* ಸ್ಟೀವನ್ ರೇಗೊ, ದಾರಂದಕುಕ್ಕು
ಒಂದೆಡೆ ಕೋಸ್ಟಲ್‌ವುಡ್ ಸಿನಿಮಾ ನಗರಿ ಗರಿ ಬಿಚ್ಚಿಕೊಳ್ಳುತ್ತಿದ್ದಂತೆ ಮತ್ತೊಂದು ಕಡೆ ಕರಾವಳಿ ಪ್ರವಾಸಿ ತಾಣಗಳು ಇತರ ಭಾಷೆಗಳ ಸಿನಿಮಾ ಲೋಕದ ಮಂದಿ ಕಣ್ಣು ಹಾಕಿ ಕೂತಿದ್ದಾರೆ ಎನ್ನುವ ಮಾಹಿತಿ ಕುಡ್ಲದಲ್ಲಿ ಕಾಣ ಸಿಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕನ್ನಡದ ಸಿನಿಮಾ ಮಂದಿಯ ಜತೆಗೆ ಮಲಯಾಳಂ ಸಿನಿಮಾ ನಿರ್ದೇಶಕರು ಕೂಡ ಕರಾವಳಿಯ ಪ್ರವಾಸಿ ತಾಣಗಳು ಮೆಚ್ಚುಗೆಯಾಗುತ್ತಿದೆ.
ಕಳೆದ ಒಂದು ವಾರದಿಂದ ಮಲಯಾಳಂ ನಟ ಮೋಹನ್ ಲಾಲ್ ತನ್ನ ಚಿತ್ರವೊಂದಕ್ಕೆ ಕರಾವಳಿಯ ಪ್ರವಾಸಿ ತಾಣಗಳಲ್ಲಿ ಬೆವರು ಇಳಿಸಿಕೊಳ್ಳುತ್ತಿದ್ದಾರೆ. ಕೇರಳದ ಬಾಣಸಿಗನ ಕತೆಯನ್ನು ಆಧರಿಸಿಕೊಂಡು ಬರುತ್ತಿರುವ ‘ರಸಂ’ ಚಿತ್ರಕ್ಕಾಗಿ ನಿರ್ದೇಶಕ ರಾಜೀವ್ ನಾಥ್ ಜತೆಗೆ ಮೋಹನ್ ಲಾಲ್ ಕರಾವಳಿಯಲ್ಲಿ ಓಡಾಡುತ್ತಿದ್ದಾರೆ. ಮತ್ತೊಂದೆಡೆಯಲ್ಲಿ ಮಮ್ಮುಟ್ಟಿ ಮಲಯಾಳಂನಲ್ಲಿ ನಿರ್ಮಾಣವಾಗುತ್ತಿರುವ ‘ ಮಂಗ್ಲೀಸ್’ ಚಿತ್ರಕ್ಕೆ ಕರಾವಳಿಯ ತಾಣವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

‘ಮಂಗ್ಲೀಸ್’ ಚಿತ್ರದಲ್ಲಿ ನಟ ಮಮ್ಮುಟ್ಟಿ ಮೀನುಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಚಿತ್ರತಂಡ ಕರಾವಳಿಯ ಮೀನುಗಾರಿಕೆ ಪ್ರದೇಶಗಳಲ್ಲಿ ಕ್ಯಾಮೆರಾ ಹೊಂದಿಸಿಕೊಳ್ಳಲು ವರ್ಕ್ ಔಟ್ ಮಾಡಿಕೊಳ್ಳುತ್ತಿದೆ. ‘ಮಂಗ್ಲೀಸ್’ ಚಿತ್ರವನ್ನು ಮಲಯಾಳಂನ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ಸಲಾಂ ಬಾಪು ಮಾಡುತ್ತಿದ್ದಾರೆ. ಕರಾವಳಿಯ ಮೀನುಗಾರಿಕೆ ಹಾಗೂ ಬೀಚ್‌ಗಳಲ್ಲಿ ಚಿತ್ರದ ಬಹುಭಾಗ ಚಿತ್ರೀಕರಣ ನಡೆಯಲಿದೆ.
ಇದರ ಜತೆಯಲ್ಲಿ ಕಳೆದ ವರ್ಷ ಹಿಂದಿಯಲ್ಲಿ ಬಂದ ‘ಡೇವಿಡ್’ ಚಿತ್ರದ ಬಹುಭಾಗ ಕರಾವಳಿಯಲ್ಲಿ ಚಿತ್ರೀಕರಣವಾಗಿತ್ತು. ಚಿತ್ರದ ನಾಯಕ ನಟ ಚಿಯನ್ ವಿಕ್ರಂ ಹಾಗೂ ಬಾಲಿವುಡ್ ನಟಿ ತಬು ಕರಾವಳಿ ತೀರದಲ್ಲಿ ಹದಿನೈದು ದಿನಗಳ ಕಾಲ ತಂಗಿದ್ದರು. ಕನ್ನಡದ ೧೫ ಚಿತ್ರಗಳಲ್ಲಿ ೨ರಿಂದ ೩ ಚಿತ್ರಗಳು ಕರಾವಳಿಯ ಪ್ರವಾಸಿ ತಾಣಗಳನ್ನೇ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ.
ಕರಾವಳಿ ಪ್ರವಾಸಿ ತಾಣ ಯಾಕೆ ಇಷ್ಟ:

ಕರಾವಳಿಯಲ್ಲಿರುವ ಪ್ರವಾಸಿ ತಾಣಗಳು ಸಿನಿಮಾ ಮಂದಿಗೆ ಬೇಕಾದ ರೀತಿಯಲ್ಲಿ ಸಿಗುತ್ತದೆ. ಚಿತ್ರೀಕರಣಕ್ಕೆ ಜಾಸ್ತಿ ಒದ್ದಾಟ ನಡೆಸುವ ಅನಿವಾರ್ಯತೆ ಇರೋದಿಲ್ಲ. ಎಲ್ಲವೂ ರೆಡಿಮೇಡ್ ಆಗಿ ಕರಾವಳಿಯಲ್ಲಿ ಸಿಗುತ್ತದೆ ಎನ್ನುವುದು ‘ಚೆಲ್ಲಾಪಿಳ್ಳಿ’ ಚಿತ್ರದ ನಿರ್ದೇಶಕ ಸಾಯಿಕೃಷ್ಣ ಹೇಳುವ ಮಾತು.
ಅವರು ಈ ಹಿಂದೆ ‘ಚೆಲ್ಲಾಪಿಳ್ಳಿ’ಯ ಮುಕ್ಕಾಲು ಭಾಗವನ್ನು ಕರಾವಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿದ್ದರು. ಕರಾವಳಿಯ ಬಹುಮುಖ್ಯ ರಂಗಭೂಮಿ ಕಲಾವಿದರನ್ನೇ ಬಳಸಿಕೊಂಡು ಚಿತ್ರ ನಿರ್ದೇಶನ ಮಾಡಿ ಗೆದ್ದು ಬಂದಿದ್ದರು.
‘ಕರಾವಳಿ ಪ್ರವಾಸಿ ತಾಣಗಳು ಎಲ್ಲರಿಗೂ ಇಷ್ಟವಾಗುತ್ತದೆ. ಕಡಿಮೆ ಬಜೆಟ್‌ನಲ್ಲಿ ಚಿತ್ರ ಮಾಡಬೇಕಾದರೆ ಕರಾವಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಗಾಟ, ವಸತಿ, ಚಿತ್ರೀಕರಣಕ್ಕೆ ಬೇಕಾದ ವಸ್ತುಗಳು ಶೀಘ್ರದಲ್ಲಿ ಲಭ್ಯವಾಗುವ ತಾಣ ಎಂದೇ ಪರಿಗಣಿಸಬಹುದು ಎನ್ನುತ್ತಾರೆ ಖ್ಯಾತ ಕ್ಯಾಮೆರಾಮನ್ ರಾಮದಾಸ್ ಸಸಿಹಿತ್ಲು ಅವರು. ಈಗಾಗಲೇ ಐವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ದುಡಿದಿರುವ ರಾಮದಾಸ್ ತಮ್ಮಲ್ಲಿಗೆ ಬರುವ ಚಿತ್ರ ನಿರ್ದೇಶಕರಿಗೆ ಕರಾವಳಿಯ ಪ್ರವಾಸಿ ತಾಣಗಳನ್ನೇ ಚಿತ್ರಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಈಗಾಗಲೇ ಕೋಸ್ಟಲ್‌ವುಡ್‌ನಲ್ಲಿ ನಿರ್ಮಾಣವಾಗುತ್ತಿರುವ ೪೦ಕ್ಕೂ ಅಧಿಕ ಚಿತ್ರಗಳು ಕರಾವಳಿಯ ನಾನಾ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣವಾಗುತ್ತಿದೆ. ಇದು ಕರಾವಳಿಯ ಗತ್ತನ್ನು ಎತ್ತಿ ಹಿಡಿಯುತ್ತಿದೆ.
No comments:
Post a Comment