Sunday, May 1, 2011

ಬಾಲಿವುಡ್ನಲ್ಲಿ ‘ಉಪ್ಪಳ ಮೆಹಂದಿ’



ಬಾಲಿವುಡ್ನ ಖ್ಯಾತನಾಮ ನಟಿಮಣಿಗಳು ‘ಉಪ್ಪಳ ಮೆಹಂದಿ’ಗಾಗಿ ಮುಂಬಯಿಯ ಭೇಂಡಿ ಬಜಾರ್ಗೆ ಮೂಗಿ ಬೀಳುತ್ತಾರೆ. ನಟಿ ಐಶ್ವರ್ಯ ರೈ ಬಚ್ಚನ್, ನಿಕಿತಾ, ಕರೀಷ್ಮಾ ಕಪೂರ್, ಸೋನಾಲಿ ಬೇಂದ್ರೆ , ಹೃತಿಕ್ ರೋಷನ್ ಪತ್ನಿ ಸುಸಾನೆ ರೋಷನ್ ಹೀಗೆ ‘ಉಪ್ಪಳ ಮೆಹಂದಿ’ಯನ್ನು ಹಾಕದಿದ್ದಾರೆ ಸಮಾಧಾನವೇ ಇಲ್ಲವಂತೆ ! ಬನ್ನಿ ಏನ್ ವಿಷ್ಯಾ ಅಂತಾ ಕೇಳೋಣ....

‘ಉಪ್ಪಳ ಮೆಹಂದಿ’ ಇದು ಸದ್ದಿಲ್ಲದೇ ಮುಂಬಯಿ ಮಾರುಕಟ್ಟೆಯಲ್ಲಿ ಸುದ್ದಿ ಮಾಡುತ್ತಿದೆ. ಕಾಸರಗೋಡಿನಿಂದ ಬರೋಬರಿ ಹದಿನೈದು ಕಿ.ಮೀ ದೂರದಲ್ಲಿರುವ ‘ಉಪ್ಪಳ ’ಎಂಬ ಪುಟ್ಟ ಊರಿನ ಮುದ್ರೆ ಬಿದ್ದಾರೆ ಸಾಕು. ಮೆಹಂದಿಗೆ ಎಲ್ಲಿಲ್ಲದ ಬೇಡಿಕೆ ಬಂದು ಬಿಡುತ್ತದೆ. ಬಾಲಿವುಡ್ನ ಖ್ಯಾತನಾಮ ನಟಿಮಣಿಗಳು ‘ಉಪ್ಪಳ ಮೆಹಂದಿ’ಗಾಗಿ ಯಾರಿಗೂ ಹೇಳದೇ ಮುಂಬಯಿಯ ಭೇಂಡಿ ಬಜಾರ್ಗೆ ಮೂಗಿ ಬೀಳುತ್ತಾರೆ. ನಟಿ ಐಶ್ವರ್ಯ ರೈ ಬಚ್ಚನ್, ಕಾಜೋಲ್, ಕರೀಷ್ಮಾ ಕಪೂರ್, ಸೋನಾಲಿ ಬೇಂದ್ರೆ , ಹೃತಿಕ್ ರೋಷನ್ ಪತ್ನಿ ಸುಸಾನೆ ರೋಷನ್ ಹೀಗೆ ‘ಉಪ್ಪಳ ಮೆಹಂದಿ’ಯನ್ನು ಹಾಕದಿದ್ದಾರೆ ಸಮಾಧಾನವೇ ಇಲ್ಲ ! ಅದರಲ್ಲೂ ಮುಂಬಯಿಯ ಮಾರುವಾಡಿಗಳು, ಗುಜರಾತಿ ವ್ಯಾಪಾರಿಗಳು ಉಪ್ಪಳ ಮೆಹಂದಿಯನ್ನು ಹುಡುಕಿಕೊಂಡು ಬರುತ್ತಾರೆ. ಮೆಹಂದಿಗೆ ಹೇಳಿದ ರೇಟನ್ನು ಯಾವುದೇ ಚುಕ್ಕಾಸಿ ಇಲ್ಲದೇ ನೇರವಾಗಿ ಮುಂಬಯಿಗೆ ಸಾಗಿಸುತ್ತಾರೆ ಎಂದರೆ ಅದೊಂದು ಸಿಂಪಲ್ ಮಾತಲ್ಲ !
ಕಾಸರಗೋಡು ಜಿಲ್ಲೆಯ ಉಪ್ಪಳ ಮೆಹಂದಿ ತಯಾರಿಕೆಗೆ ಬಹಳಷ್ಟು ಪ್ರಸಿದ್ಧಿ. ಇನ್ನೂರರಿಂದ ಮೂನ್ನೂರು ಕುಟುಂಬಗಳು ಈ ಮೆಹಂದಿ ತಯಾರಿಕೆ ಕೆಲಸದಲ್ಲಿ ಯಾವಾಗಲೂ ಬ್ಯುಸಿ. ಇದೇ ಅವರಿಗೆ ವೃತ್ತಿ ಪ್ಲಸ್ ಪ್ರವೃತ್ತಿಯಾಗಿ ಬೆಳೆದಿದೆ. ವಿಭಿನ್ನ ಸಂಸ್ಕೃತಿಗಳ ಸಂಗಮ ಭೂಮಿಯಾದ ಉಪ್ಪಳದಲ್ಲಿ ಹನಫೀ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಇಲ್ಲಿ ತಯಾರಾಗುವ ಮೆಹಂದಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ. ಹೆಚ್ಚಿನ ಕ್ಷಣಾರ್ಧದಲ್ಲಿ ಕೆಂಪನೆಯ ರಂಗೇರುವುದೇ ಇದರ ವೈಶಿಷ್ಟ್ಯ. ಇದಕ್ಕಾಗಿಯೇ ಇಲ್ಲಿನ ಮೆಹಂದಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ನೈಸರ್ಗಿಕ ವಸ್ತುಗಳನ್ನು ಜಾಸ್ತಿಯಾಗಿ ಬಳಕೆ ಮಾಡುವುದರಿಂದ ರಾಸಾಯನಿಕ ವಸ್ತುಗಳಿಗೆ ಮೆಹಂದಿಯಲ್ಲಿ ಜಾಗವಿಲ್ಲ. ನಾನಾ ಮಾದರಿಯ ಅತ್ಯಾಕರ್ಷಕ ಟ್ಯೂಬ್ಗಳಲ್ಲಿ ತುಂಬಿರಿಸಲಾಗುವ ಮೆಹಂದಿ ವಿಭಿನ್ನ ಹೆಸರುಗಳಲ್ಲಿ ಮಾರುಕಟ್ಟೆ ಪ್ರವೇಶಿಸುತ್ತದೆ.
ಅದರಲ್ಲೂ ‘ಉಪ್ಪಳ ಮೆಹಂದಿ’ ಎನ್ನುವ ಲೋಗೋ ಇಲ್ಲದೇ ಹೋದರೆ ಮಾರುಕಟ್ಟೆಯಲ್ಲಿ ಮೆಹಂದಿ ತನ್ನ ಕಾರುಬಾರು ನಡೆಸುವುದಿಲ್ಲ. ಇದೇ ಕಾರಣದಿಂದ ಮೆಹಂದಿಯನ್ನು ಉಪ್ಪಳದ ಅದೆಷ್ಟೋ ಹೆಂಗಸರು ಗುಡಿ ಕೈಗಾರಿಕೆಯನ್ನಾಗಿಸಿಕೊಂಡಿದ್ದಾರೆ. ಮೆಹಂದಿ ತಯಾರಿಸುವುದೇ ಒಂದು ಆಕರ್ಷಕ ಕಲೆ. ಮೆಹಂದಿ ಎಲೆಯನ್ನು ಒಣಗಿಸಿ ಪುಡಿ ಮಾಡುವುದು, ಅದಕ್ಕೆ ವಿಭಿನ್ನ ಸಾಮಗ್ರಿಗಳನ್ನು ಮಿಶ್ರಣ ಮಾಡುವುದು, ಆಕರ್ಷಕ ಪ್ಲಾಸ್ಟಿಕ್, ಪೇಪರ್ಗಳಿಂದ ಕೋನ್ (ಟ್ಯೂಬ್) ತಯಾರಿಸುವುದು, ಫಿಲ್ಲಿಂಗ್ ಯಂತ್ರದ ಮೂಲಕ ಟ್ಯೂಬ್ಗಳಿಗೆ ಮೆಹಂದಿ ತುಂಬಿಸುವುದು, ಬಳಿಕ ಅದಕ್ಕೆ ಆಕರ್ಷಕ ಸ್ಟಿಕ್ಕರ್ ಅಂಟಿಸುವುದು... ಹೀಗೆ ಸಾಗುತ್ತದೆ ಮೆಹಂದಿ ತಯಾರಿಯ ಪ್ರಕ್ರಿಯೆ.
ಉಗುರಿಗೆ ರಂಗೇರಿಸಲು ಇಲ್ಲಿ ಬೇರೆಯೇ ಗುಣಮಟ್ಟದ ಮೆಹಂದಿ ತಯಾರಾಗುತ್ತವೆ. ಆಡುಭಾಷೆಯಲ್ಲಿ ‘ನೈಲ್ ಮೆಹಂದಿ’ ಎಂದು ಕರೆಯಲ್ಪಡುವ ಈ ಮೆಹಂದಿಯ ರೇಟಂತೂ ಕೊಂಚ ಜಾಸ್ತಿ. ಮೆಹಂದಿ ಪುಡಿಯನ್ನು ಕುದಿಸಿದ ಬೆಲ್ಲದ ನೀರಿನ ಜತೆ ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಸಣ್ಣಸಣ್ಣ ಟ್ಯೂಬ್ಗಳಲ್ಲಿ ಇದು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಪ್ರತಿನಿತ್ಯ ಸಾವಿರಾರು ಮೆಹಂದಿ ಟ್ಯೂಬ್ಗಳು ಇಲ್ಲಿನ ಮನೆಗಳಲ್ಲಿ ಸಿದ್ಧವಾಗುತ್ತವೆ. ಮದುವಣಗಿತ್ತಿಯರಿಗೆ ಗೋರಂಟಿ ಹಚ್ಚುವ ಮಂದಿಯೂ ಇಲ್ಲಿದ್ದಾರೆ. ಆಕರ್ಷಕ ಮೊಘಲ್ ಡಿಸೈನ್, ಅರಬ್ ಡಿಸೈನ್, ಇಂಡಿಯನ್ ಡಿಸೈನ್ಗಳಲ್ಲಿ ಮೆಹಂದಿ ಚಿತ್ತಾರ ಬಿಡಿಸುವ ಲಲನೆಯರನ್ನು ಇಲ್ಲಿ ಕಾಣಬಹುದು. ಹಲವೆಡೆ ಮೆಹಂದಿ ಡಿಸೈನ್ ತರಗತಿಗಳೂ ಇವೆ.
ಮೆಹಂದಿಯ ಚಿತ್ತಾರ ಬಿಡಿಸುವುದೂ ಒಂದು ಕಲೆ. ಬಾಲೆಯರು ರಜಾ ಸಮಯಗಳಲ್ಲಿ ಮೆಹಂದಿ ಚಿತ್ತಾರವನ್ನು ಕಲಿಯುತ್ತಾರೆ. ಮಂಗಳೂರು, ಉಡುಪಿ, ಕಾಸರಗೋಡಿನೆಲ್ಲೆಡೆಯೂ ವಿವಾಹ ಮತ್ತಿತರ ಶುಭ ಸಂದರ್ಭಗಳಲ್ಲಿ ಜನ ಮೆಹಂದಿ ಡಿಸೈನರ್ಗಳ ಮೊರೆ ಹೋಗುವುದು ಸಹಜವೇ. ಉಪ್ಪಳದಲ್ಲಿ ಬಹುತೇಕ ಹೆಂಗಳೆಯರು ಮೆಹಂದಿ ಸ್ಪೆಶಲಿಸ್ಟ್ಗಳಾಗಿದ್ದಾರೆ. ಉಪ್ಪಳ ಮೆಹಂದಿಯಿಂದಾಗಿ ಬೀಡಿ ಉದ್ಯಮವನ್ನು ಕೈ ಬಿಟ್ಟಿರುವ ಮಹಿಳೆಯರು ಮೆಹಂದಿಯನ್ನೇ ಲಾಭದಾಯಕವಾದ ಗುಡಿ ಕೈಗಾರಿಕೆಯಾಗಿ ಪರಿವರ್ತಿಸಿದ್ದಾರೆ. ಮಿತ ಬಂಡವಾಳದಲ್ಲಿ ಗರಿಷ್ಠ ಲಾಭ ಗಿಟ್ಟಿಸಬಲ್ಲ ಮೆಹಂದಿ ಉದ್ಯಮ ಮಹಿಳೆಯರ ಪಾಲಿಗೆ ವರದಾನವೂ ಆಗಿದೆ.

ಚಿತ್ರಗಳು: ಹರ್ಷದ್ ವರ್ಕಾಡಿ

No comments:

Post a Comment