Tuesday, February 4, 2014

ಕೋಸ್ಟಲ್‌ವುಡ್‌ನಲ್ಲಿ ಮನೋಹರ ಆಟಕ್ಕೆ ಬ್ರೇಕ್

ಸ್ಟೀವನ್ ರೇಗೊ, ದಾರಂದಕುಕ್ಕು ಕೋಸ್ಟಲ್‌ವುಡ್ ಸಿನಿಮಾ ನಗರಿ ಏಕ್‌ದಂ ಕಿಕ್ ಏರಿಸಿಕೊಳ್ಳುತ್ತಿದೆ. ಕಳೆದ ವರ್ಷದ ಕೊನೆಯಲ್ಲಿಯೇ ಸರಿಸುಮಾರು ೪೦ಕ್ಕೂ ಅಧಿಕ ಸಿನಿಮಾಗಳು ನೋಂದಣಿಯಾಗಿತ್ತು.ಈ ಬಾರಿ ಮತ್ತೆ ಹೊಸ ಸಿನಿಮಾಗಳು ನೋಂದಣಿಗಾಗಿ ಕಾದು ಕೂತಿದೆ. ಕೋಸ್ಟಲ್‌ವುಡ್‌ನಲ್ಲಿ ಒಳ್ಳೆಯ ಪೈಪೋಟಿಯ ಜತೆಗೆ ಗುಣ ಮಟ್ಟದ ಚಿತ್ರಗಳು ಬರುವ ಸಾಧ್ಯತೆಗಳು ಈ ಬಾರಿ ದಟ್ಟವಾಗುತ್ತಿದೆ. ಹೊಸ ವರ್ಷದ ಅಂತ್ಯದೊಳಗೆ ತಿಂಗಳಿಗೆ ಒಂದರಂತೆ ತುಳು ಸಿನಿಮಾಗಳು ಥಿಯೇಟರ್‌ನ ಮುಂದೆ ಬರಲು ದೊಂಬಾಲು ಬಿದ್ದಿದೆ. ಇದರ ನಡುವೆ ಕೋಸ್ಟಲ್‌ವುಡ್‌ನಲ್ಲಿ ಮತ್ತೊಂದು ಬಿರುಗಾಳಿಯೊಂದು ಎದ್ದು ಕೂತಿದೆ. ಕನ್ನಡದ ಸಂಗೀತ ನಿರ್ದೇಶಕ ವಿ.ಮನೋಹರ್ ತುಳು ಚಿತ್ರ ‘ಚಾಳಿಪೋಲಿ’ಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇಡೀ ಚಿತ್ರ ತಂಡವೇ ವಿ.ಮನೋಹರ್ ತುಳು ಚಿತ್ರಕ್ಕೆ ಬರುತ್ತಾರೆ ಎನ್ನುವ ಸುದ್ದಿಯನ್ನು ಸುನಾಮಿಯಂತೆ ಎಬ್ಬಿಸಿ ಕೂತಿದ್ದರು. ಚಿತ್ರದ ಕತೆಯಿಂದ ಹಿಡಿದು ಚಿತ್ರ ತಾರಾಗಣ ಎಲ್ಲವನ್ನು ಆಯ್ಕೆ ಮಾಡುವ ವರೆಗೂ ವಿ. ಮನೋಹರ್ ನಿರ್ದೇಶಕರಾಗಿಯೇ ಉಳಿದು ಬಿಟ್ಟಿದ್ದರು. ಯಾಕೋ ‘ಚಾಳಿಪೋಲಿ’ ಚಿತ್ರದ ಚಿತ್ರೀಕರಣ ಆರಂಭ ಮಾಡಬೇಕು ಎನ್ನುವಷ್ಟರಲ್ಲಿ ವಿ.ಮನೋಹರ್ ಅವರ ನಿರ್ದೇಶಕನ ಸ್ಥಾನಕ್ಕೆ ಸಂಕಟ ಬಂದಿದೆ. ಅವರ ಜಾಗಕ್ಕೆ ಈಗ ಹೊಸ ಹೆಸರು ಕೇಳಿ ಬಂದಿದೆ. ‘ಚಾಳಿಪೋಲಿ’ಯ ಕತೆ ಬರೆದವರಲ್ಲಿ ಒಬ್ಬರಾದ ಕಾವೂರಿನ ವೀರೇಂದ್ರ ಶೆಟ್ಟಿ. ಚಿತ್ರದ ಸೂತ್ರಧಾರನಾಗುವ ಚಾನ್ಸ್ ಸಿಕ್ಕಿದೆ ಎನ್ನುವುದು ಚಿತ್ರ ತಂಡದ ಗುಪ್ತ ಮಾಹಿತಿ. ಈ ಹಿಂದೆ ಚಿತ್ರಕ್ಕೆ ನಿರ್ದೇಶಕರಾಗಿ ಆಯ್ಕೆಗೊಂಡಿದ್ದ ವಿ.ಮನೋಹರ್ ಬರೀ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ಹಾಗೂ ಸಂಗೀತ ನಿರ್ದೇಶಕರಾಗಿ ಉಳಿದುಬಿಟ್ಟಿದ್ದಾರೆ. ಕನ್ನಡದ ನಿರ್ದೇಶಕರೊಬ್ಬರು ತುಳು ಸಿನಿಮಾಕ್ಕೆ ಬರುವ ಕ್ಷಣಕ್ಕೆ ಮುಹೂರ್ತ ಕೂಡಿಬಂದಿಲ್ಲ ಎನ್ನುವುದು ಈ ಮೂಲಕ ಸ್ವಷ್ಟವಾಗುತ್ತಿದೆ. ಚಾಳಿಪೋಲಿಯಲ್ಲಿ ಕಿರಿಕ್ ಆಯಿತಾ..? ತುಳು ಸಿನಿಮಾಗಳು ಒಂದರ ಹಿಂದೆ ಒಂದರಂತೆ ನೋಂದಣಿಯಾಗುತ್ತಿದ್ದಾಗ ‘ಚಾಳಿಪೋಲಿ’ ಎನ್ನುವ ಟೈಟಲ್ ಕಾರ್ಡ್ ಏಕ್‌ದಂ ರಿಜಿಸ್ಟ್ರಾರ್ ಆಯಿತು. ಚಿತ್ರದಲ್ಲಿ ಹೊಸ ಕಲಾವಿದರು ಹಾಗೂ ಹೊಸ ಕತೆ ಇಟ್ಟುಕೊಂಡೇ ಸಿನಿಮಾ ಮಾಡಲಾಗುತ್ತಿದೆ ಎಂದೇ ಚಿತ್ರದ ನಿರ್ಮಾಪಕರು ಹೇಳಿಕೊಂಡು ಬಂದಿದ್ದರು. ಅದರಂತೆ ಸಿನಿಮಾದ ಕುರಿತು ಸಹಜವಾಗಿಯೇ ಕೋಸ್ಟಲ್‌ವುಡ್‌ನಲ್ಲಿ ನಿರೀಕ್ಷೆಗಳಿತ್ತು. ಚಿತ್ರಕ್ಕೆ ಖ್ಯಾತನಾಮರನ್ನು ಹುಡುಕಿಕೊಂಡು ತಂದುಕೂರಿಸುವ ಕೆಲಸಗಳು ಭರದಿಂದ ನಡೆಯುತ್ತಾ ಸಾಗುತ್ತಿತ್ತು. ಇದೇ ಸಮಯದಲ್ಲಿ ವಿ. ಮನೋಹರ್ ನಿರ್ದೇಶಕರಾಗಿ ಮಾಡುವ ಕೆಲಸ ನಡೆಯಿತು. ಕನ್ನಡ ಸಂಗೀತ ನಿರ್ದೇಶಕ ವಿ.ಮನೋಹರ್ ಹೇಳುವಂತೆ ‘ ಚಾಳಿಪೋಲಿ ಚಿತ್ರ ತಂಡದ ಜತೆಗೆ ಯಾವುದೇ ಗೊಂದಲಗಳಿಲ್ಲ. ನನಗೆ ಖಾಸಗಿ ವಾಹಿನಿಯೊಂದು ರಿಯಾಲಿಟಿ ಶೋವೊಂದಕ್ಕೆ ಜಡ್ಜ್ ಆಗಿ ಬುಕ್ ಮಾಡಿದ್ದಾರೆ. ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಾನು ಈ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಬೇಕಾಗಿದೆ.ಅದಕ್ಕೂ ಮುಖ್ಯವಾಗಿ ಚಿತ್ರಕ್ಕೆ ನಾನೇ ಸಂಗೀತ ನಿರ್ದೇಶಕ. ಈಗಾಗಲೇ ಹಿನ್ನೆಲೆ ಸಂಗೀತ ನೀಡಿದ್ದೇನೆ. ೫ ಹಾಡುಗಳಿಗೆ ಟ್ಯೂನ್ ಕಳಿಸಿಕೊಟ್ಟಿದ್ದೇನೆ. ತುಳು ಸಿನಿಮಾ ಮಾಡುವಾಗ ಮಂಗಳೂರಿನಲ್ಲೇ ಇರಬೇಕಾಗುತ್ತದೆ. ಚಿತ್ರಕ್ಕೆ ನ್ಯಾಯ ಒದಗಿಸಲು ಆಗುತ್ತಿಲ್ಲ ಎನ್ನುವ ಕಾರಣಕ್ಕೆ ನಾನೇ ನಿರ್ದೇಶಕನ ಸ್ಥಾನದಿಂದ ಕಿತ್ತು ಹಾಕಿ ಎಂದು ನಿರ್ಮಾಪಕರಿಗೆ ಹೇಳಿದ್ದೆ ಅದರಂತೆ ಅವರು ಮಾಡಿದ್ದಾರೆ ಎನ್ನುತ್ತಾರೆ ಅವರು. ಆದರೆ ಮತ್ತೊಂದು ಮೂಲದ ಪ್ರಕಾರ ‘ಚಾಳಿಪೋಲಿ’ಯಲ್ಲಿ ಮನೋಹರ್ ಮೂಲ ಕತೆಯಲ್ಲಿ ಬದಲಾವಣೆ ಮಾಡುವ ಮೂಲಕ ಚಿತ್ರದ ಬಜೆಟ್ ಏರಿಸಿದ್ದಾರೆ ಎನ್ನುವ ಆಧಾರದಲ್ಲಿ ಚಿತ್ರದ ನಿರ್ದೇಶಕನ ಸ್ಥಾನದಿಂದ ವಂಚಿತನಾಗಬೇಕಾಯಿತು ಎನ್ನುವ ಮಾತು ಕೂಡ ಕೋಸ್ಟಲ್‌ವುಡ್ ಗಲ್ಲಿಯಲ್ಲಿ ಜೋರಾಗಿ ಕೇಳಿಸಿಕೊಳ್ಳುತ್ತಿದೆ. ಯಾವುದು ಸತ್ಯ ಯಾವುದು ಮಿಥ್ಯ ಎನ್ನುವ ಪ್ರಶ್ನೆ ಮಾತ್ರ ಬಾಕಿ ಉಳಿದಿದೆ. ತುಳುವಿಗೆ ಬರುತ್ತಾರಾ ಮನೋಹರ್?: ಮೂಲತಃ ಪುತ್ತೂರಿನ ವಿಟ್ಲ ನಿವಾಸಿಯಾದ ವಿ.ಮನೋಹರ್ ಬೆಳೆದದ್ದು ಎಲ್ಲವೂ ಕನ್ನಡದಲ್ಲಿ ಎನ್ನುವುದು ಚಿತ್ರ ರಸಿಕರಿಗೆ ಗೊತ್ತಿರುವ ವಿಚಾರ. ಆದರೆ ತುಳುವಿನ ಚಿತ್ರಗಳಿಗೆ ಹಾಡು ಬರೆದುಕೊಡುವ ಜತೆಗೆ ಸಂಗೀತ ನೀಡುವ ಕೆಲಸವನ್ನು ನಿಯತ್ತಿನಿಂದ ಮಾಡುತ್ತಿರುವ ಮನೋಹರ್ ತುಳು ಚಿತ್ರವನ್ನು ನಿರ್ಮಾಣ, ನಿರ್ದೇಶನ ಮಾಡುವ ಕೆಲಸಕ್ಕೆ ಎಂದಿಗೂ ಕೈ ಹಾಕಿಲ್ಲ. ಈಗ ಬಂದ ಅವಕಾಶವನ್ನು ಕೂಡ ನಯವಾಗಿಯೇ ತಿರಸ್ಕಾರ ಮಾಡಿದ್ದಾರೆ. ಈ ಮೂಲಕ ಮನೋಹರ್ ತುಳು ಸಿನಿಮಾಕ್ಕೆ ಬರುವ ವಿಚಾರ ಸಧ್ಯಕ್ಕಂತೂ ಬ್ರೇಕ್ ಬಿದ್ದಿದೆ.

No comments:

Post a Comment