Wednesday, February 26, 2014

೫೦ ಸಾವಿರ ಪದಗಳ ತ್ರಿಭಾಷಾ ಶಬ್ದಕೋಶ ಬಂತು !

* ಸ್ಟೀವನ್ ರೇಗೊ, ದಾರಂದಕುಕ್ಕು ಕೊಂಕಣಿ ಭಾಷಾ ಲೋಕದಲ್ಲಿ ಇದೊಂದು ವಿಶಿಷ್ಟ ಪ್ರಯೋಗ. ಇಂಗ್ಲೀಷ್-ಕನ್ನಡ-ಕೊಂಕಣಿ ಭಾಷಾ ಸಂವಹನ ಸಂಪರ್ಕದಲ್ಲಿ ದೂರಗಾಮಿ ಕ್ರಾಂತಿಯ ನಿರೀಕ್ಷೆ. ಮೂರು ಭಾಷೆಗಳ ಶಬ್ದಕೋಶವೊಂದು ಸಿದ್ಧವಾಗಿದೆ. ಫೆ.೨೬ರಂದು ಮಂಗಳೂರಿನ ಶಕ್ತಿನಗರದ ಕಲಾಂಗಣ್‌ನಲ್ಲಿ ಇಂಗ್ಲೀಷ್-ಕನ್ನಡ-ಕೊಂಕಣಿ ಭಾಷೆಯ ಶಬ್ದಕೋಶವೊಂದು ಬಿಡುಗಡೆಯ ಭಾಗ್ಯ ಕಾಣಲಿದೆ. ನಾಡಿನ ಖ್ಯಾತ ವಿದ್ವಾಂಸ ಹಾಗೂ ಪ್ರವಚನಕಾರ ಫಾ. ಬೇಸಿಲ್ ವಾಸ್ ಹಾಗೂ ಪ್ರಾಧ್ಯಾಪಕ ಸ್ಟೀವನ್ ಕ್ವಾಡ್ರಸ್ ಪೆರ‍್ಮುದೆ ಕಳೆದ ಹಲವು ವರ್ಷಗಳಿಂದ ಸಿದ್ದಪಡಿಸುತ್ತಿದ್ದ ಈ ಅರ್ಥಕೋಶ ಸುಮಾರು ೫೦ ಸಾವಿರ ಇಂಗ್ಲೀಷ್ ಶಬ್ದಗಳಿಗೆ ಕನ್ನಡ ಹಾಗೂ ಕೊಂಕಣಿಯಲ್ಲಿ ಹಲವಾರು ಸಮಾನಾರ್ಥಕ ಹಾಗೂ ಅರ್ಥಸಾಮ್ಯ ಪದಗಳನ್ನು ನೀಡಲಿದೆ. ಸುಮಾರು ೧೫೦೦ ಪುಟಗಳಲ್ಲಿ ಈ ಪುಸ್ತಕ ಬರಲಿದೆ. ಕನ್ನಡ ಹಾಗೂ ಕೊಂಕಣಿ ಭಾಷೆಗಳಲ್ಲಿ ದೊಡ್ಡ ಮಟ್ಟಿನ ಕೊಡುಕೊಳು ನಡೆದು ಬಂದಿಲ್ಲ. ಇದಕ್ಕೆ ಕೊಂಕಣಿ ಹಾಗೂ ಕನ್ನಡ ಭಾಷೆಗಳೆರಡನ್ನು ಏಕ ಕಾಲದಲ್ಲಿ ತಿಳಿಯಲು ಪೂರಕವಾಗುವ ಅರ್ಥಕೋಶ ಇನ್ನೂ ಬಾರದಿರುವುದು ಒಂದು ಕಾರಣವಾಗಿರಬಹುದು ಎನ್ನುವುದು ಶಬ್ದಕೋಶದ ರೂವಾರಿ ಪ್ರೊ. ಸ್ಟೀವನ್ ಕ್ವಾಡ್ರಸ್ ಅವರ ಮಾತು.
ಕೊಂಕಣಿಯಲ್ಲಿ ಶಬ್ದಕೋಶದ ಜರ್ನಿ: ಕನ್ನಡ ಭಾಷೆಯಲ್ಲಿ ಆಧುನಿಕ ಅರ್ಥಕೋಶ ಪರಂಪರೆ ರೆವರೆಂಡ್ ಫರ್ಡಿನಂಡ್ ಕಿಟ್ಟಲರಿಂದ ಆರಂಭವಾಗಿ ದೊಡ್ಡ ಮಟ್ಟಿಗೆ ಬೆಳೆದಿದೆ. ಆದರೆ ಕೊಂಕಣಿಯ ಮಟ್ಟಿಗೆ ಅರ್ಥಕೋಶಗಳು ತೃಪ್ತಿಕರ ಮಟ್ಟಿನಲ್ಲಿ ಬೆಳವಣಿಗೆ ಹೊಂದಿಲ್ಲ. ಕೊಂಕಣಿಯನ್ನು ಕನ್ನಡ, ನಾಗರಿ, ರೋಮಿ, ಮಲಯಾಳಿ ಹಾಗೂ ಅರಬ್ಬಿಕ್ ಲಿಪಿಗಳಲ್ಲಿ ಬರೆಯಲಾಗುತ್ತಿದೆ. ಕನ್ನಡ ಲಿಪಿ ಕೊಂಕಣಿ ಸಾಹಿತ್ಯ ಕಳೆದ ೧೫೦ ವರ್ಷಗಳಿಂದ ದೊಡ್ಡ ಮಟ್ಟಿನಲ್ಲಿ ಬೆಳೆದು ಬಂದಿದೆ. ಗೋವಾದಲ್ಲಿ ಹಲವಾರು ಕೊಂಕಣಿ ಅರ್ಥಕೋಶಗಳು ಬೆಳೆದಿದ್ದರೂ ಕರ್ನಾಟಕದಲ್ಲಿ ಈಗಾಗಲೇ ಮೊ. ಆಂಜೆಲೋ ಮಾಫೆ, ಮೊ. ಸಿಲ್ವೆಸ್ಟರ್ ಮಿನೇಜಸ್, ಆಂತೋನಿ ಸಲ್ಡಾನ್ಹಾ, ಸ್ವಾಮಿ ವಲೇರಿಯನ್ ಫೆರ‍್ನಾಂಡಿಸ್, ಮಾಧವ ಪೈ ಹಾಗೂ ಸ್ಟೀವನ್ ಕ್ವಾಡ್ರಸ್ ಅವರ ಆರು ಕೊಂಕಣಿ ಅರ್ಥಕೋಶಗಳು ಮಾತ್ರ ಪ್ರಕಟಗೊಂಡಿವೆ. ಭರದ ಸಿದ್ಧತೆ: ಮಂಗಳೂರಿನ ಪಥದರ್ಶಿನಿ ಸೇವಾ ಟ್ರಸ್ಟ್ ಒಂದು ನೋಂದಾಯಿತ ಸಾರ್ವಜನಿಕ ಸೇವಾ ಸಂಘಟನೆಯಾಗಿದ್ದು, ಭಾರತ ಸರಕಾರದಿಂದ ಮಾನ್ಯತೆ ಹೊಂದಿದೆ. ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನದ ವ್ಯವಸ್ಥೆ ಮಾಡುವುದು ಇದರ ಮೂಲ ಉದ್ದೇಶವಾಗಿದ್ದು ಈಗಾಗಲೇ ‘ಮಾರ್ಗ’ ಹಾಗೂ ‘ಯಶಸ್ಸ್’ ಎಂಬ ಎರಡು ವೃತ್ತಿ ಮಾರ್ಗದರ್ಶನ ಪುಸ್ತಕಗಳನ್ನು ಈ ಟ್ರಸ್ಟ್‌ನ ವತಿಯಿಂದ ಹೊರಡಿಸಲಾಗುತ್ತಿದೆ. ಇದರ ಅಡಿಯಲ್ಲಿ ಸರಿಸುಮಾರು ೧೪ ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೊಂಕಣಿ ತ್ರಿ ಭಾಷಾ ಶಬ್ದಕೋಶವೊಂದು ಸಿದ್ಧವಾಗಿದೆ. ಕನ್ನಡ ಮಾತೃಭಾಷಿಕರು ಹಾಗೂ ಕರ್ನಾಟಕದ ಕರಾವಳಿಯಲ್ಲಿ ಹಬ್ಬಿರುವ ಕೊಂಕಣಿ ಜನರು ಪರಸ್ಪರ ಕೊಡು-ಕೊಳ್ಳು ಬೆಳೆಸಿಕೊಳ್ಳುವಲ್ಲಿ ಈ ಶಬ್ದಕೋಶ ಮಹತ್ವದ ಪಾತ್ರ ವಹಿಸಲಿದೆ. ಜಾಗತಿಕ ಮಟ್ಟದಲ್ಲಿ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಇದು ದೊಡ್ಡ ಪೂರಕ ಸಾಮಗ್ರಿಯಾಗಲಿದೆ. ...... ಇಂದು ಪಥದರ್ಶಿನಿ ತ್ರಿಭಾಷಾ ಶಬ್ದಕೋಶ ಬಿಡುಗಡೆ ಪಥದರ್ಶಿನಿ ತ್ರಿಭಾಷಾ ಅರ್ಥಕೋಶ ಫೆ.೨೬ರಂದು ಸಂಜೆ ೬-೦೦ ಗಂಟೆಗೆ ಸರಿಯಾಗಿ ಶಕ್ತಿನಗರದಲ್ಲಿನ ಕೊಂಕಣಿ ಸಂಸ್ಕೃತಿ ಮತ್ತು ಸಂಶೋಧನಾ ಕೇಂದ್ರ ಕಲಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಅಲೋಷಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಜೆ. ಆರ್. ಲೋಬೊ, ಕನ್ನಡದ ಖ್ಯಾತ ಭಾಷಾಶಾಸ್ತ್ರಜ್ಞ ಡಾ. ಕೆ ವಿ ನಾರಾಯಣ, ಕನ್ನಡದ ಹಿರಿಯ ಸಾಹಿತಿ ಡಾ.ನಾ. ಡಿಸೋಜ, ಕಥೆಗಾರ್ತಿ ನಾಡೋಜ ಡಾ ಸಾರಾ ಅಬೂಬಕ್ಕರ್ ಹಾಗೂ ಗೋವಾ ವಿಶ್ವವಿದ್ಯಾಲಯದ ಕೊಂಕಣಿ ವಿಭಾಗ ಮುಖ್ಯಸ್ಥರಾದ ಪ್ರೊ. ಪ್ರಿಯಾದರ್ಶಿನಿ ತಾಡ್‌ಕೊಡ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ....... vk front page story on 26.02.2014

No comments:

Post a Comment