆ ಮೂವರು ಸಂಗೀತ ನಿರ್ದೇಶಕರು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವಲ್ಲಿ ಸಹಾಯ ಮಾಡುತ್ತಿದ್ದಾರಂತೆ. ಕಾರ್ತಿಕ್ ರಾಜಾ, ಭಾವತರಣಿ ಮತ್ತು ಪ್ರೇಮ್ಜಿ ಅವರೇನ್ ಆ ಮೂವರು.
ಟೋಟಲಿ ‘ಅಂದರ್ ಬಾಹರ್’ ಆಟ ಕಾಲಿವುಡ್ನಲ್ಲಿ ಭರ್ಜರಿಯಾಗಿ ನಡೆಯುತ್ತಾ ಎನ್ನೋದು ಮಾತ್ರ ಪ್ರೇಕ್ಷಕ ಪ್ರಭುವೇ ಅನ್ಸರ್ ಕೊಡಬೇಕು. ಅದರಲ್ಲೂ ತಮಿಳಿನ ಮತ್ತೊಬ್ಬ ಸ್ಟಾರ್ ನಟ ವಿಜಯ್ ಅವರ ೫೦ ನೇ ಚಿತ್ರ ‘ಸುರ’ ದೊಡ್ಡ ಮಟ್ಟದ ಯಶಸ್ಸು ಸಿಗದೇ ಕಾಲಿವುಡ್ನಲ್ಲಿ ಹೆಸರು ಉಳಿಸಿಕೊಂಡ ರೀತಿ ನೋಡುತ್ತಿದ್ದಾರೆ ‘ಮಂಗಾಥ’ ಚಿತ್ರದ ಗತಿಯೇನು ಎನ್ನೋದು ಪ್ರೇಕ್ಷಕನ ಮನದಲ್ಲಿ ಕಾಡದೇ ಇರಲಾರದು. ಏನೇ ಆದರೂ ಅಜಿತ್ ಕುಮಾರ್ ೫೦ನೇ ಚಿತ್ರ ಹಿಟ್ ಆದರೆ ಮುಂದಿನ ‘ಬಿಲ್ಲಾ-೨’ ಚಿತ್ರದ ಕುರಿತು ನಿರೀಕ್ಷೆಗಳು ಗರಿಕೆದರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಾಗಿಲ್ಲ ಎನ್ನಬಹುದು.
No comments:
Post a Comment