
ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಚಿತ್ರ ಅ.೧೪ ರಂದು ಬಿಡುಗಡೆಯಾಗುತ್ತಿದೆ. ೩೨ ವರ್ಷಗಳ ನಂತರ ಕೋಸ್ಟಲ್‌ವುಡ್‌ನಲ್ಲಿ ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಬರುತ್ತಿರುವ ಚಿತ್ರ ಇದಾಗಲಿದೆ. ಕರಾವಳಿಯಲ್ಲಿ ‘ಅಸಲ್’ ಚಿತ್ರದ ಸೂಪರ್ ಓಟ.. ಉಜ್ವಾಡು ಚಿತ್ರದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿ ಈಗ ಮತ್ತೆ ಚೇತರಿಕೆ ಕಾಣಿಸಿಕೊಂಡಿದೆ. ವಿಜಯ ಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದ ‘ಒರಿಯರ್ದೊರಿ ಅಸಲ್’ನ ಸೂಪರ್ ಕಲೆಕ್ಷನ್ ಇಂಡಸ್ಟ್ರಿಗೆ ಬೂಸ್ಟ್ ಕೊಟ್ಟಿದೆ. ಕರಾವಳಿಯ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಸಿನ್ಮಾ ಅ.೧೪ರಂದು ಕರಾವಳಿಯ ಥಿಯೇಟರ್‌ಗಳಲ್ಲಿ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಬಹಳ ಕಡಿಮೆ ಟೈಮ್‌ನಲ್ಲಿ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿಕೊಂಡು ಭರ್ಜರಿಯಾಗಿ ತೆರೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎನ್ನೋದು ರಂಗಭೂಮಿ ನಿರ್ದೇಶಕ ಕಾಸರಗೋಡು ಚಿನ್ನಾರ ಮಾತು.
ಅಂದಹಾಗೆ ‘ಉಜ್ವಾಡು’ ಎಂದರೆ ಕೊಂಕಣಿ ಭಾಷೆಯಲ್ಲಿ ‘ಬೆಳಕು’ ಎಂದರ್ಥ. ಕೊಂಕಣಿಯಲ್ಲಿ ಅದರಲ್ಲೂ ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಚಿನ್ನಾ ನಿರ್ದೇಶನದ ‘ಉಜ್ವಾಡು ’ ಮೂರನೇ ಚಿತ್ರ. ಅದು ಕೂಡ ೩೨ ವರ್ಷಗಳ ನಂತರ ಈ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗುತ್ತಿರೋದು ಎನ್ನೋದು ಗಮನಿಸಬೇಕಾದ ವಿಷ್ಯಾ. ಕಾಸರಗೋಡು ಚಿನ್ನಾ ನಿರ್ದೇಶನದಲ್ಲಿ ‘ಉಜ್ವಾಡು’ ಮೂಡಿ ಬರುತ್ತಿರುವುದರಿಂದ ನಿರೀಕ್ಷೆಗಳ ಮೂಟೆ ಜಾಸ್ತಿಯಾಗಿದೆ ಎನ್ನೋದು ಕರಾವಳಿಯಲ್ಲಿ ಓಡಾಡಿಕೊಂಡಿರುವ ಮಾತು.
ಚಿನ್ನಾ ಟಾಕಿಂಗ್:
‘ಉಜ್ವಾಡು’ ಚಿತ್ರದಲ್ಲಿ ಕತೆಯಿಲ್ಲ. ಅರೇ.. ಕತೆ ಇಲ್ಲದ ಚಿತ್ರ ಉಂಟಾ ಮಾರಾಯ್ರೆ ಎಂದರೆ ಚಿನ್ನಾ ಚಿತ್ರದ ಕುರಿತು ಹೇಳುವುದಿಷ್ಟು : ಚಿತ್ರದಲ್ಲಿ ಕತೆ ಇಲ್ಲ ನಿಜ. ಆದರೆ ಅಲ್ಲಿ ಜಿಎಸ್‌ಬಿ ಕೊಂಕಣಿ ಸಮುದಾಯದ ಹೋಳಿ ಹಬ್ಬ, ಜಾತ್ರೋತ್ಸವ, ಚೂಡಿ ಪೂಜೆ, ಜತೆಗೆ ಇಡೀ ಸಮುದಾಯದ ಸಂಸ್ಕೃತಿ, ಸಾಹಿತ್ಯ, ಭಜನ್ , ಬಾಳಿಗರ ಹೋಟೆಲ್, ವೃದ್ಧಾಶ್ರಮ, ಕೂಡು ಕುಟುಂಬ ಎಲ್ಲವೂ ಈ ಚಿತ್ರದಲ್ಲಿ ಅಡಕವಾಗಲಿದೆ. ‘ಚಿತ್ರ ಸಂಪೂರ್ಣವಾಗಿ ಕೊಂಕಣಿ ಸಮುದಾಯವನ್ನು ಕೇಂದ್ರೀಕೃತವಾಗಿ ಮಾಡಿರುವುದರಿಂದ ಚಿತ್ರದ ಬಜೆಟ್ ಅಸುಪಾಸು ೪೦ ಲಕ್ಷ ರೂ. ತಲುಪಿದೆ. ‘ಉಜ್ವಾಡು’ ಚಿತ್ರ ಅಸಲ್ ಚಿತ್ರದಂತೆ ಸೂಪರ್ ಹಿಟ್ ಆಗುತ್ತದೆ ಎನ್ನುವುದಕ್ಕೂ ಮುಖ್ಯವಾಗಿ ಇಲ್ಲಿ ಬರೀ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ’ ಎನ್ನೋದು ಕಾಸರಗೋಡು ಚಿನ್ನಾರ ಮಾತು.
‘ಕಳೆದ ೪೦ ವರ್ಷಗಳ ಸುದೀರ್ಘ ರಂಗಭೂಮಿಯ ಅನುಭವ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಮೊದಲು ಮಾತೃಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಬೇಕು ಎನ್ನೋದು ನನ್ನ ಕನಸ್ಸಾಗಿತ್ತು. ಅದಕ್ಕಾಗಿ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದೇನೆ. ಕೊಂಕಣಿಗೆ ಸೀಮಿತ ಮಾರುಕಟ್ಟೆ ಇದೆ ಎಂಬ ವಿಚಾರ ಗೊತ್ತಿದೆ. ಆದರೂ ಈ ಸೀಮಿತ ಮಾರುಕಟ್ಟೆಯಲ್ಲಿ ಚಿತ್ರ ಓಡಿಸುತ್ತೇನೆ’ ಎನ್ನೋದು ಕಾಸರಗೋಡು ಚಿನ್ನಾ ಅವರ ಮಾತು.
ಚಿತ್ರವನ್ನು ಆರಂಭದಲ್ಲಿ ಕರಾವಳಿಯಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ನಂತರ ಉಳಿದ ಭಾಗಗಳಲ್ಲೂ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ‘ಉಜ್ವಾಡು’ ಚಿತ್ರ ಬರೀ ಒಂದು ಸಮುದಾಯವನ್ನು ಕೇಂದ್ರೀಕೃತವಾಗಿ ಮಾಡಿಲ್ಲ. ಎಲ್ಲ ಸಮುದಾಯದ ಜನರು ಬಂದು ಸಿನ್ಮಾ ನೋಡಬೇಕು. ಅದಕ್ಕಾಗಿ ಎಲ್ಲರಿಗೂ ಸಂದೇಶ ತಲುಪುವಂತೆ ಚಿತ್ರ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಚಿತ್ರದ ಆಡಿಯೋ ಭರ್ಜರಿಯಾಗಿ ಮಾರಾಟವಾಗಿದೆ. ಇನ್ನೂ ಕೂಡ ಆಡಿಯೋಗಾಗಿ ಬೇಡಿಕೆ ಬಂದಿದೆ ಎನ್ನುವುದು ಕಾಸರಗೋಡು ಚಿನ್ನಾರ ಮಾತು.
ಉಜ್ವಾಡು ಹುಡುಕಾಟದಲ್ಲಿ:
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಖ್ಯಾತ ಹಿರಿಯ ನಟಿ ಉಮಾಶ್ರೀ ಕಾಣಿಸಿಕೊಂಡಿದ್ದಾರೆ. ೮೪ರ ಹರೆಯದ ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ, ಗ್ಲಾಮರ್ ನಟಿ ನೀತು ಸೇರಿದಂತೆ ಶಶಿಭೂಷಣ್ ಕಿಣಿ, ಓಂ ಗಣೇಶ್, ಪ್ರಕಾಶ್ ಶೆಣೈ, ಪೂರ್ಣಿಮಾ ಹಾಗೂ ಕರಾವಳಿಯ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಾಕಿದ್ದಾರೆ. ಚಿತ್ರ ಕಾರ್ಕಳ, ಮಂಗಳೂರಿನ ಅಸುಪಾಸು ಚಿತ್ರೀಕರಣವಾಗಿದೆ. ಅತಿಥಿ ಪಾತ್ರದಲ್ಲಿ ಪತ್ರಕರ್ತೆ ಸಂಧ್ಯಾ ಪೈ ಹಾಗೂ ಪ್ರಮೀಳಾ ನೇಸರ್ಗಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಇದಕ್ಕೆ ಕತೆ ಹಾಗೂ ಚಿತ್ರಕತೆಯನ್ನು ಕಾಸರಗೋಡು ಚಿನ್ನಾ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಬರಹಗಾರ ಗೋಪಾಲಕೃಷ್ಣ ಪೈ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿವೆ. ಹಾಡುಗಳನ್ನು ಭದ್ರಗಿರಿ ಅಚ್ಚುತದಾಸ್ ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ವಿ. ಮನೋಹರ್ ಸಂಗೀತ ನೀಡಿದ್ದಾರೆ. ಅದರಲ್ಲೂ ಕಾಯ್ಕಿಣಿ ಬರೆದ ಹಾಡು ‘ರಂಗ ರಂಗ ರಂಗ ಪಂಚಮಿ’ ಕೊಂಕಣಿ ಭಾಷೆಯಲ್ಲಿ ಬರೆದ ಆರಂಭದ ಕವನವಂತೆ, ಕಲಾ ನಿರ್ದೇಶಕರಾಗಿ ಶಶಿಧರ ಅಡಪ, ಛಾಯಾಗ್ರಹಣದಲ್ಲಿ ಉತ್ಪಲ್ ನಾಯನಾರ್, ಸಂಕಲನದಲ್ಲಿ ಸುರೇಶ್ ಅರಸ್ ಕೆಲಸ ಮಾಡಿದ್ದಾರೆ. ನಿರ್ಮಾಪಕರಾಗಿ ಬೆಂಗಳೂರು ಉದ್ಯಮಿ ಕೆ.ಜೆ. ಧನಂಜಯ ಹಾಗೂ ಚಿನ್ನಾರ ಸಹೋದರಿ ಅನುರಾಧ ಪಡಿಯಾರ್ ಹಣ ಹಾಕಿದ್ದಾರೆ. ಮಿತ್ರ ಮಿಡಿಯಾ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ . ಅಂದಹಾಗೆ ಇಷ್ಟರವರೆಗೆ ಸಿನ್ಮಾದಲ್ಲಿದ್ದ ಕಮರ್ಷಿಯಲ್, ಕಲಾಆಧರಿತ ಚಿತ್ರಗಳೆನ್ನುವ ಪರಿಕಲ್ಪನೆಯನ್ನು ಬದಿಗೊತ್ತಿ ಭಿನ್ನವಾದ ಸಂಸ್ಕೃತಿ ಆಧರಿತ ಚಿತ್ರವಾಗಿ ‘ಉಜ್ವಾಡು’ ಬರುತ್ತಿರೋದು ಗಮನಿಸಿಕೊಳ್ಳಬೇಕಾದ ವಿಚಾರ.
No comments:
Post a Comment