Tuesday, February 11, 2014
‘ನಿರೆಲ್’ ಚಿತ್ರಕ್ಕೆ ದುಬಾಯಿ ಮಾರ್ಕೆಟ್ !
* ಸ್ಟೀವನ್ ರೇಗೊ, ದಾರಂದಕುಕ್ಕು
ಕೋಸ್ಟಲ್‌ವುಡ್ ಸಿನಿಮಾ ಲ್ಯಾಂಡ್ ಏಕ್‌ದಂ ಎದ್ದು ಕೂತಿದೆ. ವರ್ಷವಿಡೀ ಚಿತ್ರೀಕರಣ ಮಾಡಿಕೊಂಡು ಚಿತ್ರ ಮಂದಿರಕ್ಕೆ ನುಗ್ಗಲು ರೆಡಿಯಾದ ಹತ್ತಕ್ಕೂ ಅಧಿಕ ಚಿತ್ರಗಳ ಜತೆ ಜತೆಗೆ ಭರ್ಜರಿ ವೆಚ್ಚದಲ್ಲಿ ನಿರ್ಮಾಣವಾದ ‘ನಿರೆಲ್’( ನೆರಳು) ತುಳು ಚಿತ್ರ ಮೊದಲ ಬಾರಿಗೆ ದುಬಾಯಿಯ ಸಿನಿಮಾ ಮಂದಿರದಲ್ಲಿ ಪ್ರದರ್ಶನ ಕಾಣುವ ಯೋಗ್ಯತೆಯನ್ನು ಗಳಿಸಿಕೊಂಡಿದೆ. ಅಂದಹಾಗೆ ನಿರೆಲ್ ಚಿತ್ರ ತನ್ನ ಮೇಕಿಂಗ್‌ಗಾಗಿಯೇ ಈ ಹಿಂದೆ ಬಹಳ ಸುದ್ದಿಯಾಗಿತ್ತು.
ಇಡೀ ಚಿತ್ರವೇ ದುಬಾಯಿಯಲ್ಲಿ ಚಿತ್ರೀಕರಣಗೊಂಡಿದ್ದು ಮಾತ್ರವಲ್ಲ ಅದಕ್ಕೂ ಮುಖ್ಯವಾಗಿ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರಾದ ರಮೇಶ್ ಅರವಿಂದ್ ಕೂಡ ಈ ಚಿತ್ರದಲ್ಲಿ ಪಾತ್ರ ಮಾಡುವ ಮೂಲಕ ತುಳು ಸಿನಿಮಾದಲ್ಲಿ ಕನ್ನಡದ ನಟರ ಆಗಮನಕ್ಕೆ ಮುನ್ನುಡಿ ಬರೆದು ಹಾಕಿದ್ದರು. ಕರಾವಳಿಯಲ್ಲಿ ಬೆಳೆದ ನಟ- ನಟಿಯರನ್ನು ಸೇರಿಸಿಕೊಂಡು ದುಬಾಯಿಯಲ್ಲಿ ಸೇರಿಸಿಕೊಂಡು ಚಿತ್ರ ಮಾಡಿದ್ದು ‘ನಿರೆಲ್’ನ ವಿಶೇಷತೆಗಳಲ್ಲಿ ಒಂದಾಗಿದೆ.
ಕೆಲಸದ ಜತೆಯಲ್ಲಿ ಚಿತ್ರ ಮಾಡಿದರು:
ಕರಾವಳಿಯಲ್ಲಿ ಹುಟ್ಟಿ ಬೆಳೆದ ಯುವಕರು ತಮ್ಮ ಬಿಡುವಿನ ಸಮಯದಲ್ಲಿ ಚಿತ್ರ ಮಾಡುವ ಕನಸ್ಸು ಕಂಡರು. ಬರೀ ಕನಸ್ಸಿನ ಜತೆಯಲ್ಲಿ ದುಬಾಯಿಯಲ್ಲಿ ವಾಸವಾಗಿರುವ ಕರಾವಳಿ ಮೂಲದ ಶೋಧನ್ ಪ್ರಸಾದ್ ಚಿತ್ರ ನಿರ್ಮಾಣ ಮಾಡುವ ಯೋಜನೆಗೆ ಬೆಂಬಲ ಕೊಟ್ಟಾಗ ‘ನಿರೆಲ್’ ಸಿನಿಮಾ ಹುಟ್ಟಿಬಂತು ಎನ್ನುತ್ತದೆ ನಿರೆಲ್ ಚಿತ್ರದ ಹಿಂದಿನ ಕತೆ. ಹೀಗೆ ವಾರವಿಡೀ ದುಡಿದು ಉಳಿದ ವೀಕೇಂಡ್ ದಿನಗಳಲ್ಲಿ ಈ ಯುವಕರು ಸಿನಿಮಾಕ್ಕೆ ಇಳಿದರು. ಅದುವೇ ಈಗ ಸಿನಿಮಾ ಆಗಿ ಮುಂದೆ ನಿಂತಿದೆ,
ಕೋಸ್ಟಲ್‌ವುಡ್ ಸಿನಿಮಾ ಇತಿಹಾಸದಲ್ಲಿಯೇ ನಿರೆಲ್ ಚಿತ್ರ ಅನೇಕ ರೀತಿಯಲ್ಲಿ ದಾಖಲೆಗಳನ್ನು ಒತ್ತಿದೆ. ಮೊದಲ ಅಂತಾರಾಷ್ಟ್ರೀಯ ಮಟ್ಟದ ತುಳು ಚಿತ್ರ ಎನ್ನುವ ಹೆಗ್ಗಳಿಕೆ ಒಂದೆಡೆಯಾದರೆ ಮೊದಲ ಬಾರಿಗೆ ಕನ್ನಡದ ನಟರೊಬ್ಬರನ್ನು ತಂದು ತುಳು ಸಿನಿಮಾಕ್ಕೆ ತಂದು ನಟಿಸುವಂತೆ ಮಾಡಿದ್ದು ಕೂಡ ಒಂದು ದಾಖಲೆ. ಅದರಲ್ಲೂ ನಾನಾ ಭಾಷೆಗಳ ಚಿತ್ರಗಳ ನಡುವೆ ದುಬಾಯಿಯಲ್ಲಿ ಸಿನಿಮಾ ತೆರೆ ಕಾಣುತ್ತಿರುವುದು ಕೂಡ ಒಂದು ದಾಖಲೆಯಾಗಿ ನಿಂತಿದೆ.
ಪ್ರತಿಭಾವಂತ ಹುಡುಗನ ಕೈಚಳಕ:
‘ನಿರೆಲ್’ ಚಿತ್ರ ಎಂದಾಕ್ಷಣ ಚಿತ್ರದ ನಿರ್ದೇಶಕ ರಂಜೀತ್ ಬಜಪೆ ಹೆಸರು ಮೊದಲು ಕಾಣಿಸಿಕೊಳ್ಳುತ್ತದೆ. ಮೂಲತಃ ಮಂಗಳೂರಿನ ಬಜಪೆಯ ಯುವಕನೊಬ್ಬ ದುಬಾಯಿ ಕೇಬಲ್ ಕಂಪನಿಯಲ್ಲಿ ಪ್ಲಾನ್ನಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಹುಟ್ಟಿಕೊಂಡ ಕತೆಯೇ ಈ ನಿರೆಲ್ ಚಿತ್ರಕ್ಕೆ ಷರಾ ಬರೆಯಿತು. ನಿರೆಲ್ ಚಿತ್ರದ ನಿರ್ದೇಶಕ ರಂಜೀತ್ ಬಜಪೆ ಸಿನಿಮಾ ಲ್ಯಾಂಡ್‌ಗೆ ಬಂದ ಕತೆಯನ್ನು ಈ ರೀತಿ ಹೇಳುತ್ತಾರೆ:
ನನ್ನ ತಂದೆಯವರು ಯಕ್ಷಗಾನ ಪ್ರಿಯರಾಗಿದ್ದರು. ಅವರೊಂದಿಗೆ ಆಕಾಶವಾಣಿಯಲ್ಲಿ ಪ್ರತಿ ಬುಧವಾರ ಪ್ರಸಾರವಾಗುವ ಯಕ್ಷಗಾನ ಕೇಳುತ್ತಿದ್ದೆ. ಅಷ್ಟೇ ಅಲ್ಲದೆ ನನ್ನ ಅಣ್ಣ ನಾಟಕದಲ್ಲಿ ಅಭಿನಯ ಮತ್ತು ನಿರ್ದೇಶನ ಮಾಡುತ್ತಿದ್ದರು. ಇವೆಲ್ಲ ನನ್ನಲ್ಲಿ ಕಲೆಯ ಬಗ್ಗೆ ಅಭಿರುಚಿ ಬೆಳೆಸಿತು. ಮೊದಲಿನಿಂದಲೂ ಚಲನ ಚಿತ್ರಗಳ ಬಗ್ಗೆ ಅತೀವ ಆಸಕ್ತಿ ಇತ್ತು. ಆದರೆ ಚಲನ ಚಿತ್ರ ನಿರ್ದೇಶಕನಾಗುವೆ ಎಂದು ಯಾವತ್ತು ಕನಸು ಕಂಡಿರಲಿಲ್ಲ. ಕನ್ನಡ ಚಿತ್ರ ರಂಗದ ಬಗೆ ಅತೀವ ಅಭಿಮಾನ ಇತ್ತು. ಕನ್ನಡದ ಯೋಗರಾಜ್ ಭಟ್, ಪವನ್ ಕುಮಾರ್, ಸೂರಿ ಇವರ ಚಿತ್ರಗಳು ನನಗೆ ಪ್ರೇರಣೆ ನೀಡಿತು.
ದುಬಾಯಿ ಗೆ ಬಂದ ನಂತರ ಇಲ್ಲಿ ಗೆಳೆಯರ ಜೊತೆ ಸೇರಿ ಕನ್ನಡ ಮತ್ತು ತುಳು ವಿಡಿಯೋ ಆಲ್ಬಂ ಮಾಡಲು ಪ್ರಾರಂಭಿಸಿದೆ. ಫೇಸ್ ಬುಕ್ ಮೂಲಕ ಕೆಲವು ಸಮಾನ ಮನಸ್ಕ ಗೆಳೆಯರ ಪರಿಚಯವೂ ಅಯಿತು. ಹೀಗೆ ಚಲನ ಚಿತ್ರ ನಿರ್ದೇಶಕನಾಗ ಬೇಕೆಂಬ ತುಡಿತ ಪ್ರಾರಂಭವಾಯಿತು.
ದುಬಾಯಿಯಲ್ಲಿ ನಮ್ಮ ತುಳುವೆರ್ ಸಂಘಟನೆಯು ‘ತುಳು ಪರ್ಬ’ ಆಯೋಜಿಸಿದ್ದಾಗ, ನನ್ನ ಗೆಳೆಯರಾದ ಸಾನ್ ಪೂಜಾರಿ, ರಜನೀಶ್ ಅಮೀನ್ ಮತ್ತು ಸಚಿನ್ ಪಡೀಲ್ ಸೇರಿ ಒಂದು ಕಿರು ಚಿತ್ರ ಮಾಡಲು ಯೋಚಿಸಿದ್ದೆವು, ಅದಕ್ಕೆ ಶೋಧನ ಪ್ರಸಾದ್ ಇವರ ಬೆಂಬಲವೂ ಇತ್ತು. ಗೆಳೆಯ ಸಾನ್ ಪೂಜಾರಿ ಇವರ ಒತ್ತಾಸೆಯೇ, ಕಿರು ಚಿತ್ರದ ಯೋಜನೆ ಪೂರ್ಣ ಪ್ರಮಾಣದ ಚಲನ ಚಿತ್ರ ಮಾಡಲು ಪ್ರೇರೇಪಿಸಿತು. ಹಾಗೆ ನಿರೆಲ್ ಸಿದ್ಧವಾಯಿತು ಎನ್ನುವುದು ರಂಜೀತ್ ಅವರ ಮಾತು. ಟೋಟಲಿ ತುಳುವಿನಲ್ಲೂ ಮೊದಲ ಬಾರಿಗೆ ಬಿಗ್ ಬಜೆಟ್ ಚಿತ್ರದ ಜತೆಯಲ್ಲಿ ದುಬಾಯಿ ಮಾರುಕಟ್ಟೆಯಲ್ಲೂ ತುಳು ಭಾಷೆಯೊಂದು ಲಗ್ಗೆ ಹಾಕಿದೆ ಎನ್ನುವ ಹೆಮ್ಮೆ ಕೂಡ ಬಗಲಿಗೆ ನಿಂತಿದೆ.
ಕೋಟ್ ಕಾರ್ನರ್
‘ನಿರೆಲ್‌ನ ಫಲಿತಾಂಶದ ಬಗ್ಗೆ ತುಂಬಾ ಆತ್ಮ ವಿಶ್ವಾಸ ಇದೆ. ತುಳುವರು ಗುಣಮಟ್ಟಕ್ಕೆ ಯಾವುತ್ತೂ ಬೆಲೆ ಕೊಡುತ್ತಾರೆ. ಪ್ರಾಮಾಣಿಕರಾಗಿ ಈ ಚಿತ್ರ ಮಾಡಿದ್ದೇವೆ. ಈ ಚಿತ್ರದ ಫಲಿತಾಂಶ ಚಿತ್ರರಂಗದಲ್ಲಿ ಬದಲಾವಣೆಗೆ ನಾಂದಿಯಾಗುತ್ತದೆ ಎಂದು ನಂಬಿಕೆ ಇದೆ’
- ರಂಜೀತ್ ಬಜಪೆ, ನಿರೆಲ್ ಚಿತ್ರದ ನಿರ್ದೇಶಕ.
............
Subscribe to:
Post Comments (Atom)
No comments:
Post a Comment