

ಮಾರಿಯೋನ ಕ್ಯಾರಿಕೇಚರ್‌ನಲ್ಲೂ ಅದೇ ಗೋವಾದ ಫೆನ್ನಿ ಕಿಕ್‌ಯಿದೆ. ಅಂದಹಾಗೆ ವಿಶ್ವದ ಶ್ರೇಷ್ಟ ವ್ಯಂಗ್ಯ ಚಿತ್ರಕಾರ ಮಾರಿಯೋ ಅಜ್ಜ ಈಗ ೮೫ರಲ್ಲಿ ಬಂದು ನಿಂತಿದ್ದಾರೆ. ಬೆಡ್ ಮೇಲೆ ಮಲಗಿರೋ ಅಜ್ಜ ಈಗ ಸರಿಯಾಗಿ ಕಾರ್ಟೂನ್ ಮಾಡುತ್ತಿಲ್ಲ.. ಆದರೂ ಲಕ್ಷಾಂತರ ರೂ. ವಹಿವಾಟು ಅವರ ಕಾರ್ಟೂನ್‌ಗಳಿಂದ ಆಗುತ್ತಿದೆ ಎನ್ನುವ ವಿಷ್ಯಾ ಗೊತ್ತಾ..? ಮಾರಿಯೋ ಅಜ್ಜನ ಜಗುಲಿಯಲ್ಲಿ ಕೂತು ಕೇಳೋಣ ಬನ್ನಿ...
ಮಾರಿಯೋ ಮಿರಾಂಡಾ ಹೆಸರಿನ ಜತೆಯಲ್ಲಿ ಗೋವಾದ ಫ್ಲೇವರ್ ಕಾಣಿಸಿಕೊಳ್ಳುತ್ತದೆ. ಗೋವಾದ ಫೆನ್ನಿ ಎಷ್ಟು ಕಿಕ್ ಕೊಡುತ್ತೋ ಗೊತ್ತಿಲ್ಲ. ಅದಕ್ಕಿಂದ ಜಾಸ್ತಿ ಮಾರಿಯೋನ ಕ್ಯಾರಿಕೇಚರ್‌ಗಳು ಕಿಕ್ ನೀಡುತ್ತೆ ಎನ್ನೋದು ವ್ಯಂಗ್ಯಚಿತ್ರ ಲೋಕದ ರಿಯಲ್ ಮಾತು. ಇಡೀ ಗೋವಾದಲ್ಲಿ ಫೆನ್ನಿ ಬಹಳಷ್ಟು ರಾಜ್ಯಭಾರ ಮಾಡಿಕೊಂಡಿದ್ದಾರೆ. ಇತ್ತ ಮಾರಿಯೋನ ಕ್ಯಾರಿಕೇಚರ್‌ಗಳು ಗೋವಾಕ್ಕೆ ಅಷ್ಟೇ ಮರ್ಯಾದೆ ತಂದುಕೊಟ್ಟಿದೆ.
ಮಾರಿಯೋರ ಕ್ಯಾರಿಕೇಚರ್‌ಗಳಲ್ಲಿ ಅಂತಹ ವಿಷಯಗಳಿರುತ್ತದೆ. ಅವುಗಳನ್ನು ಅನುಭವಿಸಬೇಕಾದರೆ ಬರೋಬರಿ ಅರ್ಧ ಗಂಟೆ ಟೈಮ್‌ನ ಜತೆಯಲ್ಲಿ ತಾಳ್ಮೆ ಇರಬೇಕು. ಹಾಗಾದರೆ ಅದನ್ನು ರಚಿಸುವ ಮಾರಿಯೋಗೆ ಎಷ್ಟು ಟೈಮ್, ತಾಳ್ಮೆ ಬೇಕಾಗಿಲ್ಲ ?! ಮಾರಿಯೋ ಅವರ ಕುಸುರಿ ಕೆಲಸ, ವ್ಯಕ್ತಿಗಳು, ಅವರ ಹಾವಭಾವ, ಟ್ರಾಫಿಕ್, ಜನಸಂದಣಿ, ಪಾರ್ಟಿ, ಕಟ್ಟಡ, ನಾಯಿಗಳು ಅದು ಇದು ಅಂತಹ ಹೇಳಿ ಊಪ್ಸ್ ! ಪ್ರಪಂಚದಲ್ಲಿ ಇಂತಹ ತಾಳ್ಮೆ ಇರುವ ವ್ಯಂಗ್ಯಚಿತ್ರಕಾರ ಬೇರೆ ಇರಲು ಸಾಧ್ಯನೇ ಇಲ್ಲ ಅನ್ನಿಸಿಬಿಡೋದು ಇದೆ.
ಗೋವಾದಲ್ಲಿ ಒಳ್ಳೆಯ ಪೆನ್ನಿ ಸಿಗುತ್ತದೆ. ಆದರೆ ಒಳ್ಳೆಯ ವಿದ್ಯಾಭ್ಯಾಸ ಮಾತ್ರ ಸಿಗೋದಿಲ್ಲ ಹಾಗೆಂದು ಮಾರಿಯೋ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದಿದ್ದರು. ಕಾಲೇಜು ಶಿಕ್ಷಣಕ್ಕೆ ಮುಂಬಯಿ ಹೋಗಿದ್ದೇ ತಡ ಅವರಲ್ಲಿ ಅಡಗಿದ್ದ ಸೃಜನಶೀಲತೆಗೆ ರೆಕ್ಕೆ ಪುಕ್ಕಗಳು ಬೆಳೆಯಿತು.
ಎಲ್ಲರೂ ಡೈರಿಯಿಂದ ದಿನನಿತ್ಯದ ವಿಷಯಗಳನ್ನು ಬರೆದುಕೊಂಡರೆ ಮಾರಿಯೋ ಅದನ್ನೇ ವ್ಯಂಗ್ಯಚಿತ್ರದ ಮೂಲಕ ಬರೆದಿಟ್ಟುಕೊಂಡರು. ೧೯೪೭ರಿಂದ ಆರಂಭವಾಗಿ ೧೯೫೯ರ ವರೆಗೆ ಅವರು ನೈಜ ಚಿತ್ರಗಳನ್ನು ಬರೆದರು. ಆದರೆ ಅದರ ಹಾವಭಾವಗಳು ವ್ಯಂಗ್ಯತೆ ಅಡಗಿ ಕೂತಿತ್ತು.
‘ದೀ ಇಲ್ಲಸ್ಟ್ರೀಟೆಡ್ ವೀಕ್ಲಿ’ಯಲ್ಲಿ ಮೆಚ್ಚಿನ ವ್ಯಂಗ್ಯಚಿತ್ರಕಾರರಾಗಿದ್ದ ಮಾರಿಯೋ ಭಾರತದ ಗಡಿಯನ್ನು ದಾಟಿ ಬೆಳೆಯುವ ಮನಸ್ಸಾಯಿತು. ಲಂಡನ್‌ನಲ್ಲಿ ಚಿತ್ರ ರಚನೆಗಿಂತ ಹೆಚ್ಚಾಗಿ ಹೋಟೆಲ್‌ಗಳ ಪಾತ್ರೆ ತೊಳೆಯಬೇಕಾದ ಕೆಲಸಗಳನ್ನು ಮಾಡಬೇಕಾಯಿತು. ಅಮೆರಿಕದಲ್ಲಿ ಪೀನಟ್ ಖ್ಯಾತಿಯ ವ್ಯಂಗ್ಯ ಚಿತ್ರಕಾರ ಶುಲ್ಜ್‌ಗೆ ಸಹಾಯಕರಾಗಿ ದುಡಿದರು. ಅಲ್ಲೂ ಮಾರಿಯೋಗೆ ಸರಿ ಹೋಗಲಿಲ್ಲ. ವಾಪಾಸು ಮುಂಬಯಿಗೆ ಬಂದು ಇಳಿದಾಗ ಟೈಂಸ್‌ನಲ್ಲಿ ಅವಕಾಶಗಳು ಕಾದು ಕುಳಿತಿತ್ತು. ಎಕಾನಮಿಕ್, ಬ್ಯುಸಿನೆಸ್‌ನಲ್ಲಿ ಎಳ್ಳಷ್ಟೂ ಆಸಕ್ತಿ ಇಲ್ಲದೇ ಇದ್ದರೂ ‘ಎಕಾನಮಿಕ್ ಟೈಮ್ಸ್’ನಲ್ಲಿ ದಿನನಿತ್ಯ ಪಾಕೇಟ್ ಕಾರ್ಟೂನ್ ರಚಿಸತೊಡಗಿದರು.
ಅದು ಬಹಳಷ್ಟು ಜನಪ್ರಿಯವಾಯಿತು. ಈ ಜನಪ್ರಿಯತೆಯ ಹಿಂದೆ ಅವರು ರಚಿಸುತ್ತಿದ್ದ ವ್ಯಂಗ್ಯಚಿತ್ರಗಳಲ್ಲಿ ಇದ್ದ ಪಾತ್ರಗಳು. ಮಿಸ್ ಪೋನೆಸ್ಕೋ, ಗೋಡ್ ಬೋಲೆ,ಬಂಡಲ್‌ದಾಸ್, ಮೂನ್‌ದಾಸ್ ಫಿಲ್ಮಿಪೇರ್‌ಗಾಗಿ ರಜನಿ ನಿಂಬುಪಾನಿ ರಚಿಸಿದರು. ಕಾಗದದ ಮೇಲೆ ಪೊನೆಸ್ಕೋ, ರಜನಿ ನಿಂಬುಪಾನಿ ವ್ಯಂಗ್ಯಚಿತ್ರದಲ್ಲಿ ಅಂಕುಡೊಂಕುಗಳನ್ನು ಕಾಣಿಸಿಕೊಳ್ಳುತ್ತಿದ್ದಂತೆ ಅತ್ತ ವಿದೇಶಗಳಿಗೆ ಹೋಗಿ ‘ಅಂಕುಡೊಂಕು’ಗಳ ದರ್ಶನ ಭಾಗ್ಯ ಪಡೆದು ಬಂದರು.
ಪ್ಯಾರಿಸ್, ಪ್ರಾಂಕ್ ಪರ್ಟ್, ಟೋಕಿಯೋ, ಜರ್ಮನಿ, ಅಮೆರಿಕ ಅದರಲ್ಲೂ ಹ್ಯಾಂಗ್‌ಬರ್ಗ್‌ನಲ್ಲಿರುವ ಯಾವುದೇ ನಗ್ನ ನೃತ್ಯ ರೆಸ್ಟೋರೆಂಟ್‌ಗಳಿಗೆ ಭೇಟಿ ಕೊಡಲು ಮಾರಿಯೋ ಮರೆಯಲಿಲ್ಲ. ಅಲ್ಲಲ್ಲಿ ತನ್ನ ಕಲಾಕೃತಿಗಳನ್ನು ಪ್ರದರ್ಶನ ಭಾಗ್ಯ ಕೊಟ್ಟರು. ಜತೆಯಲ್ಲಿ ಮಾರಿಯೋ ಕಾರ್ಟೂನ್ ವರ್ಲ್ಡ್‌ನಿಂದ ಪುಸ್ತಕಗಳು ರಚನೆಗೊಂಡು ಮಾರುಕಟ್ಟೆಗೆ ಇಳಿಯಿತು. ಇತ್ತ ಮ್ಯೂರಲ್ ಆರ್ಟ್‌ಗಳನ್ನು ಮಾಡುತ್ತಾ ವಿಶ್ವದ ಶ್ರೀಮಂತ ಕಾರ್ಟೂನಿಸ್ಟ್ ಎನ್ನಿಸಿಕೊಂಡರು. ಜತೆಗೆ ಕೇಂದ್ರ ಸರಕಾರದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಅವರ ಕಪಾಟಿನೊಳಗೆ ಬಿದ್ದುಕೊಂಡಿದೆ.
ಅಂದಹಾಗೆ ೮೫ರ ಹರೆಯ ಮಾರಿಯೋರ ಪೂರ್ತಿ ಹೆಸರು ಮಾರಿಯೋ ಜೋ ಆ ವೊ ಕಾರ್ಲೊಸ್ ರೊಜಾರಿಯೋ ಡಿ ಬ್ರಿಟ್ಟೋ ಅಂತೆ ಅವರ ವ್ಯಂಗ್ಯಚಿತ್ರದಂತೆ ಅವರ ಹೆಸರು ಕೂಡ ಮೈಲುಗಟ್ಟಲೆ ಇದೆ. ಆದರೆ ಅವರಿಗೆ ಮಾರಿಯೋ ಅಂತಾ ಕರೆದರೆ ಖುಷಿಯಾಗುತ್ತದೆ ಎಂದು ಒಂದ್ ಸಾರಿ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದರು. ಈಗಲೂ ಮಾರಿಯೋ ಅವರ ಕಲಾಕೃತಿಗಳು ನೋಡಿದಾಗ ಇಡೀ ಗೋವಾದ ದರ್ಶನ ಭಾಗ್ಯ ಎದುರುಗೊಳ್ಳುವ ಸತ್ಯ ಎಂದಿಗೂ ಮರೆಮಾಚಲು ಸಾಧ್ಯವಿಲ್ಲ.
No comments:
Post a Comment