Monday, May 2, 2011

ಕುಡ್ಲದಲ್ಲಿ ‘ಸಾರಂಗ’ ಧಮಾಕಾ!


ಎರಡು-ಮೂರು ಖಾಸಗಿ ರೇಡಿಯೋ ಚಾನೆಲ್ಗಳನ್ನು ಇಟ್ಟುಕೊಂಡು ಒದ್ದಾಡುತ್ತಿರುವ ಕುಡ್ಲದಲ್ಲಿ ಸಮುದಾಯ ರೇಡಿಯೋ ವಾಹಿನಿಯೊಂದು ಭರ್ಜರಿಯಾಗಿ ಒಂದು ವರ್ಷ ಪೂರೈಸಿ ನಿಂತಿದೆ. ಕೊಂಕಣಿ, ತುಳು, ಕನ್ನಡ, ಬ್ಯಾರಿ, ಮಳಯಾಳಂ ಹಾಗೂ ಪಂಜಾಬಿ ಭಾಷೆಯಲ್ಲಿ ವಿವಿಧ ಕಾರ್ಯಗಳನ್ನು ನೀಡುವ ಮೂಲಕ ಕುಡ್ಲದಲ್ಲಿ ‘ಸಾರಂಗ’ ಮೆಚ್ಚುಗೆಗೆ ಪಾತ್ರವಾಗಿದೆ. ದಿನಪ್ರತಿ ೧೪ ಗಂಟೆಗಳ ನಾನ್ಸಾಪ್ಟ್ ಕಾರ್ಯಕ್ರಮ ಪ್ರಸಾರದ ಮೂಲಕ ಸಮುದಾಯ ವಾಹಿನಿಗಳಲ್ಲಿಯೇ ಹೊಸ ದಾಖಲೆ ಬರೆದಿದೆ.

ನಾನ್ಸ್ಟಾಪ್ ಸಿನ್ಮಾಗಳ ಹಾಡು ಜತೆಗಿಷ್ಟು ಆರ್ಜೆ(ರೇಡಿಯೋ ಜಾಕಿ)ಗಳ ವಟವಟ ಇದು ಖಾಸಗಿ ಎಫ್ಎಂಗಳ ದುನಿಯಾ. ಈಗಾಗಲೇ ರಾಜ್ಯದಲ್ಲಿರುವ ಹತ್ತಾರು ಖಾಸಗಿ ರೇಡಿಯೋ ಚಾನೆಲ್ಗಳು ಮೆಟ್ರೋ ಸಿಟಿಯನ್ನು ಮಾತ್ರ ಟಾರ್ಗೆಟ್ ಮಾಡಿಕೊಳ್ಳದೇ ಮೂಲಭೂತ ಸೌಕರ್ಯಗಳಿಲ್ಲದ ಕುಗ್ರಾಮ ಹಳ್ಳಿಗಳನ್ನು ಮುಟ್ಟಿ ನಿಂತಿದೆ. ನಿಜಕ್ಕೂ ಈ ಖಾಸಗಿ ಎಫ್ಎಂಗಳ ದರಬಾರಿನ ಮುಂದೆ ಉಳಿದೆಲ್ಲ ರೇಡಿಯೋ ಚಾನೆಲ್ಗಳಿಗೆ ಮಂಕು ಕವಿದಿದೆ ಎಂದೇ ನಂಬಲಾಗಿತ್ತು.
ಆದರೆ ಕುಡ್ಲ ಸಿಟಿಯೊಳಗೆ ಸಮುದಾಯ ರೇಡಿಯೋ ವಾಹಿನಿ ಸಾರಂಗ ೧೦೭.೮ ಎಫ್ಎಂ ಸಕ್ಸಸ್ ಫುಲಿ ವನ್ ಇಯರ್ನ್ನು ಪೂರೈಸಿ ನಿಂತಿದೆ. ೧೩೧ ವರ್ಷಗಳ ಸುದೀರ್ಘ ಇತಿಹಾಸ ಇರುವ ಮಂಗಳೂರಿನ ಅಟೋನಾಮಸ್ ವಿವಿ ಸಂತ. ಅಲೋಶಿಯಸ್ನ ಮಾಧ್ಯಮ ಸಂವಹನ ವಿಭಾಗದ ಅಡಿಯಲ್ಲಿ ಸಾರಂಗ ೧೦೭.೮ ಎಫ್ಎಂ ಭರ್ಜರಿಯಾಗಿ ಕಾರ್ಯ ನಿರ್ವಹಣೆ ಮಾಡಿಕೊಂಡು ಬರುತ್ತಿದೆ.
ಸಮುದಾಯ ರೇಡಿಯೋ ವಾಹಿನಿ ಹಾಗೂ ಖಾಸಗಿ ರೇಡಿಯೋ ವಾಹಿನಿಗಳ ಮೋಟೋಗಳೇ ಭಿನ್ನ. ಖಾಸಗಿ ರೇಡಿಯೋ ವಾಹಿನಿಗಳಿಗೆ ಕಮರ್ಷಿಯಲ್ ದೃಷ್ಟಿಕೋನ ಮುಖ್ಯವಾದರೆ ಸಮುದಾಯ ರೇಡಿಯೋಗಳಿಗೆ ಸಮುದಾಯದ ಅಭಿವೃದ್ಧಿ ಹಾಗೂ ಅವರ ಆಸಕ್ತಿಗಳೇ ಕಾರ್ಯಕ್ರಮಗಳ ಜೀವಾಳವಾಗಿರುತ್ತದೆ. ಕುಡ್ಲ ಎಲ್ಲ ರೀತಿಯಿಂದಲೂ ಬೆಳೆಯುತ್ತಿರುವ ನಗರ. ಅದರಲ್ಲೂ ವಿವಿಧ ಜಾತಿ, ಧರ್ಮ, ಭಾಷೆಯ ತವರೂರು. ಎಲ್ಲರ ಆಸಕ್ತಿ, ಅಭಿವೃದ್ಧಿಗಳನ್ನು ಜೋಪಾನವಾಗಿ ಕಾಯುವಂತಹ ಕಾರ್ಯಕ್ರಮಗಳನ್ನು ನೀಡುವುದು ನಿಜಕ್ಕೂ ಒಂದು ಸವಾಲಿನ ಕೆಲಸ. ಅದನ್ನು ಸರಿಯಾಗಿ ಸಾರಂಗ ನಿಭಾಯಿಸಿಕೊಂಡು ಬಂದಿದೆ ಎನ್ನೋದು ಸಾರಂಗ ೧೦೭.೮ ಕಮ್ಯೂನಿಟಿ ರೇಡಿಯೋ ವಾಹಿನಿಯ ನಿರ್ದೇಶಕ ಡಾ. ರಿಚರ್ಡ್ ರೇಗೊ ಅವರ ಅಭಿಪ್ರಾಯ.
ಕರಾವಳಿ ಮೀನುಗಾರ ಸಮೂಹ, ಕೃಷಿಕ ಬಂಧುಗಳಿಗೆ ಮಾಹಿತಿ, ಆರೋಗ್ಯ- ಕಾನೂನು ಕ್ಷೇತ್ರದ ಜತೆಗೆ ವಿದ್ಯಾರ್ಥಿಗಳಿಗೆ ಆಸಕ್ತಿ ನೀಡುವಂತಹ ಕಾರ್ಯಕ್ರಮಗಳು, ರಸ್ತೆ ಸುರಕ್ಷೆಯ ಜತೆಗೆ ಮಳೆ ನೀರು ಕೊಯ್ಲು ಕಾರ್ಯಕ್ರಮಗಳು ಸಾರಂಗದಲ್ಲಿ ಜಾಸ್ತಿಯಾಗಿ ಪ್ರಸಾರವಾಗುತ್ತಿದೆ.
ಮಂಗಳೂರು ಸುತ್ತಮುತ್ತಲಿನ ಊರುಗಳ ಜತೆಗೆ ದೂರದ ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ ಹಾಗೂ ಉಡುಪಿ ಮುಂತಾದ ಪ್ರದೇಶಗಳಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಇತರ ವರ್ಗದ ಜನರು ಸಾರಂಗದಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಪ್ರತಿನಿತ್ಯ ಪ್ರಸಾರವಾಗುವ ಕಾರ್ಯಕ್ರಮದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದೂರವಾಣಿ, ಎಸ್ಸೆಮ್ಮೆಸ್ ಹಾಗೂ ಈ-ಮೇಲ್ ಮೂಲಕ ತಿಳಿಸುತ್ತಾರೆ ಇದೆಲ್ಲವೂ ಸಾರಂಗ ಅವರಿಗೆ ಬಹಳ ಇಷ್ಟವಾಗಿದೆ ಎನ್ನೋದಕ್ಕೆ ಸಾಕ್ಷಿ ಎನ್ನುತ್ತಾರೆ ಡಾ.ರಿಚರ್ಡ್ ರೇಗೊ.
ಟೋಟಲಿ ಡಿಫರೆಂಟ್ ಕಾರ್ಯಕ್ರಮಗಳು :ಸಾರಂಗ ಈಗಾಗಲೇ ಪ್ರತಿದಿನ ಕೊಂಕಣಿ, ತುಳು, ಕನ್ನಡ, ಇಂಗ್ಲೀಷ್ ಕಾರ್ಯಕ್ರಮಗಳ ಜತೆಗೆ ವಾರಕ್ಕೊಂದರಂತೆ ಮಳಯಾಳಂ ಹಾಗೂ ಬ್ಯಾರಿ( ಕುಡ್ಲದ ಮುಸ್ಲಿಂ ಭಾಷೆ) ಹಾಗೂ ತಿಂಗಳಿಗೆ ಒಂದರಂತೆ ಪಂಜಾಬಿ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಪ್ರತಿದಿನ ೧೪ ಗಂಟೆ ಸಮುದಾಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಸಾರಂಗ ಸಮುದಾಯ ವಾಹಿನಿಗಳಲ್ಲಿಯೇ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ.
‘೨೮ ಜೂ. ೨೦೦೯ರಲ್ಲಿ ಬೆಳಗ್ಗೆ ೬.೩೦ ರಿಂದ ಸಂಜೆ ೮.೩೦ರವರೆಗೆ ನಾಲ್ಕು ಭಾಷೆಗಳಲ್ಲಿ ೧೪ ಗಂಟೆಗಳ ನಿರಂತರ ಮ್ಯಾರಥಾನ್ ಆರ್ಜೆ ಗಿರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ೧೫ ಆ. ೨೦೧೦ರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸತತ ೧೪ ಗಂಟೆಗಳ ಕಾಲ ರೇಡಿಯೋ ಜಾಕಿ (ನೇರ ಪ್ರಸಾರ) ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದು ಸಾರಂಗದ ಮೈಲಿಗಲ್ಲಿನಲ್ಲಿ ಒಂದಾಗಿ ನಿಂತಿದೆ. ಸಮುದಾಯದ ಆರೋಗ್ಯದ ಕುರಿತು ಆರೋಗ್ಯ ಸ್ಪರ್ಶ ಎನ್ನುವ ಕಾರ್ಯಕ್ರಮದ ಜತೆಗೆ ಫೋನ್- ಇನ್ ಕಾರ್ಯಕ್ರಮ, ಮಾಧ್ಯಮ ಹರಾಟೆ ಕಾರ್ಯಕ್ರಮಗಳು ಅತೀ ಹೆಚ್ಚಿನ ಕೇಳುಗರನ್ನು ಪಡೆದುಕೊಂಡಿದೆ ’ ಎಂದು ನಿರ್ದೇಶಕ ಡಾ. ರಿಚರ್ಡ್ ರೇಗೊ ಹೇಳುತ್ತಾರೆ.
ಕರಾವಳಿಯಲ್ಲಿ ಐದಾರು ಧರ್ಮ, ಭಾಷೆ, ಸಂಸ್ಕೃತಿಯ ಮಂದಿ ಬದುಕುತ್ತಿದ್ದಾರೆ. ಈ ಎಲ್ಲ ಮಂದಿಯನ್ನು ಒಂದು ಎಂಬ ಸಂಕೇತ ರೂಪವಾಗಿ ‘ಸಾರಂಗ’ ಎಂಬ ಹೆಸರನ್ನು ಸೂಚಿಸಲಾಗಿದೆ. ‘ಸಾರಂಗ’ ಎಂದರೆ ಹಲವು ಬಣ್ಣಗಳು ಎಂಬ ಅರ್ಥ ನೀಡುತ್ತದೆ. ವಿವಿಧ ಕಾರ್ಯಕ್ರಮಗಳು ಈ ‘ಸಾರಂಗ’ಕ್ಕೆ ಮತ್ತಷ್ಟೂ ಬಲ ನೀಡಿದೆ. ಟೋಟಲಿ ಸಮುದಾಯ ವಾಹಿನಿಯೊಂದು ನಾನಾ ಕಾರಣಗಳಿಗೆ ಸುದ್ದಿಯಾಗಿರೋದು ಒಳ್ಳೆಯ ವಿಚಾರ ಅಲ್ವಾ..?
..............
ಹಲೋ ರೇಡಿಯೋ ಕೇಳಿ.....
* ಇಗ್ನೋ(ಇಂದಿರಾ ಗಾಂ ವಿವಿ) ಜ್ಞಾನ ವಾಣಿ (ಗ್ಯಾನ್ ವಾಣಿ) ಶಿಕ್ಷಣ ರೇಡಿಯೋ ವಾಹಿನಿಯನ್ನು ಆರಂಭ ಮಾಡಿತು.
* ೨೦೦೪ ಫೆ.೧ರಂದು ಅಣ್ಣಾ-ಮದ್ರಾಸ್ ವಿವಿ-ಕ್ಯಾಂಪಸ್ ರೇಡಿಯೋ ೯೦.೮ಎಫ್ಎಂವನ್ನು ಆರಂಭ ಮಾಡಿತು.
* ಕರ್ನಾಟಕದ ಬೂದಿಕೋಟೆಯಲ್ಲಿರುವ ‘ನಮ್ಮ ಧ್ವನಿ’ ರಾಜ್ಯದ ಮೊದಲ ಸಮುದಾಯ ವಾಹಿನಿ.
* ಅತೀ ಹೆಚ್ಚಿನ ಸಮುದಾಯ ವಾಹಿನಿಗಳಿರೋದು ಸಿಲೋನ್, ನೇಪಾಳ, ಇಂಡೋನೇಷ್ಯಾ, ಸ್ಪೇನ್ ದೇಶಗಳಲ್ಲಿ.
*ದೇಶದ ಮೊತ್ತ ಮೊದಲ ಸಮುದಾಯ ವಾಹಿನಿ ಆಂಧ್ರ ಪ್ರದೇಶದ ಒರ್ವಕಾಲ್ನಲ್ಲಿ ಆರಂಭವಾಯಿತು.
* ಮೊತ್ತ ಮೊದಲ ಕಮರ್ಷಿಯಲ್ ರೇಡಿಯೋ ವಾಹಿನಿ ‘ರೇಡಿಯೋ ಸಿಟಿ’ ಬೆಂಗಳೂರಿನಲ್ಲಿ ಆರಂಭವಾಯಿತು.
* ಅವಿಭಜಿತ ದ.ಕ ಜಿಲ್ಲೆಯ ಮೊದಲ ಕಮ್ಯುನಿಟಿ ರೇಡಿಯೋ ಮಣಿಪಾಲದ್ದು. (ಮಣಿಪಾಲ್ ರೇಡಿಯೋ ೯೦.೪ ಎಫ್ಎಂ)

No comments:

Post a Comment