Tuesday, February 18, 2014
ಕನ್ನಡಕ್ಕೊಬ್ಬ ಬಂದ ಹೊಸ ಹುಡ್ಗ
* ಸ್ಟೀವನ್ ರೇಗೊ, ದಾರಂದಕುಕ್ಕು
ಸ್ಯಾಂಡಲ್‌ವುಡ್ ಸಿನ್ಮಾ ಫೀಲ್ಡ್‌ನಲ್ಲಿ ಬೌಲಿಂಗ್, ಬ್ಯಾಟಿಂಗ್ ಮಾಡಲು ಹೊಸ ಹುಡ್ಗನೊಬ್ಬ ಎಂಟ್ರಿಯಾಗಿದ್ದಾನೆ. ಹೊಸತನ ಬಯಸುವ ಈ ಸಿನಿಮಾ ಬದುಕಿನಲ್ಲಿ ಹುಡುಗ ಬದಲಾವಣೆಯನ್ನು ಹೊತ್ತು ತರುತ್ತಾನೆ ಎನ್ನೋದು ಅವನ ಸುತ್ತಮುತ್ತ ಇರುವವರ ಮಾತು. ಕಾರಣ ಇಷ್ಟೇ ಸ್ಪುರದ್ರೂಪಿ ಹುಡುಗ ಬರೀ ನೋಡಲು ಮಾತ್ರ ಸಖತ್ ಆಗಿಲ್ಲ. ಬದಲಾಗಿ ಸಿಕ್ಸ್ ಪ್ಯಾಕ್ ಎನ್ನುವ ಕಾನ್ಸೆಪ್ಟ್‌ನಲ್ಲೂ ಹುಡುಗ ಮಿಂಚಿದ್ದಾನೆ.
ಅಂದಹಾಗೆ ವಿಜೇಶ್ ಶೆಟ್ಟಿ. ಕಡಲ ತಡಿಯ ಊರು ಪುತ್ತೂರಿನಿಂದ ಹೊರ ಬಂದ ಪ್ರತಿಭೆ. ರಂಗಭೂಮಿಯ ಜತೆಗೆ ವಿಶೇಷ ವ್ಯಾಮೋಹ ಇಟ್ಟುಕೊಂಡಿರುವ ಹುಡುಗ ಅವಕಾಶಕ್ಕಾಗಿ ಬಾಗಿಲು ಬಡಿಯಲು ಆರಂಭಿಸಿದ್ದು ಸ್ಯಾಂಡಲ್‌ವುಡ್ ಸಿನಿಮಾ ಇಂಡಸ್ಟ್ರಿಯನ್ನು ಎನ್ನುವುದು ವಿಶೇಷ. ತುಳುನಾಡಿನಲ್ಲಿ ಅಬ್ಬರದಲ್ಲಿ ಬೆಳೆಯುತ್ತಿರುವ ಕೋಸ್ಟಲ್‌ವುಡ್ ಸಿನಿಮಾಗಳನ್ನು ಬಿಟ್ಟು ಏಕ್‌ದಂ ಸ್ಯಾಂಡಲ್‌ವುಡ್ ಕಡೆ ದೃಷ್ಟಿ ಹಾಕಿದಾಗಲೇ ಹುಡುಗ ಬೆಳೆಯುವ ಲಕ್ಷಣಗಳು ಗೋಚರವಾಗುತ್ತಿದೆ.
ಕೋಸ್ಟಲ್‌ವುಡ್‌ನಲ್ಲಿ ಎರಡು- ಮೂರು ಸಿನಿಮಾಗಳಿಗೆ ನಾಯಕನಾಗಿ ಬುಕ್ ಆಗಿದ್ದ ಹುಡುಗ ವಿಜೇಶ್ ಶೆಟ್ಟಿ ಈಗ ಕನ್ನಡದಲ್ಲಿ ಬರುತ್ತಿರುವ ತ್ರಿಕೋನ ಪ್ರೇಮಕತೆಯ ಹಂದರವಿರುವ ‘ನಾನು ಹೇಮಂತ್ ಅವಳು ಸೇವಂತಿ’ ಚಿತ್ರದ ಲೀಡ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಚಿತ್ರದ ೯೦ ಭಾಗ ಚಿತ್ರೀಕರಣ ಮುಗಿಸಿಕೊಂಡು ಚಿತ್ರಗಳ ಹಾಡುಗಳ ಚಿತ್ರೀಕರಣಕ್ಕಾಗಿ ಕಾಯುತ್ತಿದೆ. ನಿರ್ದೇಶಕ ಸುಧಾಕರ ಬನ್ನಂಜೆಯ ಜತೆಯಲ್ಲಿ ಇತರ ಗೆಳೆಯರು ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ಈ ಚಿತ್ರ ಹೊಸ ಮಾದರಿಯಲ್ಲಿ ಪ್ರೇಮ ಕತೆಯನ್ನು ಹೆಣೆಯಲಾಗಿದೆ ಎನ್ನುವುದು ವಿಜೇಶ್ ಮಾತು.
ತನ್ನ ಪಾತ್ರಕ್ಕೆ ಈ ಚಿತ್ರದಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಅದರಲ್ಲೂ ಇಡೀ ಕತೆಯೇ ನನ್ನ ಪಾತ್ರದ ಮೂಲಕ ಆರಂಭವಾಗುವುದರಿಂದ ಈ ಚಿತ್ರದಿಂದ ಹೆಚ್ಚಿನ ನಿರೀಕ್ಷೆ ಇದೆ. ಮುಖ್ಯವಾಗಿ ಹೊಸಬರ ತಂಡ ಇರುವ ಕಾರಣ ಚಿತ್ರದಲ್ಲಿ ಹೆಚ್ಚಿನ ಲವಲವಿಕೆ ಹಾಗೂ ಕತೆಯಲ್ಲೂ ವಿಭಿನ್ನತೆಯನ್ನು ಹೆಣೆಯಲಾಗಿದೆ ಎನ್ನುವುದು ವಿಜೇಶ್ ಶೆಟ್ಟಿಯ ಮಾತು.
ಫಿಟ್ನೇಸ್ ಟ್ರೈನರ್ ನಟನೆಗೆ ಇಳಿದ ಕತೆ:
ಪುತ್ತೂರಿನಲ್ಲಿ ತನ್ನದೇ ಫಿಟ್ನೇಸ್ ಸೆಂಟರ್ ಇಟ್ಟುಕೊಂಡಿರುವ ವಿಜೇಶ್ ಶೆಟ್ಟಿಗೆ ಬಾಡಿ ಫಿಟ್ನೇಸ್‌ನಲ್ಲಿಯೇ ಆಸಕ್ತಿ ಹೆಚ್ಚು. ಹೆಚ್ಚು ಸಮಯ ಜಿಮ್‌ನಲ್ಲಿಯೇ ಕಳೆಯುವ ವಿಜೇಶ್‌ಗೆ ನಟನೆ ಗೀಳು ಬಂದದ್ದು ಮಾತ್ರ ವಿಶೇಷ. ಫಿಟ್ನೇಸ್ ತನ್ನದೇ ವೃತ್ತಿ ಎಂದುಕೊಂಡು ಬೆಳೆಯುತ್ತಿದ್ದಾಗ ನಟನೆ ಒಂದು -ಶನ್ ರೀತಿಯಲ್ಲಿ ಕಾಣಿಸಿಕೊಂಡಿತು ಎನ್ನುವುದು ವಿಜೇಶ್ ಮಾತು.
ಬೆಂಗಳೂರಿನಲ್ಲಿದ್ದಾಗ ಅಭಿನಯ ತರಂಗದಲ್ಲಿ ನಟನೆಯ ಕುರಿತು ಕೋರ್ಸ್ ಮಾಡಿಕೊಂಡು ಹೊರಬಂದ ಹುಡುಗ ನಂತರ ಮೊಡೆಲಿಂಗ್, ಡ್ರಾಮಾ, ಶಾರ್ಟ್ ಮೂವಿಗಳಲ್ಲಿಯೇ ಕಾಣಿಸಿಕೊಂಡಿದ್ದು ಹೆಚ್ಚು. ನಟನೆಯ ಜತೆಗೆ ಫಿಟ್ನೇಸ್ ಸೆಂಟರ್‌ಗಳನ್ನು ರಾಜ್ಯದ ತುಂಬಾ ತೆರೆಯಬೇಕು ಎನ್ನುವ ಕನಸ್ಸು ಹೊತ್ತುಕೊಂಡಿರುವ ವಿಜೇಶ್ ಶೆಟ್ಟಿಗೆ ನಟನೆಯಲ್ಲೂ ಮುಂದುವರಿಯಬೇಕು ಎನ್ನುವ ಹಂಬಲವಿದೆ. ಟೋಟಲಿ ಬಹಳ ವರ್ಷಗಳ ನಂತರ ಕರಾವಳಿಯ ಹುಡುಗನೊಬ್ಬ ನಾಯಕನಾಗಿ ಸ್ಯಾಂಡಲ್‌ವುಡ್ ಸಿನ್ಮಾ ಫೀಲ್ಡ್‌ಗೆ ಇಳಿದುಬಿಟ್ಟಿದ್ದಾರೆ. ಅವರ ಮುಂದಿನ ಆಟ ಸಿನಿಮಾ ಥಿಯೇಟರ್‌ಗೆ ಬಂದ ನಂತರವೇ ತಿಳಿಯಬೇಕು.
Subscribe to:
Post Comments (Atom)
No comments:
Post a Comment