
ವಿಜಯ ಕರ್ನಾಟಕದಲ್ಲಿ ಬಂದ ವಿಶೇಷ ವರದಿ
ಡಿಆರ್ಸಿ ವರ್ಲ್ಡ್ ಚಾಂಪಿಯನ್ ಶಿಪ್ ಇದು ಮುಂಬರುವ ದಿನಗಳಲ್ಲಿ ಹಾಕಿ ಕ್ರೀಡೆಯಲ್ಲಿ ಬರುವ ಐಪಿಎಲ್ ಮಾದರಿ ಚಾಂಪಿಯನ್ ಶಿಪ್ನ ಟೈಟಲ್ ಕಾರ್ಡ್. ಕ್ರಿಕೆಟ್, ವಾಲಿಬಾಲ್, ಕಾರ್ ರೇಸಿಂಗ್ ಈಗ ಹಾಕಿಗೂ ಐಪಿಎಲ್ ರಂಗು ಬಂದಿದೆ. ಇದೇ ಬರುವ ಡಿ.೧೫ರಿಂದ ಜ.೧೫ರ ವರೆಗೆ ದೇಶದ ನಾನಾ ಭಾಗಗಳಲ್ಲಿ ಈ ಹಾಕಿ ಪಂದ್ಯಾಟಗಳು ನಡೆಯಲಿದೆ ಎನ್ನುವ ಮಾಹಿತಿಯನ್ನು ವಿಕಕ್ಕೆ ಬಹಿರಂಗ ಮಾಡಿದ್ದು ಭಾರತದ ಮಾಜಿ ಹಾಕಿ ಕಪ್ತಾನ ಧನರಾಜ್ ಪಿಳ್ಳೆ.
ಬಡಗ ಎಡಪದವಿನಲ್ಲಿ ಸ್ವಾತಂತ್ಯ್ರೋತ್ಸವದ ಅಂಗವಾಗಿ ನಡೆದ ಶ್ರೀ ಭೂತನಾಥೇಶ್ವರ ಮಾನ್ಸೂನ್ ಮ್ಯಾರಥಾನ್ಗೆ ಚಾಲನೆ ನೀಡಲು ಬಂದಿದ್ದ ಧನರಾಜ್ ಪಿಳ್ಳೆ ವಿಕದ ಜತೆಗೆ ಮಾತನಾಡಿದರು.
ಅವರು ಹೇಳಿದ್ದಿಷ್ಟು
* ನಿಂಬಸ್ ಕಂಪನಿ ಹಾಕಿ ಐಪಿಎಲ್ ಪ್ರಾಯೋಜಕತ್ವ ಪಡೆದಿದೆ. ಭಾರತದ ೧೩೦ ಹಾಗೂ ವಿದೇಶದ ೪೦ ಹಾಕಿ ಆಟಗಾರರು ಐಪಿಎಲ್ ಹರಾಜಿಗೆ ಸಹಿ ಹಾಕಿದ್ದಾರೆ. ಪಂದ್ಯಾಟದ ಸ್ಥಳಗಳನ್ನು ಶೀಘ್ರ ಅಂತಿಮಗೊಳಿಸಲಾಗುವುದು. ೨ ತಿಂಗಳ ಒಳಗೆ ಸ್ಪಷ್ಟ ಮಾಹಿತಿ ನೀಡಲಾಗುವುದು. ಹಾಕಿ ಐಪಿಎಲ್ನಲ್ಲಿ ಪಂದ್ಯಾಟದ ಅವ ಮೊಟಕು ಮಾಡುವ ಕುರಿತು ಈಗಾಗಲೇ ಹಾಕಿ ಫೆಡರೇಶನ್ ಆಫ್ ಇಂಡಿಯಾದ ಜತೆ ಮಾತುಕತೆ ನಡೆದಿದೆ.
* ಕ್ರಿಕೆಟ್ ಮುಂದೆ ಹಾಕಿ ಮಂಕಾಗುತ್ತಿದೆ ಎಂಬ ಕುರಿತು ಆರಂಭದಲ್ಲಿ ಭಯ ಹುಟ್ಟಿತ್ತು. ಈಗ ಹಾಕಿನೂ ಐಪಿಎಲ್ ಮಟ್ಟಕ್ಕೆ ಹೋಗುತ್ತಿದೆ. ಪ್ರಾಯೋಜಕರು ಸಿಗುತ್ತಿದ್ದಾರೆ. ಆಟಗಾರರ ಹರಾಜು ನಡೆಯಲಿದೆ. ಇದೆಲ್ಲ ಹಾಕಿಗೆ ಭವಿಷ್ಯವಿದೆ ಎನ್ನುವುದನ್ನು ಎತ್ತಿ ತೋರಿಸುತ್ತಿದೆ.
* ಭಾರತೀಯ ಹಾಕಿ ತಂಡಕ್ಕೆ ವಿದೇಶಿ ಕೋಚ್ ನೇಮಕ ಮಾಡಿದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಕ್ರಿಕೆಟ್ನಲ್ಲಿ ವಿದೇಶಿ ಕೋಚ್ ನೇಮಕ ಮಾಡಬಹುದಾದರೆ ಹಾಕಿಯಲ್ಲಿ ಯಾಕಿಲ್ಲ. ಕ್ರಿಕೆಟ್ ಕೂಡ ಒಂದು ಕ್ರೀಡೆಯಾದರೆ ಹಾಕಿನೂ ಅದರಷ್ಟೇ ದೊಡ್ಡ ಕ್ರೀಡೆ. ಭಾರತೀಯ ಹಾಕಿ ತಂಡದ ಈಗಿನ ಕೋಚ್ ನೋಬ್ಸ್ ಈಗಷ್ಟೇ ಬಂದಿದ್ದಾರೆ. ಅವರಿಗೆ ಕೊಂಚ ಟೈಮ್ ಕೊಡುವುದು ಮುಖ್ಯ. ಅವರು ಕೂಡ ಸಮಯ ಕೇಳಿದ್ದಾರೆ, ಮುಂದೆ ನೋಡೋಣ.
* ಕರ್ನಾಟಕದ ಅರ್ಜುನ್ ಹಾಲಪ್ಪ, ವಿನಯ್, ಪ್ರಭು, ಎಸ್.ವಿ. ಸೂರ್ಯ ಒಳ್ಳೆಯ ಪ್ರತಿಭಾವಂತ ಆಟಗಾರರು. ಇಂತಹ ಆಟಗಾರರು ಇನ್ನೂ ತಂಡಕ್ಕೆ ಅವಶ್ಯಕತೆ ಇದೆ. ಹಾಕಿ ತರಬೇತಿಯನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಇದೆಲ್ಲವೂ ಕರ್ನಾಟಕದಲ್ಲಿ ಹಾಕಿ ಬೆಳೆಯುತ್ತಿದೆ ಎಂಬುವುದಕ್ಕೆ ಸ್ವಷ್ಟ ಉದಾಹರಣೆ.
* ಹಾಕಿಯಲ್ಲಿ ರಾಜಕಾರಣ ಮೊದಲಿನ ರೀತಿಯಲ್ಲಿ ಇಲ್ಲ. ಆದರೂ ಲೈಕ್ಸ್ ಆಂಡ್ ಡಿಸ್ಲೈಕ್ ಅದನ್ನು ಮ್ಯಾನೇಜ್ ಮಾಡುವುದರಲ್ಲಿ ಭಾರತೀಯ ಹಾಕಿ ತಂಡ ನಿರತವಾಗಿದೆ. ಇಂತಹ ಪ್ರಕ್ರಿಯೆ ತಂಡದ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತದೆ. ಒಲಿಂಪಿಕ್ಸ್ನಲ್ಲಿ ಹಾಕಿ ಪದೇ ಪದೇ ಎಡವಿ ಬೀಳೋದು ಇದೇ ಕಾರಣಕ್ಕೆ.
* ಮುಂಬಯಿಯಲ್ಲಿ ಧನರಾಜ್ ಪಿಳ್ಳೆ ಹಾಕಿ ಅಕಾಡೆಮಿ ಸ್ಥಾಪನೆ ಮಾಡಿದ್ದೆ. ಹಾಕಿಯಲ್ಲಿರುವ ರಾಜಕಾರಣ ಅದನ್ನು ಬೆಳೆಯಲು ಬಿಡಲಿಲ್ಲ. ಈಗ ಮತ್ತೆ ಆರಂಭ ಮಾಡಬೇಕು ಎಂದು ಅಲೋಚನೆ ಮಾಡುತ್ತಿದ್ದೇನೆ. ಪ್ರಾಯೋಜಕತ್ವದ ಕೊರತೆ ಇದೆ. ಹಾಕಿ ಆಟಗಾರರಿಗೆ ಹೊಸ ಚೇತನ ನೀಡಲು ನಾನು ಯಾವಾಗಲೂ ಸಿದ್ಧ. ಅಕಾಡೆಮಿ ಮೂಲಕ ಭಾರತೀಯ ಹಾಕಿ ತಂಡಕ್ಕೆ ಹೊಸ ಆಟಗಾರರನ್ನು ಕೊಡಬೇಕು ಎನ್ನೋದು ನನ್ನ ಕನಸು.
ಮದುವೆ ಬೇಕಿಲ್ಲ ಹಾಕಿ ಇದೆಯಲ್ಲ
ಭಾರತದ ಮಾಜಿ ಹಾಕಿ ಕಪ್ತಾನ ಧನರಾಜ್ ಪಿಳ್ಳೆ ಇನ್ನೂ ಪಕ್ಕಾ ಬ್ಯಾಚುಲರ್. ಮದುವೆ ಯಾಕೆ ಆಗಿಲ್ಲ ಅಂತಾ ಯಾರಾದರೂ ಪ್ರಶ್ನೆ ಹಾಕಿದರೆ ಹೇಳುವುದಿಷ್ಟು: ಆರಂಭದಲ್ಲಿ ಮದುವೆ ಕುರಿತು ಯೋಚಿಸಲು ಟೈಮ್ ಇಲ್ಲದೇ ಹೋಯಿತು. ಹಾಕಿ ಕ್ರೀಡೆಯನ್ನು ಸೀರಿಯಸ್ ಆಗಿ ತೆಗೆದುಕೊಂಡ ನಂತರ ಹಾಕಿಯೇ ನನ್ನ ಹೆಂಡ್ತಿ. ಈಗಂತೂ ಮದುವೆಯ ವಿಚಾರನೇ ಬೇಡ ಅನ್ನಿಸುತ್ತಿದೆ. ಹಾಕಿ ಆಡುತ್ತಿದ್ದಾಗ ಬಹಳಷ್ಟು ಹುಡುಗಿಯರು ಲವ್ ಮಾಡುತ್ತಿದ್ದರು. ನಾನು ಕೂಡ ಲವ್ಗೆ ಬಿದ್ದಿದ್ದೆ. ನಂತರ ಬೇರೆ ವಿಚಾರಗಳಿಂದ ಲವ್ನಿಂದ ಹೊರಬಂದೆ ಎಂದು ತಮ್ಮ ಬದುಕಿನ ಸಿಕ್ರೇಟ್ಸ್ಗಳನ್ನು ಧನರಾಜ್ ತೆರೆದಿಟ್ಟರು.
ಕುಡ್ಲ ಬಲ ಪೊರ್ಲುಂಡು
ಕರಾವಳಿ ಜಿಲ್ಲೆಗೆ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದೇನೆ. ‘ಕುಡ್ಲ ಬಲ ಪೊರ್ಲುಂಡು’ ಎಂದು ಧನರಾಜ್ ತುಳುವಿನಲ್ಲಿ ಹೇಳಿದರು. ಇಂತಹ ಅತಿಥಿ ಸತ್ಕಾರ ಬೇರೆಲ್ಲೂ ಕಂಡಿಲ್ಲ. ಗ್ರಾಮೀಣ ಕ್ರೀಡೆಗೆ ಇಲ್ಲಿ ಅವಕಾಶದ ಜತೆಯಲ್ಲಿ ಹಣಕಾಸಿನ ನೆರವು ಕೂಡ ಇದೆ. ಇಲ್ಲಿನ ಪರಿಸರ, ಸಂಸ್ಕೃತಿ, ಆಚರಣೆಗಳನ್ನು ಕೇಳಿದ್ದೆ. ಆದರೆ ಈಗ ಅದನ್ನೆಲ್ಲಾ ನೋಡುವ ಭಾಗ್ಯ ನನ್ನದಾಗಿದೆ ಎಂದರು ಧನರಾಜ್.
(vk daily published dis news on 16.08.2011)
No comments:
Post a Comment