Wednesday, February 19, 2014
ಆಮೀರ್ ಹೇಳ ಹೊರಟ ಸತ್ಯ
* ಸ್ಟೀವನ್ ರೇಗೊ, ದಾರಂದಕುಕ್ಕು
ಅದೊಂದು ಬೆಟ್ಟದಷ್ಟು ನಿರೀಕ್ಷೆ. ಯಾವುದೋ ಒಂದು ಸಮಸ್ಯೆಗೆ ಆತನಿಂದಲೇ ಪರಿಹಾರ ಸಿಗುತ್ತದೆ ಎನ್ನುವ ಭಾವನೆ. ಎಲ್ಲದರ ಜತೆಗೆ ಬೇಗನೆ ನಿಮ್ಮ ಮುಂದೆ ಹಾಜರಾಗಿ ಬಿಡುತ್ತೇನೆ ಎನ್ನುವ ಧೈರ್ಯದ ಮಾತುಗಳು. ಅಂದಹಾಗೆ ಬಾಲಿವುಡ್ ನಟ ಆಮೀರ್ ಖಾನ್ ಮತ್ತೆ ಬರುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ತೀರಾ ಇತ್ತೀಚೆಗೆ ಧೂಮ್-೩ಯ ಮೂಲಕ ಹಿರಿತೆರೆಯಲ್ಲಿ ಮಿಂಚಿದ ಪರಿಯಲ್ಲೇ ಕಿರಿತೆರೆಯಲ್ಲೂ ಕಮಾಲ್ ಮಾಡುತ್ತಾರೆ ಎನ್ನುವ ಸತ್ಯ ಈಗ ಹೊರ ಬರುತ್ತಿದೆ. ಹೌದು. ಇದು ಆಮೀರ್ ಖಾನ್ ಖಾಸಗಿ ವಾಹಿನಿಯಲ್ಲಿ ನಡೆಸಿಕೊಡಲಿರುವ ‘ಸತ್ಯಮೇವ ಜಯತೇ’ ಕಾರ‍್ಯಕ್ರಮದ ಮಾತು.
ಆಮೀರ್ ಖಾನ್ ಈ ಮೊದಲು ಖಾಸಗಿ ವಾಹಿನಿಯಲ್ಲಿ ನಡೆಸಿಕೊಟ್ಟ ‘ಸತ್ಯಮೇವ ಜಯತೇ’ ಕಿರಿ ತೆರೆಯಲ್ಲಿ ಹೊಸ ಸಂಚಲನ ಮಾಡಿತ್ತು. ಅದಕ್ಕೂ ಮುಖ್ಯವಾಗಿ ನಮ್ಮ- ನಿಮ್ಮ ನಡುವಿನಲ್ಲೇ ಇದ್ದ ಸಮಸ್ಯೆಗಳನ್ನು ಮನಮುಟ್ಟುವಂತೆ ಆಮೀರ್ ನಿರೂಪಣೆ ಮಾಡಿ ಸಮಸ್ಯೆಗಳನ್ನು ಪರಿಹಾರದ ಹಂತಕ್ಕೆ ತಂದು ನಿಲ್ಲಿಸುತ್ತಿದ್ದ ಪರಿಯನ್ನು ನೋಡಿದ ಪ್ರೇಕ್ಷಕ ಮಹಾಶಯ ಕೂಡ ಬೆರಗಾಗಿ ಹೋಗಿದ್ದ ಎನ್ನುವುದು ಬಟಬಯಲಾದ ಸತ್ಯ.
ಸಮಾಜದಲ್ಲಿ ನಡೆಯುತ್ತಿದ್ದ ಭ್ರೂಣಹತ್ಯೆ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಮಕ್ಕಳ ಮೇಲಿನ ಹಿಂ, ಆತ್ಯಾಚಾರ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ತಂದ ಆಮೀರ್ ಈ ಬಾರಿ ಏನೂ ತರುತ್ತಿದ್ದಾರೆ ಎನ್ನುವ ಕುತುಹೂಲ ಪ್ರತಿಯೊಬ್ಬ ಪ್ರೇಕ್ಷಕನ ಮನದಲ್ಲಿ ಮೂಡಿದೆ.
ಮಾರ್ಚ್ ೨ರಿಂದ ಖಾಸಗಿ ವಾಹಿನಿಯಲ್ಲಿ ಮೂಡಿಬರಲಿರುವ ‘ಸತ್ಯಮೇವ ಜಯತೇ’ ಬರೀ ಐದು ಎಪಿಸೋಡುಗಳಲ್ಲಿಯೇ ತನ್ನ ಅಂತಿಮ ಗೀತೆಯನ್ನು ಹಾಡಲಾಗುತ್ತದೆ ಎನ್ನುವುದು ಈಗ ಹೊರಬರುತ್ತಿರುವ ಸತ್ಯ.ಅಂದರೆ ಒಂದು ತಿಂಗಳ ಮಟ್ಟಿಗೆ ಆಮೀರ್ ಖಾನ್ ತನ್ನ ಕಾರ‍್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಂದಹಾಗೆ ೧೩ ಎಪಿಸೋಡುಗಳನ್ನು ಈಗಾಗಲೇ ಸತ್ಯಮೇವ ಜಯತೇ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಮೊದಲ ಸರಣಿಯಲ್ಲಿ ೫ ಎಪಿಸೋಡುಗಳು ಪ್ರಸಾರವಾಗಲಿದೆ. ಉಳಿದ ೮ ಎಪಿಸೋಡುಗಳನ್ನು ನಂತರ ಪ್ರಸಾರ ಮಾಡುವ ಯೋಜನೆ ಇದೆ .
ದೇಶದ ಕಾಳಜಿ ಹೊತ್ತ ಆಮೀರ್:
ಆಮೀರ್ ಖಾನ್ ಈ ಬಾರಿ ಬರೀ ಐದು ಎಪಿಸೋಡು(ಸಂಚಿಕೆ)ಗಳಲ್ಲಿ ಕೊನೆಗೊಳಿಸಲಿರುವ ‘ಸತ್ಯಮೇವ ಜಯತೇ’ಯಲ್ಲಿ ಏನಿದೆ ಎನ್ನುವುದು ಖುದ್ದು ಆಮೀರ್ ‘ಸತ್ಯಮೇವ ಜಯತೇ’ಯ ಜಾಹೀರಾತುಗಳಲ್ಲಿಯೇ ಬಿಚ್ಚಿಟ್ಟಿದ್ದಾರೆ. ಹೌದು. ‘ಜೀನೇ ದೇಶ್ ಕೀ ಫಿಕರ್ ಹೈ’(ಯಾರಿಗೆ ದೇಶದ ಕುರಿತು ಕಾಳಜಿ ಇದೆ) ಎನ್ನುವ ಮೂಲಕ ದೇಶದ ಕುರಿತು ಕಾಳಜಿ ಪಡುವಂತಹ ಸರಣಿಗಳನ್ನೇ ಕೊಡುತ್ತಾರೆ ಎನ್ನೋದು ಕಾರ‍್ಯಕ್ರಮದ ಸಿಕ್ರೇಟ್. ಒಂದೆರಡು ತಿಂಗಳಲ್ಲಿ ಬರುವ ಮಹಾ ಚುನಾವಣೆ, ಭ್ರಷ್ಟಾಚಾರ, ಮತದಾನ, ದೇಶದ ಪ್ರಗತಿ ಹೀಗೆ ಎರಡು ಮೂರು ಕಾನ್ಸೆಪ್ಟ್‌ಗಳನ್ನು ಹೊತ್ತುಕೊಂಡು ಆಮೀರ್ ಸತ್ಯಮೇವ ಜಯತೇಯ ಕಣಕ್ಕೆ ಇಳಿಯಲಿದ್ದಾರೆ ಎನ್ನೋದು ಹೊರಬಂದ ಮಾತು. ಟೋಟಲಿ ಆಮೀರ್ ಖಾನ್ ನಡೆಸುವ ‘ಸತ್ಯಮೇವ ಜಯತೇ’ ನಿಜಕ್ಕೂ ನೋಡಲು ಪ್ರೇಕ್ಷಕ ವರ್ಗವಂತೂ ತುದಿಕಾಲಲ್ಲಿ ನಿಂತಿರೋದು ಗ್ಯಾರಂಟಿಯಾಗಿದೆ.
....
Subscribe to:
Post Comments (Atom)
No comments:
Post a Comment