Thursday, October 20, 2011

ನೀರು ಕಂಡರೆ ಊರಿಗೆ ಭೀತಿ !


ಮನುಕುಲದ ಜೀವಜಲ ಎಂದೇ ಬಿಂಬಿತ ನೀರು ಕಂಡರೆ ಸಸಿಹಿತ್ಲುವಿನ ಒಂದು ಭಾಗವೇ ತಲ್ಲಣಗೊಳ್ಳುತ್ತದೆ. ಎಕರೆಗಟ್ಟಲೆ ಕೃಷಿ ಭೂಮಿಯಲ್ಲಿ ಬೆಳೆದು ನಿಂತ ಭತ್ತದ ಪೈರೇ ಈ ನೀರನ್ನು ಕಂಡು ಕೆಂಪು ಬಣ್ಣಕ್ಕೆ ತಿರುಗಿ ಬೀಳುತ್ತದೆ. ಇದೇನಪ್ಪಾ ನೀರಿನ ಕತೆ ಅಂತಾ ಕೇಳ್ತೀರಾ..?
ಒಂದಲ್ಲ ಎರಡಲ್ಲ ಬರೋಬರಿ ೮ ವರ್ಷಗಳಿಂದ ರೈತರು ನೀರಿಗೆ ಹೆದರಿಕೊಂಡು ಬದುಕು ಕಟ್ಟುತ್ತಿದ್ದಾರೆ. ಯಾಕೋ ಗೊತ್ತಿಲ್ಲ ಎಕರೆಗಟ್ಟಲೆ ಕೃಷಿ ಭೂಮಿ ಈ ನೀರಿನಿಂದ ಹೆದರಿ ಕೂತಿದೆ. ಅರೇ..ಮನುಕುಲದ ಜೀವಜಲ ಎಂದೇ ಬಿಂಬಿತ ನೀರು ಕಂಡರೆ ಸಸಿಹಿತ್ಲುವಿನ ಒಂದು ಭಾಗವೇ ತಲ್ಲಣಗೊಳ್ಳುತ್ತದೆ. ಎಕರೆಗಟ್ಟಲೆ ಕೃಷಿ ಭೂಮಿಯಲ್ಲಿ ಬೆಳೆದು ನಿಂತ ಭತ್ತದ ಪೈರೇ ಈ ನೀರನ್ನು ಕಂಡು ಕೆಂಪು ಬಣ್ಣಕ್ಕೆ ತಿರುಗಿ ಬೀಳುತ್ತದೆ.
ಇದು ಕಾಸ್ಮೋಪಾಲಿಟನ್ ಸಿಟಿಯ ನಡುವೆ ಎದುರಿಸಿರು ಬಿಟ್ಟುಕೊಂಡು ಬದುಕು ದೂಡುತ್ತಿರುವ ಸಹಿಹಿತ್ಲು ಬಳಿಯ ಮೂಡುಕೊಪ್ಲ, ಕದಿಕೆ, ಮುಂಡ ಅಸುಪಾಸಿನ ಪ್ರದೇಶದಲ್ಲಿರುವ ರೈತರ ಪ್ರತಿ ವರ್ಷದ ಗೋಳು. ಇದೆಲ್ಲವೂ ಸರಾಗವಾಗಿ ಹರಿದುಹೋಗುತ್ತಿರುವ ನಂದಿನಿ ನದಿಯ ಉಪ್ಪು ನೀರಿನ ಕಾಟ. ಮೂಲ್ಕಿ- ಮೂಡುಬಿದರೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹಳೆಯಂಗಡಿ ಗ್ರಾಮಪಂಚಾಯಿತಿಯೊಳಗೆ ಇರುವ ಈ ಊರಿಗೆ ಉಪ್ಪು ನೀರೇ ಭೂಲೋಕದಲ್ಲಿ ನರಕ ನಿರ್ಮಾಣ ಮಾಡಿಬಿಟ್ಟಿದೆ.
ವರ್ಷಕ್ಕೆ ಆರಾಮವಾಗಿ ನೂರು ಮುಡಿಯಷ್ಟು ಬೆಳೆ ತೆಗೆದು ಮೀಸೆ ತಿರುವುತ್ತಿದ್ದ ರೈತರು ಈ ನೀರಿನ ಶಾಪಕ್ಕೆ ತತ್ತರಗೊಂಡಿದ್ದಾರೆ. ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ಏದುರಿಸಿರು ಬಿಡುತ್ತಾ ನಲ್ಲಿ ನೀರಿನ ಮುಂದೆ ನಿಲ್ಲಬೇಕಾದ ಅನಿವಾರ್ಯತೆಯೊಂದು ಈ ಪುಟ್ಟ ಊರಿನಲ್ಲಿ ಉದ್ಬವವಾಗಿ ಬಹಳ ವರ್ಷಗಳೇ ಸಂದಿದೆ. ನೂರು ಮುಡಿಗಿಂತ ಜಾಗದಲ್ಲಿ ಈಗ ಒಂದು ಮುಡಿ ತೆಗೆಯಲು ಕೂಡಾ ವಿಪಲರಾಗಿದ್ದಾರೆ.
ಉಪ್ಪು ನೀರಿಗೆ ನೂರಾರು ತೆಂಗಿನ ಮರಗಳು ಸದ್ದಿಲ್ಲದೇ ಮುದುಡಿ ಕೂತಿದೆ. ೨೦ಕ್ಕಿಂತ ಹೆಚ್ಚು ರೈತರು ಉಪ್ಪು ನೀರಿನ ಕಾಟದಿಂದ ದಿನಾಲೂ ಕಣ್ಣೀರು ಸುರಿಸುತ್ತಿದ್ದಾರೆ. ಅದರಲ್ಲೂ ಸಸಿಹಿತ್ಲುವಿನ ಅಗ್ಗಿದಕಳಿಯ, ಕದಿಕೆ ಮುಂತಾದ ಪ್ರದೇಶಗಳಲ್ಲಿ ಪ್ರತಿ ವರ್ಷ ಉಪ್ಪುನೀರು ಕಾರುಬಾರು ಮಾಡಿಕೊಂಡು ಬರುತ್ತಿದೆ.
ಬೆಳೆ ನಾಶವಾಯಿತು ಎಂದು ಕೊಂಡು ಇಲಾಖೆಗೆ ಕಡೆ ಮುಖ ಮಾಡಿದರೆ ಇಲಾಖೆಗಳು ರೈತರಿಗೆ ಎಕರೆಗೆ ೬೦೦ರಿಂದ ೮೦೦ ರೂ.ಗಳ ಪರಿಹಾರ ಮಾತ್ರ ನೀಡುತ್ತಿವೆ. ಅದೆಲ್ಲ ಪರಿಹಾರ ಪಡೆಯಲು ಇಲಾಖೆಗೆ ಹತ್ತು ಸಾರಿ ಸುತ್ತಾಡಿಕೊಂಡು ಬಂದರೆ ಮುಗಿದು ಹೋಗುತ್ತದೆ ಎನ್ನುವುದು ಸಸಿಹಿತ್ಲು ನಿವಾಸಿ ರಾಮದಾಸ್‌ರ ಅನುಭವದ ಮಾತು.
ಶಾಂಭವಿ, ನಂದಿನಿ ನದಿಗಳೆರಡು ಸಸಿಹಿತ್ಲುವಿನಲ್ಲಿ ಹರಿದು ಹೋಗುತ್ತಿದೆ. ಟೂರಿಸಂಗೆ ಹೇಳಿ ಮಾಡಿಸಿದ ಸ್ಥಳ. ಆದರೆ ಈ ಉಪ್ಪು ನೀರು ಮಾತ್ರ ಕೆಲವೊಂದು ಗದ್ದೆ, ಮನೆಗಳನ್ನು ಬಿಟ್ಟರೆ ಉಳಿದ ಕಡೆಗಳಲ್ಲಿ ಸಮಸ್ಯೆಯಾಗಿ ಕಾಡುತ್ತಿದೆ. ಇದಕ್ಕೆಲ್ಲ ಪರಿಹಾರ ಕೊಡುತ್ತೇವೆ ಎಂದು ಬಹಳಷ್ಟು ಜನಪ್ರತಿನಿದಿಗಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅನುದಾನನೂ ಸರಕಾರದಿಂದ ಬಂದಿದೆ. ಆದರೆ ಜನರ ಕಷ್ಟ ಮಾತ್ರ ಕೊನೆಯಾಗಿಲ್ಲ ಎನ್ನುತ್ತಾರೆ ಮೂಡುಕೊಪ್ಲ ನಿವಾಸಿ ಜಯಣ್ಣ.
ಯಾರಿಗೇಳೋಣ ನಮ್ ಪ್ರಾಬ್ಲಂ:
ಸುರತ್ಕಲ್- ಕುಂದಾಪುರ ಚತುಷ್ಪಥ ಕಾಮಗಾರಿ ಯೋಜನೆ ಸಂದರ್ಭ ನಂದಿನಿ ನದಿಗೆ ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಹಾಕಲಾಗಿತ್ತು. ಇದು ಕೂಡಾ ಈ ಸಮಸ್ಯೆ ತೀವ್ರವಾಗಲು ಕಾರಣ ಎನ್ನುವುದು ಸಸಿಹಿತ್ಲುವಿನ ಸ್ಥಳೀಯರ ಅಭಿಪ್ರಾಯ.
ನಂದಿನಿ ನದಿಯ ಹೊಳೆತ್ತುವ ಕೆಲಸ ಬಹಳ ವರ್ಷಗಳಿಂದ ನಡೆದೇ ಇಲ್ಲ. ನಂದಿನಿ ನದಿಯೇ ಮುಂದೊಂದು ದಿನ ಮಾಯವಾಗಿ ಬಿಡುವ ಸಾಧ್ಯತೆ ಇದೆ. ಅದರಲ್ಲೂ ನದಿಯ ಬದಿಯಲ್ಲಿ ನೆಟ್ಟ ಖಾಂಡ್ಲಾವನಗಳಲ್ಲಿ ನದಿಗಳಿಗೆ ಎಸೆದ ತ್ಯಾಜ್ಯಗಳು ಸೇರಿಕೊಂಡು ಗುಡ್ಡವಾಗಿ ಬೆಳೆದು ನೀರೆಲ್ಲವೂ ಗದ್ದೆ, ಬಾವಿಗಳಿಗೆ ಹೋಗಿ ಬೀಳುತ್ತದೆ ಎನ್ನುತ್ತಾರೆ ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷ ಮಹಾಬಲ ಸಾಲ್ಯಾನ್.
ಉಪ್ಪು ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಪ್ರದೇಶಗಳ ಕುಡಿಯುವ ನೀರಿಗಾಗಿ ತುಂಬೆಯಿಂದ ಮುಕ್ಕಾದ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಕೆಲವೊಂದು ಭಾಗಗಳಿಗೆ ಉಪ್ಪು ನೀರಿನ ಸಮಸ್ಯೆ ತೀವ್ರವಾಗಿದೆ. ನದಿ ಭಾಗವನ್ನು ಬಹಳಷ್ಟು ಜನರು ಆಕ್ರಮಿಸಿಕೊಂಡು ಕೃಷಿ ಮಾಡಿದ್ದರಿಂದ ನಂದಿನಿ ನದಿಯ ವಿಸ್ತಾರ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಮಹಾಬಲರು.
ಪದೇ ಪದೇ ಈ ಸಮಸ್ಯೆ ಕಾಣಿಸಿಕೊಂಡಾಗ ಇಲ್ಲಿನ ರೈತರು ಜನಪ್ರತಿನಿದಿಗಳಿಗೆ ಮೊರೆ ಹೋಗುತ್ತಾರೆ. ಆದರೆ ಈ ಮೊರೆ ಆಳುವ ದೊರೆಗಳಿಗೆ ಕೇಳಿಸಿಕೊಳ್ಳುವುದೇ ಇಲ್ಲ. ಚುನಾವಣೆ ಬಂದಾಗ ಈ ಊರಿನ ಜನರ ಸಮಸ್ಯೆ ಕೇಳಲು ಮಾತ್ರ ಜನಪ್ರತಿನಿಽಗಳು ಹಾಜರಾಗುತ್ತಾರೆ ಎನ್ನುತ್ತಾರೆ ಮೂಡುಕೊಪ್ಲ ನಿವಾಸಿ ಗಣೇಶ್ ಸನಿಲ್‌ರ ಮಾತು.
ಇಲ್ಲಿನ ರಕ್ತೇಶ್ವರಿ ದೈವಸ್ಥಾನ ಬಳಿ ಸುಮಾರು ೨-೩ಫರ್ಲಾಂಗ್ ಉದ್ದಕ್ಕೆ ನಂದಿನಿ ನದಿಗೆ ತಡೆಗೋಡೆ ನಿರ್ಮಿಸಿದಲ್ಲಿ ಇಲ್ಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕೊಡಲು ಸಾಧ್ಯ ಎನ್ನುತ್ತಾರೆ ಮೂಡುಕೊಪ್ಲ ಕೃಷಿಕ ರಮೇಶ್ ಸನಿಲ್. ಪ್ರಕೃತಿ ಮಾನವನ ನಡುವಿನ ಹೊಡೆದಾಟದಲ್ಲಿ ಕೊನೆಗೂ ಪ್ರಕೃತಿ ಮೇಲುಗೈ ಸಾದಿಸಿಕೊಂಡು ತನ್ನ ಪರಾಕ್ರಮ ಮೆರೆದು ನಿಂತಿದೆ ಎನ್ನುವುದಕ್ಕೆ ಈ ಊಪ್ಪು ನೀರಿನ ಊರೇ ಸಾಕ್ಷಾತ್ ಉದಾಹರಣೆ ಅಲ್ವಾ..?

(vk daily nammakaravali front page article published on 18.10.2011)

No comments:

Post a Comment