
ಶಾರೂಕ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲಿಂಗ್ ಕೋಚ್ ಆಗಿ ವಾಸಿಂ ಅಕ್ರಂ ಭಾರತಕ್ಕೆ ಬಂದಿದ್ದಾಗ, ಪಾಕಿಸ್ತಾನದ ಸೂಪರ್ ಮೊಡೆಲ್ ಹಮೈಮಾ ಮಲ್ಲಿಕ್ ಕೂಡ ಜತೆಯಲ್ಲಿದ್ದರಂತೆ ! ಅಂದಹಾಗೆ ವಾಸಿಂ ಆಂಡ್ ಮಲ್ಲಿಕಾ ಕತೆ ಏನ್ ಗೊತ್ತಾ ..?
ವಾಸಿಂ ಅಕ್ರಂ. ಈ ಹೆಸರು ಕ್ರಿಕೆಟ್ ನೋಡುವ ಬಹಳಷ್ಟು ಮಂದಿಗೆ ಬಹಳ ಹತ್ತಿರದಿಂದ ಗೊತ್ತಿರಬಹುದು. ವಾಸಿಂ ಅಕ್ರಂ ಬೌಲಿಂಗ್ ಮಾಡ್ತಾರೆ ಎಂದಾದರೆ ಬ್ಯಾಟ್ಸ್ಮನ್ಗಳ ಮನದ ಮೂಲೆಯಲ್ಲಿ ಭಯದ ನೆರಳು ಭೂತದಂತೆ ಕಾಡುತ್ತದೆ. ಒಂದ್ ಸಾರಿ ವಾಸಿಂ ಓವರ್ ಮುಗಿದರೆ ಸಾಕು ಅನ್ನಿಸಿಬಿಡುತ್ತದೆ ಎಂದು ವಿಶ್ವದ ಶ್ರೇಷ್ಟ ಬ್ಯಾಟ್ಸ್ಮನ್ ಅನ್ನಿಸಿಕೊಂಡ ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ರಿಕೆಟ್ ಆಟಗಾರ ಬ್ರಯಾನ್ ಲಾರಾ ವಾಸಿಂ ಕುರಿತು ಮಾಧ್ಯಮವೊಂದರಲ್ಲಿ ಬಹಿರಂಗವಾಗಿ ಹೇಳಿಕೆಕೊಟ್ಟಿದ್ದರು.
ಅಂದಹಾಗೆ ಈಗ ಬ್ರಯಾನ್ ಲಾರಾ ಕೂಡ ಕ್ರಿಕೆಟ್ ಬಗ್ಗೆ ಮಾತನಾಡುತ್ತಿಲ್ಲ. ವಾಸಿಂ ಕೂಡ ಕ್ರಿಕೆಟ್ ಜೀವನಕ್ಕೆ ವಿರಾಮ ಹಾಡಿದ್ದಾರೆ. ಇಬ್ಬರೂ ತಮಗೆ ಇಷ್ಟ ಬಂದಾಗ ಕ್ರಿಕೆಟ್ ಗ್ಯಾಲರಿಯಲ್ಲಿ ಕೂತು ಒಮ್ಮೊಮ್ಮೆ ಕ್ರಿಕೆಟ್ ನೋಡುವುದು, ಕ್ರಿಕೆಟ್ ಕುರಿತು ತಮಗೂ ಮಾತನಾಡಲು ಬರುತ್ತೆ ಅಂತಾ ಹೇಳಿಕೊಂಡು ಕಮೆಂಟರಿ ಹೊಡೆಯುವುದು, ಕ್ರಿಕೆಟ್ ಆಟಗಾರರಿಗೆ ತರಬೇತಿ ಕೊಡುವ ಕೋಚ್ ಆಗಿ ಫೀಲ್ಡ್ಗೆ ಬಂದರೆ ಬಿಟ್ಟರೆ ಬೇರೆ ಅವರೇನು ಮಾಡುತ್ತಾರೆ ಎನ್ನುವ ಕುತೂಹಲ ವಿಶ್ವದಲ್ಲಿ ಧರ್ಮದಂತೆ ಹರಡಿರುವ ಕ್ರಿಕೆಟ್ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ.
ಅದರಲ್ಲೂ ವಾಸಿಂ ಅಕ್ರಂ ಕುರಿತು ಕುತೂಹಲ ಇನ್ನೂ ಕೂಡ ಜಾಸ್ತಿ. ವಾಸಿಂ ಪಕ್ಕದ ದೇಶ ಪಾಕಿಸ್ತಾನದವರು, ಜತೆಯಲ್ಲಿ ಬೋರ್ ಅನ್ನಿಸಿದಾಗಲೆಲ್ಲಾ ಭಾರತಕ್ಕೆ ಬಂದು ಕುಟುಂಬ ಸಹಿತ ಠಿಕಾಣಿ ಹೂಡುತ್ತಾರೆ. ಕುಟುಂಬದವರಿಗೆ ಏನೇ ಬೇಕಾದರೂ ಭಾರತದಲ್ಲಿ ಅದಕ್ಕೆ ಮದ್ದು ಹುಡುಕುವ ವಾಸಿಂ ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಭಾರತವನ್ನು ಪ್ರೀತಿಸುತ್ತಾರೆ. ಅದಕ್ಕೊಂದು ಉದಾಹರಣೆ ಇಲ್ಲಿದೆ.
ಹ್ಯೂಮಾ ಮುಫ್ತಿ ಇವರು ವಾಸಿಂ ಅಕ್ರಂರ ಪ್ರೀತಿಯ ಮಡದಿ. ನಾನಾ ಅಂಗವೈಪಲ್ಯ ಕಾಯಿಲೆಯಿಂದ ಬಳಲುತ್ತಿದ್ದಾಗ ಅವರನ್ನು ಚೆನ್ನೈಯಲ್ಲಿರುವ ಅಪೋಲೋ ಹಾಸ್ಪಿಟಲ್ಗೆ ಸೇರಿಸಿದ್ದರು. ಆದರೆ ಯಾಕೋ ಏನೋ ೨೫ ಅಕ್ಟೋಬರ್ ೨೦೦೯ರಲ್ಲಿ ಹ್ಯೂಮಾ ಚಿಕಿತ್ಸೆ ಪಲಕಾರಿಯಾಗದೇ ವಾಸಿಂರ ಕೈ ಬಿಟ್ಟು ಹೋದರು. ಈ ನಂತರ ವಾಸಿಂ ಪದೇ ಪದೇ ಭಾರತದಲ್ಲಿಯೇ ನಿಲ್ಲುವ ಮನಸ್ಸು ಮಾಡಿದ್ದರು. ಹ್ಯೂಮಾ ಹೋದ ನಂತರ ಹೊಸ ಬಾಳಿನ ಗೆಳತಿ ಕಮ್ ಪಾಕಿಸ್ತಾನದ ಸೂಪರ್ ಮೊಡೆಲ್ ಹಮೈಮಾ ಮಲ್ಲಿಕ್ ಜತೆಯಲ್ಲಿ ಭಾರತದಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದರು ಎಂದು ಮಲ್ಲಿಕ್ ಈಗ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ.
ರೆಡ್ ಚಿಲ್ಲಿ ಹಾಗೂ ಶಾರೂಕ್ ಖಾನ್ ಮಾಲೀಕತ್ವದ ಐಪಿಎಲ್ ತಂಡ ಕೊಲ್ಕತ್ತಾ ನೈಟ್ರೈಡರ್ಸ್ (ಕೆಕೆಆರ್)ಪರವಾಗಿ ವಾಸಿಂ ಬೌಲಿಂಗ್ ಕೋಚ್ ಆಗಿ ಭಾರತಕ್ಕೆ ಬಂದಿದ್ದರು. ಆದರೆ ವಾಸಿಂ ಈ ಸಮಯದಲ್ಲಿ ಮಲ್ಲಿಕಾರನ್ನು ಜತೆಯಲ್ಲಿಯೇ ಕರೆದುಕೊಂಡು ಬಂದಿದ್ದರು ಎನ್ನುವ ಮಾಹಿತಿ ನಿಧಾನವಾಗಿ ಪಾಕ್ನ ಮಾಧ್ಯಮಗಳ ಮೂಲಕ ಹೊರಬಂದಿದೆ. ಆದರೆ ಮಲ್ಲಿಕಾ ವಾಸಿಂ ಕುರಿತು ಯಾವುದೇ ಹೇಳಿಕೆ ಕೊಟ್ಟಿಲ್ಲ ಎಂದು ಮಾಧ್ಯಮಗಳ ಮೇಲೆ ಕಿಡಿಕಾರಿದ್ದಾರೆ. ಎಲ್ಲರೂ ಸೇರಿ ವಾಸಿಂ ಹಾಗೂ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ವಾಸಿಂಗೆ ಎರಡು ಮಕ್ಕಳಿವೆ ಜತೆಯಲ್ಲಿ ನನಗೂ ಕೇರಿಯರ್,ಕುಟುಂಬವಿದೆ ಇದೆಲ್ಲವೂ ಸುಳ್ಳು ಎಂದು ಕಡ್ಡಿ ತುಂಡಾಗುವ ರೀತಿಯಲ್ಲಿ ಪಾಕಿಸ್ತಾನದ ಖಾಸಗಿ ಟಿವಿ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂರ ಗರ್ಲ್ಪ್ರೆಂಡ್ ಎಂದು ಹೇಳಿಕೊಂಡು ತಿರುಗಾಡುವ ಅವಶ್ಯಕತೆ ನನಗೇನೂ ಬಿದ್ದಿಲ್ಲ. ನನಗೆ ಈಗ ವೃತ್ತಿ ಬದುಕೇ ದೊಡ್ಡದು. ನಾನು ಭಾರತಕ್ಕೆ ಹೋಗಿದ್ದು ಬರೀ ಕೆಕೆ ಆರ್ ತಂಡವನ್ನು ಹುರಿದುಂಬಿಸಲು ಮಾತ್ರ ಹೋಗಿದ್ದೆ, ವಾಸಿಂ ತಂಡದಲ್ಲಿದ್ದಾರೆ ಎಂಬ ವಿಚಾರಕ್ಕೆ ನಾನು ಅಲ್ಲಿಗೆ ಹೋಗಿಲ್ಲ . ಪಾಕ್ ಮಾಧ್ಯಮಗಳು ಈ ವಿಚಾರವನ್ನೇ ದೊಡ್ಡದು ಮಾಡಿವೆ ಇದು ಸರಿಯಲ್ಲ ಎಂದು ಮಲ್ಲಿಕಾ ವಾಹಿನಿಯಲ್ಲಿ ತಿಳಿಸಿದ್ದಾರೆ.
ವಾಸಿಂ ಹಾಗೂ ನಾನು ಜಸ್ಟ್ ಒಳ್ಳೆಯ ಗೆಳೆಯರು. ನಮ್ಮ ಜತೆಯಲ್ಲಿ ಅಂತಹ ಯಾವುದೇ ಸಂಬಂಧಗಳಿಲ್ಲ. ವಾಸಿಂರ ಮಕ್ಕಳಿಬ್ಬರನ್ನು ಕಂಡರೆ ನನಗೆ ಬಹಳ ಪ್ರೀತಿ. ಅದಕ್ಕಾಗಿ ಅವರ ಮನೆಗೆ ಹೋದರೆ ಇಲ್ಲಸಲ್ಲದ ಆರೋಪಗಳನ್ನು ನನ್ನ ಮೇಲೆ ಹೊರಿಸಲಾಗುತ್ತಿದೆ. ಭಾರತದಲ್ಲಿರುವ ಮಾಧ್ಯಮಗಳಿಗಂತೂ ಹಳದಿ ರೋಗ ಅಂಟಿಬಿಟ್ಟಿದೆ. ಕ್ರಿಕೆಟರ್ ಜತೆಯಲ್ಲಿ ಸೆಲೆಬ್ರಿಟಿ ಕಾಣಿಸಿಕೊಂಡರೆ ಅವರ ನಡುವೆ ಲಿಂಕ್ ಕೊಡುವ ಪರಂಪರೆ ಹುಟ್ಟಿದೆ.
ವಾಸಿಂ ಭಾರತದ ಟಿವಿ ಚಾನೆಲ್ವೊಂದರ ರಿಯಾಲಿಟಿ ಶೋವಿನಲ್ಲಿ ಜಡ್ಜ್ ಆಗಿದ್ದಾಗ ಸುಸ್ಮಿತಾ ಸೇನ್ ಜತೆಯಲ್ಲೂ ಲಿಂಕ್ ಇದೆ ಎನ್ನುವ ಮಾಹಿತಿಯನ್ನು ಭಾರತದ ಮಾಧ್ಯಮಗಳು ಹರಿಯಬಿಟ್ಟಿದ್ದರು. ಇದೆಲ್ಲವೂ ರಿಯಾಲಿಟಿ ಶೋವಿನ ಪ್ರಚಾರಕ್ಕಾಗಿ ಮಾಡಿದ ತಂತ್ರ ಎಂದು ನಂತರ ಗೊತ್ತಾಯಿತು. ಮಾಧ್ಯಮಗಳು ಹೇಳುವ ಮಾತಿಗೆಲ್ಲ ನಾನು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಮಲ್ಲಿಕಾ ವಾಹಿನಿಯೊಂದರಲ್ಲಿ ಬಿಚ್ಚು ಮಾತನಾಡಿದ್ದಾರೆ. ಆದರೆ ವಾಸಿಂ ಈ ಕುರಿತು ಯಾವುದೇ ಮಾಧ್ಯಮಗಳಿಗೆ ಹೇಳಿಕೆ ಕೊಡಲು ಮುಂದೆ ಬಂದಿಲ್ಲ. ಅಂದಹಾಗೆ ಮಲ್ಲಿಕಾರ ಮಾತಿನ ಮುಂದೆ ವಾಸಿಂ ಅಕ್ರಂ ಮಾತು ಡಲ್ ಹೊಡೆದಿದೆ ಎಂದು ಬಿಡೋಣ ಅಲ್ವಾ..?
No comments:
Post a Comment