
ಕಿಶೋರ್ ಕುಮಾರ್ ಎಂದರೆ ಬರೀ ಹಾಡುಗಾರ ಎಂದೇ ಬಹಳಷ್ಟು ಜನರಿಗೆ ಗೊತ್ತು. ಆದರೆ ಕಿಶೋರ್ ಕುಮಾರ್ ಒಬ್ಬ ಸಂಪೂರ್ಣ ಕಲಾವಿದ. ಸಿನಿಮಾದಂತೆ ಬದುಕಿದ ಕಲಾವಿದ ಕಿಶೋರ್ ಯಾಕೆ ಇಷ್ಟವಾಗುತ್ತಾರೆ ಗೊತ್ತಾ..?
ಕಿಶೋರ್ ಕುಮಾರ್ ಬರೀ ಗಾಯಕನಲ್ಲ ಒಬ್ಬ ಸಂಪೂರ್ಣ ಕಲಾವಿದ ಎಂದು ಹೇಳಿಕೊಂಡವರು ಬೇರೆ ಯಾರು ಅಲ್ಲ ಮಾರಾಯ್ರೆ ಗಾನ ಕೋಗಿಲೆ ಲತಾ ಮಂಗೇಶ್ಕರ್. ಈ ಮಾತು ನೂರಕ್ಕೆ ನೂರರಷ್ಟು ನಿಜ. ಕಿಶೋರ್ ಬರೀ ಹಿನ್ನೆಲೆ ಗಾಯಕನಾಗಿ ಉಳಿದು ಹೋಗಲಿಲ್ಲ. ಆದರೆ ಕಿಶೋರ್ ಕುಮಾರ್ ಎಂದರೆ ಅವರು ಬರೀ ಹಾಡುಗಾರರು ಎಂದೇ ಸಿನಿಮಾ ಮಂದಿಗೆ, ಅವರ ಅಭಿಮಾನಿಗಳಿಗೆ ಗೊತ್ತಿತ್ತು. ಕಿಶೋರ್ ಎಲ್ಲ ಕ್ಷೇತ್ರದಲ್ಲೂ ಪಳಗಿ ಬಂದವರು. ನಟನೆ, ಗಾಯನ, ನಿರ್ದೇಶನ, ನಿರ್ಮಾಪಕ, ಸಾಹಿತ್ಯ, ಚಿತ್ರಕತೆ ಹೀಗೆ ಎಲ್ಲವೂ ಕಿಶೋರ್ಗೆ ತುಂಬಾ ಇಷ್ಟವಾಗಿತ್ತು.
ಕಿಶೋರ್ ಕುಮಾರ್ ಹಾಡುಗಳೆಂದರೆ ಮಧುರತೆ ಜತೆಯಲ್ಲಿ ಕೊಂಚ ರಾಕ್ ಆಂಡ್ ರೋಲ್ ಕಲ್ಚರ್ ಮಿಕ್ಸ್ ಆಗಿ ಕೇಳುವ ಕಿವಿಗಳಿಗೆ ಹೊಸ ಅನುಭವ ಹುಟ್ಟುಹಾಕುತ್ತಿತ್ತು. ಆರ್ಡಿ ಬರ್ಮನ್ ಸಂಗೀತ ನಿರ್ದೇಶನದ ‘ಸಾಗರ್’ಚಿತ್ರದ ‘ಸಾಗರ್ ಕಿನಾರೆ...’ ಹಾಡುಗಳು ಮತ್ತೆ ಕೇಳುತ್ತಿದ್ದಾಗ ತಣ್ಣನೆ ಮನಸ್ಸನ್ನು ಅಲ್ಲಿಯೇ ಸವರಿಕೊಂಡಂತೆ ಆಗಿ ಬಿಡುತ್ತದೆ ಎಂದು ಖ್ಯಾತ ಗಾಯಕ ಮುಕೇಶ್ ಹೇಳಿದ್ದರು. ಕಲ್ಯಾಣ್ ಆನಂದ್ಜೀ ಸಂಗೀತ ನಿರ್ದೇಶನದ ‘ಕೋರಾ ಕಾಗಾಜ್’ ಚಿತ್ರದ ‘ಮೇರಾ ಜೀವನ್ ಕೋರಾ ಕಾಗಾಜ್..’ ಹಾಡು ಮತ್ತೊಂದು ಸಾರಿ ರೇಡಿಯೋ, ಟಿವಿಯಲ್ಲಿ ಕೇಳುತ್ತಿದ್ದಾರೆ ಸಾಕು ಜೀವನ ಪಾವನವಾಯಿತು ಎಂದುಕೊಳ್ಳಬೇಕು ಎಂದು ಗಾಯಕಿ ಆಶಾಜೀ ಪದೇ ಪದೇ ಹೇಳಿಕೊಳ್ಳುತ್ತಿದ್ದರಂತೆ.
ಇದೇ ಕಿಶೋರ್ ಕುಮಾರ್ ಅವರ ಹಾಡುಗಳಿಗೆ ಇದ್ದ ಬೇಡಿಕೆ. ಈಗಲೂ ಗೂಗಲ್ ಸರ್ಚ್ ಎಂಜಿನ್ನೊಳಗೆ ಹುಡುಕಾಡಿ ನೋಡಿದರೆ ಸಾಕು. ಕಿಶೋರ್ ಕುಮಾರ್ ಹಾಡುಗಳ ಅಭಿಮಾನಿಗಳ ಸಂಖ್ಯೆ ಬರೋಬರಿ ನಾಲ್ಕು ಮಿಲಿಯಕ್ಕಿಂತ ಜಾಸ್ತಿ ಇದೆ. ಈಗಲೂ ಹಳೆಯ ಟಾಪ್ ಟೆನ್ ಸಾಂಗ್ ಲೀಸ್ಟ್ನಲ್ಲಿ ಕಿಶೋರ್ ಕುಮಾರ್ ಅವರ ಹಾಡುಗಳು ಭದ್ರ ಸ್ಥಾನ ಪಡೆದುಕೊಂಡಿದೆ. ಆದರೂ ಕಿಶೋರ್ ಕುಮಾರ್ ಎಂದರೆ ಒಬ್ಬ ಕ್ರೇಜಿಮ್ಯಾನ್ ಜತೆಗೆ ಮನರಂಜನೆ ಕೊಡುವ ಮನುಷ್ಯ.
ಕಿಶೋರ್ ಕುಮಾರ್ರ ಮೂಲ ಹೆಸರು ಅಬ್ಬಾಸ್ ಕುಮಾರ್ ಗಂಗೋಲಿ. ಬಾಂಬೇ ಟಾಕೀಸ್ ಸಿನಿಮಾದ ಮೂಲಕ ಕಿಶೋರ್ ಕುಮಾರ್ ಎಂದು ಹೆಸರು ಬದಲಾಯಿಸಿ ಬಿಟ್ಟರು. ಮಧ್ಯಪ್ರದೇಶದ ಮಧ್ಯವರ್ಗದ ಕುಟುಂಬದಲ್ಲಿ ಕಿಶೋರ್ ಹುಟ್ಟಿದವರು. ಅಂದಹಾಗೆ ನಟ ಅಶೋಕ್ ಕುಮಾರ್ ಹಾಗೂ ನಟ ಕಲ್ಯಾಣ್ ಕುಮಾರ್ ಕಿಶೋರ್ ಕುಮಾರ್ರ ಹಿರಿಯ ಸಹೋದರರು. ಅಶೋಕ್ ಕುಮಾರ್ಗೂ ತಮ್ಮ ಕಿಶೋರ್ ಒಳ್ಳೆಯ ನಟ ಆಗಬೇಕೆಂಬ ಕನಸ್ಸಿತ್ತು. ಆ ಕಾಲದಲ್ಲಿ ನಟರಿಗೆ ಒಳ್ಳೆಯ ಸಂಭಾವಣೆ ಬರುತ್ತಿತ್ತು.
ಕಿಶೋರ್ಗೂ ನಟನೆಯ ಜತೆಯಲ್ಲಿ ಹಾಡುವ ತಾಕತ್ತು ಇದೆ ಎಂದು ಗೊತ್ತಾದ ಕೂಡಲೇ ಅಶೋಕ್ ಕುಮಾರ್ ಕಿಶೋರ್ ಕುಮಾರ್ಗೆ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. ಕಿಶೋರ್ ಕೆಲವೊಂದು ಚಿತ್ರಗಳಲ್ಲಿ ನಟಿಸಿದ ನಂತರ ನಟನೆ ಬೋರ್ ಅನ್ನಿಸಿಬಿಟ್ಟಿತ್ತು. ಹಾಡುವ ಚಾನ್ಸ್ಗಾಗಿ ಕಿಶೋರ್ ಸಂಗೀತ ನಿರ್ದೇಶಕರ ಬಳಿ ಓಡಲಾರಂಭಿಸಿದರು. ಆದರೆ ಕಿಶೋರ್ ಆರಂಭದಲ್ಲಿ ಸಂಗೀತ ನಿರ್ದೇಶಕರ ಬಳಿ ಹೋದಾಗ ‘ ಆಪ್ಕೀ ಅವಾಜ್ ಮೇ ವೋ ಬಾತ್ ನಹೀ ಹೈ’( ನಿಮ್ಮ ಕಂಠದಲ್ಲಿ ಅಂತಹ ಮಾತಿಲ್ಲ) ಎಂದು ಹೇಳಿ ಕಿಶೋರ್ರ ಉತ್ಸಾಹಕ್ಕೆ ತಣ್ಣೀರು ಹಾಕಿಬಿಟ್ಟರು. ಆದರೆ ಕಿಶೋರ್ ಹಾಡುಗಾರಿಕೆಯನ್ನು ಅಪಾರ ಪ್ರೀತಿಸಿದರು. ಜತೆಗೆ ಹಾಡುಗಳ ಮೂಲಕ ನಿರಂತರವಾಗಿ ಬೆಳೆಯುತ್ತಾ ಹೋದರು.
೧೯೪೮ರಲ್ಲಿ ದೇವಾನಂದ್ ನಟಿಸಿದ ಚಿತ್ರವೊಂದರಲ್ಲಿ ಕಿಶೋರ್ ಕುಮಾರ್ ಹಾಡುವ ಮೂಲಕ ಬಾಲಿವುಡ್ ಸಂಗೀತ ಲೋಕಕ್ಕೆ ಹೊಸ ಸೈಗಲ್ ಶೈಲಿಯನ್ನು ಪರಿಚಯಿಸಿದರು. ಈ ಶೈಲಿ ಕಿಶೋರ್ ಹಾಡುಗಳಲ್ಲಿ ಖಾಯಂ ಆಗಿ ಕೇಳಿಬರುತ್ತಿತ್ತು. ಹಾಡಿನ ಜತೆಯಲ್ಲಿ ‘ಆಪ್ ಟಿಕೇಟ್’, ‘ಚಾಲ್ತಿ ಕಾ ನಾಮ್ ಘಾಡಿ’ ‘ಪಂಟ್ಯೂಸ್’, ‘ಪಡೋಸನ್’ ಚಿತ್ರಗಳ ಮೂಲಕ ಕಿಶೋರ್ ಹಾಸ್ಯ ಚಕ್ರವರ್ತಿಯಾಗಿ ಮರೆದರು.
ಬಾಲಿವುಡ್ ಸಂಗೀತ ನಿರ್ದೇಶಕ ಎಸ್.ಡಿ. ಬರ್ಮನ್( ಸಚಿನ್ ದೇವ್ ಬರ್ಮನ್)ರ ಬಹುತೇಕ ಸಂಗೀತ ನಿರ್ದೇಶನದ ಹಾಡುಗಳಿಗೆ ಕಿಶೋರ್ ಕುಮಾರ್ ಅವರು ಹಿನ್ನೆಲೆ ಗಾಯಕರಾಗಿ ಇರುತ್ತಿದ್ದರು. ಎಸ್.ಡಿ. ಬರ್ಮನ್ರ ೧೧೨ ಹಾಡುಗಳನ್ನು ಕಿಶೋರ್ ಕುಮಾರ್ ಒಬ್ಬರೇ ಹಾಡಿಕೊಂಡು ಬಂದಿದ್ದಾರೆ. ಎಸ್.ಡಿ. ಬರ್ಮನ್ರ ನಂತರ ಬಂದ ಅವರ ಪುತ್ರ ಆರ್.ಡಿ. ಬರ್ಮನ್ರ ಸಂಗೀತ ನಿರ್ದೇಶನದಲ್ಲಿ ಕಿಶೋರ್ ಹಾಡಿದ್ದರು. ಈ ಮೂಲಕ ಎರಡು ಪೀಳಿಗೆಯ ನಿರ್ದೇಶಕರ ಜತೆಯಲ್ಲಿ ಕೆಲಸ ಮಾಡಿದ ಅನುಭವ ಕಿಶೋರ್ ಬಗಲಿಗಿತ್ತು. ಅದರಲ್ಲೂ ನಟ ರಾಜ್ ಕಪೂರ್ ಯಾವುದೇ ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ಕಿಶೋರ್ ಕುಮಾರ್ ಹಾಡುಗಳು ಇರಲೇ ಬೇಕಿತ್ತು.
ಆದರೆ ಕಿಶೋರ್ ಕುಮಾರ್ ಆರ್.ಡಿ. ಬರ್ಮನ್ ಸಂಗೀತ ನಿರ್ದೇಶನದಲ್ಲಿ ಬಂದ ‘ಕಟಿ ಪತಂಗ್’ ಚಿತ್ರದ ‘ಯೇ ಜೋ ಮೊಹಬ್ಬತ್’ ‘ಅಮರ್ ಪ್ರೇಮ್’ ಚಿತ್ರದ ‘ಚಿಂಗಾರಿ ಕೋಯಿ ಬಡ್ಕೇ’ ಹಾಡುಗಳು ಯುವ ಪೀಳಿಗೆಯನ್ನು ಅತಿಯಾಗಿ ಇಷ್ಟಪಟ್ಟಿತು. ೧೯೬೯ರಲ್ಲಿ ಬಾಲಿವುಡ್ನಲ್ಲಿ ಬಿಡುಗಡೆಯಾದ ‘ಆರಾಧನಾ’ ಚಿತ್ರ ‘ಮೇರಿ ಸಪ್ನೋಕಿ ರಾಣಿ...’ ಮತ್ತು ‘ರೂಪ್ ತೇರಾ ಮಸ್ತಾನಾ’ ಹಾಡುಗಳು ಯುವಪೀಳಿಗೆಯಲ್ಲಿ ಕಿಶೋರ್ ಕುಮಾರ್ರ ಸ್ಥಾನವನ್ನು ಭದ್ರ ಮಾಡಿತು.
ಕಿಶೋರ್ ಕುಮಾರ್ ಭಾರತೀಯ ಸಿನಿಮಾ ಇಂಡಸ್ಟ್ರಿಗೆ ಹೊಸ ಶೈಲಿಯ ಯೋಡ್ಲಿಂಗ್ ಸಂಗೀತವನ್ನು ನೀಡುವ ಮೂಲಕ ಸಂಗೀತದಲ್ಲಿ ಬದಲಾವಣೆಗಳು ಅವಶ್ಯಕ ಎಂದು ತೋರಿಸಿ ಬಿಟ್ಟರು. ಅದರಲ್ಲೂ ‘ಮೇ ಹೂ ಜುಮುರೂ’ ಹಾಗೂ ‘ಹಾಲ್ ಕೈಸಾ ಹೇ ಜನಾಬ್ ಅಪ್ಕಾ’ ಹಾಡುಗಳು ಸಂಗೀತ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಿತು.
ದೇಶದ ಬಹುತೇಕ ಭಾಷೆಗಳಲ್ಲಿ ಹಾಡಿರುವ ಕಿಶೋರ್ ಕುಮಾರ್ ೮ಕ್ಕೂ ಅದಿಕ ಫಿಲ್ಮ್-ರ್ ಅವಾರ್ಡ್ಗಳನ್ನು ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಪಡೆದುಕೊಂಡಿದ್ದರು. ಕಿಶೋರ್ ಕುಮಾರ್ ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಂತೆ ವೈವಾಹಿಕ ಬದುಕಿನಲ್ಲಿ ಹಾದಿ ತಪ್ಪಿ ಬಿಟ್ಟಿದ್ದರು. ಕಿಶೋರ್ ಕುಮಾರ್ ನಾಲ್ವರನ್ನು ವಿವಾಹವಾಗಿದ್ದರು. ರೂಮಾ ಗುವಾ, ಮಧುಬಾಲ, ಯೋಗಿತಾ ಬಾಲಿ ಹಾಗೂ ಕೊನೆಯದಾಗಿ ಲೀನಾ ಚಂದ್ವಾರ್ಕರ್ ಕಿಶೋರ್ ಕುಮಾರ್ ಪತ್ನಿಯಾಗಿ ಸ್ಥಾನ ಪಡೆದುಕೊಂಡಿದ್ದರು. ಆರಂಭದ ಪತ್ನಿ ರೂಮಾರಿಗೆ ಅಮಿತ್ ಕುಮಾರ್ ಎಂಬ ಪುತ್ರನಿದ್ದಾನೆ. ಹಿನ್ನೆಲೆ ಗಾಯಕನಾಗಿ ಅಮಿತ್ ಕುಮಾರ್ ಬಹಳಷ್ಟು ಸಿನಿಮಾಗಳಲ್ಲಿ ಹಾಡಿದ್ದಾರೆ. ಲೀನಾ ಚಂದ್ವಾರ್ಕರ್ಗೆ ಸುಮಿತ್ ಕುಮಾರ್ ಎಂಬ ಪುತ್ರನಿದ್ದಾನೆ.
ಕಿಶೋರ್ ಕುಮಾರ್ ತನ್ನ ಬದುಕಿನ ಕೊನೆಯವರೆಗೂ ಸಂಗೀತ ಕ್ಷೇತ್ರವನ್ನು ಬಿಟ್ಟಿರಲಿಲ್ಲ. ಕೊನೆಗಾಲದಲ್ಲಿ ಸಿನಿಮಾಗಳನ್ನು ಬಿಟ್ಟು ವೇದಿಕೆಗಳಲ್ಲಿ ನಿಂತು ಹಾಡಲು ಆರಂಭ ಮಾಡಿದ್ದರು. ಯಾರಾದರೂ ಈ ವಿಚಾರದಲ್ಲಿ ಕಿಶೋರ್ ಬಳಿ ಪ್ರಶ್ನೆ ಕೇಳುತ್ತಿದ್ದಾಗ ‘ ಸ್ಟೇಜ್ ಶೋಗಳಿಂದ ಬಂದ ಹಣವನ್ನು ತೆರಿಗೆ ಕಟ್ಟಲು ಬಳಸುತ್ತಿದ್ದೇನೆ’ ಎನ್ನುತ್ತಿದ್ದರಂತೆ !! ಅದರಲ್ಲೂ ಸಿನಿಮಾಗಳಲ್ಲಿ ನಟಿಸುವಾಗಲೂ ನಿರ್ಮಾಪಕ ಸರಿಯಾಗಿ ಸಂಭಾವನೆ ಕೊಡದೇ ಹೋದರೆ ಅರ್ಧ ಮೇಕಪ್ ಮಾಡಿ ನಟನೆ ಮಾಡುತ್ತಿದ್ದರು ಎನ್ನುವ ವಿಚಾರ ಅವರ ಆಪ್ತ ವಲಯದಿಂದ ಹೊರಬರುತ್ತದೆ.
ಕಿಶೋರ್ ಕುಮಾರ್ ವ್ಯಕ್ತಿತ್ವನೂ ಬಹಳಷ್ಟು ವಿಚಿತ್ರವಾಗಿತ್ತು. ಕಿಶೋರ್ ತಮ್ಮ ಸುತ್ತಮುತ್ತಲಿರುವ ಮರಗಳ ಜತೆಯಲ್ಲಿ ಮಾತಿಗೆ ನಿಂತುಬಿಡುತ್ತಿದ್ದರು. ಮನೆಯಲ್ಲಿರುವ ಮರಗಳಿಗೂ ಒಂದೊಂದು ಹೆಸರುಗಳನ್ನು ಕೊಟ್ಟಿದ್ದರು. ಅದರ ಮೂಲಕವೇ ಮರಗಳ ಜತೆಯಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಕಿಶೋರ್ ಕುಮಾರ್ ಬದುಕಿನಲ್ಲೂ ಅಷ್ಟೇ ಮನರಂಜನೆ ನೀಡುವ ವ್ಯಕ್ತಿಯಾಗಿ ಎಲ್ಲರಿಗೂ ಕಾಣಿಸುತ್ತಿದ್ದರು. ಕಿಶೋರ್ ಕುಮಾರ್ ಕೊನೆಗಾಲದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಹೋದರೂ ಕೂಡ ಅವರ ಹಾಡುಗಳು ಇಂದಿಗೂ ಕಿಶೋರ್ ಅಮರ ಎನ್ನುತ್ತಿದೆ.