
‘ಆಫ್ ದಿ ರೆಕಾರ್ಡ್’ ಎಂದಾಕ್ಷಣ ಅದು ಬೇರೊಬ್ಬರ ಬೆಡ್ರೂಮಿಗೆ ಹಿಡಿದ ಹಿಡನ್ ಕ್ಯಾಮೆರಾವಲ್ಲ; ವೈಯಕ್ತಿಕ ಬದುಕಿನ ಚರ್ವಿತ ಚರ್ವಣ ಲೈಂಗಿಕ ಹಗರಣವಲ್ಲ; ಹಾಡಹಗಲೇ ರಾತ್ರಿಯ ಬದುಕನ್ನು ತೆರೆದಿಡುವ ಪ್ರಯತ್ನವೂ ಅಲ್ಲ. ಇದೊಂದು ವಿಶಿಷ್ಟ ಪ್ರಯೋಗ ಎನ್ನುವುದು ಗಣೇಶ್ ಕಾಸರಗೋಡು ಮಾತು.
ಇದು ನೀವು ಊಹಿಸಿದಂತಿಲ್ಲ; ಆದರೆ ಖಂಡಿತಾ ನಿಮಗಿಷ್ಟವಾಗುತ್ತದೆ- ಇದು ನನ್ನ ಪ್ರಾಮಿಸ್ ಎನ್ನುತ್ತಾರೆ ಖ್ಯಾತ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು.
ವಿಷಯ ಏನಪ್ಪಾ ಅಂದ್ರೆ.... ಗಣೇಶ್ ಈಗ ‘ಆಫ್ ದಿ ರೆಕಾರ್ಡ್’ ಬರೆಯುತ್ತಿದ್ದಾರೆ. ಮಾಧ್ಯಮಗಳಲ್ಲಿ ಎಂದಿಗೂ ಹೇಳಿಕೊಳ್ಳಲಾಗದ ವಿಚಾರಗಳು ಇಲ್ಲಿ ಜಾಗ ಪಡೆದುಕೊಳ್ಳುತ್ತದೆ. ಚಿತ್ರರಂಗವೆಂಬ ಮಾಯಾಲೋಕಕ್ಕೆ ಅಕ್ಷರಗಳ ಮೇಲೆ ಪ್ರೀತಿ ಕಡಿಮೆ. ಕಾಲದ ಕಸದ ಬುಟ್ಟಿಯಲ್ಲಿ ಇರುವವರನ್ನು ತಂದು ಮುಂದೆ ಕೂರಿಸೋದು, ಮರದ ನೆರಳಿನಲ್ಲಿ ವಿಶ್ರಮಿಸುತ್ತಿರುವವರ ಜತೆ ಮಾತಿಗಿಳಿಯೋದು, ಯಾರಿಗೂ ನೆನಪೇ ಆಗದವರನ್ನು ಇವರಿನ್ನು ಬದುಕಿದ್ದಾರೆ, ಹೀಗೆ ಬದುಕಿದ್ದಾರೆ, ಹೀಗೂ ಒಂದು ಬದುಕು ಇರುತ್ತೆ ಎಂದು ಓದುಗನ ಕೈಹಿಡಿದು ತೋರಿಸುವ ಛಾತಿ ಇರುವ ಮನುಷ್ಯ ಗಣೇಶ್ ಕಾಸರಗೋಡು ಮಾತ್ರ ಎನ್ನುವುದು ಸಿನಿ ಪತ್ರಕರ್ತರ ವಲಯದಲ್ಲಿ ಹರಡಿಕೊಂಡಿರುವ ಮಾತು.
ಸಿನಿಮಾದ ರೂಟೀನ್ ಸ್ಟೋರಿಗಳನ್ನು ಬಿಟ್ಟು , ತೆರೆಮರೆಗೆ ಸರಿದ ನಾಯಕ- ನಾಯಕಿಯರನ್ನು ಹುಡುಕಿಕೊಂಡು ಹೋಗಿ ಸ್ಟೋರಿ ಮಾಡುವುದರಲ್ಲಿ ಗಣೇಶ್ ಎತ್ತಿದ ಕೈ. ಅದೇ ಒಂದು ಪಾಯಿಂಟ್ನಿಂದ ಗಣೇಶ್ ಉಳಿದ ಸಿನಿಮಾ ಪತ್ರಕರ್ತರಿಗಿಂತ ಕೊಂಚ ಭಿನ್ನವಾಗಿ ನಿಲ್ಲುತ್ತಾರೆ. ಇದು ಅವರ ಸ್ವಂತ ಆಸಕ್ತಿ. ಇಂತಹ ಲೇಖನಗಳನ್ನು ವೃತ್ತಿ ಖಂಡಿತವಾಗಿಯೂ ಬೇಡುವುದಿಲ್ಲ. ಪ್ರವೃತ್ತಿ ಮಾತ್ರ ಇದನ್ನು ಬಯಸುತ್ತದೆ ಎಂಬ ಮಾತು ಗಾಂನಗರದ ಗಲ್ಲಿ ಗಲ್ಲಿಗಲ್ಲಿಯಲ್ಲೂ ಹರಡಿದೆ.
ಅದೇ ಗಣೇಶ್ ಕಾಸರಗೋಡು ತಮ್ಮ ೩೦ ವರ್ಷಗಳ ವೃತ್ತಿ ಬದುಕಿನಲ್ಲಿ ನಾಯಕ-ನಾಯಕಿಯರು ಹೇಳಿದ ಹಾಗೂ ಗಣೇಶ್ ಯಾರಲ್ಲೂ ಹೇಳಿರದ, ಬರೆದಿರದ ನೂರಾರು ಮಾತುಗಳನ್ನು ಇಟ್ಟುಕೊಂಡು ವಂಡರ್ಫುಲ್ ಸ್ಟೋರಿ ಕೊಟ್ಟಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಲವಲವಿಕೆಯ ಜತೆ ಮಾತಿಗೆ ಸಿಕ್ಕಿದ ಗಣೇಶ್ ಕಾಸರಗೋಡು ಬರೋಬರಿ ಅರ್ಧ ತಾಸು ವೃತ್ತಿ ಬದುಕು, ಸಿನಿಮಾ, ಕೃತಿಯ ಸುತ್ತು ಗಿರಕಿ ಹೊಡೆದರು. ‘ಆಫ್ ದಿ ರೆಕಾರ್ಡ್ ಎಂದಾಕ್ಷಣ ಅದು ಬೇರೊಬ್ಬರ ಬೆಡ್ರೂಮಿಗೆ ಹಿಡಿದ ಹಿಡನ್ ಕ್ಯಾಮೆರಾವಲ್ಲ; ವೈಯಕ್ತಿಕ ಬದುಕಿನ ಚರ್ವಿತ ಚರ್ವಣ ಲೈಂಗಿಕ ಹಗರಣವಲ್ಲ; ಹಾಡಹಗಲೇ ರಾತ್ರಿಯ ಬದುಕನ್ನು ತೆರೆದಿಡುವ ಪ್ರಯತ್ನವೂ ಅಲ್ಲ. ಇದೊಂದು ವಿಶಿಷ್ಟ ಪ್ರಯೋಗ. ಇಲ್ಲಿ ನನ್ನ ರೂಟೀನ್ ಬರಹದ ಜತೆಗೆ ಸ್ಪೈಸಿ ಟಿಪ್ಸ್ಗಳು ಜತೆಯಲ್ಲಿ ಸಿಗುತ್ತದೆ ’ ಎಂದು ತಮ್ಮ ಕುರುಚಲು ಗಡ್ಡದ ಮೇಲೆ ಕೈಯಾಡಿಸಿ ಮುಗುಳು ನಕ್ಕರು ಗಣೇಶ್ ಕಾಸರಗೋಡು.
‘ ಬಹಳ ದಿನಗಳಿಂದ ಆಫ್ ದಿ ರೆಕಾರ್ಡ್ ಉಳಿದ ಕತೆಗಳಿಗೆ ಜೀವ ಕೊಡಬೇಕು ಅಂದುಕೊಂಡಿದ್ದೆ. ಇಂತಹ ಕೃತಿಯ ಮುದ್ರಣಕ್ಕೆ ಹಿಂದೇಟು ಹಾಕುವ ಮಂದಿ ಜಾಸ್ತಿ. ಅದಕ್ಕಾಗಿ ಅದರ ಪ್ರಕಾಶನ ಕೆಲಸವನ್ನು ಬಗಲಿಗೆ ಹಾಕಿಕೊಂಡಿದ್ದೇನೆ. ಸರಿಸುಮಾರು ೫೦ ಘಟನೆಗಳನ್ನು ‘ಆಫ್ ದಿ ರೆಕಾರ್ಡ್’ ಕೃತಿಯಲ್ಲಿ ತೆರೆದಿಡುತ್ತೇನೆ ’ ಎಂದರು ಗಣೇಶ್. ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಒಟ್ಟು ಸೇರಿಸಿಕೊಂಡು ‘ಚದುರಿದ ಚಿತ್ರಗಳು’, ‘ಮೌನ ಮಾತಾದಾಗ’ ‘ನೆನಪಿನಂಗಳದಲ್ಲಿ ಶಂಕರ್ ನಾಗ್’ ‘ರವಿಚಂದ್ರನ್’ ‘ಗುರಿ- ಹೆಗ್ಗುರಿ’ ‘ಹೇಗಿದ್ದ ಹೇಗಾದ ಗೊತ್ತಾ..?’ ‘ಪ್ರೀಮಿಯರ್ ಬಸವರಾಜ್’ ‘ಬಯೋಸ್ಕೋಪ್’ನ ನಂತರ ಈಗ ‘ಆಫ್ ದಿ ರೆಕಾರ್ಡ್’ ಗಣೇಶ್ರ ಬತ್ತಳಿಕೆಯಿಂದ ಬರುತ್ತಿದೆ.
ಏನೂ ಉಂಟು ಮಾರಾಯ್ರೆ:ಸರಿಸುಮಾರು ೨೦೦ ಪುಟಗಳು ತುಂಬಿರುವ ‘ಆಫ್ ದಿ ರೆಕಾರ್ಡ್’ನಲ್ಲಿ ಇರೋದಾದರೂ ಏನೂ ಎಂಬ ಬಗ್ಗೆ ಬಹಳ ಕುತೂಹಲ ಹುಟ್ಟಿ ಕೊಂಡಿರೋದು ನಿಜ. ಅದಕ್ಕೆ ಗಣೇಶ್ ನೀಡುವ ಡಜನ್ ಗಟ್ಟಲೆ ಉತ್ತರ ಇಲ್ಲಿದೆ. ಶಂಕರ್ನಾಗ್ ಸಾವಿಗೆ ಕಾರಣಳಾದ ಆ ಮಾಯಾವಿ ಯಾರು?, ಡಾ.ರಾಜ್ರನ್ನು ‘ಮಿನಿ ಹಿಟ್ಲರ್’ ಎಂದು ಕರೆದದ್ದು ಯಾರು?, ೬೭ರ ಕುಳ್ಳನ ಲವ್ ಮ್ಯಾರೇಜ್ ಎಪಿಸೋಡ್, ಸರಳ ರೇಖೆಯಲ್ಲ; ಇದು ವಕ್ರ ರೇಖೆ- ರೇಖಾದಾಸ್ ಮ್ಯಾರೇಜ್ ಸ್ಟೋರಿ, ಪೂಜಾಗಾಂ ಲವಿಡವಿ ಪ್ರಕರಣ ಮತ್ತು ಲಾಯರ್ ನೋಟಿಸ್, ಕೋಡ್ಲುವೇನು ಮಣಿರತ್ನನಾ?- ಹ್ಯಾಟ್ರಿಕ್ ಹೀರೋ ಪ್ರಶ್ನೆ, ರೋಗಿಯಾದಳಲ್ಲಾ ನಮ್ಮ ಗ್ಲಾಮರಸ್ ರಾಗಿಣಿ, ಉಪ್ಪಿ ಹೆಸರು ಹೇಳಿದರೆ ಏಕೆ ಈ ಪತ್ರಕರ್ತರು ರಾಂಗಾಗ್ತಾರೆ, ಫಿಲಂ ಜರ್ನಲಿಸ್ಟ್ಗಳನ್ನು ‘ಬಾಸ್ಟರ್ಡ್’ ಎಂದು ಕರೆದ ಮಹಾನುಭಾವ ಯಾರು?, ಪ್ರೀತಿಯ ‘ರಾಮು’ವಿನ ಗೋಲ್ಮಾಲ್ ಕತೆ, ಓದಿ ನೋಡಿ ಕಲಾಕೇಸರಿಯ ಮೊಮ್ಮಕ್ಕಳ ಪತ್ರ, ಆತ್ಮಹತ್ಯೆಗೆ ಯತ್ನಿಸಿದ್ದರೇ ಸಿ.ವಿ. ಶಂಕರ್ ಹೀಗೆ ಯಾರಿಗೂ ಗೊತ್ತಿಲ್ಲದ ಉತ್ತರಗಳು ಈ ಕೃತಿಯಲ್ಲಿ ಲಭ್ಯವಾಗಲಿದೆ ಎನ್ನೋದು ಗಣೇಶ್ರ ಮಾತು. ಯಾವುದಕ್ಕೂ ಈ ಕೃತಿಯನ್ನು ಮಾತ್ರ ಮೊದಲೇ ಬುಕ್ ಮಾಡಿ. ಮಾರುಕಟ್ಟೆಯಲ್ಲಿ ಖಾಲಿಯಾದರೆ ಗಣೇಶ್ ಜವಾಬ್ದಾರರಲ್ಲ.
No comments:
Post a Comment